ಪಾಠ-ಪ್ರವಚನ ಮಾಡುವ ನನ್ನಂತಹವರಿಗೆ ಎಲ್ಲೆಲ್ಲಿ ಪಾಠ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಪ್ರವಚನಕಾರರಂತೆಯೇ ಪಾಠಮಾಡುವವರೂ ಸಹ ಒಂದು ಗುಂಪಿನ ಕೇಳುಗರು ಸಿಕ್ಕಿದರೆ ಸಾಕು ತಮ್ಮ ಪುಂಗಿಯೂದುವುದಕ್ಕೆ ಪ್ರಾರಂಭಿಸುತ್ತಾರೇನೋ! ಆದರೆ ಸಾಮಾನ್ಯವಾಗಿ ಕ್ಯಾಂಪಸ್ ಬಿಟ್ಟು ಹೊರಗೆ ಹೋಗಿ ಪಾಠ ಮಾಡುವಾಗ ಒಂದು ಟೀಂ ಅಂತ ಇರುತ್ತದೆ. ಇಬ್ಬರಾದರೂ ಇರುವುದರಿಂದ ನಮಗೆ ಒಂದು ಥರದ ಕಂಪನಿ ಇರುತ್ತದೆ. ಆದರೆ ಒಮ್ಮೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ಸ್ವಯಂ ಸೇವಾ ಸಂಸ್ಥೆಗಳವರು ಯಾರಾದರೂ ಹೀಗೆ ತರಬೇತಿ ಕಾರ್ಯಕ್ರಮನನ್ನು ಮಾಡಿ ಎಂದು ಕೇಳಿದಾಗಲೇ ಹೆಚ್ಚಿನ ಪೀಕಲಾಟಕ್ಕೆ ಬರುವುದು. ಯಾಕೆಂದರೆ ಅಂಥ ಸಂಸ್ಥೆಗಳಿಗೆ ಹೋಗುವಾಗ ಈ ಟೀಂ ಕೈಕೊಡುತ್ತದೆ. ಅವರು ಕೊಡುವ ಹಣ ಹೆಚ್ಚಲ್ಲವಾದ್ದರಿಂದ ನನ್ನ ಸಹಚರರಿಗೆ ಆಸಕ್ತಿ ಕಡಿಮೆಯೂ ಆಗಬಹುದು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳವರ ಟ್ರೈನಿಂಗ್ ವಿಭಾಗಗಳು ದೂರದ ಜಾಗಗಳಲ್ಲಿರುತ್ತವೆ. ಅಥವಾ ನಗರದಲ್ಲಿದ್ದರೂ ಅಲ್ಲಿ ನಮಗೆ ಬೇಕಾದ ಪರಿಕರಗಳೆಲ್ಲವೂ ಸುಲಭವಾಗಿ ಸಿಗುವುದಿಲ್ಲ. ಒಂದು ಥರದಲ್ಲಿ ಈಡನ್ ಗಾರ್ಡನ್, ಚಿನ್ನಸ್ವಾಮಿ ಸ್ಟೇಡಿಯಂನಂತಹ ಜಾಗದಲ್ಲಿ ಅಂತರರಾಷ್ಟ್ರೀಯ ಮ್ಯಾಚುಗಳನ್ನು ಆಡಿದವರನ್ನು ಕಾಲೇಜಿನ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಕೇಳಿದಂತೆ. ಒಂದೆರಡು ಬಾರಿ ತಮಾಷೆಗೆಂದು ಆ ಆಟ ಚೆನ್ನಾಗಿರುತ್ತದಾದರೂ ಇದನ್ನು ಇಡೀ ಟೀಮು ಆಡುವುದನ್ನು ಊಹಿಸುವುದು ಕಷ್ಟ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಈ ರೀತಿಯ ತರಬೇತಿಯ ಕೋರಿಕೆಯನ್ನು ನಮ್ಮ ಮುಂದಿಟ್ಟಾಗ ಮಾಡಬೇಕೆನ್ನಿಸಿದರೂ, ಅದನ್ನು ಕಾರ್ಯರೂಪಗೊಳಿಸುವುದು ಸ್ವಲ್ಪ ಕಷ್ಟವೇ.
ಹೀಗಿರುವಾಗ ನನ್ನನ್ನು ಪ್ರದಾನ್ ಅನ್ನುವ ಸಂಸ್ಥೆಯವರು ತಮ್ಮ ಟೀಂ ಲೀಡರುಗಳಿಗೆ ಲೆಕ್ಕಪತ್ರ ಇಡುವಬಗ್ಗೆ ಆರ್ಥಿಕ ನಿಯೋಜನೆಯ ಬಗ್ಗೆ ತರಬೇತಿ ನೀಡಬೇಕೆಂದು ಕೇಳಿದರು. ೧೯೮೬ರಲ್ಲಿ ಪ್ರಾದನ್ ಸಂಸ್ಥೆಯಲ್ಲಿ ನಾನು ಎರಡು ತಿಂಗಳು ಕೆಲಸ ಮಾಡಿದ್ದೆ. ನಾನಾಗಿಯೇ ಒಂದು ಗ್ರಾಮೀಣ ವಿಕಾಸದ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕಿತ್ತು. ಅವರೂ ನನ್ನ ಮೇಲೆ ಬಹುಶಃ ಸಾಕಷ್ಟು ನಂಬಿಕೆಯನ್ನಿಟ್ಟುಕೊಂಡಿದ್ದರು. ಆದರೆ ಅದೇ ಸಮಯಕ್ಕೆ ಐಐಎಂನಲ್ಲಿ ನನಗೆ ಫೆಲೋಷಿಪ್ ಸಿಕ್ಕಿದ್ದರಿಂದ, ನಾನು ಕೆಲಸ ಪ್ರಾರಂಭವಾಗುವಮೊದಲೇ ಅದನ್ನು ಬಿಟ್ಟಿದ್ದೆ. ಈ ಪಾಪಪ್ರಜ್ಞೆ ನನ್ನನ್ನು ಕುಟುಕುತ್ತಲೇ ಇತ್ತು. ಹೀಗಾಗಿ ಅವರು ಈ ಕೋರಿಕೆಯನ್ನು ನನ್ನ ಮುಂದಿಟ್ಟಾಗ ನನ್ನ ಹಳೆಯ ಪಾಪವನ್ನು ಸ್ವಲ್ಪಮಟ್ಟಿಗಾದರೂ ತೊಳೆದುಕೊಳ್ಳುವ ಅವಕಾಶ ಸಿಕ್ಕಿತೆಂದು ಕೂಡಲೇ ಒಪ್ಪಿಕೊಂಡೆ. ತರಬೇತಿಯನ್ನು ಆರು ದಿನಗಳ ಕಾಲ, ಕೇಸ್ಲಾದಲ್ಲಿ ಮಾಡಬೇಕೆಂದು ಅವರು ಕೇಳಿದರು. ಇದೂ ನನಗೆ ಹೊಸ ಅನುಭವ. ದಿನಕ್ಕೆ ಎರಡು ಆಗಾಗ ಮೂರು ಕ್ಲಾಸುಗಳನ್ನು ತೆಗೆದುಕೊಂಡಿದ್ದೆನಾದರೂ, ಇಡೀ ಕಾರ್ಯಕ್ರಮವನ್ನು ಒಂಟಿಯಾಗಿ, ಸತತವಾಗಿ ನಾನು ಎಂದೂ ತೆಗೆದುಕೊಂಡಿರಲಿಲ್ಲ. ಜೊತೆಗೆ ನಾವು ಪಾಠಮಾಡುವ "ಕೇಸ್" ವಿಧಾನದಲ್ಲಿ ತರಗತಿ ಮುಂಚಿನ ತಯಾರಿ ಮುಖ್ಯವಾಗುತ್ತದೆ. ಇದಲ್ಲದೇ ಎರಡನೆಯ ಕ್ಲಾಸಿನಲ್ಲಿ ಮಾಡುವ ಪಾಠ ಮೊದಲನೆಯದರ ಕಲಿಕೆಯ ಮೇಲೆ ಆಧಾರಿತವಾಗಿರುತ್ತದಾದ್ದರಿಂದ, ಅದಕ್ಕೆ ಓದು ಮೊದಲನೆಯ ಕ್ಲಾಸಿನ ನಂತರ ಮಾಡಬೇಕಾಗುತ್ತದೆ... ಈ ಎಲ್ಲ ತೊಂದರೆಗಳಿದ್ದರೂ ನಾನು ಈ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿದೆ.
ಹಳೆಯ ಪಾಪ ತೊಳೆಯುವುದು ಒಂದು ಕಾರಣ. ಕೇಸ್ಲಾಕ್ಕೆ ಹೋಗಬೇಕೆಂದು ಬಯಸಿ ಹೋಗುವುದು ಮತ್ತೊಂದು ಕಾರಣ. ಕೇಸ್ಲಾಕ್ಕೆ ಹೋಗಬಯಸುವುದು ಯಾಕೆಂದರೆ, ಅಲ್ಲಿ ಸಿಗುವ ಏಕಾಂತ, ಮನಶ್ಶಾಂತಿ ಮತ್ತು ಬಹುಶಃ ಕಥೆ ಬರೆಯಲು ತಕ್ಕ ವಾತಾವರಣ. ಕೇಸ್ಲಾದ ಕ್ಯಾಂಪಸ್ಸನ್ನು ಚೆನ್ನಾಗಿ ರೂಪಿಸಿದ್ದಾರೆ. ಬಹುಶಃ ಮೇಷ್ಟರ ಪಾತ್ರದಲ್ಲಿ ನಾನು ಹೋಗುತ್ತಿರುವುದರಿಂದ ಇದು ಚೆನ್ನಾಗಿದೆ ಅನ್ನುತ್ತಿದ್ದೇನೇನೋ. ಆದರೆ ವಿದ್ಯಾರ್ಥಿಗಳಾಗಿ ಹೋದಾಗ ನಮಗಿರುವ ಕಾಟೇಜುಗಳಲ್ಲದೇ ಅವರಿಗೆ ಎಲ್ಲರೂ ಒಂದೇ ಕೋಣೆಯಲ್ಲಿ ಮಲಗುವ ಡಾರ್ಮಿಟರಿಗಳ ಏರ್ಪಾಟು ಇದೆ. ಅದು ಎಷ್ಟರ ಮಟ್ಟಿಗೆ ಅನುಕೂಲಕರವಾದದ್ದು ಅನ್ನುವುದನ್ನು ಅವರೇ ಹೇಳಬೇಕು. ಕೇಸ್ಲಾದ ಕ್ಯಾಂಪಸ್ಸು ಲಾರೀ ಬೇಕರ್ ಶೈಲಿಯಲ್ಲಿ ಸ್ಥಳೀಯವಾಗಿ ದೊರೆತ ವಸ್ತುಗಳಿಂದ, ಆದರೆ ಚೆನ್ನಾಗಿ ರೂಪಿಸಿರುವ ಜಾಗ.
ನನಗೆ ಮೊದಲ ಬಾರಿಗೆ ಪ್ರದಾನ್ ನಿಂದ ಆಹ್ವಾನ ಬಂದದ್ದು ೨೦೦೨ರಲ್ಲಿ, ಮತ್ತು ನಾನು ಕೇಸ್ಲಾಕ್ಕೆ ಹೋದದ್ದೂ ಆ ವರುಷವೇ. ಅಹಮದಾಬಾದಿನಿಂದ ಇಟಾರ್ಸಿಗೆ ರೈಲಿನಲ್ಲಿ ಹೋದರೆ, ಇಟಾರ್ಸಿಯಿಂದ ನಾಗಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಖತವಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕೇಸ್ಲಾ ಬರುತ್ತದೆ. ಬಳಿಯಲ್ಲೇ ತವಾ ಅಣೆಕಟ್ಟೂ ಹಾಗು ಸರಕಾರಿ ಆರ್‍ಡಿನೆಸ್ನ್ ಫ್ಯಾಕ್ಟರಿಯೂ ಇದೆ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾದರೂ ಎಲ್ಲಿದೆ ಅನ್ನುವುದನ್ನು ಹುಡುಕಬೇಕಿತ್ತು. ನೆನಪಿಡಿ ಬಿಜಲಿ ಸಡಕ್ ಪಾನಿ [ವಿದ್ಯುತ್ತು, ರಸ್ತೆ ಮತ್ತು ನೀರು] ಕೊಡುತ್ತೇನೆಂದು ಹೇಳಿದ ಉಮಾ ಭಾರತಿ ಅಲ್ಲಿ ಚುನಾಯಿತರಾಗುವುದಕ್ಕೆ ಮುಂಚಿನ ಮಾತು ಇದು. ಹೀಗಾಗಿ ಸಡಕ್ ಎಷ್ಟು ಖಡಕ್ ಆಗಿತ್ತೆನ್ನುವುದನ್ನು ನೀವೇ ಊಹಿಸಿಕೊಳ್ಳಿ.
ಮಧ್ಯಾಹ್ನ ಎರಡು ಘಂಟೆಗೆ ನನ್ನ ಕಾರ್ಯಕ್ರಮ ಪ್ರಾರಂಭವಾಗುವುದಿತ್ತು. ರಾತ್ರೆಯೆಲ್ಲಾ ಪ್ರಯಾಣಮಾಡಿ ಕೇಸ್ಲಾ ತಲುಪುವ ವೇಳೆಗೆ ಹನ್ನೊಂದು ಗಂಟೆ. ಕಾಟೇಜಿಗೆ ನನ್ನನ್ನು ಒಯ್ದು ಬಿಟ್ಟರು. ಒಟ್ಟಾರೆ ನಾಲ್ಕು ಕಾಟೇಜುಗಳು. ಒಂದೊಂದೂ ಮತ್ತೊಂದಕ್ಕಿಂತ ಭಿನ್ನವಾಗಿತ್ತು. ಅದೇ ಒಂದು ಆಶ್ಚರ್ಯ. ಸಾಮಾನ್ಯವಾಗಿ ಕ್ಯಾಂಪಸ್ಸುಗಳಲ್ಲಿ ಎಲ್ಲವನ್ನೂ ಒಂದೇ ರೀತಿಯಿಂದ ಕಟ್ಟುವುದು ಸಹಜ. ಆದರೆ ಇಲ್ಲಿ ಪ್ರತೀ ಕಟ್ಟಡಕ್ಕೂ ತನ್ನದೇ ವ್ಯಕ್ತಿತ್ವವಿತ್ತು. ಸಡಕ್ ವಿಷಯ ಹೇಳಿದ್ದೆ. ಬಿಜಲಿಯ ಕಥೆಯೂ ನನಗೆ ತಕ್ಷಣಕ್ಕೆ ಗೊತ್ತಾಯಿತು. ಕೋಣೆಯಲ್ಲಿ ಇದ್ದ ಮೇಜಿನ ಮೇಲೆ ತುವಾಲು, ಸಾಬೂನು ಈ ಎಲ್ಲವುದರ ಜೊತೆಗೆ ಎರಡು ಮೊಂಬತ್ತಿ ಮತ್ತು ಬೆಂಕಿಪೊಟ್ಟಣ ಕಂಡಿತು. ರೂಮಿನಲ್ಲಿ ಗೀಜರ್ ಇಲ್ಲ. ಆದರೆ ಬೆಳಿಗ್ಗೆ ನಾಲ್ಕೂ ಕಾಟೇಜುಗಳ ನಡುವಿನ ಗೋಲಾಕಾರದ ಪುಟ್ಟ ಕಟ್ಟೆಯ ನಡುವೆ ಒಂದು ಸ್ಟಾಂಡಿನ ಮೇಲೆ ದೊಡ್ಡ ಪಾತ್ರೆಯಿಟ್ಟು, ಸುತ್ತಮುತ್ತ ಸಿಕ್ಕ ಕಟ್ಟಿಗೆಸೇರಿಸಿ ನೀರು ಬೆಚ್ಚಗೆ ಮಾಡಿ ಕೊಡುತ್ತಾನೆ ಅಲ್ಲಿನ ಮೆಸ್ ನಡೆಸುವ ವ್ಯಕ್ತಿ. ಆತನೇ ಚಹಾವನ್ನೂ ಒದಗಿಸಿತ್ತಾನೆ. ಸಂಜೆಯ ವೇಳೆಗೆ ಆ ಪಾತ್ರೆಯನ್ನು ತೆಗೆದುಬಿಟ್ಟರೆ ಮಧ್ಯದಲ್ಲಿ ಬೆಂಕಿ ಹಾಕಿಕೊಂಡು ಕೈಉಜ್ಜುತ್ತಾ ಗುಂಡೂ ಹಾಗಬಹುದು! ಸಂಜೆಯ ವೇಳೆಯಲ್ಲಿ ಆ ವಾತಾವರಣದಲ್ಲಿ ಕೂತು ಹೆಚ್ಚಿನಂಶ ಉತ್ತರ ಭಾರತದಿಂದ ಬಂದಿದ್ದ ಟ್ರೈನಿಗಳ ಹಾಡುಗಳನ್ನು ಕೇಳುತ್ತಾ ಓಲ್ಡ್ ಮಾಂಕ್ ಹೀರಿದ್ದು ಅವರೊಂದಿಗಿನ ಗೆಳೆತನ ಬೆಳೆಸಲು, ಹಾಗೂ ಕಾರ್ಯಕ್ರಮವನ್ನು ಅವರ ಆಸಕ್ತಿಗನುಸಾರವಾಗಿ ನಡೆಸಲು ಅನುಕೂಲವಾಗುವಂತಿತ್ತು.
ಎಕೌಂಟಿಂಗ್ ನಂತಹ ಒಣ ವಿಷಯವನ್ನು ರೂಪಾಯಿ ಪೈಗಳನ್ನು ಲೆಕ್ಕಹಾಕಿಡುವ ಕಾರಕೂನಿಕೆಯನ್ನು ಆಸಕ್ತಿಮೂಡುವಂತೆ ಪಾಠ ಮಾಡುವುದು ಸುಲಭವಾದ ವಿಷಯವೇನೂ ಅಲ್ಲ! ಆದರೆ ಈ ಸಂಜೆಯ ಸಮ್ಮಿಲನದಿಂದ ಬಂದವರ ಪರಿಚಯ ಬೆಳೆಸಿಕೊಳ್ಳಲೂ ಸ್ನೇಹ ಬೆಳೆಸಿಕೊಳ್ಳಲೂ ಸಾಧ್ಯವಾಯಿತು. ಆರು ದಿನಗಳ ಕಾರ್ಯಕ್ರಮದ ನಡುವೆ ಫೆಬ್ರವರಿ ೨೮ರ ಬಜೆಟ್ಟು ಬರಲಿತ್ತು. ಹೀಗಾಗಿ ಬಜೆಟ್ಟು ಮಂಡನೆಯನ್ನು ನಾನು ನೋಡಲೇ ಬೇಕೆಂದೂ ಅದಕ್ಕೆ ಯಾರದಾದರೂ ಮನೆಯಲ್ಲಿ ಟಿ,ವಿ.ಯ ಏರ್ಪಾಟು ಮಾಡಬೇಕೆಂದು ನಾನು ಕೇಳಿಕೊಂಡಿದ್ದೆ. ಜೆನ್‍ಸೆಟ್ ಸಮೇತ ಬಿಜಲಿಯ ಯಾವ ಯೋಚನೆಯೂ ಇಲ್ಲದೇ ಅಲ್ಲಿದ್ದ ಕ್ಷೇತ್ರ ಕಾರ್ಯಾಲದಲ್ಲಿ ಕೆಲಸ ಮಾಡುತ್ತಿದ್ದ ಮಧೂ ಮತ್ತು ಅನೀಸರ ಮನೆಯಲ್ಲಿ ಚಹಾ, ಬಿಸ್ಕತ್ತು ಬಜೆಟ್ಟಿನ ಕಾರ್ಯಕ್ರಮವೂ ಬಂದ ಕೂಡಲೇ ಏರ್ಪಾಟಾಗಿತ್ತು.
ಇನ್ನು ನನಗಿದ್ದದ್ದು ನನ್ನ ಪ್ರವಚನವನ್ನು ಕುಕ್ಕುವುದು. ಬ್ರೇಕ್ ಸಿಕ್ಕಾಗ ಓದುವುದು. ಮನಸ್ಸಾದರೆ ಬರೆಯುವುದು. ಬೇಸರವಾದಾಗ ಲ್ಯಾಪ್‍ಟಾಪಿನ ಮೇಲೆ ನಾನು ತಂದುಕೊಂಡಿದ್ದ ಡಿ.ವಿ.ಡಿಗಳನ್ನು ನೋಡುವುದು.. ಹಾಗೂ ಕ್ಯಾಂಪಸ್ಸಿನಲ್ಲಿ ಓಡಾಡಿಕೊಂಡಿರುವುದು. ಈ ಜೀವನ ಶೈಲಿಯೇ ಬೇರೆ. ನ್ಯೂಸ್ ಪೇಪರ್ ಇಲ್ಲ, ಟಿವಿ ಇಲ್ಲ. ಫೋನ್ ಇಲ್ಲ, ಎಚ್ಚರವಾಗುವುದು ತಡವಾದರೆ ಸ್ನಾನಕ್ಕೆ ನೀರೂ ಇಲ್ಲ. ಹೀಗೆ ನಾನು ಖುಷಿಯಿಂದಲೇ ಇದ್ದೆ. ಹೊರಲೋಕದ ಯಾವ ಸೋಂಕೂ ಇಲ್ಲದೇ, ಇರುವುದೆಲ್ಲವ ಬಿಟ್ಟು.. ಸುಖವಾಗಿ....
ಆದರೆ ಹೊರಪ್ರಪಂಚದಲ್ಲಿ ಏನಾಗಿತ್ತು ಎಂದು ನನಗೆ ತಿಳಿದೇ ಇರಲಿಲ್ಲ. ಅಹಮದಾಬಾದಿನಿಂದ ಇಟಾರ್ಸಿಗೆ ಹೋಗುವ ರೈಲು ಅನೇಕ ಸ್ಟೇಷನ್ನುಗಳನ್ನು ಹಾಯ್ದು ಹೋಗುತ್ತದೆ. ಆದರೆ ಆ ಬಾರಿ ಒಂದು ಸ್ಟೇಷನ್ ಸಹಜಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಬಿಟ್ಟಿತು. ರಾತ್ರೆ ಹನ್ನೊಂದಕ್ಕೆ ರೈಲು ಗೋಧ್ರಾ ಸೇಷನ್ನಿನಲ್ಲಿ ಎರಡು ನಿಮಿಷ ನಿಂತು ಮುಂದಕ್ಕೆ ಬಂದಿತ್ತು. ರೂಟು ನನಗೆ ಗೊತ್ತಿದ್ದರೂ ಗೋಧ್ರಾದಲ್ಲಿ ಅಂದು ಮಹತ್ವದ್ದೇನೂ ನಡೆದಿರಲಿಲ್ಲ. ಹೀಗಾಗಿ ನಿದ್ದೆ ಮಾಡಿಬಿಟ್ಟಿದ್ದೆ. ಆದರೆ ನಾನು ಗೋಧ್ರಾವನ್ನು ಹಾದು ಹೋದದ್ದು ೨೬ರಂದು. ೨೭ ಫೆಬ್ರವರಿ ಮುಂಜಾನೆ ಸುಮಾರು ೮ ಗಂಟೆಗೆ ಸಾಬರ್‍ಮತಿ ಎಕ್ಸ್ ಪ್ರೆಸ್ ಕಾಂಡ ನಡೆದಿತ್ತು. ನಾನು ಕೇಸಲಾಗೆ ಬರುವವೇಳೆಗೆ ಈ ಕಾಂಡ ನಡೆದಿತ್ತಾದರೂ ನನಗೆ ಬಂದಾಗ ಮನಕ್ಕೆ ತಟ್ಟಿದ್ದು ಸ್ನಾನ ಮಾಡಲು ಬಿಸಿನೀರಿಲ್ಲ ಎಂಬ ಮಾತು ಮಾತ್ರ!! ಎಲ್ಲದರಿಂದಲೂ ದೂರವೆಂದರೆ ದೂರ. ದೂರದರ್ಶನವನ್ನು ನೋಡುವವರು ಅಪರೂಪ, ನೋಡಬೇಕೆಂದರೂ ಬಿಜಲಿ ಬೇಕು. ಕೇಸಲಾಕ್ಕೆ ಬರುವ ಪತ್ರಿಕೆಗಳು ಭೋಪಾಲದಿಂದ ಬರುವ "ಹಿತವಾದಾ" ಪತ್ರಿಕೆಯ ಡಾಕ್ ಆವೃತ್ತಿ. ಡಾಕ್ ಆವೃತ್ತಿಯೆಂದರೆ ಹಿಂದಿನದಿನದ ಪತ್ರಿಕೆಗೆ ಇಂದಿನ ತಾರೀಖನ್ನು ಲಗತ್ತಿಸಿ ರೈಲು ಬಸ್ಸುಗಳ ಮೂಲಕ ಕಳಿಸುವ ತುಸು ಹಳಸಲು ಪತ್ರಿಕೆಗಳು. ಹೀಗಾಗಿ ಯಾವುದೂ ನನಗೆ, ನಮಗೆ ಯಾರಿಗೂ, ವಿವರವಾಗಿ ಗೊತ್ತಿಲ್ಲ.
ಗೋಧ್ರಾದಲ್ಲಿ ರೈಲಿಗೆ ಬೆಂಕಿ ಬಿತ್ತಂತೆ, ಒಂದು ಬೋಗಿ ಸುಟ್ಟು ಹೋಯಿತಂತೆ - ಏನೋ ಗಲಾಟೆಯಂತೆ ಅಂತ ಸುದ್ದಿ ಬಂತಾಗಲೀ ಅದರ ಮಹತ್ವ ನನಗೆ ತಿಳಿಯಲೇ ಇಲ್ಲ. ನಮ್ಮ ಪಾಡಿಗೆ ನಾವು ಪಾಠ ಮಾಡಿಕೊಂದು ಜೋಕು ಕತ್ತರಿಸುತ್ತಾ ಇದ್ದೆವು. ಆದ ಘಟನೆಯಾಗಲೀ ಅದರ ಮಹತ್ವವಾಗಲೀ ನಮಗೆ ಯಾರಿಗೂ ತಿಳಿದಿರಲಿಲ್ಲ. ೨೮ಕ್ಕೆ ನಮ್ಮ ಕಾರ್ಯಕ್ರಮದ ಪ್ರಕಾರ ಬಜೆಟ್ಟು ನೋಡಿದ್ದಾಯಿತು. ಆದರೆ ಅದೇ ದಿನ ಅಹಮದಾಬಾದು ನಗರವೇ ಹೊತ್ತಿ ಉರಿಯುತ್ತಿತ್ತು. ಇದು ಯಾವುದೂ ಶಾಂಗ್ರಿಲಾ ಆದ ಕೇಸಲಾಕ್ಕೆ ಮುಟ್ಟಿಯೇ ಇರಲಿಲ್ಲ. ಹಾಗೆ ನೋಡಿದರೆ ಅಹಮದಾಬಾದಿನಲ್ಲಿದ್ದ ನನ್ನ ಹೆಂಡತಿ, ಮತ್ತು ಇನ್ನೂ ಪುಟ್ಟವನಾಗಿದ್ದ ನನ್ನ ಮಗನ ಕುಶಲದ ಬಗ್ಗೆ ನನಗೆ ಯೋಚನೆಯಿರಬೇಕಿತ್ತು. ಆದರೆ ಇಲ್ಲ.. ಯಾವುದೂ ನನಗೆ ಮುಟ್ಟಿಯೇ ಇರಲಿಲ್ಲ. ಆ ಕಡೆ ನನ್ನ ಹೆಂಡತಿಗೆ ನನ್ನನ್ನು ಸಂಪರ್ಕಿಸುವುದು ಹೇಗೆಂದು ತಿಳಿಯದೇ ಅವಳೂ ಒದ್ದಾಡುತ್ತಿದ್ದಳಂತೆ. ಮೊಬೈಲು ಇರಲಿಲ್ಲ. ಕೇಸಲಾದ ಕಾರ್ಯಾಲಯದಲ್ಲಿ ಎಸ್.ಟಿ.ಡಿ ಕನೆಕ್ಷನ್ ಇಲ್ಲದ ಒಂದು ಫೋನಿತ್ತು. ಅದು ಆಫೀಸಿದ್ದ ಸಮಯದಲ್ಲಿ ಕೆಲಸ ಮಾಡುತ್ತಿತ್ತು. ಅಲ್ಲಿಗೆ ಫೋನ್ ಬಂದರೆ ನಾನು ನನ್ನ ಕೋಣೆಯಿಂದ ತಲುಪಲು ಹಿಡಿಯುತ್ತಿದ್ದದ್ದು ಹತ್ತು ನಿಮಿಷ. ಆ ನಂಬರೂ ಅವಳ ಬಳಿಯಿರಲಿಲ್ಲ. ಹೀಗಾಗಿ ದೆಹಲಿಗೆ ಪ್ರದನ್ ಪ್ರಧಾನ ಕಾರ್ಯಾಲಯಕ್ಕೆ ಫೋನ್ ಮಾಡಿ ಅಲ್ಲಿಂದ ನನ್ನನ್ನು ಸಂಪರ್ಕ ಮಾಡುವ ಪ್ರಯತ್ನ ನಡೆದಿತ್ತು.
ಮುಖ್ಯತಃ ನಾನು ತಲುಪಿದ್ದೇನೆ ಅನ್ನುವ ಸುದ್ದಿಯಂತೂ ಅವಳಿಗೆ ಮುಟ್ಟಿತ್ತು. ಆದರೆ ಅಹಮದಾಬಾದಿಗೆ ವಾಪಸ್ಸು ಹೋಗುವ ವಿಧಾನ ಹೇಗೆ? ಜೋರಾಗಿ ಗಲಾಟೆ, ಜಾತಿಹಿಂಸೆ ನಡೆಯುತ್ತಿದೆ, ಗೋಧ್ರಾ ಸ್ಟೇಷನ್ ದಾಟಿ ಇತ್ತ ಬಂದರೆ, ವಾಪಸ್ಸು ಹೋಗಲೂ ಗೋಧ್ರಾ ದಾಟಿಯೇ ಹೋಗಬೇಕಲ್ಲವೇ? ಊರೆಲ್ಲಾ ಕರ್ಫ್ಯೂ ಆಗಿರುವುದರಿಂದ, ನನಗೆ ಬಂದ ಆದೇಶವೆಂದರೆ ಅಲ್ಲಿಯೇ ಕೇಸಲಾದಲ್ಲಿ ಶಾಂತಿಯುತವಾಗಿ ಪಾಠಮಾಡಿ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ಮಾರ್ಗವನ್ನು ಕಂಡುಕೊಳ್ಳಬೇಕು ಅನ್ನುವುದು. ನಾನಾಗಿಯೇ ಎಲ್ಲಿಗೂ ಕರೆ ಮಾಡಲು ಸಾಧ್ಯವಿದ್ದಿಲ್ಲ... ಕಾರ್ಯಾಲಯದ ಫೋನಿನಲ್ಲಿ ಎಸ್.ಟಿ.ಡಿ ಇಲ್ಲ. ಹಾಗೂ ಇಟಾರ್ಸಿಯಲ್ಲಿರುವ ಎಸ್.ಟಿ.ಡಿ ಬೂತಿನಿಂದ ಕಾನ್ಫರೆನ್ಸ್ ಕಾಲ್ ಮಾಡುವ ಏರ್ಪಾಟು ಇತ್ತಾದರೂ, ವಿಎಚ್‍ಪಿಯವರು ಕರೆದಿದ್ದ ಬಂದಿನಿಂದಾಗಿ ಲೋಕಸಂಪರ್ಕವೇ ಇಲ್ಲದೇ ಆಗಿತ್ತು.
ಮೂರು ದಿನಗಳು ಯಾವ ಸುದ್ದಿಯೂ ಇಲ್ಲದೇ ಜೋರಾಗಿ ನಡೆದ ಕಾರ್ಯಕ್ರಮ, ಈಗ ಯಾವ ಸುದ್ದಿಯೂ ತಲುಪದೇ ಇರುವ ಆತಂಕದಿಂದ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಈ ಅದ್ಭುತ ಜಾಗದ ಪರಿಸರದ ಸುಖವನ್ನು ಆಸ್ವಾದಿಸಲು ಸಾಧ್ಯವಾಗದೆಯೇ ದುಃಖದ ವಾತಾವರಣದಲ್ಲಿ ನಾವು ಕಾರ್ಯಕ್ರಮವನ್ನು ಮುಗಿಸಿದೆವು. ವಾಪಸ್ಸಾಗುವಾಗ ನನಗೆ ನಮ್ಮ ಸಂಸ್ಥೆಯಿಂದ ಬಂದ ಆದೇಶವೆಂದರೆ - ನಾನು ರೈಲಿನಲ್ಲಿ ಬರಕೂಡದು. ಯಾಕೆಂದರೆ ಸ್ಟೇಷನ್ ಸುತ್ತಮುತ್ತ ಕರ್ಫ್ಯೂ ಇದೆ. ಹಾಗೂ ಅದು ಅಪಾಯದಿಂದ ಕೂಡಿದ್ದು. ಪ್ಲೇನಿನಲ್ಲಿ ಬಂದರೂ, ಮುಂಜಾನೆ ಅಹಮದಾಬಾದಿನಲ್ಲಿ ಇಳಿಯುವ ಪ್ಲೇನಾದರೆ ಏರ್ಪೋರ್ಟಿಗೆ ಗಾಡಿ ಕಳಿಸುವುದಾಗಿ ಹೇಳಿದರು. ಸಂಜೆಯ ಸಮಯಕ್ಕೆ ಕಾರನ್ನು ಕಳಿಸುವ ಭರವಸೆ ಇರಲಿಲ್ಲ. [ಕೋಮುಗಲಭೆಯಲ್ಲಿ ನಿರತವಾಗಿರುವವರು ಮುಂಜಾನೆ ತಡವಾಗಿ ಎದ್ದು ಹಲ್ಲು ತಿಕ್ಕಿ, ಭಜಿಯಾ ತಿಂದು, ಹಿಂಸಾಚಾರಕ್ಕೆ ತೊಡಗುತ್ತಾರಾದ್ದರಿಂದ, ಅವರು ಕಣ್ಣಿನ ಗೀಜು ತೆಗೆಯುವುದರೊಳಗಾಗಿ ನಾನು ಊರು-ಮನೆ ಸೇರಬೇಕಿತ್ತು!!] ಹೀಗಾಗಿ ಭೋಪಾಲದಿಂದ ಮುಂಬಯಿಗೆ ಹೋಗಿ, ಅಲ್ಲಿಂದ ಮತ್ತೊಂದು ಫ್ಲೈಟನ್ನು ತೆಗೆಕೊಳ್ಳುವುದಕ್ಕಿಂತ, ದೆಹಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಪ್ಲೇನಿನಲ್ಲಿ ಬರುವುದು ಅಂತಾಯಿತು. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೆಂದರೆ ಇದೇ!
ಹಾಗೂ ಹೀಗೂ ಅಹಮದಾಬಾದಿಗೆ ಬಂದಿಳಿದೆ. ಬರುವ ದಾರಿಯಲ್ಲಿ ರಸ್ತೆಯ ಮಧ್ಯದಲ್ಲೇ ಇದ್ದ ಸೂಫಿ ಕವಿ ಷಾ ವಾಲಿಯ ದರ್ಗಾ ನೆಲಸಮವಾಗಿದ್ದು ಅಲ್ಲಿ ನೀಟಾದ ಹೊಸ ತಾರು ರೋಡಿತ್ತು! ಬೇರೆ ಜಾಗಗಳಲ್ಲೂ ಇಮಾರತುಗಳು ನೆಲಸಮವಾಗಿತ್ತಂತೆ. ನಾವು ನಿಯಮಿತವಾಗಿ ಹೋಗುತ್ತಿದ್ದ ಅಭಿಲಾಷಾ ಹೊಟೇಲೂ ಚೂರುಚೂರಾಗಿತ್ತು. ಅದನ್ನು ನಡೆಸುತ್ತಿದ್ದವರು ಚೇಲಿಯಾ ಮುಸಲ್ಮಾನರೆಂದು ನನಗೆ ಬಳಿಕ ತಿಳಿಯಿತು.
ಮನೆಯಲ್ಲಿ ಮತ್ತೊಂದು ಸಂಸಾರ ನನಗಾಗಿ ಕಾದಿತ್ತು. ನನ್ನ ಹಳೆಯ ವಿದ್ಯಾರ್ಥಿ ಮಹಮ್ಮದ್ ರಫಿ, ತನ್ನ ಹೆಂಡತಿ ಸುಷ್ಮಾ ಜೊತೆ ನಮ್ಮ ಮನೆಯಲ್ಲಿದ್ದ. ಗಲಾಟೆಯ ದಿನ ಫೋನ್ ಮಾಡಿ ಮನೆಗೆ ಬಂದವನು ಮನೆಯ ಬಾಗಿಲಿನಾಚೆ ಕಾಲಿಟ್ಟಿರಲಿಲ್ಲವಂತೆ. ಅವನು ಹಿಂದೂ ಹುಡುಗಿಯನ್ನು ಮದುವೆಯಾಗಿದ್ದನಾದ್ದರಿಂದ ಅವನಿಗೆ ತನ್ನ ಕಾಲೊನಿಯಲ್ಲಿರುವುದು ಭಯದ ವಿಷಯವಾಗಿತ್ತು. ಅವನು ಯಾರು ಎನ್ನುವ ಕುತೂಹಲ ನಮ್ಮ ಮನೆಯ ಕೆಲಸದವಳಿಗೆ. ಅವನನ್ನು ನಾವು ರಫಿ ಎಂದು ಕರೆಯುತ್ತಿದ್ದದ್ದು ಅವಳಿಗೆ ರವಿ ಎಂದು ಕೇಳಿಸಿದ್ದರಿಂದ ಅವರು ನಮ್ಮ ಮನೆಯಲ್ಲಿ ತಳವೂರಿದ್ದರ ಒಳ ಅರ್ಥ ಅವಳಿಗೆ ಆಗಿರಲಿಲ್ಲ. ಜೊತೆಗೆ ನಾವೂ ಈ ಸುದ್ದಿಯನ್ನು ಹೊರಗೆ ಹಬ್ಬಿಸಿ ಎಡವಟ್ಟು ಮಾಡುವ ಮೂಡಿನಲ್ಲಿರಲಿಲ್ಲ. ರಫಿ ಎರಡು ದಿನಗಳ ನಂತರ ದೆಹಲಿಗೆ ಫ್ಲೈಟಿನಲ್ಲಿ ಹೋದ. ಆನಂತರ ಅವನ ಗೆಳೆಯ ಅವನ ಸಾಮಾನನ್ನು ಕಟ್ಟಿ ದೆಹಲಿಗೆ ರವಾನೆ ಮಾಡಿದ. ಅಲ್ಲಿಯೇ ಅವನಿಗೆ ಹೊಸ ಕೆಲಸ ಸಿಕ್ಕಿತು. ೨೦೦೨ರಿಂದ ಇಂದಿನವರೆಗೂ ರಫಿ ಅಹಮದಾಬಾದಿಗೆ ಕಾಲಿಟ್ಟಿಲ್ಲ!!
ಇರಲಿ. ಈ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಹೀಗೆ ದೂರದ ಜಾಗಗಳಿಗೆ ಓಡಾಡುತ್ತೀಯ, ನಮಗೆ ಆತಂಕವಾಗುತ್ತೇಂತ ಹೇಳಿ ಗೌರಿ ಬಲವಂತದಿಂದ ಆಗ ದುಬಾರಿಯಾಗಿದ್ದ ಮೊಬೈಲನ್ನು ಕೊಳ್ಳಲು ಒತ್ತಾಯಿಸಿದಳು. ಹೀಗಾಗಿ ಮೊಬೈಲು ಕೊಂಡದ್ದಾಯಿತು. ಇಂಥದೇ ಮತ್ತೊಂದು ಕಾರ್ಯಕ್ರಮಕ್ಕಾಗಿ ನಾನು ಮತ್ತೆ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಕೇಸ್ಲಾಗೆ ಹೋಗುವುದಿತ್ತು. ಸಂಜೆ ರೈಲು ಹತ್ತುವುದಕ್ಕೆ ಮುನ್ನ ಮೊಬೈಲನ್ನು ಚಾರ್ಜ್ ಮಾಡಿ ಜೇಬಿಗಿರಿಸಿ ಸೂಟ್‍ಕೇಸ್ ಕಟ್ಟಿ ಇನ್ನೇನು ಹೊರಡಬೇಕೆನ್ನುವಾಗ ಟಿವಿಯಲ್ಲಿ ಬಂದ ವಾರ್ತೆಗಳು ಇಂತಿದ್ದುವು - ಗಾಂಧಿನಗರದ ಅಕ್ಷರಧಾಮ್ ದೇವಾಲಯವನ್ನು ಆತಂಕವಾದಿಗಳು ಮುತ್ತಿಗೆ ಹಾಕಿದ್ದಾರೆ. ಅವರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ... ನಾನು ರೈಲ್ವೇ ಸ್ಟೇಷನ್ನಿಗೆ ಹೋಗುವ ಪ್ರಮೇಯವೇ ಇಲ್ಲ ಎಂದು ಗೌರಿ ಪಟ್ಟು ಹಿಡಿದಳು. ಈಗ ಕಾರ್ಯಕ್ರಮ ಕ್ಯಾನ್ಸಲ್ ಮಾಡುವುದಕ್ಕೂ ಆಗುವುದಿಲ್ಲ. ದೇಶದ ವಿವಿಧ ಭಾಗಗಳಿಂದ ಪ್ರದಾನ್ ಕಾರ್ಯಕರ್ತರು ಕೇಸ್ಲಾಗೆ ಬಂದಿಳಿದಿರುತ್ತಾರೆ.. ಹೋಗಲೇ ಬೇಕು ಎಂದೆಲ್ಲಾ ಗಲಾಟೆ ಮಾಡಿದೆ. ಕಡೆಗೆ ದೆಹಲಿಗೆ ಫೋನ್ ಮಾಡಿ ರೈಲು ಬಿಟ್ಟು ಪ್ಲೇನಿನಲ್ಲಿ ಭೋಪಾಲಕ್ಕೆ ಮುಂಬಯಿನ ಮೂಲಕ ಹೋಗುವ ಏರ್ಪಾಡು ಮಾಡಿದ್ದಾಯಿತು.
"ಏನೂ ಯೋಚನೆ ಮಾಡಬೇಡ. ನಾನು ಕೇಸಲಾದಿಂದ ದಿನವೂ ಫೋನ್ ಮಾಡುತ್ತೇನೆ. ಹೇಗಿದ್ದರೂ ಮೊಬೈಲ್ ಇದೆಯಲ್ಲಾ" ಎಂದು ಗೌರಿಗೆ ಹೇಳಿ ಹೊರಟವನು ಊರೆಲ್ಲಾ ಸುತ್ತಿ ಕೇಸ್ಲಾ ಸೇರಿದೆ. ಈ ಬಾರಿ ಬಜೆಟ್ಟಿಲ್ಲ, ಆದರೆ ಛಾಂಪಿಯನ್ಸ್ ಟ್ರೋಫಿ ಮ್ಯಾಚು ನಡೆಯುವುದಿತ್ತು. ಅದನ್ನು ನೋಡುವ ಏರ್ಪಾಟು ಮಾಡಿಕೊಳ್ಳಬೇಕು ಅಂದುಕೊಂಡೆ. ಕೇಸ್ಲಾ ತಲುಪಿದ ತಕ್ಷಣ ಮನೆಗೆ ಫೋನ್ ಮಾಡೋಣವೆಂದು ನೋಡಿದರೆ ಮೊಬೈಲಿಗೆ ಸಿಗ್ನಲ್ಲೇ ಇಲ್ಲ!
ಯಾವ ಸುದ್ದಿಯೂ ಇಲ್ಲದೇ ಒಬ್ಬನೇ ಕುಳಿತು, ಪಾಠ, ಚಾಂಪಿಯನ್ಸ್ ಟ್ರೋಫಿಯ ಮ್ಯಾಚು, ಎಲ್ಲದರ ನಡುವೆ ಒಂದು ಕಥೆ ಬರೆದೆ. ಕೇಸ್ಲಾಗೂ ನನ್ನಯಾತ್ರೆಗೂ ಯಾಕೋ ಹಿಂಸಾಚಾರದ ಒಂದು ಭಯಾನಕ ಕೊಂಡಿ ಇದೆ ಅನ್ನಿಸಿತು. ಮೂರನೆಯ ಕಾರ್ಯಕ್ರಮ ಕೇಸ್ಲಾದಲ್ಲಿ ಬೇಡ ಎಂದು ಪ್ರದಾನ್ ಅವರನ್ನು ಕೇಳಿಕೊಂಡೆ. ಇದಾಗಿ ಅನೇಕ ದಿನಗಳಾದುವು.
ನಾಲ್ಕು ತಿಂಗಳ ಹಿಂದೆ ಮತ್ತೆ ಕೇಸ್ಲಾದಲ್ಲಿ ಇಂಥದೇ ಕಾರ್ಯಕ್ರಮ. ಆದರೆ ಈ ಬಾರಿ ಹಳೆಯ ಕಾಂಡಗಲು ನಡೆವುದಿಲ್ಲ ಅನ್ನಿಸಿ ಅಲ್ಲಿಗೇ ಹೋಗಲು ಒಪ್ಪಿದೆ. ಈ ಬಾರಿ ಎಲ್ಲವೂ ಸುಗಮವಾಗಿ ನಡೆಯಿತು. ದೂರದೂರದ ಹಳ್ಳಿಗಳಿಗೆ ಹೋಗುವಂತಹ ನನಗೆ ಬಿ.ಎಸ್.ಎನ್.ಎಲ್ ಮೊಬೈಲೇ ಒಳ್ಳೆಯದೆಂದು, ಇದ್ದ ಏರ್ಟೆಲ್ ತೆಗೆದು ಸರಕಾರಿ ಫೋನ್ ಕೊಂಡಿದ್ದೆ. ಆದರೆ ಈ ಬಾರಿ ಕೇಸ್ಲಾದಲ್ಲಿ ಐಡಿಯಾ, ರಿಲಯನ್ಸ್, ಏರ್ಟೆಲ್, ವೊಡಾಫೋನುಗಳ ಸಿಗ್ನಲ್ ಬರುತ್ತಿತ್ತು. ಬಿಎಸ್.ಎನ್.ಎಲ್ ಮಾತ್ರ ಇಲ್ಲ..!! ಯಾಕೋ ನನಗೂ ಕೇಸ್ಲಾಗೂ ಕಷ್ಟದ ನಂಟು ಹೀಗೇ ಮುಂದುವರೆಯುತ್ತದೇನೋ.....
No comments:
Post a Comment