ಕೋವಲಂನ ಮಣ್ಣು; ಪದ್ಮನಾಭಸ್ವಾಮಿ ಗುಡಿ

ಊರೂರು ಅಲೆಯುವಾಗ ಎರಡು ಭಿನ್ನ ರೀತಿಯ ಯಾತ್ರೆಗಳು ಸಾಧ್ಯವಾಗುತ್ತದೆ. ಒಂದು, ಕೆಲಸದ ಮೇಲೆ ಹೋಗುವುದು. ಹಾಗೆ ಹೋದಾಗ ಕಾಣುವುದು ಏರ್‌ಪೋರ್ಟು, ರೈಲು ನಿಲ್ದಾಣ, ಬಸ್ಸು, ಕಾರು, ಹೋಟೇಲಿನ ರೂಮು, ಪವರ್ ಪಾಯಿಂಟ್, ಮತ್ತು ಎಣ್ಣೆಭರಿತ ಊಟ. ಇದಿಲ್ಲವೆಂದರೆ ನಮ್ಮದೇ ರಜೆಗೆ ಹೋಗುವುದು. ಆಗ ಯಾತ್ರೆಯ ಸ್ವರೂಪವೇ ಬೇರು. ಹಿಂದಿನ ದಿನವೇ ಹೋಗೆ ಬೇಕರಿಯಿಂದ ಯಾತ್ರೆಗೆ ಬೇಕಾದ ಜ್ಯೂಸಿನ ಡಬ್ಬ, ಕುರುಕಲು, ಡಿಜಿಟಲ್ ಕ್ಯಾಮರಾ ಬರುವುದಕ್ಕೆ ಮುನ್ನ ಕೊಂಡು ತರುತ್ತಿದ್ದ ಕ್ಯಾಮರಾದ ಫಿಲಂ. ಹಾದೂ ಇಂಥ ರಜೆಗೆಂದೇ ವಿಶೇಷ ಪೋಷಾಕುಗಳು - ಬಹುಶಃ ಎಂದೂ ಧರಿಸದ ಚೆಡ್ಡಿ, ಟೀ ಷರ್ಟುಗಳು, ಟೋಪಿ ಮತ್ತು ಕಣ್ಣಿಗೆ ಬಣ್ಣದ ಕನ್ನಡಕ. ಕೆಲಸದ ಮೇಲಿನ ಯಾತ್ರೆಗಳಲ್ಲಿ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ. ರಜೆಯಲ್ಲಿ ನಾವೇ ಧಣಿಗಳು.

ಆದರೆ ಇತ್ತೀಚೆಗೆ ಎರಡು ಬಾರಿ ನನ್ನ ಯಾತ್ರೆಗಳು ಭಿನ್ನರೀತಿಯಲ್ಲಿ ಆದುವು. ಅರ್ಧ ಕೆಲಸ, ಅರ್ಧ ರಜೆಯ ರಿಟ್ರೀಟ್ ಎನ್ನುವ ಹೆಸರಿನ ರಜೆ. ಈ ರಿಟ್ರೀಟ್‍ಗಳ ಉದ್ದೇಶ ನನಗಿನ್ನೂ ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಸಂಸ್ಥೆಯ ಮುಂದಿನ ಯೋಜನೆಗಳನ್ನು ರೂಪಿಸಲು ಈ ರಿಟ್ರೀಟ್‍ಗಳು ನಡೆಯುತ್ತವೆ. ಪ್ರತಿದಿನದ ಕವಾಯತ್ತಿನಿಂದ ದೂರವಾಗಿ ಯಾವ ಬಂಧನಗಳನ್ನೂ ಹೇರದೇ ಮುಕ್ತವಾಗಿ ಯೋಚಿಸಲು ಸರಿಯಾದ ಬಾಹ್ಯ ಪರಿಸ್ಥಿತಿಯನ್ನು ಈ ರಿಟ್ರೀಟ್‍ ಜಾಗಗಳು ಉಂಟುಮಾಡುತ್ತವೆ. ಅದೇನೋ ಸರಿ. ಆದರೆ ಇಂಥ ರಿಟ್ರೀಟ್ ಯಾತ್ರೆಗಳಿಗೆ ಸಂಸಾರಗಳೂ ಆಹ್ವಾನಿತವಾಗಿ, ನಾವುಗಳು ಕೆಲಸ ಮಾಡುತ್ತಿರುವಾಗ ಮನೆಯವರೆಲ್ಲ ಮಸ್ತಿ ಮಾಡುತ್ತಿರುವ ಪರಿಸ್ಥಿತಿ ಉಂಟಾಗುತ್ತದೆ. ಶಾಂತವಾಗಿ ಸಂಸ್ಥೆಯ ಭವಿಷ್ಯದ ಬಗ್ಗೆ ಹೆಂಡತಿ-ಮಕ್ಕಳು ಮಸ್ತಿಮಾಡುತ್ತಿರುವಾಗ ಯೋಚಿಸಲು ಸಾಧ್ಯವೇ? ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ, ಇದು ಕೆಲಸಕ್ಕೆ ಕೆಲಸವೂ ಅಲ್ಲ, ಮಸ್ತಿಗೆ ಮಸ್ತಿಯೂ ಅಲ್ಲ. ಇದನ್ನು ಕೆಲಸ-ಮೇಲೋಗರ ಅನ್ನಬಹುದೇನೋ.

ನನ್ನ ನಸೀಬಿಗೆ ಎರಡು ರಿಟ್ರೀಟುಗಳು ಬಂದುವು. ಒಂದು ನಮ್ಮ ಸಂಸ್ಥೆಯಲ್ಲಿ ಈಗಿರುವ ಪಾಠ್ಯಕ್ರಮವನ್ನು ಆಮೂಲಾಗ್ರ ಬದಲಾಯಿಸುವ ಬಗ್ಗೆ ಚರ್ಚಿಸಲು ಮೆಹಸಾಣಾದ ಬಳಿ ಇದ್ದ ಶಂಕು ವಾಟರ್ ಪಾರ್ಕಿಗೆ ಹೋಗಿದ್ದು. ನನ್ನವರು ಯಾರೂ ಜೊತೆಯಲ್ಲಿ ಬರಲಿಲ್ಲ. ಗುಜರಾತ್ ಆದ್ದರಿಂದ ಸಂಜೆಯ ವೇಳೆಗೆ ಗುಂಡೂ ಇರಲಿಲ್ಲ. ಮೇಲಾಗಿ ಈಜುಬರದ ನನಗೆ ವಾಟರ್ ಪಾರ್ಕಿನ ನೀರಿನ ಬಗ್ಗೆ ನನಗೆ ವ್ಯಾಮೋಹವೂ ಇಲ್ಲ. ಹೀಗಾಗಿ, ಈ ರಿಟ್ರೀಟು ಬರೇ ಕೆಲಸವಾಗಿ ಮೇಲೋಗರವಾಗದೇ ಉಳಿಯಿತು. ಆದರೆ ಸಮಯ ಕೊಲ್ಲಲು ಮೀಟಿಂಗ್ ಆಗುತ್ತಿದ್ದಷ್ಟೂ ಹೊತ್ತು ಅಲ್ಲಿದ್ದವರ ಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾ ಹೋದೆ. ನಿದ್ದೆ ಮಾಡುತ್ತಿರುವವರ, ಬೇಸರದ ಮುಖಹೊತ್ತ, ಕಿವಿ ಕೆರೆದುಕೊಳ್ಳುತ್ತಿರುವ, ವಿಚಿತ್ರ ಭಂಗಿಗಳ ನೂರು ಫೋಟೋಗಳ ಸಂಗ್ರಹಣೆಯಾಯಿತು. ದೂಡ್ಡ ದೊಡ್ಡ ಮಾತಾಡುವ ಮೀಟಿಂಗಿನಲ್ಲಿ ಸಮಯ ಕಳೆಯುವುದು ಹೇಗೆನ್ನುವುದಕ್ಕೆ ಒಂದು ನೂರು ಮಾರ್ಗಗಳು, ಮತ್ತು ಆ ನೂರು ಮಾರ್ಗಗಳ ಫೋಟೋ ಸೆರೆಹಿಡಿಯುವ ನೂರೊಂದನೆಯ ಮಾರ್ಗ ನನಗೆ ಪ್ರಾಪ್ತವಾಯಿತು!

ಎರಡನೆಯ ರಿಟ್ರೀಟು ಇನ್ನಷ್ಟು ಚೆನ್ನಾಗಿ ಯೋಜಿತವಾದದ್ದು. ಒಂದು ಕಂಪನಿಯ ಬೋರ್ಡಿನ ಈ ರಿಟ್ರೀಟು ಕೋವಲಂನಲ್ಲಾಯಿತು. ಏರ್‌ಪೋರ್ಟಿನಿಂದಲೇ ಎಲ್ಲವೂ ಚೆನ್ನಾಗಿ ಯೋಜಿತವಾಗಿದ್ದಂತಿತ್ತು. ಆದರೆ ಈ ಥರದ ರಿಟ್ರೀಟುಗಳಲ್ಲಿ ಆಯೋಜಕರು ಹೇಳಿದಂತೆ ನಾವು ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕಷ್ಟವೇ. ಹೀಗಾಗಿ ಯಾವ ಹೋಟೇಲಿಗೆ ಹೋಗಬೇಕು, ಎಲ್ಲಿ ಉಳಿಯಬೇಕು, ಏನು ತಿನ್ನಬೇಕು, ಕೆಲಸವೆಷ್ಟು, ಮೇಲೋಗರವೆಷ್ಟು ಎಲ್ಲವೂ ಬೇರೊಬ್ಬ ಭೂತನಾಥನ ಕೈಯಲ್ಲಿ. ನಾವು ಕಟಪುತಲಿ ಮಾತ್ರ.

ತಿರುವನಂತಪುರಂನಿಂದ ಹೆಚ್ಚೇನೂ ದೂರವಿಲ್ಲದ ಕೋವಲಂ ಬೀಚು ಅದ್ಭುತ. ಹಿಂದೆ ಐಟಿಡಿಸಿಯವರು ನಡೆಸುತ್ತಿದ್ದ ಹೋಟೇಲನ್ನು ಈಗ ಲೀಲಾದವರು ಕೊಂಡಿದ್ದಾರಂತೆ. ಸರಕಾರದ ಸ್ವತ್ತು ಹೀಗೆ ಖಾಸಗೀಜನರಿಗೆ ಮಾರಾಟಮಾಡಿಬಿಟ್ಟಿದ್ದಾರಲ್ಲಾ ಅನ್ನಿಸಿತು. ಆ ಜಾಗ, ಸುತ್ತಮುತ್ತಲಿನ ಹಸುರು, ಖಾಸಗೀ ಎನ್ನುವಂಥಹ ಬೀಚು ಈ ಎಲ್ಲವನ್ನೂ ಕೆಲವರ ಕೈಗೆ ಕೊಟ್ಟು ಸರಕಾರ ಪಿಳಿಪಿಳಿ ಕೂತಿದೆ. ಆದರೆ ಅದೇ ಸಮಯಕ್ಕೆ ಈ ಇಂಥ ಹೋಟೇಲುಗಳನ್ನು ಓಡಿಸುವುದು ಸರಕಾರದ ಕೆಲಸವೇ ಎಂದೂ ಕೇಳುತ್ತೇವೆ. ನಗರಮಧ್ಯದಲ್ಲಿರುವ ಹೋಟೇಲುಗಳನ್ನು ಮಾರಾಟ ಮಾಡಿದಾಗ ಉದ್ಭವವಾಗದ ಪ್ರಶ್ನೆ ಇಲ್ಲಿ ಯಾಕೆ ಬಂತು ಅಂತ ಒಂದು ಕ್ಷಣದ ಮಟ್ಟಿಗೆ ಯೋಚಿಸುತ್ತೇನೆ. ಕಡಲ ದಂಡೆ ಯಾರಪ್ಪನ ಸ್ವತ್ತು? ಆಕಾಶ ನೋಡೊಕ್ಕೆ ನೂಕುನುಗ್ಗಲೇ ಅನ್ನುವ ಹಾಗೆ ಕೋವಲಂನ ಅದ್ಭುತ ಕಡಲ ತೀರ ಸಾರ್ವಜನಿಕವಾಗಿರಬೇಕಲ್ಲವೇ? ಈ ಪ್ರಶ್ನೆ ಗೋವಾ ಮತ್ತು ಇತರ ಜಾಗಗಳಿಗೂ ಸಲ್ಲುತ್ತದೆ. ಆದರೂ ದಂಡೆಯಲ್ಲಿರುವ ಕೆಲ ಹೋಟೇಲುಗಳಿಗೆ ತಮ್ಮದೆ ಖಾಸಗೀ ದಂಡೆಗಳಿವೆ. 

ಈ ಏರ್ಪಾಟಿನ ಫಾಯಿದೆ ಜನರಿಗಲ್ಲದಿದ್ದರೂ ಪಕ್ಷಿಗಳಿಗೆ ಆಗುತ್ತಿದೆ ಅನ್ನುವುದನ್ನು ಒಂದು ಜಾಣ ಕಾಗೆ ನನಗೆ ತೋರಿಸಿಕೊಟ್ಟಿತು. ಹೊರಕ್ಕೆ ಕಡಲ ದಂಡೆ, ನೀರು, ಕಾಣುವಂತೆ ಬಯಲಿನಲ್ಲಿ ನಾಷ್ಟಾಮಾಡುವ ರೆಸ್ಟುರಾ. ಕಾಫಿ-ಚಹಾಕ್ಕೆ ಸಕ್ಕರೆ, ಮತ್ತು ಶುಗರ್ ಫ್ರೀಯ ಪೊಟ್ಟಣಗಳನ್ನು ಮೇಜಿನ ಮೇಲೆ ಒಂದು ಭರಣಿಯಲ್ಲಿರಿಸಿದ್ದರು. ಕಾಗೆ ಅತ್ತ ಇತ್ತ ನೋಡುತ್ತ ಮೇಜಿನ ಮೇಲೆ ಇಳಿಯುವುದು, ನಾಲ್ಕಾರು ಸಕ್ಕರೆ ಪೊಟ್ಟಣಗಳನ್ನು ಕೊಕ್ಕಿನಲ್ಲಿ ಹಿಡಿದು ಹಾರುವುದು. ಕೆಲ ಸಕ್ಕರೆ ರೋಗವುಳ್ಳ ಕಾಗೆಗಳೂ ಇರಬಹುದು - ಹೀಗಾಗಿ ಅವಕ್ಕೆ ಶುಗರ್ ಫ್ರೀ ಪೊಟ್ಟಣಗಳು. ಫ್ರೀಯಾಗಿ ಸಿಕ್ಕರೆ ಶುಗರ್ ಬಗ್ಗೆ ಏನು ಕಂಪ್ಲೇಂಟು?

ಅಲ್ಲಿನ ಮಣ್ಣು ಮತ್ತು ಕಡಲ ತೀರದ ಅನುಭವ ಥೈಲಿ ಥೈಲಿ ಹಣ ಕೊಟ್ಟವರಿಗೆ ಮಾತ್ರ! ಸರಕಾರೀ ಏಕಾಧಿಪತ್ಯದ ಬಗ್ಗೆ ಪ್ರತಿಭಟಿಸುತ್ತಾ ಬಂದವರು ಖಾಸಗೀ ಏಕಾಧಿಪತ್ಯದ ಬಗ್ಗೆ ಏನನ್ನಬಹುದು? ಒಂದು ಥರದಲ್ಲಿ ಮಧ್ಯಪ್ರದೇಶದ ಹಿಂದುಳಿದ ಪ್ರದೇಶದಲ್ಲಿ ಸಂಚಾರ ಮಾಡಿ ಊಟವಿಲ್ಲದೇ ಬೆವರು ಸುರಿಸಿ ಮಾಹಿತಿ ಸಂಗ್ರಹಿಸುವ ನನ್ನ ಆ ಕೆಲಸಕ್ಕೂ, ಹೀಗೆ ಎರಡುದಿನದ ಜನ್ನತ್ ನೋಡುವ ಈ ಕೆಲಸಕ್ಕೂ ಸಂಬಂಧವೇ ಇಲ್ಲವೇನೋ ಅನ್ನಿಸಿತು. ಆದರೆ ವಿರೋಧಾಭಾಸವೆ ಜೀವ, ಆಷಾಢಭೂತಿತನ ಜೀವನ.

ಕೋವಲಂನಲ್ಲಿದ್ದಾಗ ಸಾಂಸ್ಕೃತಿಕವಾಗಿ ಕಂಡದ್ದು ಮೂರು ಕಾರ್ಯಕ್ರಮಗಳು - ಕಥಾಕಳಿಯ ಬಗೆಗಿನ ಪರಿಚಯ ಮತ್ತು ಒಂದು ಪುಟ್ಟ ಪ್ರಸಂಗ. ಹೊರ ಊರುಗಳಿಗೆ ಹೋದಾಗ ಈ ರೀತಿಯಾದಂತಹ [ನಮ್ಮ ಮ್ಯಾನೇಜ್ ಮೆಂಟ್ ವಿದ್ಯೆಯ ಭಾಷೆಯಲ್ಲಿ ವನ್-ಓ-ವನ್ ಎನ್ನುವ, ಅಂದರೆ ಮೂಲಭೂತವಾದ ಸೂತ್ರಗಳನ್ನು ವಿವರಿಸುವ] ಕಾರ್ಯಕ್ರಮಗಳು ಅವಶ್ಯಕ ಅಂತ ನನಗನ್ನಿಸಿತು. ಒಂದು ಪ್ರಸಂಗಕ್ಕೆ ಭೌತಿಕವಾಗಿ ನಡೆಸಬೇಕಾದ ತಯಾರಿ ಎಷ್ಟು!! ಇದಲ್ಲದೇ ಅಷ್ಟೊಂದು ಮೇಕಪ್ ನಡುವೆ ಕಣ್ಸನ್ನೆಯಲ್ಲೇ ಹೆಚ್ಚಿನ ಅಭಿನಯವನ್ನು ತೋರಿಸುವ ಈ ಕಲೆ ಅಧ್ಬುತ ಅನ್ನಿಸಿದ್ದರಲ್ಲಿ ಅಶ್ಚರ್ಯವೇನೂ ಇರಲಿಲ್ಲ. ಹಾಗೇ ಸಂಜೆಗೆ ಚೆಂಡು [ಬಹುಶಃ ಚೆಂಡ ಮದ್ದಳೆಯ ಮತ್ತೊಂದು ಅವತಾರವಿರಬಹುದು] ಕಾರ್ಯಕ್ರಮವೂ ಕಂಡೆವು. ಈ ಚೆಂಡು ಬಾರಿಸುವಲ್ಲಿ ಇರುವ ಚಾಕಚಕ್ಯತೆಯಲ್ಲದೇ ದೈಹಿಕವಾದ ಶ್ರಮ ಮಹತ್ತರವಾದದ್ದು. ಈ ಕಾರ್ಯಕ್ರಮ ನಡೆಸಿಕೊಟ್ಟ ಗಂಡಸರು ಯಾಕೆ ಅಂಗಿತೊಟ್ಟಿರಲಿಲ್ಲ ಅನ್ನುವುದು ಅವರು ಬೆವತ ರೀತಿಯಿಂದಲೇ ಗೊತ್ತಾಯಿತು! [ಕೇರಳದಲ್ಲಿ ಅಂಗಿ ಮತ್ತು ಲುಂಗಿ, ಉಭಯಲಿಂಗಿ ಅಂದ ಲಕ್ಷ್ಮಣರಾವ್ ನೆನಪಾದದ್ದು ಆಶ್ಚರ್ಯದ ಮಾತೇನೂ ಅಲ್ಲವೇನೋ]. ಆದರೆ ಈ ಚಂಡು ಬಾರಿಸಿದವರೇ ಮಾರನೆಯ ದಿನ ನಮಗೆ ಊಟವನ್ನೂ ಬಡಿಸಿದರು! ಇಂಥ ಟೂ-ಇನ್-ವನ್ ಏರ್ಪಾಟು ಶೋಷಣಾತ್ಮಕವಾದದ್ದೇ? ಗೊತ್ತಿಲ್ಲ. ಈ ಎಲ್ಲವನ್ನೂ ನೋಡುತ್ತಿದ್ದಾಗ ಕೆಲ ಘಂಟೆಕಾಲ ಬಂದ ಕೆಲಸ ಮರೆತದ್ದು ನಿಜವೇ. ರಿಟ್ರೀಟ್‍ನ ಉದ್ದೇಶವೂ ಅದೇ ಇದ್ದಿರಬಹುದು. ಆದರೆ ಕೋಣೆಗೆ ಬಂದ ಕೂಡಲೆ ರಜೆಯ ನಶೆಯಿಳಿದು ಮಾರನೆಯ ದಿನದ ಪ್ರೆಸೆಂಟೇಶನ್ ನೆನಪಾಗುತ್ತದೆ. ಮತ್ತೆ ಕಂಪ್ಯೂಟರಿನ ಕೀಲಿಮಣೆಯ ಮೇಲೆ ಕೈಯಾಡುತ್ತದೆ!!

ಇಲ್ಲಿನ ದೋಣಿಗಳ ಬಗ್ಗೆ ನಾನು ಕೇಳಿದ್ದೆನಾದರೂ, ಕಟ್ಟಮರಂಗಳನ್ನು ಮೊದಲಬಾರಿಗೆ ನೋಡುವ ಭಾಗ್ಯ ನನ್ನದಾಯಿತು. ಭಿನ್ನ ಜಾಗಗಳಲ್ಲಿ ಭಿನ್ನ ರೀತಿಯ ದೋಣಿಗಳ ಆವಿಷ್ಕಾರ ಯಾಕಾಯಿತು ಅನ್ನುವುದು ಕುತೂಹಲದ ವಿಷಯವೇ! ಆದರೆ ಕಟ್ಟಮರಂಗಿಂತ ಸರಳವಾದ ದೋಣಿಯನ್ನು ನಾನು ಕಂಡಿಲ್ಲ. ಮೀನುಗಾರಿಕೆಗೆ ಅದನ್ನು ಅತಿ ಬಡವರು ಉಪಯೋಗಿಸುತ್ತಾರೆಂದು ಸಿಫ್ಸ್ [South Indian Federation of Fishermen's Societies] ನಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ವಿವೇಕಾನಂದನ್ ಹೇಳಿದ್ದ. ಈಗ ಪೈಬರ್ ಗ್ಲಾಸ್ ದೋಣಿಗಳು, ದೊಡ್ಡ ಮೋಟಾರಿನ ಟ್ರಾಲರ್‌ಗಳೂ ಇರುವುದರಿಂದ ಕಟ್ಟಮರಂನಲ್ಲಿ ಮೀನುಗಾರಿಕೆ ಮಾಡುವವರಿಗೆ ಹೆಚ್ಚಿನ ಫಾಯಿದೆಯಿಲ್ಲ, ಎಲ್ಲರೂ ದೂರಕ್ಕೆ ಹೋಗಿ ಅಲ್ಲಿಂದಲೇ ಮೀನನ್ನು ಹಿಡಿದು ತರುತ್ತಾರಂತೆ. ಹಾಗೂ ಈಗೀಗ ಮೊಬೈಲಿನಿಂದ ಆಗಿರುವ ಫಾಯಿದೆ ಎಂದರೆ, ಮೀನು ಎಲ್ಲಿ ಸಿಗುತ್ತಿದೆ ಅನ್ನುವ ಸುದ್ದಿ ಸುಲಭವಾಗಿ ಬಿತ್ತರಗೊಂಡು ಅದರಿಂದ ಕೆಲವರಿಗೆ ಪ್ರಯೋಜನವಾಗಿದೆ ಎಂದೆಲ್ಲಾ ಹೇಳಿದ್ದ. ಆದರೆ ಈ ಆರ್ಥಿಕ ವ್ಯವಸ್ಥೆಯೇ ಬೇರೆ ರೀತಿಯದ್ದು. ಈ ಬಗ್ಗೆ ಯಾವಾಗಲಾದರೂ ಹೆಚ್ಚು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ತಿರುವನಂತಪುರಕ್ಕೆ ಹೋದ ಮೇಲೆ, ಅದೂ ಬೇರೆ ಸಂಘಟಕರ ಕೈಗೆ ಸಿಕ್ಕ ಮೇಲೆ ಅಲ್ಲಿನ ಮುಖ್ಯ ದೇವಸ್ಥಾನವಾದ "ಪದ್ಮನಾಭಸ್ವಾಮಿ ಮಂದಿರ"ಕ್ಕೆ ಹೋಗದಿರುವುದು ಊಹಿಸಲೂ ಸಾಧ್ಯವಾಗದ ಮಾತು. ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ನನಗೆ ಕೆಲವಾರು ಆಶ್ಚರ್ಯಗಳು ಕಾದಿದ್ದುವು. ಅನೇಕ ರೀತಿಯ ಗುಡಿಗಳು, ಅವುಗಳಿಗಿರುವ ಡ್ರೆಸ್ ಕೋಡುಗಳನ್ನು ನಾನು ನೋಡಿ ಗೌರವಿಸುತ್ತ, ಕಾನೂನಿನನ್ವಯ ಪಾಲಿಸುತ್ತಾ ಬಂದಿದ್ದೇನೆ. ಮಂತ್ರಾಲಯದಲ್ಲಿ ಶರ್ಟು ಬಿಚ್ಚಿ ಒಳಹೋಗಬೇಕೆಂದರೆ ಯಾಕೆನ್ನುವ ಪ್ರಶ್ನೆಯನ್ನು ನಾನು ಕೇಳುವುದಿಲ್ಲ. ಹಾಗೆಯೇ, ಗುರುದ್ವಾರಾದಲ್ಲಿ ತಲೆಯ ಮೇಲೆ ವಸ್ತ್ರವನ್ನು ಧರಿಸಿ ಒಳಹೋಗಬೇಕೆಂದರೆ ಯಾಕೆಂದೂ ಕೇಳುವುದಿಲ್ಲ. ಬೋರ್ಡ್ ಮೀಟಿಂಗುಗಳಲ್ಲಿ ಟೈ ಧರಿಸುವುದು ಅವಶ್ಯಕವಾದರೆ ಪ್ರಶ್ನಿಸುವುದಿಲ್ಲ. ಘಟಿಕೋತ್ಸವದಂದು ಕಪ್ಪು ಗೌನು ಯಾಕೆನ್ನುವ ಪ್ರಶ್ನೆಯನ್ನೂ ಕೇಳಿಲ್ಲ. ಅನೇಕ ಬಾರಿ ನಿರರ್ಥಕ ಅನ್ನಿಸಿದರೂ ಅದನ್ನು ಪಾಲಿಸುವುದರಲ್ಲಿ ಒಂದು ಮಜಾ ಇದೆ ಅಂದುಕೊಂಡು ಸುಮ್ಮನಿರುವವ ನಾನು. ಹೀಗೇ ಪದ್ಮನಾಭಸ್ವಾಮಿಯ ಗುಡಿಗೆ ಗಂಡಸರು ಪಂಚೆ, ಹೆಂಗಸರು ಸೀರೆ ಉಟ್ಟು ಹೋಗಬೇಕೆನ್ನುವ ಕಾಯಿದೆ ಇದೆ ಎಂದಾಗ ಆ ಪ್ರಕಾರವೇ ಮುಂಡನ್ನು ಉಟ್ಟು ಹೋದದ್ದಾಯಿತು. ಜೊತೆಗೆ ದೇವರ ಫೋಟೊ ತೆಗೆಯುವಂತಿಲ್ಲವಾದರಿಂದ, ಮೊಬೈಲು, ಕ್ಯಾಮರಾ ಎಲ್ಲವೂ ಕಾರಿನಲ್ಲೇ ಉಳಿದವು. 

ದೇವಸ್ಥಾನಕ್ಕೆ ಹೋದಾಗ ನನಗೆ ಕೆಲವು ಆಶ್ಚರ್ಯಗಳು ಕಾದಿದ್ದುವು.  ಈ ಮಂದಿರ ಖಾಸಗೀ ಮಂದಿರವಾದ್ದರಿಂದ ಇಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶವಂತೆ. ಅದನ್ನು ಪರೀಕ್ಷಿಸುವ ರೀತಿ ಬಾಹ್ಯ ಲಕ್ಷಣಗಳಿಂದ ಮಾತ್ರ ಸಾಧ್ಯ. ಮುಂಚೆ ಹರಿಜನರಿಗೆ ಪ್ರವೇಶವಿರಲಿಲ್ಲವಾದರೂ, ಗಾಂಧೀಜಿಯವರ ಪ್ರಮೇಯದ ಮೇರೆಗೆ [ಬಹುಶಃ ಮೊದಲಿಗೆ ಗುರುವಾಯೂರಿನಲ್ಲಿ, ಆನಂತರ ಇಲ್ಲಿ] ಈ ಮುಟ್ಟುಗೋಲನ್ನು ಬಿಡಲಾಯಿತು. ಇದರ ಜೊತೆಗೆ ಜೈನರಿಗೂ, ಹಾಗೂ ಶಿರಸ್ತ್ರಾಣ ಧರಿಸದ ಸಿಖ್ಖರಿಗೂ ಪ್ರವೇಶವಿದೆಯೆಂದು ಅಲ್ಲಿನ ಆಡಳಿತದವರು ಹೇಳಿದರು. ಯಾರಾದರೂ ಹಿಂದೂ ಧರ್ಮಕ್ಕೆ ಮತಾಂತರಗೊಂಡು ರಾಮಕೃಷ್ಣಾಶ್ರಮದಿಂದ ಸರ್ಟಿಫಿಕೇಟ್ ತಂದರೆ ಅವರಿಗೂ ಪ್ರವೇಶವಿದೆ ಎಂದು ಹೇಳಿದರು. ನಮ್ಮ ಗುಂಪಿನಲ್ಲಿದ್ದ ಭಲ್ಲಾ ಎನ್ನುವ ಸಿಖ್ಖ ತನ್ನ ಶಿರಸ್ತ್ರಾಣ ತೆಗೆಯುವುದು ತನ್ನ ಧರ್ಮಕ್ಕೆ ವಿರುದ್ಧ ಎಂದು ಬರಲಿಲ್ಲ. ಆದರೆ ಅವನ ಪತ್ನಿ ಸೀರೆಯುಟ್ಟು ದೇವಾಲಯದ ಪ್ರವೇಶ ಪಡೆದರು. ಆ ದೇವಸ್ಥಾನದ ಆಡಳಿತದ ವ್ಯಕ್ತಿಯ ಮಾತು ಕೇಳಿದಾಗ ನನಗೆ ನಾನು ಕೇರಳದಲ್ಲೇ ಇರುವುದಾ, ಇದು ಇಪ್ಪತ್ತೊಂದನೆಯ ಶತಮಾನವಾ, ಅನ್ನುವ ಅನುಮಾನ ಬಂತಾದರೂ, ಆ ಅನುಮಾನ ಎರಡೇ ನಿಮಿಷದಲ್ಲಿ ಇಲ್ಲವಾಯಿತು. ಒಂದು ಗುಂಪು ಉತ್ತರ ಭಾರತದ ಮಹಿಳೆಯರು ಸಲ್ವಾರ್ ಕಮೀಜಿನಲ್ಲಿ ದೇವಸ್ಥಾನವನ್ನು ಪ್ರವೇಶಿಸಿದ್ದರು. ಹೇಗೆನ್ನುತ್ತೀರಾ? ಹೊರಗೆ ಮುಂಡನ್ನು ಬಾಡಿಗೆಗೆ ಪಡೆದು ಅದನ್ನು ಪಂಚೆಯರೀತಿಯಲ್ಲಿ ತಮ್ಮ ವಸ್ತ್ರದ ಮೇಲೆ ಸುತ್ತಿ ನಡೆಯುತ್ತಿದ್ದರು. ಶಿಸ್ತು ಪಾಲಿಸಬೇಕಾದರೆ ನಮಗೆ ಎಷ್ಟೆಲ್ಲಾ ಸರಳ ಮಾರ್ಗಗಳು!!

ಪದ್ಮನಾಭಸ್ವಾಮಿಯ ಗುಡಿಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಬಾರದಂತೆ! ಹಾಗೆ ಮಾಡಿದಲ್ಲಿ ಜೀವನ ಪರ್ಯಂತ ಪ್ರಭುವಿನ ಸೇವೆಗೆ ಮುಡಿಪಾಗುವ ಸಂಕೇತವಂತೆ. ದೇವಸ್ಥಾನದಲ್ಲಿ ಕೆಲಸ ಬೇಕಿರುವವರು ಹೀಗೆ ಮಾಡಬಹುದೇನೋ!! ಪ್ರತಿ ಜಾಗದಲ್ಲೂ ಹೊಸ ನಿಯಮಗಳು, ಹೊಸ ಅರ್ಥಗಳು! ಸಾಮಾನ್ಯವಾಗಿ ಉದಾರವಾಗಿರುವ ಹಿಂದೂ ಮಂದಿರಗಳ ನಡುವೆ ಸಾಂಪ್ರದಾಯಿಕ ಪದ್ಮನಾಭಸ್ವಾಮಿ ಗುಡಿ ನನಗೆ ಆಶ್ಚರ್ಯ ಉಂಟುಮಾಡಿತ್ತು.

ಸಂಜೆಗೆ ತಿರುವನಂತಪುರಂ ಬ್ಯಾಕ್‍ವಾಟರ್ಸ್ ನಲ್ಲಿ ದೋಣಿಸವಾರಿ ಆಯಿತು. ದೋಣಿಸಾಗಲಿ ಮುಂದೆ ಹೋಗಲಿ ಮತ್ತೆ ತೀರವ
ಸೇರಲಿ ಎಂದು ಹಾಡಬೇಕಾಯಿತು. ಅಲ್ಲೇ ಬದಿಯಲ್ಲಿ ಒಂದು ಕೇರಳ ಟೂರಿಸಂನ ಖಾನಾವಳಿ. ಚಹಾ ಕೊಡಲು ಅರ್ಧಘಂಟೆ.. ಹೀಗೆ ಚಹಾ ತಡವಾದಾಗಲೆಲ್ಲ ಹೋಟೇಲನ್ನು ಸರಕಾರ ಮಾರಾಟಮಾಡಿಬಿಡಬೇಕು ಅನ್ನಿಸಿದರೂ, ಸಾರ್ವಜನಿಕವಾಗಿರಬಹುದಾದ ಜಾಗ ಖಾಸಗೀಕರಣಗೊಳ್ಳುವುದು ಕುಟುಕುತ್ತಲೇ ಇರುತ್ತದೆ. ದೋಣಿಯ ಪಯಣಕ್ಕಿಂತ ಅದ್ಭುತವಾದದ್ದು ನಾವು ಕಂಡ ಸೂರ್ಯಾಸ್ತ!!

ಮಾರನೆಯ ದಿನ ತಿರುವನಂತಪುರಂನಿಂದ ಆಲೆಪ್ಪಿಗೆ ಪ್ರಯಾಣ. ಅಲ್ಲಿ ದೋಣಿಮನೆಯಲ್ಲಿ ರಾತ್ರೆಯ ವಾಸ್ತವ್ಯ. ಒಂದು ದೋಣಿಯಲ್ಲಿ ಮೂರ್ನಾಲ್ಕು ಕೋಣೆಗಳು. ಎಲ್ಲರೂ ತಮ್ಮತಮ್ಮ ದೋಣಿಮನೆಗೆ ಹೋಗಿ ತೇಲಿ ದೂರದ ಜಾಗದ ದಂಡೆ ಸೇರಿದೆವು. ಮತ್ತೆ ನಮ್ಮ ದೋಣಿಯಂದ ಎಲ್ಲರೂ ಒಂದು ಕೇಂದ್ರ ದೋಣಿಗೆ ಹೋದೆವು. ಅಲ್ಲಿ ಅಲುಗಾಡುತ್ತಿದ್ದ ದೋಣಿಯಲ್ಲಿ ಮನರಂಜನೆ, ಮೋಹಿನಿಯಾಟ್ಟಂ, ಮತ್ತು ಊಟ. ಈ ಮೇಲೋಗರ ಕೆಲಸವಿಲ್ಲದೇ ನಡೆಯಿತು. ನನ್ನ ಚಿಂತೆ ಈ ಮನರಂಜನೆಯದ್ದಲ್ಲ.. ಬದಲಿಗೆ ಮಾರನೆಯ ದಿನ ಮುಂಜಾನೆ ಅಷ್ಟುಹೊತ್ತಿಗೇ ದೋಣಿಯಿಳಿದು ಕೊಚ್ಚಿಗೆ ಹೋಗಿ ವಿಮಾನ ಹತ್ತಬೇಕಿತ್ತು. ಹೀಗಾಗಿ ಮತ್ತೆ ನಮ್ಮ ದೋಣಿಗೆ ಹೋಗಿ ಕೂತರೂ, ಬೆಳಿಗ್ಗೆ ನಮ್ಮನ್ನು ಪಿಕಪ್ ಮಾಡುವುದರಲ್ಲಿ ಹೆಚ್ಚುಕಡಿಮೆಯಾದರೆ ಅನ್ನುವ ಭಯ ನಮ್ಮನ್ನು ಕಾಡುತ್ತಲೇ ಇತ್ತು. ಮುಂಜಾನೆ ನಾಲ್ಕಕ್ಕೆ ನಮಗೆ ಕರೆ ಬಂತು - ನಮ್ಮ ದೋಣಿಯಿಂದ ಸೂಟ್‌ಕೇಸ್ ಸಮೇತ ಮತ್ತೊಂದು ಸ್ಪೀಡ್ ಬೋಟಿಗೆ ಬ್ಯಾಟರಿಯ ಬೆಳಕಿನಲ್ಲಿ ರವಾನೆಯಾದವು. ಹಳೆಯ ಅಮಿತಾಭ್ ಚಿತ್ರದ ಖಳನಾಯಕರಂತೆ ಬಂಗಾರ ಕದ್ದ ಸ್ಮಗ್ಲರುಗಳಂತೆ ಮಂದಬೆಳಕಿನಲ್ಲಿ ದೋಣಿಯಿಂದ ದೋಣಿಗೆ ಸೂಟ್‌ಕೇಸುಗಳ ಸಮೇತ ರವಾನೆಯಾಗಿ ದಡ ಮುಟ್ಟಿದೆವು. ವಿಮಾನ ನಿಲ್ದಾಣಕ್ಕೆ ಇಷ್ಟೆಲ್ಲ ಕಷ್ಟ ಪಟ್ಟು ಬಂದರೂ ತಕ್ಷಣ ಬೆಂಗಳೂರಿನ ವಿಮಾನ ಹತ್ತಲಾಗಲಿಲ್ಲ. ಆದರೆ ಆ ಕಥೆಯೇ ಬೇರೆ.


No comments: