ತಮಿಳುನಾಡಿನ ದೇವಸ್ಥಾನಗಳು ಭವ್ಯ ಎನ್ನುವುದು ನಮಗೆಲ್ಲ ತಿಳಿದದ್ದೇ. ದೇವರನ್ನು ನಂಬದ ನನ್ನಂಥವರಿಗೆ ದೇವಸ್ಥಾನಗಳ ಜೊತೆ ಏನು ಕೆಲಸ? ಈ ಪ್ರಶ್ನೆಯನ್ನು ನಾನು ಅನೇಕ ಬಾರಿ ಕೇಳಿಕೊಂಡಿದ್ದರೂ ದೇವಸ್ಥಾನಗಳಿಗೆ ಹೋಗುವುದಿಲ್ಲ ಎನ್ನುವ ನಿಲುವನ್ನು ನಾನು ಎಂದೂ ತೆಗೆದುಕೊಂಡಿಲ್ಲ.
ಪ್ರಯಾಣದಲ್ಲಿ ರಿಚರ್ಡ್ ದಾಕಿನ್ಸ್‌ನ ಪುಸ್ತಕ "ದ ಗಾಡ್ ಡೆಲ್ಯೂಷನ್" ಓದುತ್ತಲೇ ನಾನು ತಂಜಾವೂರಿಗೆ ಹೋದೆ. ಡಾಕಿನ್ಸ್ ತಮ್ಮ ಪುಸ್ತಕದ ಪ್ರಾರಂಭದ ಭಾಗದಲ್ಲಿ ದೇವರಿಲ್ಲದ ಜಗತ್ತಿನ ಬಗ್ಗೆ ಈ ಮಾತುಗಳನ್ನು ಹೇಳುತ್ತಾರೆ "ಜಾನ್ ಲೆನನ್ನಿರುವ ದೇವರಿಲ್ಲದ ಜಗತ್ತನ್ನು ಊಹಿಸಿ. ಆತ್ಮಾಹುತಿ ಮಾಡಿಕೊಂಡು ಜನರನ್ನು ಕೊಲ್ಲುವ ಮಾನವ ಬಾಂಬುಗಳಿಲ್ಲದ ಜಗತ್ತನ್ನು ಊಹಿಸಿ. ನೈನ್ ಇಲೆವೆನ್, ಸೆವೆನ್ ಸೆವೆನ್ ಇಲ್ಲದ ಜಗತ್ತನ್ನು ಊಹಿಸಿ. ಭಾರತ ವಿಭಜನೆಯಾಗದಿರುವುದನ್ನು ಊಹಿಸಿ, ಪ್ಯಾಲಸ್ಟೀನ್ -ಇಸ್ರೇಲ್ ಯುದ್ಧವಿಲ್ಲದ ಜಗತ್ತನ್ನು ಊಹಿಸಿ, .... ಪುರಾತನ ಪುತ್ಥಳಿಗಳನ್ನು ಸ್ಫೋಟಗೊಳಿಸದ, ತಾಲಿಬಾನ್ ಇಲ್ಲದ ಜಗತ್ತನ್ನು ಊಹಿಸಿ.. ದೇವರ ಹೆಸರಲ್ಲಿ ಆಗುವ ಧರ್ಮಯುದ್ಧವನ್ನು ಊಹಿಸಿ.." ಅನ್ನುತ್ತಾ ದೇವರ ಹೆಸರಿನಲ್ಲಾಗುವ ಕ್ರೌರ್ಯದೊಂದಿಗೆ ಅವರ ಪುಸ್ತಕವನ್ನು ಪ್ರಾರಂಭಿಸುತ್ತಾರೆ. ಹೀಗೆ ಮಾತನಾಡುತ್ತಲೇ ಡಾಕಿನ್ಸ್ ಕೂಡಾ ಒಂದು ವಿಚಿತ್ರ ವಿಷಯವನ್ನು ಚರ್ಚಿಸುತ್ತಾರೆ.... ದೇವರಲ್ಲಿ ನಂಬಿಕೆಯಿಲ್ಲದ ಅವರ ಪ್ರಿಯ ಸಂಗೀತದಲ್ಲಿ ಭಕ್ತಿ ಸಂಗೀತವೂ ಮನೆಮಾಡಿಕೊಂಡಿದೆ. ಹೀಗಾಗಿ ಒಂದು ಕಲಾಕೃತಿಯನ್ನು ಮೆಚ್ಚಲು ನಮ್ಮ ಇತರ ನಂಬಿಕೆಗಳು ಅಡ್ಡಬರಬಾರದು ಅನ್ನುವ ವಿಚಾರವನ್ನು ಅವರು ಮನದಟ್ಟಾಗುವಂತೆ ವಿವರಿಸಿದ್ದಾರೆ.
ತಂಜಾವೂರಿಗೆ ನನ್ನ ಭೇಟಿ ಇದೇ ಮೊದಲು. ತಂಜಾವೂರೆಂದ ಕೂಡಲೇ ನನಗೆ ನೆನೆಪಾಗುವುದು ಕಾವೇರಿ ವಿವಾದ. ಕಾವೇರಿಯ ವಿವಾದ ಉದ್ಭವಿಸಿದಾಗೆಲ್ಲಾ ತಂಜಾವೂರಿನ ರೈತರ ಕುರುವೈ ಫಸಲಿಗೆ ನೀರು ಬೇಕು ಅನ್ನುವುದೇ ಅವರ ಬೇಡಿಕೆ. ಸಹಜವಾಗಿಯೇ ಅಲ್ಲಿನ ನೆಲವೆಲ್ಲಾ ಹಸಿರು. ಆ ಊರಿಗೆ ನಾನು ಭೇಟಿ ನೀಡಿದ್ದು ದೇವಸ್ಥಾನ ನೋಡಲೆಂದು ಅಲ್ಲ. ಬದಲಿಗೆ ಅಲ್ಲಿ ಧಾನ್ ಸಂಸ್ಥೆಯ ಕಾರ್ಯಕ್ರಮವನ್ನು ಸಮೀಕ್ಷಿಸಲು ಹೋಗಿದ್ದೆ. ಹೀಗಾಗಿ ಅಲ್ಲಿನ ಸ್ವಸಹಾಯ ಗುಂಪುಗಳ ಮಹಿಳೆಯರೊಂದಿಗೆ ಒಂದು ದಿನದ ಮಾತುಕತೆಯಲ್ಲಿ ಗುಂಪುಗಳಿಂದ ಅವರುಗಳಿಗೆ ಆದ ಉಪಯೋಗ ತೊಂದರೆಗಳ ಬಗ್ಗೆ ನಾನು ಅರಿಯಬೇಕಿತ್ತು. ಗ್ರಾಮೀಣ ಪರಿಸರದಿಂದ ಬಂದ ಎಲ್ಲ ಕೋಮುಗಳಿಗೂ ಸಂದ ಮಹಿಳೆಯರು ಅಲ್ಲಿದ್ದರು. ಎಲ್ಲರೂ ಒಂದಿಲ್ಲ ಒಂದು ಮಾತನ್ನು ಹೇಳಿದರು. ಸ್ವಸಹಾಯ ಗುಂಪುಗಳ ರಚನೆಯಿಂದ ಆರ್ಥಿಕವಾಗಿ ಎಷ್ಟು ಉಪಯೋಗವಾಗಿದೆ ಅನ್ನುವುದನ್ನು ಸುಲಭವಾಗಿ ಅಳೆಯಲು ಸಾಧ್ಯವಾಗದಿದ್ದರೂ ಮಹಿಳೆಯರು ಹೊರಗಿನವರೊಂದಿಗೆ ಮಾತನಾಡುವ ಪರಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡುವ ಪರಿ ನೋಡಿದರೆ ಅವರ ಆತ್ಮವಿಶ್ವಾಸಕ್ಕೆ ಈ ಕಾರ್ಯಕ್ರಮ ಎಷ್ಟು ಸಹಾಯಕವಾಗಿದೆ ಅನ್ನುವುದು ಮನವರಿಕೆಯಾಗುತ್ತದೆ. ಡಾಕಿನ್ಸ್ ಮಾತ್ರವಲ್ಲ.
ಈಚೆಗೆ ನಾನು ಓದಿದ ಉಂಬರ್ಟೋ ಇಕೋನ ಕಾದಂಬರಿಯಲ್ಲೂ ಡಾಕಿನ್ಸ್ ಥರದ ಮಾತುಗಳು ಬರುತ್ತವೆ. ಕಾದಂಬರಿಯ ಈ ಭಾಗವನ್ನು ನೋಡಿ: "ಇದನ್ನು ಊಹಿಸಿನೋಡು: ಯಾರೋ ಮೊಸಸ್‍ನ ಮುಂದೆ ಪ್ರತ್ಯಕ್ಷವಾಗುತ್ತಾನೆ - ಅಥವಾ ಆತ ಪ್ರತ್ಯಕ್ಷವಾಗುವುದೂ ಇಲ್ಲ.. ಎಲ್ಲಿಂದಲೋ ಅವನ ಅಶರೀರವಾಣಿ ಬರುತ್ತದೆ. ಇದರ ಆಧಾರದ ಮೇಲೆ ಮೊಸಸ್ ದೇವರು ನೀಡಿದ ಆದೇಶವೆಂದು ಜನರಿಗೆ ಈ ಹತ್ತೂ ನಿರ್ದೇಶಗಳನ್ನು ಪಾಲಿಸಲು ಹೇಳುತ್ತಾನೆ. ಆದರೆ ಈ ನಿರ್ದೇಶವನ್ನು ದೇವರೇ ಕೊಟ್ಟದ್ದು ಅನ್ನುವುದನ್ನು ಹೇಳಿದ್ದುಯಾರು? ಆ ಧ್ವನಿ "ನಾನೇ ನಿನ್ನ ಯಜಮಾನ, ದೇವರು". ಆ ಧ್ವನಿ ದೇವರದ್ದಲ್ಲದಿದ್ದಲ್ಲಿ? ನಾನು ನಿಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಮಫ್ತಿಯಲ್ಲಿರುವ ಪೋಲೀಸ್ ಪೇದೆ, ಈ ರಸ್ತೆಯಲ್ಲಿ ಬರುವುದು ಅಪರಾಧ, ದಂಡ ಕಟ್ಟು ಅಂದರೆ, ನಾನು ಪೇದೆ ಎಂದು ನಿರೂಪಿಸುವ ಮಾರ್ಗವಿದೆಯಾ?"
"ಅದು ದೇವರೇ ಆಗಿದ್ದರು ಅನ್ನುವ ನಂಬಿಕೆ ನನಗಿದೆ. ಆದರೆ ದೇವರು ನಮ್ಮ ಮೇಲೆ ಒಂದು ತಂತ್ರವನ್ನು ಬಳಸಿದ ಅಷ್ಟೇ. ಅವನು ಯಾವಾಗಲೂ ಹಾಗೆಯೇ ಮಾಡುತ್ತಿರುತ್ತಾನೆ. ನಿಮಗೆ ಬೈಬಲ್‌ನಲ್ಲಿ ನಂಬಿಕೆ ಯಾಕೆ? ಅದು ದೇವರ ಸ್ಫೂರ್ತಿಯಿಂದ ಬಂದದ್ದು ಅನ್ನುವ ಕಾರಣಕ್ಕಾಗಿ. ಆದರೆ ದೇವರ ಸ್ಫೂರ್ತಿಯಿಂದ ಬರೆದದ್ದು ಅಂತ ಎಲ್ಲಿ ನಮೂದಿಸಲಾಗಿದೆ? ಬೈಬಲ್‌ನಲ್ಲಿ.. ನಿಮಗೆ ಈ ಸಮಸ್ಯೆ ಕಾಣಿಸುತ್ತಿದೆಯೇ?"
"ಇದು ಸರಳವಾದ ಮಾತು, ಈ ಮೊದಲು ಯಾರಿಗೂ ತೋಚಿಲ್ಲ ಅಷ್ಟೇ. ದೇವರು ದುಷ್ಟ. ಪೂಜಾರಿಗಳು ದೇವರು ಒಳ್ಳೆಯವನೆಂದು ಹೇಳುವುದು ಯಾತಕ್ಕೆ? ಯಾಕೆಂದರೆ ಅವನು ನಮ್ಮನ್ನು ಸೃಷ್ಟಿಮಾಡಿದ ಕಾರಣಕ್ಕಾಗಿ. ಆದರೆ ಅದೇ ಕಾರಣಕ್ಕಾಗಿ ಅವನನ್ನು ದುಷ್ಟ ಎಂದು ಕರೆಯಬೇಕಾಗುತ್ತದೆ. ಬಹುಶಃ ಆತ ಅಮರನಿರಬೇಕು... ಕೋಟ್ಯಾಂತರ ವರ್ಷಗಳ ಕೆಳಗೆ ಅವನು ದುಷ್ಟನಾಗಿದ್ದಿರಲಿಲ್ಲವೇನೋ. ಕಾಲಾಂತರದಲ್ಲಿ ದುಷ್ಟನಾದನೇನೋ. ಬೇಸಿಗೆಯಲ್ಲಿ ಬೇಸರಗೊಂಡ ಪುಟ್ಟ ಮಕ್ಕಳು ಕೀಟಗಳ ರೆಕ್ಕೆಗಳನ್ನು ಹರಿದು ಆನಂದ ಪಟ್ಟು ಸಮಯ ಕಳೆಯುವ ರೀತಿಯಲ್ಲಿ ದೇವರೂ ಬೇಸರದಿಂದ ದುಷ್ಟನಾದನೇನೋ. ದೇವರನ್ನು ದುಷ್ಟ ಎಂದ ಆಲೋಚಿಸ ತೊಡಗಿದಾಕ್ಷಣಕ್ಕೇ ನಮಗೆ ದುಷ್ಟತನದ ಬಗ್ಗೆ ಎಷ್ಟು ಒಳ್ಳೆಯ ಸ್ಪಷ್ಟ ಅರ್ಥ ಗೋಚರಿಸಲಾರಂಭವಾಗುತ್ತದೆ ಅನ್ನುವುದನ್ನು ಗಮನಿಸಿ."
ಈ ಮಾತುಗಳನ್ನು ಓದಿದ ಗುಂಗಿನಲ್ಲಿಯೇ ನಾನು ಕಾರ್ಯಕ್ರಮಕ್ಕೆ ಹೋದೆ. ಅವರೆಲ್ಲ ತಮ್ಮ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿದರು. ಸಂಗೀತದ ಮಾಧುರ್ಯ ಪ್ರಾರ್ಥನೆಯ ನಂಬಿಕೆಯನಡುವಿನ ಅಂತರವೆಷ್ಟು? ಹಾಗೆ ನೋಡಿದರೆ ರಾಷ್ಟ್ರಗೀತೆಯೂ ಪ್ರಾರ್ಥನೆಯ ಕೆಟೆಗರಿಗೆ ಸೇರಿದ್ದೇ ಅಲ್ಲವೇ? ಅಲ್ಲಿ ಬಂದಿದ್ದ ಮಹಿಳೆಯರು ತಂಜಾವೂರಿನವರಲ್ಲದೇ ಮದುರೈಯಿಂದಲೂ ಬಂದವರಾಗಿದ್ದರು. ಬಡತನದಲ್ಲಿ ಬಳಲುತ್ತಿರುವ ಅವರು ಅಭಿವೃದ್ಧಿಯ ಯಾವುದೇ ಕಾರ್ಯಕ್ರಮ ಕೈಗೊಳ್ಳುವುದಕ್ಕೆ ಮೊದಲು ಪ್ರಾರ್ಥನೆ ಮಾಡುವುದು ವಾಡಿಕೆ. ಪ್ರತಿ ಸಭೆಯೂ ತಮ್ಮದೇ ಆದ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಈ ನಂಬಿಕೆಯ ಮೇಲೆ ಅವರ ಜೀವನದ ಬಹುಭಾಗ ಆಧಾರಿತವಾಗಿದೆ. ಹಾಗೂ ಸಭೆಯ ನಂತರ ಬೃಹದೀಶ್ವರ ಮಂದಿರಕ್ಕೆ ಹೋಗಿ ಅಲ್ಲಿನ ಬೃಹತ್ ಲಿಂಗದ ದರ್ಶನಕ್ಕೆ ಅವರೆಲ್ಲ ಕಾತರರಾಗಿದ್ದರು. ಇಷ್ಟೊಂದು ಜನರ ನಂಬಿಕೆಯನ್ನು ಪಡೆದ ಆ ದೇವರ ಕಾನ್ಸೆಪ್ಟಿನ ಬಗ್ಗೆ ನನಗೆ ಅಸೂಯೆ ಉಂಟಾಯಿತು.... ಡಾಕಿನ್ಸ್ ಪುಸ್ತಕ ಹಾಗೂ ಅದರಲ್ಲಿನ ಎಲ್ಲ ವಾದಸರಣಿಯನ್ನು ಒಪ್ಪಿದರೂ ಇಷ್ಟೊಂದು ಜನರು ನಂಬಿ ಮುಂದುವರೆಯುವ ಆ ಮಿಥ್ಯೆಯ ಬಗ್ಗೆ ಏನು ನಿಲುವು ತೆಗೆದುಕೊಳ್ಳಬೇಕೆಂಬ ದ್ವಂದ್ವ ನನ್ನನ್ನು ಕಾಡುತ್ತದೆ. ಅದನ್ನೂ ಡಾಕಿನ್ಸ್ ಚರ್ಚಿಸುತ್ತಾರೆ, ಆದರೆ ಅದನ್ನು ಇಲ್ಲಿಗೆ ಬಿಡೋಣ.
ಸಂಜೆ ನಾನೂ ಆ ಮಂದಿರಕ್ಕೆ ಹೋಗಿ ಬಂದೆ. ಇದೇ ಕೆಲಸದಿಂದ ನಾನು ನಾಲ್ಕೈದು ಬಾರಿ ಮದುರೈಗೆ ಹೋಗಿದ್ದರೂ ಅಲ್ಲಿನ ಮೀನಾಕ್ಷಿ ಮಂದಿರವನ್ನು ನೋಡಿದವನಲ್ಲ. ಈ ಬಾರಿ ಬಹುಶಃ ಆ ಮಂದಿರವನ್ನು ನೋಡಿಬರುತ್ತೇನೆ. ಬೃಹದೀಶ್ವರ ಮಂದಿರ ನಿಜಕ್ಕೂ ಬೃಹತ್ತಾಗಿ ಇದೆ. ಅಲ್ಲಿನ ಗೋಪುರದ ನೆರಳು ನೆಲದ ಮೇಲೆ ಬೀಳದಿರುವಂತೆ ಕಟ್ಟಿದ್ದಾರಂತೆ. ಮಂದಿರದ ಪ್ರಾಂಗಣ ಶುಭ್ರವಾಗಿದೆ. ಹಾಗೂ ಸುತ್ತಮುತ್ತ ಮರಿದೇವತೆಗಳೂ - ಸಾವಿರದೆಂಟು ಶಿವಲಿಂಗಗಳಿರುವ ಒಂದು ಭಾಗವೂ ಅಲ್ಲಿದೆ. ಇದೂ ಸಾಲದೆಂಬಂತೆ ಆ ಮಂದಿರವನ್ನು ಕಟ್ಟಿದ ಶಿಲ್ಪಿಯ ಒಂದು ಪುಟ್ಟ ಆಲಯವೂ ಇದೆ. ಆ ಆಲಯದಲ್ಲಿ ಶಿಲ್ಪಿಗೆ ಕೈಗಳಿಲ್ಲ. ಮಂದಿರ ನಿರ್ಮಾಣದ ನಂತರ ಅವನ ಕೈಗಳನ್ನು ಕಡಿದು ಹಾಕಿದರಂತೆ. ದೇವರ ಕೆಲಸ ಮಾಡಿದ್ದರ ಫಲ ಇದಾದರೆ ಆ ದೇವರಲ್ಲಿ ಯಾಕೆ ನಂಬಿಕೆಯಿಡಬೇಕು ಅನ್ನುವ ಪ್ರಶ್ನೆ ಕಾಡುವುದಿಲ್ಲವೇ? ಜೊತೆಗೆ ಒಂದು ಕುತೂಹಲ: ಆ ಶಿಲ್ಪಿಯ ಮೂರ್ತಿಯನ್ನು ರೂಪಿಸಿದ ಮತ್ತೊಂದು ಶಿಲ್ಪಿಗೇನಾಯಿತು?
ಮತ್ತೆ ಹೋಟೇಲಿನ ರೂಮಿಗೆ ಬಂದೆ. ಅಹಮದಾಬಾದಿನಿಂದ ಅಲೆಮಾರಿಯಾಗಿ ತಂಜಾವೂರಿಗೆ ಬಂದ ನನಗೆ ಬೇಕಿದ್ದದ್ದು ಇಡ್ಲಿ, ದೋಸಾ, ಮತ್ತು ಅಪ್ಪಟ ಫಿಲ್ಟರ್ ಕಾಫಿ.... ದಕ್ಷಿಣ ಭಾರತೀಯ ಊಟ.. ಆದರೆ ನಾನಿದ್ದ ಮೊನೀಸ್ ರೆಸಿಡೆನ್ಸಿ [ಮಣೀಸ್ ರೆಸೆಡೆನ್ಸಿಯಿರಬೇಕು] ಎನ್ನುವ ಹೋಟೇಲಿನಲ್ಲಿ ದಕ್ಷಿಣ ಭಾರತೀಯ ಅಡುಗೆ ಮಾಡುವುದಿಲ್ಲವಂತೆ. ನಾನು ಕೌಂಟರಿನಲ್ಲಿದ್ದ ಮಾಲೀಕನ ಹತ್ತಿರ ಹರಟೆಕೊಚ್ಚುತ್ತಾ ಯಾಕೆ ಹೀಗೆ ಎಂದು ಕೇಳಿದೆ.. ಬೇಕಿದ್ದರೆ ಮನೆಯಿಂದ ಅನ್ನ ತರಿಸಿಕೊಡುತ್ತೇನೆ ಅಂದ. ಆದರೆ ದಕ್ಷಿಣ ಭಾರತದ ಬೃಹದೀಶ್ವರನ ದರ್ಶನಕ್ಕೆ ಭಕ್ತರು ದೇಶದ ನಾನಾ ಭಾಗಗಳಿಂದ ಬರುತ್ತಾರೆ.. ಹೀಗಾಗಿ ಪಾಲಕ್ ಪನೀರು ಮತ್ತು ತಂದೂರಿ ರೋಟಿ ಒಂದು ರಾಷ್ಟ್ರೀಯ ಖಾದ್ಯವಾಗಿಬಿಟ್ಟಿದೆ! ಬೆಂಗಳೂರಿನ ಉಡುಪಿ ಹೋಟೇಲಿನಿಂದ ತಂಜಾವೂರಿನ ವರೆಗೂ ಹಬ್ಬಿರುವ ಪನೀರಿನ ಸಂಸ್ಕೃತಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಭಾರತದ ಐಕ್ಯತೆ ಕಾಣುವುದೇ ಉತ್ತರದಲ್ಲಿ ದೊರಕುವ ಇಡ್ಲಿ ಮತ್ತು ದಕ್ಷಿಣದಲ್ಲಿ ದೊರಕುವ ತಂದೂರಿ ರೋಟಿಯಲ್ಲಿ ಅನ್ನಿಸುತ್ತದೆ. ನಂಬಿಕೆಯಿಲ್ಲದ ನನ್ನ ಹಣೆಯ ಮೇಲೆ ಅಡ್ಡಾದ ವಿಭೂತಿ ಧರಿಸಿದ್ದೇನೆ.
ಮುಗಿಸುವ ಮುನ್ನ ಒಂದು ಗಮ್ಮತ್ತಿನ ವಿಷಯವನ್ನು ಹೇಳಲೇಬೇಕು. ದೇವರನ್ನು ನಂಬದ, ಮೂಢ ನಂಬಿಕೆಗಳೆಂದರೆ ಸಿಡಿದು ಬೀಳುವ ಗೆಳೆಯ ವಿಜಯ ಕುಲಕರ್ಣಿ ಧಾರವಾಡದಲ್ಲಿ ತಮ್ಮ ಸ್ವಸಹಾಯ ಸಂಸ್ಥೆ ನಡೆಸುತ್ತಿದ್ದಾಗ ಹಳ್ಳಿಯ ಜನರ ವ್ಯಸನಗಳನ್ನು ಬಿಡಿಸಲು ಆಶ್ರಯಿಸಿದ್ದು ಸ್ಥಳೀಯ ಸ್ವಾಮೀಜಿಯೊಬ್ಬರನ್ನು. ಆತ ಕುಡಿತಕ್ಕೆ ಬಲಿಯಾದ ಮತ್ತು ಇತರ ವ್ಯಸನಗಳಿಗೆ ಬಲಿಯಾದ ಜನರ ಮನೆಗೆ ಹೋಗಿ ಜೋಳಿಗೆ ತೋರಿ ದೇವರ ಹೆಸರಲ್ಲಿ "ವ್ಯಸನ ಭಿಕ್ಷೆ" ಕೇಳುತ್ತಿದ್ದರಂತೆ. ಹೀಗಾಗಿ ಜನರ ನಂಬಿಕೆಯನ್ನು ಹೀಗೂ ಬಳಸಿಕೊಂಡು ಒಳಿತು ಮಾಡಬಹುದೆಂದು ವಿಜಯ್ ತೋರಿಸಿದರು. ಹೀಗೆ ಇಲ್ಲಿ ಯಾವುದೂ ವಿರೋದಾಭಾಸವಲ್ಲ.
ಈ ಬರಹವನ್ನು ನಾನು ಅಹಮದಾಬಾದಿನ ಏರ್‌ಪೋರ್ಟಿನಲ್ಲಿ ಕೂತು ಟೈಪ್ ಮಾಡುತ್ತಿದ್ದೇನೆ. ಪಕ್ಕದ ತಟ್ಟೆಯಲ್ಲಿ "ಮಸಾಲಾ ಡೋಸಾ" ಇದೆ! ತದನಂತರ ಕ್ಯಾಪುಚಿನೋ ಅನ್ನುವ ಇಟಾಲಿಯನ್ ಹೆಸರಿನ ಕಾಫಿ ಬರಲಿದೆ.
ಎಂ.ಎಸ್.ಶ್ರೀರಾಮ್
೩೧ ಆಗಸ್ಟ್ ೨೦೦೭
No comments:
Post a Comment