ಯಕ್ಷ ಪ್ರಶ್ನೆ


ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ. ಸ್ಥಳೀಯ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿತ್ತು. ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ ನಡೆಯುತ್ತಿತ್ತು. ಅಲ್ಲಿನ ಸ್ಥಳೀಯ ಕಲಾವಂತಿಕೆಯ ನಡುವೆ ಈ ತಂತ್ರಜ್ಞಾನ ಎಲ್ಲಿಂದಲೋ ಟಪಕಾಯಿಸಿದಂತಿತ್ತು. ಬಟ್ಟೆಗಳ ಮೇಲಿನ ಕಸೂತಿ, ಅಜ್ರಕ್ ಪ್ರಿಂಟ್ಸ್, ರೋಗನ್ ಕಲೆ, ಬಾಂದಣಿಯ ತವರೂರಾದ ಕಛ್ ನಲ್ಲಿ ಈ ರೀತಿಯ ತಂತ್ರಗಾರಿಕೆಗೆ ತಾವೆಲ್ಲಿ ಅನ್ನಿಸುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ – ಮುಖ್ಯವಾಗಿ ಭೂಕಂಪದ ನಂತರ ಕಛ್ ಮೂಲಭೂತವಾಗಿ ಬದಲಾಗಿಬಿಟ್ಟಿದೆ. ಅದರಲ್ಲಿ ಮೋದಿಯ ವಿಕಾಸದ ಬೀಜಮಂತ್ರವೂ ಸೇರಿದೆ ಅನ್ನಿಸುತ್ತದೆ. ಆಪ್ತವಾಗಿ ತೋರುತ್ತಿದ್ದ ಇಲಾರ್ಕ್ ಹೋಟೇಲಿನಲ್ಲಿ ಮೊದಲೆರಡು ದಿನಗಳ ಕಾಲ ಮಾತ್ರ ರೂಮು ಲಭ್ಯ, ನಂತರ ಹೋಟೇಲಿನಲ್ಲಿ ಒಂದೂ ಕೋಣೆ ಖಾಲಿಯಿಲ್ಲ ಎನ್ನುವ ಕಥೆಯನ್ನು ನಾನು ಕಛ್ಛಿನಲ್ಲಿ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೆ ರಣ್ ಉತ್ಸವ, ಇತ್ಯಾದಿ ಟೂರಿಸಂ ಪ್ಯಾಕೇಜುಗಳನ್ನು ಮಾರಾಟ ಮಾಡುವುದರಿಂದ ಸ್ಥಳೀಯ ಆರ್ಥಿಕತೆ ಉದ್ಧಾರವಾಗುತ್ತಿದೆಯಂತೆ. ಇರಲಿ.

ನಾಲ್ಕು ದಿನಗಳ ಭುಜ್ ಯಾತ್ರೆ ನಡೆಸಿ ನಾನು ಚತುರ್ ಭುಚ್ ಆದೆ! ಮೊದಲ ದಿನ ಸಂಜೆ ನಗರದಲ್ಲಿಯೇ ಅಡ್ಡಾಡಿ, ಹಳೆಯ ಶಿವಾಲಯದ ದರ್ಶನ ಮಾಡಿಕೊಂಡದ್ದಾಯಿತು. ನನ್ನ ಅತಿಥೇಯಳಾಗಿದ್ದ ಮೀರಾಳಿಗೆ ನನ್ನನ್ನು ಬೋರಾಗದಂತೆ ನೋಡಿಕೊಳ್ಳುವ ತುರ್ತು ಇತ್ತೆಂದು ಕಾಣಿಸುತ್ತದೆ. ಹೀಗಾಗಿಯೇ ಶಿವಾಲಯವನ್ನು ಆಯ್ದಳು. ದೇವರಲ್ಲಿ ನಂಬುಗೆಯಿಲ್ಲದ ನನಗೆ ಹೀಗೆ ಆಗಾಗ ದೇವರ ದರ್ಶನವಾಗುವ ಸಂದರ್ಭಗಳು ಒದುಗುವುದರ ಹಿಂದಿರುವ ಹುನ್ನಾರ ಏನೋ ತಿಳಿಯದು! ಹಳೆಯ ಶಿವಾಲಯದ ಪಕ್ಕವೇ ಒಂದು ಭವ್ಯ ಸ್ವಾಮಿನಾರಾಯಣ ಮಂದಿರ. ಭಕ್ತಿಗೂ ದೇವರುಗಳಿಗೂ ತಮ್ಮದೇ ನಸೀಬುಗಳಿರುತ್ತವೆ. ಈಗ ಸ್ವಾಮಿನಾರಾಯಣನ ಭವ್ಯತೆಯ ಕಾಲ. ಶಿವದರ್ಶನದ ನಂತರ ಊಟಕ್ಕೆ ಗುಜರಾತೀ ಥಾಲಿ. ಇನ್ನೂರು ರೂಪಾಯಿ ಸಂದಾಯ ಮಾಡಿದರೆ ತಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಕಟೋರಿಗಳು.. ಲೆಕ್ಕತಪ್ಪುವಷ್ಟು ಪದಾರ್ಥಗಳು.

ಮಾರನೆಯ ದಿನದ ವಾಕಿಂಗಿಗೆ ಊರಿನ ಹೊರವಲಯಕ್ಕೆ ಹೋದದ್ದಾಯಿತು. ಪ್ರತೀಹಬಾರಿ ವಾಕ್ ಹೋದಾಗಲೂ ನಗರದ ಒಂದು ಹೊಸ ಪ್ರಾಂತವನ್ನು ತೋರಿಸುವ ಆಕೆಯ ಉತ್ಸಾಹವನ್ನು ನಾನು ಮೆಚ್ಚಿದೆ. ಈ ದಿನ ನಿನಗೆ ಸೌಥ್ ಇಂಡಿಯನ್ ಡೋಸಾ ತಿನ್ನಿಸುತ್ತೇನೆ ಎಂದು ಮೀರಾ ಹೆದರಿಸಿದ್ದಳು. ಅಲ್ಲಿನ ಸಂಕಲ್ಪ್ ಎನ್ನುವ ಖಾನಾವಳಿಯಲ್ಲಿ ಸುಮಾರು ಉತ್ತಮವೆನ್ನಿಸಬಹುದಾದ ದಕ್ಷಿಣ ಭಾರತೀಯ ತಿಂಡಿಗಳು ದೊರೆಯುತ್ತವೆ. ಆದರೆ ಬೆಂಗಳೂರಿನಿಂದ ಭುಜ್ ಗೆ ಹೋಗಿ ದಕ್ಷಿಣ ಭಾರತೀಯ ಊಟ ಮಾಡಿ ಬರುವುದಕ್ಕಿಂತ ಇನ್ನೇನಾದರೂ ತಿನ್ನಬಹುದೇನೋ ಎಂದು ನನಗನ್ನಿಸಿತ್ತು. ಅವಳಿಗೆ ನನ್ನ ವಿಚಾರದ ಲಹರಿಗಳು ಹೇಗೆ ತಟ್ಟಿದವೋ ತಿಳಿಯದು. ಆದರೆ ಇದ್ದಕ್ಕಿದ್ದ ಹಾಗೆ "ಈ ದಿನ ಜಖ್ ಮಂದಿರದಲ್ಲಿ ಊಟ ಹಾಕಿಸುತ್ತೇನೆ" ಅಂದಳು.

ನ್ಯಾಷನಲ್ ಕಾಲೇಜಿನ ಎದುರು ಭಾಗದಲ್ಲಿ ಇದ್ದಿ ಶ್ರೀವೇಣುಗೋಪಾಲಕೃಷ್ಣ ಆನಂದ ಭವನ ಇದ್ದಹಾಗೆಯೇ ಈ ಜಖ್ ಮಂದಿರ ಎಂದಕೊಂಡು ಸಂತೋಷದಿಂದ ಒಪ್ಪಿದೆ. ವಾಕಿಂಗಿಗೆಂದು ಸ್ನೀಕರ್ ಷೂ ಹಾಕಿ ನಡೆಯುತ್ತಿದ್ದ ನನಗೆ ಆ ಷೂಸನ್ನು ಬಿಚ್ಚಬೇಕಾಗಬಹುದು ಎನ್ನುವ ಗುಮಾನಿಯಿದ್ದಿದ್ದರೆ ಬೇಡವೆನ್ನುತ್ತಿದ್ದೆನೇನೋ. ಊಟಕ್ಕೆ ಮುನ್ನ ಷೂ ಬಿಚ್ಚುವುದು ಸಾಕ್ಸನ್ನು ಬಿಚ್ಚಬೇಕೋ ಬೇಡವೋ ಅನ್ನುವ ದ್ವಂದ್ವಕ್ಕೊಳಗಾಗುವುದು ನನಗೆ ಪ್ರಿಯವಾದ ಕೆಲಸವೇನೂ ಅಲ್ಲ. ಆದರೆ ನನ್ನ ಒಪ್ಪಿಗೆ ಈಗಾಗಲೇ ನೀಡಿದ್ದರಿಂದ ಎರಡನ್ನು ಕಳಚಿದ್ದಾಯಿತು.

ಜಖ್ ಮಂದಿರ ಹೋಟೇಲಿನಂತಿರಲಿಲ್ಲ. ಬದಲಿಗೆ ಒಂದು ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಊಟ ಮಾಡುತ್ತಿರುವಂತೆ ಅನ್ನಿಸಿತು. ಸಾತ್ವಿಕವಾದ ರುಚಿಕರ ಊಟ. ಎರಡೇ ಕಟೋರಿಗಳು. ಥಾಲಿಗೆ ಕೊಟ್ಟ ಇನ್ನೂರು ರೂಪಾಯಿಯ ಮೊಬಲಗಿಗೆ ಇಲ್ಲಿ ನಾಲ್ಕು ಜನ ಉಣ್ಣಬಹುದಿತ್ತು. ತಲಾ ಐವತ್ತು ರೂಪಾಯಿ ನೀಡಿ ನಾವು ತೃಪ್ತಿಯಿಂದ ಹೊರಬಂದೆವು. ನಾನು ಮತ್ತೆ ಸಾಕ್ಸನ್ನೂ ಷೂವನ್ನೂ ಧರಿಸಿದೆ. ಧರಿಸುತ್ತಾ ಇರುವಾಗ ಈ ಜಾಗದ ಕಥೆಯೇನೆಂದು ಮೀರಾಳನ್ನು ಕೇಳಿದೆ.

ಅದು ಮೂಲತಃ ಒಂದು ಮಂದಿರ. ಊಟದ ವ್ಯವಸ್ಥೆ ಮಂದಿರಕ್ಕೆ ಸಂಬಂಧಿಸಿದ್ದು. ಷೂ ಧರಿಸಿದಾಕ್ಷಣ "ಬಾ ಮಂದಿರವನ್ನೂ ನೋಡುವಿಯಂತೆ" ಎಂದು ಮೀರಾ ನನ್ನ ದೇವದರ್ಶನದ ಕೆಲಸವನ್ನು ಮುಂದುವರೆಸಿದಳು. ಮತ್ತೆ ಷೂಸು, ಸಾಕ್ಸು ಬಿಚ್ಚಿದೆ...
ಮಂದಿರದಲ್ಲಿ ನನಗೆ ಕಂಡದ್ದೇನು? ಒಂದಲ್ಲ, ಎರಡಲ್ಲ.. ಒಟ್ಟು 72 ಅಶ್ವಾರೂಢ ದೇವತೆಗಳು. ಅವರಲ್ಲಿ 71 ಪುರುಷ ದೇವತೆಗಳು ಅನೇಕರು ಮೀಸೆ ಹೊತ್ತಿದ್ದರು.ಏಕೈಕ ಮಹಿಳಾ ದೇವತೆ, ಮತ್ತೂ ಆಕೆಯೂ ಕುದುರೆಯನ್ನೇರಿ ಕುಳಿತಿದ್ದಳು. ಒಂದು ಮಂದಿರದಲ್ಲಿ ಸಾಲಾಗಿ ಆರಾಧಿಸುವ 72 ಪ್ರತಿಮೆಗಳನ್ನು ನಾನು ನೋಡಿದ್ದು ಇದೇ ಮೊದಲ ಬಾರಿ. ಭುಜ್ ನ ಈ ಮಂದಿರವಲ್ಲದೇ ನಖತಾಣಾದಲ್ಲಿ ಮತ್ತು ಜಖಾವು ಗ್ರಾಮದ ಕಕ್ಕಡಬಿಟ್ ಬೆಟ್ಟದ ಮೇಲೆಯೂ ಇಂಥದೊಂದು ಮಂದಿರವಿದೆಯಂತೆ. ಸದ್ಯಕ್ಕೆ ಕಕ್ಕಡಬಿಟ್ ಬೆಟ್ಟದ ಮೇಲಿನ ಮಂದಿರದ ಮರಮ್ಮತ್ತು ನಡೆಯುತ್ತಿದೆ. ಅದಕ್ಕೆ ಚಂದಾ ಕೂಡಾ ಇಲ್ಲಿಯೇ ನೀಡಬಹುದು ಎಂದು ಪೂಜಾರಪ್ಪ ಹೇಳಿದರು.

ಒಂದೇ ಜಾಗದಲ್ಲಿ ಎಪ್ಪತ್ತೆರಡು ಅಶ್ವಾರೂಢ ದೇವತೆಗಳ ಕಥೆಯೇನು? ಅಲ್ಲಿನ ಪೂಜಾರಪ್ಪನನ್ನು ಕೇಳಿದಾಗ ಆತ ಹೇಳಿದ ಕಥೆ ಹೀಗಿತ್ತು "ಅನಾದಿ ಕಾಲದಲ್ಲಿ ಇಲ್ಲಿನ ಜನರಿಗೆ ಸಿಂಧಿನ ಮುಸಲ್ಮಾನ ಆಕ್ರಮಣಕಾರರು ತಡೆಯಲಾಗದ ಹಿಂಸೆ ಕೊಡುತ್ತಿದ್ದರು. ಆಗಿನ ಕಾಲಕ್ಕೆ ಶಿವನ ಜಟೆಯಿಂದ ಹರಿದ ನೀರನ ಜೊತೆ ಬಂದ 72 ಯಕ್ಷಿಗಳು ಜನತೆಯನ್ನು ಆ ಆಕ್ರಮಣಕಾರರಿಂದ ರಕ್ಷಿಸಿದರು. ಹೀಗಾಗಿ ಆ ಯಕ್ಷಿಗಳ ಗೌರವಾರ್ಥ ಈ ಮಂದಿರವನ್ನು ನಿರ್ಮಿಸಲಾಗಿದೆ. ಯಕ್ಷಮಂದಿರ ಅಪಭ್ರಂಶಗೊಂಡು ಜಖ್ ಮಂದಿರ್ ಆಗಿದೆ".

ಹೊರಬಂದುತ್ತಿದ್ದಂತೆ ಮೀರಾ ಹೇಳಿದಳು - "ಇದು ಈಚೆಗೆ ಹುಟ್ಟಿಕೊಂಡಿರುವ ಕಥೆ. ಚರಿತ್ರೆಯ ಪುಸ್ತಕಗಳನ್ನ ಸಿಗುವ ಕಥೆಯೇ ಬೇರೆ." ಸರಿ, ಕುತೂಹಲದಿಂದ ನಾನು ಮೊದಲಿಗೆ ಕಂಪ್ಯೂಟರಿನಲ್ಲಿ ಗೂಗಲ್ ದೇವರಿಗೆ ಆದಿಪೂಜೆ ಸಲ್ಲಿಸಿದೆ. ವಿಕಿಪೀಡಿಯಾರಾಧನೆ ಮಾಡಿದೆ. ನಂತರ ಎರಡು ಪುಸ್ತಕಗಳಲ್ಲಿ ಇದ್ದ ಈ ಕಥೆಯ ಉಲ್ಲೇಖವನ್ನೂ ನೋಡಿದೆ. ಒಟ್ಟಾರೆ ಕಥೆ ಇಂತಿದೆ – ಪುನ್ ವ್ರೋ ಎನ್ನುವ ರಾಕ್ಷಸೀ ಪ್ರವೃತ್ತಿಯ ರಾಜನ ಕಾಲದಲ್ಲಿ ಈ ಜನ ಜಖಾವು ಗ್ರಾಮದ ದಂಡೆಗೆ ಬಂದಿಳಿದರಂತೆ. ಅವರ ಹಡಗು ಮುಳುಗಿತ್ತು ಎನ್ನುವ ಪ್ರತೀತಿಯಿದೆ. ಜಖಾವಿಗೆ ಬಂದದ್ದರಿಂದ ಇವರು ಜಖ್ಖರಾದರು. ಹಲವು ಮೂಲದ ಕಥೆಯ ಪ್ರಕಾರ ಅವರಿಗೆ ತುಸು ವೈದ್ಯ ಗೊತ್ತಿದ್ದು ಜನರನ್ನು ಗುಣ ಮಾಡುತ್ತಿದ್ದರಂತೆ. ಹೀಗಾಗಿ ಅವರುಗಳ ಜನಪ್ರಿಯತೆ ಹೆಚ್ಚಿತು. ಮಕ್ಕಳಾಗದ ದಂಪತಿಗಳಿಗೆ ಮಕ್ಕಳನ್ನು ದಯಪಾಲಿಸುವ ಜಾದೂ ಅವರಲ್ಲಿತ್ತು ಅನ್ನುವ ಕಥೆಯೂ ಇದೆ. ಹೀಗಾಗಿ ಈಗಲೂ ಮಕ್ಕಳಿಗೆಂದು ಜಖ್ ಮಂದಿರದಲ್ಲಿ ಹರಕೆ ಹೊತ್ತು ಪೂಜಿಸುವವರು ಕಾಣಸಿಗುತ್ತಾರೆ. ಈ ಜಖ್ಖರು ಪುನ್ ವ್ರೋನನ್ನು ತೋಪಿನಿಂದ ಉಡಾಯಿಸಿ ಸ್ಥಳೀಯರನ್ನು ರಕ್ಷಿಸಿದರು ಅನ್ನುವ ಕಥೆಯೂ ಇದೆ. ಹೀಗಾಗಿ ಅವರುಗಳು ಸ್ಥಳೀಯರ ದೃಷ್ಟಿಯಲ್ಲಿ ದೈವಸಮಾನರಾಗುವ ಅರ್ಹತೆಯನ್ನು ಪಡೆದಿದ್ದರು.

ಒಂದು ಉಪಕತೆಯ ಪ್ರಕಾರ ಪುನ್ ವ್ರೋನ ರಾಣಿ ಇವರುಗಳ ಮೇಲೆ ಸೇಡುತೀರಿಸಿಕೊಳ್ಳಲೆಂದೇ ಎಲ್ಲರನ್ನೂ ಉಡಾಯಿಸಿದಳು. ಹೀಗಾಗಿಯೇ ಅವರಿಗೆ ಹುತಾತ್ಮರ ಪಟ್ಟಿಯೂ ಬಂದು ಆ ನೆನಪಿನಲ್ಲಿ ಮಂದಿರವನ್ನು ಕಟ್ಟಲಾಯಿತು ಎನ್ನುವ ಪ್ರತೀತಿಯೂ ಇದೆ.

ಯಕ್ಷಿಗಳು ಜಖ್ಖರಾಗಿ ಅಪಭ್ರಂಶಗೊಳ್ಳಲು ಕಾರಣವಿದೆಯೇ? ಈ ಜಾಗದಲ್ಲಿ ಯ ಕಾರವನ್ನು ಜ ಕಾರವಾಗಿ ಪರಿವರ್ತಿಸುವ ಪರಿಪಾಠ ಕಂಡಿಲ್ಲ. ಅದು ಇದ್ದಿದ್ದರೆ ಜಖ್ಖರನ್ನು ಜಕ್ಷಿಗಳನ್ನಾಗಿ ಅಪಭ್ರಂಶಗೊಳಿಸಬೇಕಿತ್ತೇ ವಿನಃ ಯಕ್ಷಿಗಳಾಗುವ ಸಾಧ್ಯತೆಯಿರಲಿಲ್ಲ. ಹೌದು, ಕೆಲವಾರು ಹೆಸರುಗಳನ್ನು ಜ ಕಾರದಿಂದ ಉಚ್ಚರಿಸುವುದುಂಟು. ಜಶೋಧಾ, ಜಸವಂತ, ಇಂಥ ಹೆಸರುಗಳನ್ನು ನಾವು ಕಾಣಬಹುದು. ಆದರೆ ಅದೇಕಾಲಕ್ಕೆ ಯಕಾರದ ಯಶ್, ಯತೀಶ್ ಎನ್ನುವಂಥಹ ಹೆಸರುಗಳೂ ಈ ಪ್ರಾಂತದಲ್ಲಿವೆ.

ಇಲ್ಲಿ ಮತ್ತೊಂದು ಕುತೂಹಲದ ವಿಷಯ ಆ ಮಹಿಳೆಯ ಬಗೆಗಿನದು. ಇಷ್ಟೊಂದು ಗಂಡಸರ ನಡುವೆ ಈ ಏಕೈಕ ಮಹಿಳೆ ಹೇಗೆ, ಯಾಕೆ, ಎಲ್ಲಿಂದ ಬಂದಳು ಎನ್ನವುದು. ಆಕೆ ಜಖ್ಖರ ಸಹೋದರಿ ಅನ್ನುವ ಪ್ರತೀತಿಯಿದೆ. ಆದರೆ ಅದಕ್ಕಿಂತ ಹೆಚ್ಚಿನ ವಿವರ ನಮಗೆ ಸಿಗುವುದಿಲ್ಲ. ಆಕೆಗೂ ಒಂದು ಕುದುರೆಯಿದೆ. ಎಲ್ಲ ಜಖ್ಖರಿಗೂ ಮೀಸೆ ಇದೆಯೆಂದೇನೂ ಅಲ್ಲ. ಎಲ್ಲರ ಹಣೆಗೂ ತಿಲಕ ತಿದ್ದಿರುವುದರಿಂದ ಆಕೆಯನ್ನು ಆ ಎಪ್ಪತ್ತೆರಡರ ಗುಂಪಿನಲ್ಲಿ ಕಂಡುಹಿಡಿಯುವುದು ಕಷ್ಟವೇ ಆಯಿತು. ಹಿಂದಿನ ಸಾಲಿನಲ್ಲಿ ಎಡಬದಿಯಿಂದ ನಾಲ್ಕನೇ ಸ್ಥಾನದಲ್ಲಿ ಆಕೆಯ ಪ್ರತಿಮೆಯಿದೆ ಎಂದು ಮಾದಾಪುರದ ಪೂಜಾರಪ್ಪ ಹೇಳಿದ.
ತುರ್ಕಿ, ಇರಾನ್, ಗ್ರೀಸ್ ಮತ್ತು ಡಚ್ಚರ ಕಡೆಯಿಂದ ಬಂದಿರಬಹುದಾದ ಈ ಜಖ್ಖರು ಈಗ ಕುದುರೆಯೇರಿ ಖಡ್ಗ ಹಿಡಿದ ರಾಜಪೂತರಂತೆ ಕಾಣಿಸುತ್ತಾರೆ. ಮುಳುಗಿದ ಹಡಗಿನಿಂದ ಬಚಾವಾಗಿ ಜಖಾವು ಕಡಲಿಗೆ ಬಂದರೆನ್ನಲಾದ ಈ ಕಥನ ಈಗಿನ ತೋಂಡಿಯಲ್ಲಿ ತಲೆಕೆಳಗಾಗುತ್ತಿರುವುದನ್ನು ವೆಂಡಿ ಡೋನಿಗರ್ ಎಂಬ ಪಂಡಿತೆ ಚರ್ಚಿಸುತ್ತಾಳೆ. ಜಖ್ಖರು ಮೊದಲಿಗೆ ವಿದೇಶೀಯರು. ಜೊತೆಗೆ ಅವರುಗಳು - ಫಾರ್ಸಿಗಳು, ಗ್ರೀಕರು, ಮುಸಲ್ಮಾನರು, ಕ್ರೈಸ್ತರಾಗಿರಬಹುದಾದರೂ ಅವರು ಹಿಂದೂಗಳಾಗುವುದಕ್ಕೇ ಸಾಧ್ಯವೇ ಇಲ್ಲವಾಗಿದೆ. ಅವರನ್ನು ಶಿವನ ಜಟೆಯಿಂದ ಇಳಿಸಿ ದುಷ್ಟ ಇಸ್ಲಾಮೀ ಆಕ್ರಮಣಕಾರರ ವಿರುದ್ಧ ಕುದುರೆಯೇರಿ ತಿಲಕ ಧರಿಸಿ ರಾಜಪೂತರಂತೆ ಯುದ್ಧ ಮಾಡಿದರೆನ್ನಲಾದ ಕಥೆಯ ಹೊಸ ತಿರುವು, ಮತ್ತು ಅದರ ಪುಸರಾವೃತ್ತಿಯಿಂದ ಕಟ್ಟುತ್ತಿರುವ ಹೊಸ ಚರಿತ್ರೆ ಮಾತ್ರ ಕುತೂಹಲಪೂರ್ಣವಾಗಿದೆ.


ಯಾವುದೇನೇ ಇರಲಿ, ಕಾಲಾಂತರದಿಂದ ಜಖ್ಖರಿಗೆ ಹಿಂದೂ ಪದ್ಧತಿಯಲ್ಲಿ ಪೂಜೆ, ಪುನಸ್ಕಾರ, ಮಂದಿರ ನಿರ್ಮಾಣ, ಅನ್ನ ಸಂತರ್ಪಣೆಗಳು ನಡೆಯುತ್ತಲೇ ಇವೆ. ಅತಿಥಿಗಳನ್ನ ನಮ್ಮವರನ್ನಾಗಿಸಿಕೊಳ್ಳುವ ಆತ್ಮೀಯ ಪರಿ ಒಂದೆಡೆ ಕಂಡು ನಮ್ಮ ಸಂಸ್ಕೃತಿಯ ಬಗ್ಗೆ ಹಮ್ಮೆ ಪಟ್ಟುಕೊಳ್ಳುತ್ತಲೇ, ಚರಿತ್ರೆಯನ್ನು ತಲೆಕೆಳಗಾಗಿಸುವ ಪ್ರವೃತ್ತಿಯ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಜಖ್ಖರ ನೆನಪಿನಲ್ಲಿ ಶುದ್ಧ ಸಸ್ಯಾಹಾರಿ ಭೋಜನವಂತೂ 50 ರೂಪಾಯಿಗಳಿಗೋ ನನಗೆ ಭುಜ್ ನಲ್ಲಿ ಸಿಕ್ಕಿತು.