ಕಾಬೂಲಿಗೆ ಕೆಲಸದ ಮೇಲೆ ಹೋಗಬೇಕು ಅನ್ನುವ ಮಾತು ಬಂದ ಕೂಡಲೇ ನನಗೆ ಎಲ್ಲೆಡೆಯಿಂದಲೂ ಎಲ್ಲ ರೀತಿಯ ಉಪದೇಶಗಳು ಬರತೊಡಗಿದುವು. ಮೂಲಭೂತವಾಗಿ ಎಲ್ಲರೂ ಹೇಳಿದ್ದು ಇಷ್ಟೇ - ಅಲ್ಲಿಗೆ ಹೋಗುವುದು ತುಂಬಾ ಅಪಾಯದಿಂದ ಕೂಡಿದ್ದು, ಯಾವಾಗ ಏನುಬೇಕಾದರೂ ಆಗಬಹುದು. ಹೀಗಿದ್ದರೂ ಕಳೆದ ನಾಲ್ಕುತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿಬಂದಿರುವೆ. ಮೊದಲ ಯಾತ್ರೆ ನಡೆದಾಗ ಅಲ್ಲಿನ ಚುನಾವಣೆಯ ತಯಾರಿ ನಡೆದಿತ್ತು. ಎರಡನೆಯ ಯಾತ್ರೆಯ ಸಮಯಕ್ಕೆ ಆ ಚುನಾವಣೆಯ ಫಲಿತಾಂಶ ಬರಬಹುದೆನ್ನುವ ಸುದ್ದಿಯಿತ್ತಾದರೂ, ಚುನಾವಣೆಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕಾರಣವಾಗಿ ತನಿಖೆ ಇನ್ನೂ ನಡೆಯುತ್ತಿದೆ.
ಸ್ವಾಗತ
ಮೊದಲ ಬಾರಿ ಹೋಗುವುದಕ್ಕೆ ಕೆಲ ದಿನ ಮೊದಲು ಕಾಬೂಲ್ ವಿಮಾನಾಶ್ರಯದ ಮೇಲೆ ರಾಕೆಟ್ ದಾಳಿಯ ಪ್ರಯತ್ನ ನಡೆದು ಗುರಿತಪ್ಪಿತ್ತು ಎಂದು ಸುದ್ದಿ ಬಂತು. ಆ ದಾಳಿಯ ನಂತರ ಅಲ್ಲಿಗೆ ನನ್ನನ್ನು ಸ್ವಾಗತಿಸುತ್ತ ಗೆಳೆಯನೊಬ್ಬ ತನಗೆ ತಮ್ಮ ಸಂಸ್ಥೆಯ ಸುರಕ್ಷಾ ವಿಭಾಗದವರು ಕಳಿಸಿದ್ದ ಒಂದು ಈ-ಮೆಯಿಲನ್ನು ಕಳಿಸಿಕೊಟ್ಟ. ಅವನು ಕಳಿಸಿದ್ದ ಪತ್ರದಲ್ಲಿ ಇದ್ದ ಮಾತುಗಳು ಹೀಗಿದ್ದುವು:
"ಮಹಿಳೆಯರೆ ಮತ್ತು ಮಹನೀಯರೆ
ದೇಶದ ರಾಜಧಾನಿಯ ಸುರಕ್ಷಾಪರಿಸ್ಥಿತಿಯ ಬಗ್ಗೆ ಈ ಸಂದೇಶ ಕಳಿಸುತ್ತಿದ್ದೇನೆ.
ನಿನ್ನೆಯ ದಿನ ಕಾಬೂಲಿನಲ್ಲಿ ನಡೆದ [ಈಚೆಗೆ ಸಾಮಾನ್ಯವಾಗುತ್ತಿರುವ] ರಾಕೆಟ್ ಧಾಳಿಯ ನಂತರ, ಜೀವನ ಗಂಭೀರ ಮೌನದ "ಸಾಮಾನ್ಯ ಸ್ಥಿತಿ"ಗೆ ಮರಳಿದೆ. ನಾನು ಹೇಳಿದಂತೆ ರಾಜಧಾನಿಯ ಮೇಲೆ ರಾಕೆಟ್ ಧಾಳಿ ಅಸಾಮಾನ್ಯವೇನೂ ಅಲ್ಲ. ಇದು ಆಗಾಗ ನಡೆಯುತ್ತಿರುವ ಘಟನೆಯೇ ಆಗಿದೆಯಾದರೂ, ಈ ಬಾರಿ ಒಂದೇ ಸಮಯಕ್ಕೆ ಅನೇಕ ರಾಕೆಟ್‌ಗಳ ಧಾಳಿ ನಡೆದು ಅದು ನಗರಪ್ರದೇಶದ ಒಳಭಾಗವನ್ನೂ ಪ್ರವೇಶಿಸಿತು. ಆತಂಕವಾದಿಗಳ ಈ ಧಾಳಿ ಸಾಮಾನ್ಯತಃ ತಮ್ಮ ಗುರಿಯನ್ನು ತಪ್ಪುವುದನ್ನೂ ನಾವು ಕಂಡಿದ್ದೇವೆ. ಇದಲ್ಲದೇ ಅವರ ಈಚಿನ ಧಾಳಿಗಳು ಯಾವುದೇ ನಷ್ಟವನ್ನು ಮಾಡಲಲ್ಲದೇ, ಬರೇ ಭೀತಿಯನ್ನು ಹಬ್ಬಿಸಲಷ್ಟೇ ಕೈಗೊಳ್ಳುತ್ತಿರುವಂತೆ ಅನ್ನಿಸುತ್ತದೆ.
ಈ ಬಾರಿ ಸಾಮಾನ್ಯವಾಗಿ ಉಪಯೋಗಿಸುವ ಒಂದೋ ಎರಡೋ ರಾಕೆಟ್ಟುಗಳಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್ಟುಗಳ ಧಾಳಿಯನ್ನು ಮಾಡಿ ತಮ್ಮ ಬಳಿ ಈ ಆಯುಧಗಳ ದಾಸ್ತಾನು ಇದೆಯೆನ್ನುವುದನ್ನು ಆತಂಕವಾದಿಗಳು ಸಾಬೀತು ಪಡಿಸಿ ನಮ್ಮ ಮನಸ್ಸಿನಲ್ಲಿ ಭಯವನ್ನೂ ಶಂಕೆಯನ್ನೂ ಉಂಟುಮಾಡುವ ಉದ್ದೇಶದಲ್ಲಿ ತುಸುಮಟ್ಟಿಗೆ ಸಫಲರಾಗುತ್ತಿದ್ದಾರೆ.
ನಮಗೆ ಬರುತ್ತಿರುವ ಅಪಾಯದ ಸೂಚನೆಗಳ ಸಂಖ್ಯೆಯನ್ನು ಪರಿಗಣಿಸಿದಾಗ ಹಾಗೂ ಆತ್ಮಘಾತಕ ಆತಂಕವಾದಿಗಳು ನಗರಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವೇಶಿಸಿದ್ದಾರೆನ್ನುವ ಸುದ್ದಿಯನ್ನು ಪರಿಗಣಿಸಿದಾಗ, ಈಗ ನಗರದಲ್ಲಿರುವ ಸುರಕ್ಷಾವ್ಯವಸ್ಥೆ ದೊಡ್ಡ ಮಟ್ಟದ ಜಟಿಲ ಆತ್ಮಘಾತಕ ದಾಳಿಗಳನ್ನು ತಡೆಯುವುದರಲ್ಲಿ ಸಫಲವಾಗಿದೆ ಅನ್ನಿಸುತ್ತದೆ. ಆದರೂ ನಗರಕ್ಕೆ ಆಗಲೇ ಪ್ರವೇಶಿಸಿರುವ ಆತಂಕವಾದಿಗಳು ಸದ್ಯಕ್ಕೆ ಗುಪ್ತವಾಗಿಯೇ ಇದ್ದು ಚುನಾವಣೆಯ ಸಮಯದಲ್ಲಿ ತಮ್ಮ ಧಾಳಿಯನ್ನು ಕೈಗೊಂಡು ಆ ಪ್ರಕ್ರಿಯೆಗೆ ಧಕ್ಕೆಯುಂಟುಮಾಡುವುದರಲ್ಲಿ ಹೆಚ್ಚಿನ ಅರ್ಥವಿರಬಹುದು ಅನ್ನುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಈ ಥರದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಾ ತಯಾರಿಗಳನ್ನು ಮಾಡುತ್ತಿದ್ದೇವೆ. ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾದರೆ ಹಾಗೂ ಧಾಳಿಯ ಸೂಚನೆ ನಮಗೆ ದೊರೆತ ಕೂಡಲೇ ನಿಮ್ಮ ಸಂಸ್ಥೆಗೆ, ಕಾಬೂಲಿಗೆ ಬರುವ ಯಾತ್ರಿಗಳಿಗೆ, ಮಹಾಜನತೆಗೆ ನಾವು ಸುದ್ದಿ ನೀಡುತ್ತೇವೆ.
ಸುರಕ್ಷಾ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾದರೂ ಕೂಡಲೇ ತಿಳಿಸುತ್ತೇವೆ. ಆದರೆ ಈಗ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೇನೆಂದರೆ ರಾಜಧಾನಿಯ ಪರಿಸ್ಥಿತಿ ಶಾಂತವಾಗಿ ಕಂಡರೂ ನಾವು ಜಾಗರೂಕರಾಗಿರುವುದನ್ನು ಮರೆಯಬಾರದು.
ವಿಶ್ವಾಸದೊಂದಿಗೆ....
ಏನೂ ಸಂದೇಶವನ್ನು ಸ್ಪಷ್ಟವಾಗಿ ನೀಡದ ಈ ಸಂದೇಶ ನನ್ನನ್ನು ಕಾಬೂಲಿಗೆ ಸ್ವಾಗತಿಸಿತ್ತು. ಏರ್ ಇಂಡಿಯಾದ ವಿಮಾನ ಕಾಬೂಲನ್ನು ತಲುಪುವಾಗ ಸ್ವಲ್ಪ ಆತಂಕವೂ ಆಗುತ್ತಿತ್ತು. ಕಾಬೂಲಿನ ವಿಮಾನಾಶ್ರಯ ಇರುವುದು ಒಂದು ಕಣಿವೆಯಲ್ಲಿ. ಸುತ್ತಲೂ ಕಡಿದಾದ ಬೆಟ್ಟಪ್ರದೇಶ. ಆ ಬೆಟ್ಟಗಳ ಮೇಲೆ ಯಾವ ಹಸಿರಿನ ಹೊದ್ದಿಕೆಯೂ ಕಾಣುವುದಿಲ್ಲ. ಒಂದೊಂದೂ ಶಿಖರ ಪ್ರಾಂತ ಭಿನ್ನ ಗುಂಪುಗಳ ಸುಪರ್ದಿನಲ್ಲಿದೆಯೆಂದು ಅಲ್ಲಿ ತಲುಪಿದ ನಂತರ ಯಾರೋ ಹೇಳಿದರು. ಆದರೆ ಆ ಕಡಿದಾದ ಪ್ರದೇಶದಲ್ಲಿ ಯಾರಾದರೂ ಇರಬಹುದೇ ಅನ್ನುವ ಅನುಮಾನವಂತೂ ಬರುತ್ತದೆ. ಈ ಸುತ್ತಲ ಎತ್ತರದ ಪ್ರದೇಶದಿಂದ ವಿಮಾನಾಶ್ರಯದ ಮೇಲೆ ರಾಕೆಟ್ ಧಾಳಿ ಮಾಡುವುದು ಸಾಧ್ಯ ಎಂದು ಆ ಪ್ರದೇಶವನ್ನು ಕಂಡಾಗ ಅನ್ನಿಸಿತ್ತು.
ಎಂಟ್ರಿ
ಕಬೂಲ್ ವಿಮಾನಾಶ್ರಯದಲ್ಲಿ ವಿಮಾನವನ್ನು ಇಳಿದಾಗ ಕಂಡದ್ದು ನಮ್ಮನ್ನೆಲ್ಲ ಸ್ವಾಗತಿಸುತ್ತಿದ್ದ ಅಧ್ಯಕ್ಷ ಹಮೀದ್ ಕರ್ಜಾಯಿಯ ಒಂದು ದೊಡ್ಡಚಿತ್ರ. ಸುತ್ತ ನೋಡಿದರೆ ಎಲ್ಲೆಲ್ಲೂ ಯೂ.ಎನ್ ಮತ್ತು ನ್ಯಾಟೋ ಪಡೆಗಳ ಪುಟ್ಟ ಹೆಲಿಕಾಪ್ಟರುಗಳು, ಪುಟ್ಟ ವಿಮಾನಗಳು. ಅವುಗಳನ್ನು ಬಿಟ್ಟರೆ ಆರಿಯಾನ ಏರ್‌ಲೈನ್, ಸಾಫಿ ಏರ್‌ಲೈನ್, ಕ್ಯಾಮ್ ಏರ್‌ನ ಒಂದೆರಡು ವಿಮಾನಗಳು ಮಾತ್ರ ಕಾಣುತ್ತವೆ. ಏರ್ ಇಂಡಿಯಾ ಬಿಟ್ಟರೆ ಮಿಕ್ಕ ಎಲ್ಲ ವಿಮಾನದ ಕಂಪನಿಗಳೂ ಅಫಘಾನಿಸ್ಥಾನಕ್ಕೇ ಸೇರಿದವು. ಬಹುಶಃ ಭಾರತ ಬಿಟ್ಟರೆ ಪಾಕಿಸ್ತಾನ, ಇರಾನ್ ದೇಶಗಳ ವಿಮಾನಗಳು ಮಾತ್ರ ಈ ದೇಶಕ್ಕೆ ಯಾನಮಾಡುತ್ತವೇನೋ! ಮಿಕ್ಕಂತೆ ಎಲ್ಲ ದೊಡ್ಡ ವಿಮಾನ ಕಂಪನಿಗಳೂ ಅಫಘಾನಿಸ್ಥಾನಕ್ಕೆ ಹಾರುವುದಿಲ್ಲ. ಎರಡನೆಯ ಬಾರಿ ನಾನು ಅಲ್ಲಿಗೆ ಹೋಗಬೇಕಾಗಿ ಬಂದಾಗ ಏರ್ ಇಂಡಿಯಾದ ಪೈಲೆಟ್‌ಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಘೋಷಿಸಿ ನನ್ನ ಪ್ರಯಾಣದ ಮೇಲೆ ಪ್ರಶ್ನಾರ್ಥಕ ಚಿನ್ಹೆಗಳು ಉದ್ಭವವಾಗಿದ್ದುವು. ಆಗ ನಾನು ಕಾಬೂಲಿಗೆ ಹೋಗುವ ಭಿನ್ನ ಮಾರ್ಗವನ್ನು ಹುಡುಕಿ ಹೊರಟೆ. ಆದರೆ ನನಗೆ ತಿಳಿದದ್ದು: ಅಲ್ಲಿಗೆ ಹೋಗಲು ನಾನು ಮೊದಲು ದುಬಾಯಿಗೆ ಹೋಗಿ ಅಲ್ಲಿಂದ ಸಾಫಿ ಏರ್ಲೈನಿನ ಮೂಲಕ ಕಾಬೂಲ್ ತಲುಪ ಬೇಕು ಅನ್ನುವುದು. ಆದರೆ ಕ್ಯಾಮ್, ಆರಿಯಾನಾ ಮತ್ತು ಸಾಫಿ ಏರ್ಲೈನುಗಳು ಐಎಟಿಎ ಸದಸ್ಯತ್ವವನ್ನು ಇನ್ನೂ ಪಡೆದಿಲ್ಲವಾದ್ದರಿಂದ ಏಜೆಂಟರ ಮೂಲಕ ಟಿಕೆಟ್ ಕಾಯ್ದಿರಿಸುವುದು ಸಾಧ್ಯವಿಲ್ಲವೆಂದೂ ತಿಳಿಯಿತು. ಅರ್ಥಾತ್, ನಮ್ಮ ಏರ್ ಇಂಡಿಯಾ ಇಲ್ಲದಿದ್ದರೆ ಅಲ್ಲಿಗೆ ಹೋಗುವುದು ಕಷ್ಟದ ಮಾತೇ!
ಇಳಿದು ಇಮ್ಮಿಗರೇಷನ್ ಮುಗಿಸಿ ಹೊರಬರುವುದಕ್ಕೆ ಮೊದಲು ವಿದೇಶೀ ಪ್ರಯಾಣಿಕರ ನೋಂದಣಿ ಮಾಡಿಸಬೇಕೆಂದು ನನ್ನನ್ನು ಸ್ವಾಗತಿಸಿದ್ದ ಸಂಸ್ಥೆಯ ಹಿಜ್ರತ್ ರಹೀಮಿ ಹೇಳಿದ್ದ. ಎರಡು ಫೋಟೋಗಳನ್ನು ತಯಾರಾಗಿಟ್ಟುಕೊಂಡಿರಬೇಕೆಂದೂ, ನಾನು ದೇಶದಿಂದ ಆಚೆ ಹೋಗುವಾಗ ಈ ನೋಂದಣಿ ಕಾರ್ಡನ್ನು ಕೇಳಬಹುದೆಂದೂ ಹೇಳಿದ್ದರಿಂದ ನಾನು ತಯಾರಾಗಿ ಹೋಗಿದ್ದೆ. ನೋಂದಣಿ ಮಾಡಿಸಿ ನನ್ನ ಗುರುತಿನ ಕಾರ್ಡನ್ನು ಪಡೆದು ನಾನು ಹೊರಬಿದ್ದೆ. ಪಾರ್ಕಿಂಗ್ ’ಸಿ’ ವಿಭಾಗದಲ್ಲಿ ನನಗಾಗಿ ಒಂದು ಕಾರು ಕಾಯುತ್ತಿರುವುದಾಗಿ ಹಿಜ್ರತ್ ಹೇಳಿದ್ದ. ಒಳಗೆ ಟ್ರಾಲಿಗಳಿಲ್ಲ. ಆದರೆ ಸೂಟ್‍ಕೇಸನ್ನು ಹೊತ್ತು ಹೊರಬಂದರೆ ಟ್ರಾಲಿಯನ್ನು ನಿಮಗಾಗಿ ತಳ್ಳಲು ತಯಾರಿರುವ ಯುವಕರು ಕಾಣಸಿಗುತ್ತಾರೆ. ಡಾಲರುಗಳಲ್ಲಿ ಅವರಿಗೆ ಬಕ್ಷೀಸು ಕೊಡಬೇಕು ಅಷ್ಟೇ!!
ನಾವು ಇಳಿದದ್ದು ಕಾಬೂಲ್ ವಿಮಾನಾಶ್ರಯದ ಹೊಸ ವಿಭಾಗದಲ್ಲಿ. ಪಕ್ಕದಲ್ಲೇ ಹಳೆಯ ವಿಭಾಗವೂ ಇದೆ. ಹೊಸ ವಿಭಾಗದಿಂದ ಹೊರಬಿದ್ದರೆ ಎಡಬದಿಯಲ್ಲಿ ಮೊದಲ ಪಾರ್ಕಿಂಗ್ - ಅಲ್ಲಿ ಯೂಎನ್, ನ್ಯಾಟೋ, ಹಾಗೂ ವಿವಿಐಪಿಗಳಿಗಾಗಿ ಬಂದಿರುವ ಗಾಡಿಗಳು ಇರುತ್ತವೆ. ಆ ಪ್ರದೇಶವನ್ನು ದಾಟಿ ಮುಂದಕ್ಕೆ ನಡೆದರೆ ಮತ್ತೊಂದು ಗೇಟು, ಆ ಗೇಟಿನಿಂದಾಚೆಗೆ ಒಂದು ಪುಟ್ಟ ಇರಾಣಿ ಹೋಟೇಲಿನಂಥಹ ಜಾಗ. ಒಂದು ಪುಟ್ಟ ಊರಿನ ಬಸ್‍ಸ್ಟಾಂಡಿನಲ್ಲಿರಬಹುದಾದ ಖಾನಾವಳಿಯ ರೀತಿಯ ಜಾಗವನ್ನು ದಾಟಿ ಹೊರಕ್ಕೆ ಬಂದರೆ ಪಾರ್ಕಿಂಗ್ ಸಿ ಸಿಗುತ್ತದೆ.
ದಾರಿಯುದ್ದಕ್ಕೂ ಕೈಯಲ್ಲಿ ನೋಟಿನ ಕಂತೆಯನ್ನು ಹೊತ್ತು ನಿಂತ ಜನ - ಯಾವ ಕರೆಂಸಿ ಬೇಕೋ ಆ ಕರೆಂಸಿಯನ್ನು ದಾರಿಯಲ್ಲೇ ಕೊಳ್ಳಬಹುದು.. ಜೊತೆಗೆ ಟೆಲಿಫೋನ್ ಕಾರ್ಡುಗಳನ್ನೂ ಅವರುಗಳು ಮಾರಾಟ ಮಾಡುತ್ತಾರೆ. ವಿದೇಶೀ ಕರೆಂಸಿಯನ್ನೂ ಚೌಕಾಶಿಮಾಡಿ ಕೊಳ್ಳಬಹುದೆನ್ನುವುದನ್ನು ನಾನು ಮೊದಲ ಬಾರಿಗೆ ಕಂಡುಕೊಂಡೆ. ಅಫಘಾನಿಸ್ಥಾನದಲ್ಲಿ ಹವಾಲಾ ಕಾನೂನು ಬಾಹಿರವಲ್ಲವಂತೆ, ಹೀಗಾಗಿ ಯಾರು ಬೇಕಾದರೂ ವಿದೇಶೀ ಕರೆಂಸಿಯನ್ನು ಮಾರಾಟ ಮಾಡಬಹುದು. ಗಮ್ಮತ್ತಿನ ವಿಚಾರವೆಂದರೆ ಸ್ಥಳೀಯ ಹಣವಾದ ’ಅಫಘನಿ [ಆಫ್ಸ್]’ ಇಲ್ಲದೆಯೇ ಡಾಲರುಗಳಲ್ಲಿಯೇ ಅಲ್ಲಿನ ಎಲ್ಲ ವ್ಯವಹಾರಗಳನ್ನೂ ನಾವು ಮಾಡಬಹುದು. ನಂತರ ನಾನು ಕೊಂಡ ಒಂದು ಅಫಘನಿ ಟೋಪಿಗೆ ಭಾರತೀಯ ರೂಪಾಯಿಗಳಲ್ಲಿಯೇ ದುಡ್ಡು ಕಟ್ಟಬೇಕೆಂದು ಅಂಗಡಿಯ ಮುದುಕಪ್ಪ ಸಾಧಿಸಿದ್ದ. ಜಲಾಲಾಬಾದ್ ನಲ್ಲಿ ಪಾಕಿಸ್ತಾನೀ ರೂಪಾಯಿಗೆಳೇ ಹೆಚ್ಚು ಚಾಲ್ತಿಯಲ್ಲಿದೆಯಂತೆ. ಅಲ್ಲಿನ ಟೆಲಿಕಾಂ ಕಂಪನಿ ರೋಶನ್ ಮೊಬಲೈನ ಮೂಲಕ ಹಣಪಾವತಿ ಮಾಡಬಹುದಾದ ಒಂದು ಯೋಜನೆ ರೂಪಿಸಿದ್ದಾರೆ - ಅದರ ಹೆಸರು ಈ-ಹವಾಲಾ! ಒಂದು ದೇಶ ಹಲವು ಕರಂಸಿ ಅಂದರೆ ಈ ದೇಶವೇ ಇರಬಹುದು!
ಪಾರ್ಕಿಂಗ್ ಸಿ ಗೆ ಬಂದಾಗ ಒಂದಿಷ್ಟು ಕ್ಷಣಗಳವರೆಗೆ ನನ್ನ ಹೃದಯ ಜೋರಾಗಿಯೇ ಬಡಿಯುತ್ತಿತ್ತು. ನನ್ನನ್ನು ಒಯ್ಯಲು ಬರಬೇಕಿದ್ದ ಕಾರು ಕಾಣಿಸಲಿಲ್ಲ. ಜೊತೆಗೆ ಎಲ್ಲ ದಿಕ್ಕಿನಿಂದಲೂ ಟ್ಯಾಕ್ಸಿ ಬೇಕೇ ಎಂದು ಕೇಳುವ ಜನ. ಅದೂ ಸಾಲದೆಂಬಂತೆ ಅಲ್ಲಲ್ಲಿ ಸ್ಟೆನ್ ಗನ್ ಹಿಡಿದು ಓಡಾಡುವ ಜನರೂ ಕಾಣಿಸುತ್ತಿದ್ದರು. ನಮ್ಮ ದೇಶದಲ್ಲಿ ಪ್ರತಿ ನೂರು ಜನರಿಗೆ ಎಷ್ಟು ಮೊಬೈಲುಗಳಿವೆ ಅನ್ನುವುದನ್ನು ಟೆಲೆ ಡೆಂಸಿಟಿ ಅನ್ನುವ ಸಂಖ್ಯೆಯ ಮೂಲಕ ಅಳೆಯುವಹಾಗೆ ಅಲ್ಲಿ ಗನ್ ದೆನ್ಸಿಟಿಯನ್ನು ಅಳೆಯಬೇಕು ಎಂದ ನನಗೆ ನಂತರ ಅನ್ನಿಸಿತ್ತು. ನನ್ನ ಬಳಿ ಅಂತರರಾಷ್ಟ್ರೀಯ ರೋಮಿಂಗ್ ಇದ್ದ ಮೊಬೈಲಿತ್ತಾದರೂ, ನಾನು ಯಾರ ನಂಬರುಗಳನ್ನೂ ಬರೆದು ತಂದಿರಲಿಲ್ಲ. ನನ್ನ ಕಂಪ್ಯೂಟರಿನಲ್ಲಿ ಹಿಜ್ರತ್‍ನ ನಂಬರು ಸಿಗಬಹುದಿತ್ತು. ಆದರೂ ಲ್ಯಾಪ್‍ಟಾಪನ್ನು ಅಲ್ಲಿ ತೆಗೆಯುವುದು ಸಮಂಜಸವಲ್ಲ ಅಂದುಕೊಂಡೇ ಪಾರ್ಕಿಂಗಿನಲ್ಲಿ ಒಂದು ಸುತ್ತು ಹಾಕಿ ಬಂದೆ. ತುಸು ಸಮಯದ ನಂತರ ಒಬ್ಬ ಗಡ್ಡಧಾರಿ ಮನುಷ್ಯ ನನ್ನ ಹೆಸರಿನ ಫಲಕವನ್ನು ಹಿಡಿದು ಬಂದದ್ದು ಕಾಣಿಸಿತು. ನಿರಾಳ ಉಸಿರು ಬಿಟ್ಟು ನಾನು ಆತನನ್ನು ಹಿಂಬಾಲಿಸಿದೆ. ಹೊಚ್ಚ ಹೊಸಾ ಟೊಯೊಟಾ ಕಾರಿನ ಡಿಕ್ಕಿಯಲ್ಲಿ ನನ್ನ ಸೂಟ್‍ಕೇಸ್ ಇಟ್ಟು ಹಿಂದಿನ ಸೀಟಿನಲ್ಲಿ ಕುಳಿತುಕೊಂಡೆ. ಈತ ಸಂಸ್ಥೆಗೆ ಸೇರಿದವನೋ ಅಥವಾ ಖಾಸಗೀ ಟ್ಯಾಕ್ಸಿ ಕಂಪನಿಯವನೋ ತಿಳಿಯಲಿಲ್ಲ. ಅವನಿಗೆ ಯಾವ ಭಾಷೆ ಗೊತ್ತಿರಬಹುದು ಅನ್ನುವುದೂ ನನಗೆ ತಿಳಿದಿರಲಿಲ್ಲ. ಜೊತೆಗೆ ಇಲ್ಲಿನ ರಾಜಕೀಯ ಪರಿಸ್ಥಿತಿ - ಏನು ಮಾತನಾಡಿದರೆ ಏನು ಪ್ರತಿಕ್ರಿಯೆ ಬರುತ್ತದೋ ತಿಳಿಯದ್ದರಿಂದ ನಾನು ಮೌನವಾಗಿಯೇ ಹಿಂದೆ ಕುಳಿತಿದ್ದೆ.
ಮೊದಲ ಬಾರಿ ನಾನು ಯುದ್ಧ ಇನ್ನೂ ಮುಗಿಯದ, ಪರಿಸ್ಥಿತಿ ಶಂತವಾಗಿದೆ ಎಂದು ಹೇಳಲಾಗದ ಜಾಗಕ್ಕೆ ಹೋಗಿದ್ದೆ. ಸುತ್ತಲೂ ಶಿಥಿಲವಾದ ಕಟ್ಟಡಗಳು. ಎಲ್ಲಿ ನೋಡಿದರೂ ಸರ್ವನಾಶದ ಚಿನ್ಹೆಗಳು, ಆ ನಡುವೆಯೇ ಜನ ತಮ್ಮ ಜೀವನವನ್ನು ನಡೆಸಿದ್ದರು. ಮಧ್ಯೆ ಮಧ್ಯೆ ನ್ಯಾಟೋದ ದೊಡ್ಡ ದೊಡ್ಡ ಟ್ಯಾಂಕುಗಳು, ಪಿಳಿಪಿಳಿ ಕಣ್ಣು ಮಾತ್ರ ಕಾಣುವ, ದೇಹದ ಮಿಕ್ಕೆಲ್ಲ ಭಾಗವೂ ಬುಲೆಟ್ ಫ್ರೂಫ್ ಬಟ್ಟೆ, ಹೆಲ್ಮೆಟ್ಟು ಹೀಗೆ ಕವಚಾವೃತರಾಗಿದ್ದ ಬಿಳಿ ತೊಗಲಿನ ಸೈನಿಕರು. ಸುತ್ತಲಿನ ವಾತಾವರಣವೇ ವಿಚಿತ್ರವಾಗಿತ್ತು. ಎಡಬದಿಗೆ ಒಂದು ಗೇಟು - ಆ ಗೇಟಿನ ಕಾವಲು ಕಾಯುತ್ತಾ ಸ್ಟೆನ್ ಗನ್ ಹಿಡಿದ ನಖಶಿಖಾಂತ ಕವಚವನ್ನು ಧರಿಸಿದ ಸೈನಿಕ. ಪಕ್ಕದ ಗೇಟು ನೋಡಿದರೆ ಒಂದು ಪ್ರಾಥಮಿಕ ಶಾಲೆಯ ದ್ವಾರ. ಅಲ್ಲಿ ನೆಟ್ಟಗೆ ಬಟ್ಟೆಯೂ ಧರಿಸದ ಸ್ಥಳೀಯ ಮುದುಕ ಅವನ ಜೊತೆಯಲ್ಲಿ ಶಾಲೆಗೆ ಹೊರಟು ನಿಂತಿರುವ ಪುಟ್ಟ ಹುಡುಗಿ.... ಅಲ್ಲಿನ ವೈಚಿತ್ರವನ್ನು ಅರ್ಥಮಾಡಿಕೊಳ್ಳಲು ಈ ನೋಟ ನನಗೆ ಮೊದಲ ಸೂಚನೆಯನ್ನು ನೀಡಿತ್ತು. ಮೊದಲ ಬಾರಿ ನಾನು ನನ್ನ ಕ್ಯಾಮರಾ ಒಯ್ದಿರಲಿಲ್ಲವಾದ್ದರಿಂದ ಓಡುತ್ತಿದ್ದ ಕಾರಿನಿಂದಲೇ ಆದಷ್ಟೂ ಚಿತ್ರಗಳನ್ನು ಮೊಬೈಲಿನ ಮೂಲಕ ಗ್ರಹಿಸಲು ಪ್ರಯತ್ನಿಸಿದೆ.
ಕರ್ಜಾಯಿ, ರಫಿ, ದಿಲೀಪ್ ಕುಮಾರ್ ಮತ್ತು ಸಾಹಿರ್ ಲುಧಿಯಾನ್ವಿ
ಡ್ರೈವರ್ ಅದುವರೆವಿಗೂ ಸುಮ್ಮನಿದ್ದವನು ಇದ್ದಕ್ಕಿದ್ದ ಹಾಗೆ ಉರ್ದುವಿನಲ್ಲಿ "ಸಬ್ ಖೈರಿಯತ್?" ಎಂದು ಕೇಳಿದ. ಹೌದು ಎಲ್ಲವೂ ಕ್ಷೇಮವೆಂದು ನಾನು ಹೇಳಿದೆ. ಅಲ್ಲಿಂದ ಮುಂದಕ್ಕೆ ಅವನೇ ಮಾತು ಮಂದುವರೆಸಿದ. ಅಲ್ಲಿಂದ, ನಾನು ಹೋಗಬೇಕಿದ್ದ ಹೋಟೇಲಾದ ಇಂಟರ್‌ನ್ಯಾಷನಲ್ ಕ್ಲಬ್ ತಲುಪುವವರೆಗೂ ನಾವು ಅದೂ ಇದೂ ಚರ್ಚಿಸಿದೆವು. ಅವನ ಹೆಸರು ಅಬ್ದುಲ್ ಘನಿ, ನಾನು ಹೋಗುತ್ತಿರುವ ಸಂಸ್ಥೆಗೆ ಸೇರಿದವನು. ಅವನು ಕಾಬೂಲಿನವನಾದರೂ ತಾಲಿಬಾನ್ ಆ ದೇಶವನ್ನು ಆಳಿದ ಸಮಯದಲ್ಲಿ ಪಾಕಿಸ್ತಾನದ ಪೇಶಾವರ್‍ಗೆ ವಲಸೆ ಹೋಗಿ ಅಲ್ಲಿ ಆಶ್ರಯ ಪಡೆದವನು. ನಾನು ಮುಂದೆ ಭೇಟಿಯಾದ ಅನೇಕರು ಹೀಗೇ ಪೆಶಾವರ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿ ಸಮಯಕಳೆದವರಾಗಿದ್ದರು. ಉದಾಹರಣೆಗೆ ನನ್ನ ಆಗಮನಕ್ಕೆ ಎಲ್ಲ ಏರ್ಪಾಟುಗಳನ್ನೂ ಮಾಡಿದ್ದ ಹಿಜ್ರತ್ ಪೆಶಾವರಕ್ಕೆ ಹೋದಾಗ ಆರು ತಿಂಗಳ ಮಗುವಾಗಿದ್ದನಂತೆ! ಈಗ ತನ್ನ ತಾಯ್ನಾಡಿಗೆ ವಾಪಸ್ಸಾಗಿ ಇಲ್ಲಿ ವಸ್ತವ್ಯ ಹೂಡಿದ್ದಾನೆ. ಈ ಪೆಶಾವರದ ಕೊಂಡಿಯಿರುವುದರಿಂದಲೇ ಎಲ್ಲರೂ ತಮ್ಮ ಪಷ್ತು ಭಾಷೆಯಲ್ಲದೇ ಉರ್ದುವನ್ನೂ ಮಾತನಾಡಬಲ್ಲವರಾಗಿದ್ದರು.
ಘನಿ ಮಾತನಾಡುತ್ತಾ ತನ್ನ ಸರಕಾರವನ್ನೂ ಪಕ್ಕದ ಪಾಕಿಸ್ತಾನದ ಸರಕಾರವನ್ನೂ ಬೈಯ್ಯುತ್ತಲೇ ಗಾಡಿ ಓಡಿಸಿದ. ಅವನ ಪ್ರಕಾರ ಅಮೆರಿಕನ್ನರು ಬಂದಾಗಿನಿಂದ ಅಫಘಾನಿಸ್ಥಾನಕ್ಕೆ ಸಾಕಷ್ಟು ಧನಸಹಾಯ ದೊರೆತಿದೆ, ಆದರೆ ಆ ಹಣವನ್ನೆಲ್ಲಾ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಪೋಲು ಮಾಡುತ್ತಿದ್ದಾರೆ. ಇದರಲ್ಲಿ ಪಕ್ಕದ ಪಾಕಿಸ್ತಾನದ ಕೈಯೂ ಇದೆ. ಗಮ್ಮತ್ತಿನ ಮಾತೆಂದರೆ, ಅವನು ಅಫಘಾನಿಸ್ಥಾನದ ಸಕಲ ದುಃಖ ದುಮ್ಮಾನಕ್ಕೂ ಪಾಕಿಸ್ತಾನದ ಐಎಸ್‍ಐಯನ್ನು ಕಾರಣೀಭೂತವನ್ನಾಗಿ ಮಾಡಿದ. ಇದನ್ನು ಕೇಳಿದ ಯಾವುದೇ ಭಾರತೀಯ ಪ್ರಜೆಗೂ ಹೃದಯ ತುಂಬಿಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಹೀಗೆ ಹಮೀದ್ ಕರ್ಜಾಯಿಗೆ ಶಾಪ ಹಾಕುತ್ತಲೇ ಬಂದ ಘನಿಯನ್ನು ನಾನು ಮುಂದೆ ಆಗಲಿರುವ ಚುನಾವಣೆಯಲ್ಲಿ ಆತ ಗೆಲ್ಲಬಹುದೇ ಅನ್ನುವ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಘನಿ ಕುತೂಹಲಕಾರಿ ಉತ್ತರವನ್ನು ಕೊಟ್ಟ - ಆತ ಹೇಳಿದ್ದೇನೆಂದರೆ ಕರ್ಜಾಯಿಯನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಆತನ ಜನಪ್ರಿಯತೆ ತೀರಾ ಕಡಿಮೆಯಾಗಿದ್ದರೂ ಆತ ಗೆಲ್ಲುವುದರಲ್ಲಿ ಯಾರಿಗೂ ಅನುಮಾನವಿದ್ದಂತಿಲ್ಲ. ಆತನಿಗೆ ಅಮೆರಿಕದ ಬೆಂಬಲವಿರುವುದರಿಂದ ಆತ ಚುನಾವಣೆಯನ್ನು ಗೆಲ್ಲುವುದು ಖಂಡಿತ. ಈ ಭಾವನೆಯನ್ನು ನಾನು ಅಲ್ಲಿದ್ದಷ್ಟೂ ದಿನ ಭಿನ್ನ ಭಿನ್ನ ವ್ಯಕ್ತಿಗಳಿಂದ ಕೇಳಿದ್ದೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿ ನಲವತ್ತು ಜನ ನಿಂತಿದ್ದರೂ ಕರ್ಜಾಯಿ ಚುನಾಯಿತರಾಗುವುದರಲ್ಲಿ ಯಾರಿಗೂ ಅನುಮಾನವಿದ್ದಂತಿರಲಿಲ್ಲ. ಇದ್ದ ಅನುಮಾನವಿಷ್ಟೇ - ಅಲ್ಲಿನ ಪದ್ಧತಿಯ ಪ್ರಕಾರ ೫೦ ಪ್ರತಿಶತಕ್ಕಿಂತ ಕಡಿಮೆ ಓಟುಗಳು ಆತನಿಗೆ ಬಂದಲ್ಲಿ - ಆತನಿಗೂ, ಎರಡನೆಯ ಸ್ಥಾನದಲ್ಲಿರುವ ಅಭ್ಯರ್ಥಿಗೂ ನಡುವೆ ಮತ್ತೊಂದು ಸುತ್ತಿನ ಚುನಾವಣೆ ನಡೆಯಬೇಕು. ಹೀಗಾಗಿ ಕರ್ಜಾಯಿ ಮೊದಲ ಸುತ್ತಿನಲ್ಲಿಯೇ ೫೦ ಪ್ರತಿಶತ ಪಡೆಯುತ್ತಾರೋ ಅಥವಾ ಅವರ ಸಮೀಪದ ಪ್ರತ್ಯರ್ಥಿಯಾದ ಅಬ್ದುಲ್ಲಾ ಅಬ್ಧುಲ್ಲಾ ಜೊತೆಗೆ ಮತ್ತೊಂದು ಸುತ್ತಿನ ’ರನ್ ಆಫ್’ ನಂತರ ಗೆಲ್ಲುತ್ತಾರೋ ಅನ್ನುವುದು ಮಾತ್ರ ಚರ್ಚೆಯಾಗುತ್ತಿತ್ತು.
ನಾನು ಈ ಲೇಖನ ಬರೆಯುವ ವೇಳೆಗೆ ಚುನಾವಣೆ ಮುಗಿದಿತ್ತು. ಘನಿ ಮತ್ತಿತರರು ವ್ಯಕ್ತಪಡಿಸಿದ ಅನುಮಾನಗಳು ಈಗ ನಿಜವಾಗುತ್ತಿರುವಂತೆ ಕಾಣಿಸುತ್ತಿದೆ. ಚುನಾವಣೆಯಾಗಿ ಹಲುವು ತಿಂಗಳುಗಳು ಕಳೆದಿದ್ದರೂ ಫಲಿತಾಂಶವನ್ನು ಸ್ಪಷ್ಟವಾಗಿ ಘೋಷಿಸಿಲ್ಲ. ಆದರೆ ಇಲ್ಲಿಯವರೆಗೆ ಬಂದಿರುವ ಘೋಷಣೆಗಳನ್ನು ನೋಡಿದರೆ ಕರ್ಜಾಯಿ ಗೆದ್ದಿದ್ದಾರೆ ಅನ್ನುವ ಸೂಚನೆಯಿದೆ. ಆದರೂ, ಚುನಾವಣೆಯಲ್ಲಿ ಅನ್ಯಾಯ ನಡೆದಿರಬಹುದಾದ ಓಟಿಂಗಿನಲ್ಲಿ ದಗಾ/ಮೋಸ ಇರಬಹುದಾದ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಚುನಾವಣೆಯ ಮೇಲ್ವಿಚಾರಣೆ ನಡೆಸಿದ ವಿಶ್ವ ಸಂಸ್ಥೆಯ ಪ್ರತಿನಿಧಿ ಪೀಟರ್ ಗಾಲ್‍ಬ್ರೆತ್ ಕರ್ಜಾಯಿಗೆ ಬಂದಿರುವ ವೋಟುಗಳಲ್ಲಿ ೩೦ ಪ್ರತಿಶತ ಜಾಲೀ ಓಟುಗಳು ಅನ್ನುವುದು ತನಿಖೆಯಿಂದ ತಿಳಿದಿದೆ ಆದರೆ ವಿಶ್ವಸಂಸ್ಥೆ ಈ ಮಾಹಿತಿಯನ್ನು ತಡೆಹಿಡಿಯುತ್ತಿದೆ ಎನ್ನುವ ಸ್ಫೋಟಕ ಮಾತನ್ನು ಹೇಳಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅಕ್ಟೋಬರ್ ೪ರ ಭಾನುವಾರಕ್ಕೆ ಪರಿಣಾಮ ಘೋಷಿಸಬಹುದು ಅನ್ನುವ ಅನುಮಾನ ನಿಜವಾಗದೇ ಫಲಿತಾಂಶಗಳು ಯಾವಾಗ ಬರಬಹುದೆಂದು ತಿಳಿಯದ ಪರಿಸ್ಥಿತಿಯಲ್ಲಿ ಆ ದೇಶ ಸದ್ಯಕ್ಕೆ ಇದೆ. ಈ ಇಂಥ ವಾತಾವರಣದಲ್ಲಿ ಚುನಾವಣೆಯಲ್ಲಿ ಅನ್ಯಾಯ ನಡೆದಿಲ್ಲ ಎಂದು ವಿಶ್ವ ಸಂಸ್ಥೆ ಘೋಷಿಸಿದರೂ ಅದನ್ನು ನಂಬುವವರ ಸಂಖ್ಯೆ ಬಹಳವೇ ಕಡಿಮೆಯಿರಬಹುದು.
ಕರ್ಜಾಯಿ ಬಗೆಗಿನ ಸಿಟ್ಟು ಅಷ್ಟಕ್ಕೇ ಸೀಮಿತವಾಗಿಲ್ಲ. ಚುನಾವಣೆಯ ಪ್ರಚಾರಕಾಲದಲ್ಲಿ ಕರ್ಜಾಯಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರೊಂದಿಗೆ ಅಧಿಕಾರ ಹಂಚಿಕೊಳ್ಳುವ ಆಶ್ವಾಸನೆ ನೀಡಿದ್ದಾರೆನ್ನುವ ಮಾತೂ ಅಲ್ಲಿ ಕೇಳಿಬರುತ್ತದೆ. ಅದೂ ಅಲ್ಲದೇ ಕಂಡ ಕಂಡ ಎಲ್ಲ ಸಣ್ಣ ಪುಟ್ಟ ನಾಯಕರಿಗೂ ಮಂತ್ರಿಪದವಿ ನೀಡುವ ಆಶ್ವಾಸನೆ ಕೊಟ್ಟು ಈಗ ಸುಮಾರು ಇನ್ನೂರು ಜನ ಮಂತ್ರಿಗಳಾಗಲು ಕಾಯುತ್ತಿದ್ದಾರೆನ್ನುವ ಮಾತನ್ನೂ ಜನ ಆಡಿಕೊಳ್ಳುತ್ತಿದ್ದಾರೆ!! ಈ ಮಾತಿನಲ್ಲಿ ಅತಿರೇಕವಿರಬಹುದು. ಆದರೆ ಅದರ ಹಿಂದಿರುವ ಸಿಟ್ಟು ಚಡಪಡಿಕೆಯನ್ನು ನಾವು ಗಮನಿಸಬಹುದಾಗಿದೆ.
ಘನಿಗೆ ರಾಜಕೀಯದ ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯಿರುವಂತೆ ತೋರಲಿಲ್ಲ. ಬದಲಿಗೆ ಆತ ದಿಲೀಪ್ ಕುಮಾರ್, ದೇವ್ ಆನಂದ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ. ಆತ ಹಳೆಯ ಹಿಂದೀ ಸಿನೇಮಾಗಳನ್ನು ನೋಡಿಯೇ ಬೆಳೆದಿದ್ದನಂತೆ. ಮಹಮ್ಮದ್ ರಫಿಯ ಒಂದು ಹಾಡುನ್ನು ಗುನಗುನಾಯಿಸಿ ರಫಿಯ ಧ್ವನಿಯನ್ನೂ - ಹಾಡಿನಲ್ಲಿರುವ ಸಾಹಿತ್ಯವನ್ನೂ ಅವನು ಮೆಚ್ಚಿಕೊಂಡ. ಮಾತಿನ ವರಸೆಯಲ್ಲಿ ನಾನು ಹೇಳಿದೆ - ನನ್ನ ಮೊಬೈಲಿನಲ್ಲಿ ರಫಿಯ ಹಾಡುಗಳಿವೆ, ಬೇಕಿದ್ದರೆ ಅವನ್ನು ಹಚ್ಚುತ್ತೇನೆ, ಹೋಟೇಲು ತಲುಪುವವರೆಗೂ ಕೇಳಬಹುದು. ಆದರೆ ನಮಗೆ ಆ ಅದೃಷ್ಟವಿಲ್ಲ. ಕಾರಣ ಆ ಮಾತು ಮುಗಿಯುವ ವೇಳೆಗೆ ನಾವು ಹೊಟೇಲು ತಲುಪಿಬಿಟ್ಟಿದ್ದೆವು. ದೆಹಲಿಯಿಂದ ಕೇವಲ ಎರಡು ಘಂಟೆಕಾಲದ ವಿಮಾನಯಾನ ಮಾಡಿ ಕಾಬೂಲು ತಲುಪಿರುವುದರಿಂದ ನನಗೇನೂ ಸುಸ್ತಾಗಿರಲಿಲ್ಲ. ಒಂದೈದು ನಿಮಿಷ ತಡೆದರೆ ನಾನು ಹೋಟೇಲಿನಲ್ಲಿ ಸೂಟ್‍ಕೇಸ್ ಇಟ್ಟು, ಬಟ್ಟೆ ಬದಲಾಯಿಸಿ ಬರುತ್ತೇನೆ ಎಂದು ನಾನು ಹೇಳಿದೆ. ಘನಿ ಕಾಯಲು ಒಪ್ಪಿದ.
ಹೊಟೇಲಿನ ದ್ವಾರದ ಹೊರಗೆ ಒಂದು ಸೆಕ್ಯೂರಿಟಿ ಪೆಟ್ಟಿಗೆಯಲ್ಲಿ ಕವಚ ಧರಿಸಿ ಸ್ಟೆನ್ ಗನ್ ಹಿಡಿದು ಅತಿಥಿಗಳನ್ನು ದುರುಗುಟ್ಟಿ ನೋಡುವ ಒಬ್ಬ ವ್ಯಕ್ತಿಯಿದ್ದ. ಕಾರನ್ನು ಹೊರಗೇ ನಿಲ್ಲಿಸಬೇಕು. ದೊಡ್ಡ ಗೇಟನ್ನು ತಟ್ಟಿದರೆ ಅಲ್ಲಿನ ಪುಟ್ಟ ಕಿಂಡಿಯಿಂದ ಹಣಕಿ ಒಳಗಿನಾತ ಬಾಗಿಲು ತೆಗೆಯುತ್ತಾನೆ. ಒಳಹೊಕ್ಕರೆ ಮತ್ತೊಂದು ಮುಚ್ಚಿದ ದ್ವಾರ. ಹೊರಗಿನ ಬಾಗಿಲನ್ನು ಮುಚ್ಚಿ ಮತ್ತೆ ಒಳಗಿನ ಬಾಗಿಲನ್ನು ತೆಗೆದು ಹೋಟೇಲಿನ ಮಹಾದ್ವಾರಕ್ಕೆ ಹೋಗಲು ಅನುಮತಿ ನೀಡುತ್ತಾನೆ. ಹೀಗೆ ಒಮ್ಮೆಗೆ ಒಬ್ಬರೇ ಮಹಾದ್ವಾರದಿಂದ ಪ್ರವೇಶಿಸುವ, ಕಾರುಗಳ ಪ್ರವೇಶಕ್ಕೆ ನಿಷೇಧವಿರುವ ಕಾನೂನನ್ನು ನಾನು ಮೊದಲಬಾರಿಗೆ ನೋಡುತ್ತಿದ್ದೆ. ಬಾಗಿಲ ಬಳಿಯ ನೋಟಿಸ್ ಬೋರ್ಡಿನ ಮೇಲೆ ದೊಡ್ಡ ಫಲಕದಲ್ಲಿ "ವೆಪನ್ಸ್ ನೋ ಡಿಸ್ಪ್ಲೇ" - ಅಸ್ತ್ರಗಳನ್ನು ಪ್ರದರ್ಶಿಸಬಾರದೆಂಬ ಸೂಚನೆಯನ್ನು ನೀಡಲಾಗಿತ್ತು. ಹೋಟೇಲಿನಲ್ಲಿ ಎರಡು ಅಂಶಗಳು ಎದ್ದು ಕಂಡವು - ಎಲ್ಲ ಕಡೆಯೂ ಅಫಘನಿ ರತ್ನಗಂಬಳಿಗಳು - ವಿವಿಧ ಸೈಜಿನ, ಆಕಾರದ, ಕಲೆಗಾರಿಕೆಯ ರತ್ನಗಂಬಳಿಗಳು ಮತ್ತು ಗೋಡೆಯ ಮೇಲೆ ಅಲ್ಲಿಗೇ ಪ್ರತ್ಯೇಕವನ್ನಿಸುವಂತಹ ಪೈಂಟಿಂಗಿನ ಕಲಾಕೃತಿಗಳು. ಈ ಎರಡೂ ಅಂಶಗಳು ಈ ಜಾಗದಲ್ಲಿ ಮಾತ್ರವಲ್ಲ, ನಮಗೆ ಕಾಬೂಲಿನಲ್ಲಿ ಎಲ್ಲೆಲ್ಲೂ ಕಂಡುಬಂದುವು.
ಕೋಣೆಯಲ್ಲಿ ಸೂಟ್‍ಕೇಸ್ ಇಟ್ಟು ಬಟ್ಟೆ ಬದಲಾಯಿಸಿ ಹೊರಬಂದಾಗ ಘನಿ ನನ್ನನ್ನು ಕಾರಿನ ಮುಂದಿನ ಸೀಟಿನಲ್ಲಿ ಕೂರಲು ಹೇಳಿದ. ಯಾಕೆಂದು ಅರ್ಥವಾಗದಿದ್ದರೂ ಹೋಗಿ ಅವನ ಪಕ್ಕದಲ್ಲಿ ಕೂತೆ. ಗಾಡಿ ಪ್ರಾರಂಭಿಸಿದ ಕೂಡಲೇ ಕೇಳಿದ - ನಿಮ್ಮ ಮೊಬೈಲಿನಲ್ಲಿ ಬ್ಲೂಟೂಥ್ ಇರಬೇಕಲ್ಲವೇ - ಇದ್ದರೆ ರಫಿಯ ಎಲ್ಲ ಹಾಡುಗಳನ್ನೂ ನನಗೆ ವರ್ಗಾಯಿಸಿ ಎಂದ. ಹಿಂದಿ ಸಿನೇಮಾ ಜಗತ್ತಿನ ಯಾವುದೇ ಮೂಲೆಯಲ್ಲೂ ಬಾಗಿಲುಗಳನ್ನು ತೆಗೆಯಬಹುದು ಅನ್ನುವುದು ಮತ್ತೆ ನನ್ನ ಅನುಭವಕ್ಕೆ ಬಂದಿತ್ತು. ರಷ್ಯಾದಲ್ಲಿ ರಾಜ್ ಕಪೂರನ ಖ್ಯಾತಿಯ ಬಗ್ಗೆ ಕೇಳಿಯೇ ಬಾಲ್ಯಕಾಲವನ್ನು ಕಳೆದ ನನ್ನ ಜನಾಂಗದವರಿಗೆ ಮೊರೊಕ್ಕೋದಲ್ಲಿ ಷಾರುಖ್ ಖಾನನ ದೇಶದಿಂದ ಬಂದವನೆಂದು ಮರ್ಯಾದೆ ಸಂದದ್ದನ್ನೂ - ಪುಟ್ಟ ಮಕ್ಕಳು "ಹಂ ಲೋಗೋಂಕೊ ಸಮಝ್ ಸಕೇ ತೊ ಸಮಝೋ ದಿಲ್ಭರ್ ಜಾನಿ" ಎಂದು ಹಾಡಿದ್ದನ್ನೂ ಕಂಡಿದ್ದ ನನಗೆ ಇದ್ದಕ್ಕಿದ್ದ ಹಾಗೆ ದಿಲೀಪ್ ಕುಮಾರ್, ದೇವ್ ಆನಂದ್ ಮತ್ತು ರಫಿ, ಸಾಹಿರ್ ಲುಧಿಯಾನ್ವಿಗಳ ಮಾತು ಕೇಳಿ ಹೃದಯ ತುಂಬಿ ಬಂತು. ಹೀಗೆ ಅನುಮಾನದಿಂದಲೇ ಘನಿಯ ಗಾಡಿಯನ್ನು ಹತ್ತಿದ್ದ ನನಗೆ ಭಾಷೆ, ಸಂಸ್ಕೃತಿಯ ಭಿನ್ನತೆಗಳನ್ನು ಮೀರಿ ಅವನೊಡನೆ ಸಂವಹನ ಸಾಧ್ಯವಾದ ಜಾದೂ ಒಂದು ವಿಚಿತ್ರ ಹೆಮ್ಮೆಯನ್ನು ನೀಡಿತು. ಹಾಗೆ ನೋಡಿದರೆ ಹಿಂದಿ ನನ್ನ ಭಾಷೆಯೂ ಅಲ್ಲ, ಅವನದೂ ಅಲ್ಲ ಆದರೂ ರಫಿ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿಬಿಟ್ಟಿದ್ದ.. ರಫಿಯ ಆತ್ಮ ಶಾಂತಿಯಿಂದಿರಲಿ!!
ಹೋಟೇಲಿನಿಂದ ಆಫೀಸಿಗೆ ಬುಚ್ಚರ್ ಮಾರ್ಗವಾಗಿ ಹೋದೆವು. ಈ ದೇಶ ಮೂಲತಃ ಮಾಂಸಾಹಾರಿ ದೇಶ ಅನ್ನುವುದನ್ನು ನಿರೂಪಿಸಲೋ ಎಂಬಂತೆ ವಿವಿಧ ಪ್ರಾಣಿಗಳ ವಿವಿಧ ಭಾಗಗಳನ್ನು ಕತ್ತರಿಸಿ ತರಕಾರಿ ಅಂಗಡಿಯಲ್ಲಿ ಜೋಡಿಸಿಟ್ಟಂತೆ ಮಾಂಸವನ್ನು ಜೋಡಿಸಿಟ್ಟಿದ್ದರು. ಕೇವಲ ಮೂರು ಹಾಡುಗಳನ್ನು ಘನಿಗೆ ರವಾನೆ ಮಾಡುವಷ್ಟರಲ್ಲಿ ಆಫೀಸನ್ನು ತಲುಪಿದ್ದೆವು. "ಪರವಾಗಿಲ್ಲ ಹತ್ತಿರದಲ್ಲೇ ಇದೆ, ಸಂಜೆಗೆ ನಾನು ನಡೆದೇ ಹೋಟೇಲಿಗೆ ಹೋಗಬಹುದು" ಅಂದದ್ದಕ್ಕೆ ಘನಿಯ ತೀವ್ರ ವಿರೋಧ ಬಂತು. ಆ ನಂತರ ತಿಳಿದದ್ದು ಏನೆಂದರೆ ಅಲ್ಲಿನ ಸುರಕ್ಷಾ ನಡಾವಳಿಯ ಪ್ರಕಾರ ನಾವುಗಳು ನಡೆದು ಹೋಗುವುದು ನಿಷಿದ್ಧವಂತೆ. ಎಲ್ಲಾದರೂ ಗುಂಡಿಗೆ ಬಲಿಯಾಗಬಹುದಾದ ಭಯವೊಂದೆಡೆಯಾದರೆ, ಅಪಹರಣಕ್ಕೆ ಒಳಗಾಗುವ ಭೀತಿ ಇನ್ನೊಂದೆಡೆ.
ಜನಸಾಮಾನ್ಯರು, ಎಕ್ಸ್.ಪ್ಯಾಟ್‌ಗಳು, ವಿವಿಐಪಿಗಳು
ಇನ್ನೂ ಮುಂದೆ ನನಗೆ ತಿಳಿದದ್ದು ಈ ವಿಷಯ ಇಲ್ಲಿ ಮೂರು ವರ್ಗಗಳ ಜನರಿದ್ದಾರೆ. ಮೊದಲನೆಯವರು ಸ್ಥಳೀಯರು - ಸ್ಥಳೀಯ ಜನತೆ ಹಾಯಾಗಿ ರಸ್ತೆಯಲ್ಲಿ ತಮ್ಮ ಕಾಯಕ ನಡೆಸಿಕೊಳ್ಳುತ್ತಾ, ತಾಕತ್ತಿದ್ದವರು ತಮ್ಮ ಎ.ಕೆ.೪೭ ಗನ್ನುಗಳನ್ನು ಹೊತ್ತು ಓಡಾಡುತ್ತಾರೆ. ಈ ಜನ ಹೆಚ್ಚಾಗಿ ಬಡವರ್ಗಕ್ಕೆ ಸೇರಿರುತ್ತಾರೆ. ಅವರಿಗೆ ಯಾರಿಂದಲೂ ಯಾವುದರ ಬಗ್ಗೆಯೂ ರಕ್ಷಣೆಯ ಅವಶ್ಯಕತೆಯಿಲ್ಲ. ಆ ವರ್ಗವನ್ನು ಬಿಟ್ಟರೆ ಮಿಕ್ಕಂತೆ ಎರಡು ವರ್ಗಗಳ ಜನ ಆ ಊರಿನಲ್ಲಿ/ದೇಶದಲ್ಲಿ ಓಡಾಡುತ್ತಾರೆ.
ಎರಡನೆಯ ವರ್ಗದವರೆಂದರೆ ಅಷ್ಟೇನೂ ಮುಖ್ಯವಲ್ಲದ ’ಎಕ್ಸ್.ಪ್ಯಾಟ್’ ಜನ. ವಿದೇಶದಿಂದ ಅಲ್ಲಿಗೆ ಕೆಲಸಕ್ಕಾಗಿ ಬಂದಿರುವ ಈ ಜನ ಸುರಕ್ಷಿತವಾದ ಕಾಂಪೌಂಡುಗಳಲ್ಲಿರುವ ಗೆಸ್ಟ್ ಹೌಸ್‍ಗಳಲ್ಲಿ ವಾಸಿಸುತ್ತಾ, ಅಲ್ಲಿನ ಮೆಸ್ಸಿನಲ್ಲಿ ಊಟಮಾಡುತ್ತಾ, ಆಫೀಸಿಗೆ ಘನಿಯ ಕಾರಿನಂತಹ ಕಾರಿನಲ್ಲಿ ಹೋಗಿ ಕೆಲಸ ಮಾಡುವ ಅ-ಸಾಮಾನ್ಯರು. ಆದರೆ ಅಫಘಾನಿಸ್ಥಾನ ’ನಾನ್ ಫ್ಯಾಮಿಲಿ ಸ್ಟೇಷನ್’ ಎಂದು ಘೋಷಿಸಲ್ಪಟ್ಟಿರುವುದರಿಂದ ಒಬ್ಬೊಬ್ಬರೇ ಬಂದು ಇಲ್ಲಿರಬೇಕು ಹಾಗೂ ವರುಷಕ್ಕೆರಡುಬಾರಿ ರಜೆ ಪಡೆದು ಸಂಸಾರವನ್ನು ನೋಡಬೇಕು. ಹೀಗೆ ಕಾಂಪೌಂಡುಗಳಲ್ಲಿರುವವರು ತಮ್ಮದೇ ಜೀವನಶೈಲಿಯನ್ನು ಮೈಗೂಡಿಸಿಕೊಂಡು ಅಲ್ಲೇ ಟಿ.ಟಿ ಆಡುತ್ತಾ, ಟಿವಿ ನೋಡುತ್ತಾ, ಬಾಂಬುಗಳ ಬಗ್ಗೆ ಚಟಾಕಿಗಳನ್ನು ಹಾಕುತ್ತಾ ಜೀವಿಸುತ್ತಾರೆ. ನನಗೆ ತಿಳಿದ ಕೆಲವರಲ್ಲಿ ಒಬ್ಬ ಖಾಲಿ ಸಮಯ ಕಳೆಯಲು ಫ್ರೆಂಚ್ ಭಾಷೆ ಕಲಿಯುತ್ತಿದ್ದ. ಮತ್ತೊಬ್ಬ ಚೆನ್ನೈ ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಗೆ ಕಟ್ಟಿ ಓದುತ್ತಿದ್ದ. ಇದೇ ವರ್ಗಕ್ಕೆ ಹಿಜ್ರತ್‍ನಂತಹ ಅಫಘನಿಗಳೂ ಸೇರುತ್ತಾರೆ. ಅವರುಗಳು ಮೂಲತಃ ಇದೇ ದೇಶದವರಾದರೂ ತುಸು ಶ್ರೀಮಂತವರ್ಗಕ್ಕೆ ಸೇರಿ ಪಾಕಿಸ್ತಾನ, ಇಂಗ್ಲೆಂಡ್, ಭಾರತ, ಅಮೆರಿಕದಲ್ಲಿ ವಿದ್ಯೆ ಪಡೆದು ಈಗ ತಮ್ಮ ತಯ್ನಾಡಿಗೆ ಹಿಂದಿರುಗಿ ಬಂದಿರುವವರು. ಇವರುಗಳು ಇನ್ನೂ ಸ್ಥಳೀಯ ಸಂಸ್ಕೃತಿಯಲ್ಲಿ ಪೂರ್ಣವಾಗಿ ಬೆರೆತಿಲ್ಲ. ಹಾಗೂ ಅನೇಕರು ತಮ್ಮ ಅಮೆರಿಕದ ಪಾಸ್‍ಪೋರ್ಟನ್ನೇ ಇನ್ನೂ ಇಟ್ಟುಕೊಂಡಿದ್ದಾರೆ. ಇವರಿಗೂ ’ಎಕ್ಸ್.ಪ್ಯಾಟ್ಸ್’ಗಿರುವ ಕಾಯಿದೆಯೇ ವರ್ತಿಸುತ್ತದೆ.
ಮೂರನೆಯ ವರ್ಗದವರು ’ಮುಖ್ಯರಾದವರು’ ಇವರುಗಳು ವಿಶ್ವಬ್ಯಾಂಕು, ವಿಶ್ವ ಸಂಸ್ಥೆಯಂತಹ ಜಾಗಗಳಲ್ಲಿ ಉನ್ನತ ಸ್ಥಾನದಲ್ಲಿರುವವರು. ಅಥವಾ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರು. ಇವರುಗಳು ವಜೀರ್-ಅಕ್ಟರ್-ಖಾನ್ ಅನ್ನುವಂತಹ ಶ್ರೀಮಂತರು ಜೀವಿಸುವ ಪ್ರದೇಶದಲ್ಲಿ ಸಾಮಾನ್ಯತಃ ಮನೆ ಮಾಡಿರುತ್ತಾರೆ. ಅವರುಗಳ ಮನೆಗಳು ಕೋಟೆಗಳ ರೀತಿಯಲ್ಲಿರುತ್ತವೆ. ಈ ಜನರು ನಿಜಕ್ಕೂ ಜೈಲಿನಲ್ಲಿದ್ದಂತೆ ಇರುತ್ತಾರೆ. ಅವರುಗಳ ಸಂಸ್ಥೆಯ ನಿಯಮಾನುಸಾರ ಅವರುಗಳು ಸಾಮಾನ್ಯ ಕಾರುಗಳಲ್ಲಿ ಓಡಾಡಬಾರದಂತೆ. ಬದಲಿಗೆ ಅವರಿಗಾಗಿಯೇ ಆರ್ಮರ್ಡ್ ಬುಲೆಟ್ ಫ್ರೂಫ್ ಕಾರುಗಳಿರುತ್ತವೆ. ಅವರುಗಳು ನಡೆದಾಡುವುದಕ್ಕೂ ಸ್ವಾತಂತ್ರವಿಲ್ಲ. ಹಾಗೂ ಹೊರಗೆ ಊಟ ಮಾಡಬೇಕೆಂದು ಅನ್ನಿಸಿದರೆ ಅವರುಗಳು ಹೋಗಬೇಹುದಾದ ’ಎಂ.ಓ.ಎಸ್. ಅಪ್ರೂವ್ಡ್’ [ಸುರಕ್ಷಾ ಮಂತ್ರಾಲಯದ ಅನುಮತಿ ಪಡೆದಿರುವ] ರೆಸ್ಟಾರೆಂಟುಗಳಿಗೆ ಮಾತ್ರ ಹೋಗಬೇಕು. ಇದ್ದಕ್ಕಿದ್ದಂತೆ ವಿಐಪಿಗಳ ಜೀವನ ಇಷ್ಟು ದುಸ್ತರವಾಗಬಹುದು ಎಂದು ನನಗೆ ಗೊತ್ತಾದದ್ದು ಈ ಎಲ್ಲ ವಿವರಗಳನ್ನು ಕೇಳಿದಾಗಲೇ. ಇನ್ನೂ ಗಮ್ಮತ್ತಿನ ವಿಷಯವೆಂದರೆ ನಾವುಗಳು ಓಡಾಡುತ್ತಿದ್ದ ಸಾಮಾನ್ಯ ಕಾರುಗಳನ್ನು ವಿಶ್ವಬ್ಯಾಂಕಿನವರು "ಸಾಫ್ಟ್ ಸ್ಕಿನ್ದ್ [ಕೋಮಲ ತ್ವಚೆಯ] ಕಾರ್" ಎಂದು ಕರೆಯುತ್ತಾರಂತೆ.
ಹೀಗೂ ಒಬ್ಬರು ಗಾಂಧಿ!
ಅಲ್ಲಿದ್ದಾಗ ಇಂಥ ಎಂ.ಒ.ಎಸ್ ಅಪ್ರೂವ್ಡ್ ಹೋಟೇಲಿನಲ್ಲಿ ಒಂದು ಊಟವನ್ನೂ ಮಾಡಿದ್ದಾಯಿತು. ವಜೀರ್ ಅಕ್ಬರ್ ಖಾನ್ ಪ್ರಾಂತದಲ್ಲಿರುವ ಇಂಥದೊಂದು ಹೋಟೇಲಿಗೆ ಹೋಗುವ ಮಾರ್ಗದಲ್ಲಿ ನಾವು ಗಾಂಧಿ ಮಾರ್ಗವನ್ನು ಹಾಯ್ದು ಹೋಗಬೇಕಾಯಿತು. ಗಾಂಧಿಯ ಹೆಸರು ನೋಡಿ ನಾನು ಸಹಜವಾಗಿಯೇ ಪುಳಕಿತಗೊಂಡೆ. ಆದರೆ ನಂತರ ತಿಳಿದದ್ದೇನೆಂದರೆ ಅದು ಮಹಾತ್ಮನ ಹೆಸರಿನ ರಸ್ತೆಯಲ್ಲ - ಬದಲಿಗೆ ಇಂದಿರಾಗಾಂಧಿ ರಸ್ತೆ. ಆ ರಸ್ತೆಯಂಚಿನಲ್ಲಿ ಆಕೆಯ ಹೆಸರಿನ ಒಂದು ಮಕ್ಕಳಾಸ್ಪತ್ರೆ ಭಾರತ ಸರಕಾರದ ಸಹಕಾರದೊಂದಿಗೆ ನಡೆಯುತ್ತಿದೆಯಂತೆ. ಭಾರತೀಯರನ್ನು ಕಂಡರೆ ಅಲ್ಲಿನ ಜನತೆಗೆ ಇರುವ ಅತ್ಯಂತ ಪ್ರೀತಿಗೆ ನಮ್ಮ ಸರಕಾರ ಮಾಡಿರುವ ಇಂಥ ಅನೇಕ ಕೆಲಸಗಳೂ ಕಾರಣ ಎಂದು ನನಗೆ ಕೆಲವರು ಹೇಳಿದರು.
ಈ ವಿಷಯವನ್ನು ಚರ್ಚಿಸುತ್ತಾ ಹಿಜ್ರತ್ ತಮಾಷೆ ಮಾಡಿದ. "ಇಲ್ಲಿ, ಯಾರೂ ಗುಂಡು ಹಾರಿಸಿ ಜನರನ್ನು ಸಾಯಿಸುವುದಿಲ್ಲ. ಹೀಗಾಗಿ ಬುಲೆಟ್ ಫ್ರೂಫ್ ಕಾರಿನಲ್ಲಿ ಹೋಗುವುದರಲ್ಲಿ ಅರ್ಥವಿಲ್ಲ. ಸಾಯಿಸಬೇಕಾದರೆ ಆತ್ಮಘಾತಕ ಬಾಂಬಿನ ದಾಳಿಯಾಗುತ್ತದೆ. ಆ ದಾಳಿಗೆ ಈ ದಪ್ಪತೊಗಲಿನ ವಾಹನಗಳೂ ತತ್ತರಿಸುತ್ತವೆ!" ಹೀಗೆ ಅರ್ಥಹೀನ ಸುರಕ್ಷೆಯ ನಡುವಿನಲ್ಲಿ ಅನೇಕ ಸ್ಥರದ ಜನರು ಆ ದೇಶದ ಪುನರ್ನಿರ್ಮಾಣ ಮಾಡುತ್ತಿರುವ ಭ್ರಮೆಯಲ್ಲಿ ಮುಂದುವರೆಯುತ್ತಿದ್ದಾರೆ.
ಚಿಕನ್ ಬೀದಿಯಲ್ಲಿ ರತ್ನಗಂಬಳಿಗಳು
ಮೊದಲ ಬಾರಿಗೆ ಹೋದಾಗ ಕಾಬೂಲು ನಗರವನ್ನು ನೋಡಬೇಕೆಂದು ನಾನು ಬಯಸಿದೆ. ಆದರೆ ನನಗೆ ಅನುಮತಿಯಿರಲಿಲ್ಲ. ಚುನಾವಣೆಯ ತಯಾರಿಯಲ್ಲಿ ಅಲ್ಲಲ್ಲಿ ರಾಕೆಟ್ ಧಾಳಿಗಳಾಗುತ್ತಿದ್ದುವು. ಹೀಗಾಗಿ ಎರಡನೆಯ ಬಾರಿಗೆ ನನ್ನ ಪ್ರವಾಸೋದ್ಯಮವನ್ನು ಕಾಯ್ದಿರಿಸುತ್ತೇವೆ ಎಂದು ಹೇಳಿದರು. ಮೊದಲ ಬಾರಿಗೆ ಚಿಕನ್ ಸ್ಟ್ರೀಟ್ ಅನ್ನುವ ರಸ್ತೆಯಲ್ಲಿ ಎರಡು ಸುತ್ತು ಹಾಕಲು ನನಗೆ ಪರವಾನಗಿ ಸಿಕ್ಕಿತ್ತು. ಅಲ್ಲಿನ ಅಂಗಡಿಗಳಲ್ಲಿ ಕಾಲೀನ್ [ರತ್ನಗಂಬಳಿಗಳು] ಉತ್ತಮವಾಗಿರುತ್ತವೆ, ಆದರೆ ಚೌಕಾಸಿ ಮಾಡಬೇಕು ಎಂದು ನನ್ನನ್ನು ತಾಕೀತು ಮಾಡಿ ಕಳಿಸಿದರು. ಅಲ್ಲಿನ ರತ್ನಗಂಬಳಿಗಳ ಕಲೆ ಅದ್ಭುತ. ನಾನು ಈ ರತ್ನಗಂಬಳಿಗಳನ್ನು ನೋಡುವ ಕುತೂಹಲವನ್ನು ಹೊಂದಿದ್ದರೂ ಕೊಳ್ಳುವ ಮೂಡಿನಲ್ಲಿರಲಿಲ್ಲ. ಕಾರಣ ನನ್ನ ಪುಟ್ಟ ಸೂಟ್‌ಕೇಸಿನಲ್ಲಿ ಆ ರತ್ನಗಂಬಳಿಯನ್ನು ಸೇರಿಸಲು ಸಾಧ್ಯವೂ ಇರಲಿಲ್ಲ, ಹಾಗೂ ನನ್ನ ಬಳಿ ಸಾಕಷ್ಟು ಹಣವೂ ಇರಲಿಲ್ಲ.
ಆದರೆ ಒಬೈದುಲ್ಲಾನ ಅಂಗಡಿಗೆ ಹೋದಾಗ ಆತ ನನ್ನ ಎರಡೂ ತೊಂದರೆಗಳನ್ನು ಕೂಡಲೇ ಪರಿಹರಿಸುವುದಾಗಿ ಹೇಳಿದ. ಹೇರಾತ್ ಪ್ರಾಂತದಲ್ಲಿ ಮಾಡುವ ರತ್ನಗಂಬಳಿಗಳು ತೆಳ್ಳಗಿದ್ದು ಅವನ್ನು ಪುಟ್ಟದಾಗಿ ಮಡಚಿಕೊಡುವುದಾಗಿಯೂ, ಕ್ರೆಡಿಟ್ ಕಾರ್ಡಿದ್ದರೆ ಅದರಲ್ಲಿ ಹಣ ಕಟ್ಟಬಹುದೆಂದೂ ಆತ ಹೇಳಿದ. ಆದರೆ ಬಹುಶಃ ನಾನೇ ಕೊಳ್ಳಲು ತಯಾರಿರಲಿಲ್ಲವೇನೋ. ಆದರೂ ಅನುಭವ ಪಡೆಯಲೆಂಬಂತೆ ಚೌಕಾಸಿಯನ್ನಂತೂ ಮಾಡಿದೆ. ಆತ ವ್ಯಾಪಾರದ ಎಲ್ಲ ಸಿಹಿ ಮಾತುಗಳನ್ನೂ ಹೇಳಿದ.. ನೀನು ಭಾರತದಿಂದ ಬಂದಿದ್ದೀಯ, ಹೀಗಾಗಿ ನೀನು ನಮ್ಮದೇಶದವರಿಗೆ ಸಮಾನ. ಅಮೆರಿಕದವರಾಗಿದ್ದರೆ ನಾನು ಬೆಲೆ ಏರಿಸಿ ಹೇಳುತ್ತಿದ್ದೆ. ಆದರೆ ನಿನಗೆ ನಾನು ಒಳ್ಳೆಯ ಬೆಲೆಯನ್ನೇ ಕೊಡುತ್ತೇನೆ.. ಎಂದೆಲ್ಲಾ ಸಿಹಿಮಾತುಗಳನ್ನಾಡಿದ್ದಲ್ಲದೇ ತುಸು ದುಃಖದ ಮಾತನ್ನೂ ಹೇಳಿದ - "ನೋಡು, ನಾನು ಹೇರಾತ್‌ಗೆ ಸೇರಿದವನು. ರತ್ನಗಂಬಳಿಗಳನ್ನು ನೇಯುವ ಮನೆತನಕ್ಕೆ ಸೇರಿದವನು. ಅಲ್ಲಿಂದ ಒಂದು ಪ್ಯಾಕೇಜನ್ನು ಕಳಿಸಿದರೆ ಇಲ್ಲಿಗೆ ಸುರಕ್ಷಿತವಾಗಿ ಬರುತ್ತದೆನ್ನುವ ನಂಬಿಕೆಯೂ ಇಲ್ಲ. ಅಂಥ ಪರಿಸ್ಥಿತಿಯಲ್ಲಿ ಸುರಕ್ಷಾ ಏರ್ಪಾಟಿಲ್ಲದೇ ನಾವು ವ್ಯಾಪಾರ ಮಾಡುತ್ತಿದ್ದೇವೆ. ನಿನ್ನಂಥಹವರು ನಮ್ಮನ್ನು ಪ್ರೋತ್ಸಾಹಿಸಬೇಕು" ಎಂದೆನ್ನುವ ಮಾತುಗಳನ್ನು ಹೇಳಿದರೂ ಡಾಲರುಗಳಿಲ್ಲದ ನಾನು ಖಾಲಿ ಕೈಯಲ್ಲೇ ವಾಪಸ್ಸಾದೆ.
ನ್ಯಾಟೋ ಪಡೆಗಳ ’ಇಂಟಲಿಜೆನ್ಸ್’
ನಾನು ಎರಡನೆಯ ಬಾರಿ ಕಾಬೂಲಿಗೆ ಹೋಗುವಷ್ಟರ ವೇಳೆಗೆ ಪರಿಸ್ಥಿತಿ ತುಸುವೇ ಬದಲಾಗಿತ್ತು. ಚುನಾವಣೆ ಮುಗಿದಿತ್ತು. ಚುನಾವಣೆಯ ಸಮಯದಲ್ಲಿ ಅಲ್ಲಿನ ಎಲ್ಲ ಸಂಸ್ಥೆಗಳೂ ಬಾಗಿಲು ಜಡಿದು ’ಎಕ್ಸ್.ಪ್ಯಾಟ್ಸ್’ ಎಲ್ಲರೂ ತಮ್ಮ ತಮ್ಮ ದೇಶಕ್ಕೆ ಹೋಗಿ ರಜೆಯ ಆನಂದವನ್ನು ಮುಗಿಸಿ ವಾಪಸ್ಸಾಗಿದ್ದರು. ಈಗ ಚುನಾವಣೆಯ ಫಲಿತಾಂಶ ಯಾವಾಗ ಬರುವುದೋ ಅನ್ನುವ ಕುತೂಹಲ ಮಾತ್ರವಿತ್ತು. ಈ ಬಾರಿ ನಗರ ಪ್ರವೇಶ ಮಾಡುತ್ತಿದ್ದಂತೆಯೇ ನನಗೆ ಕಾಣಿಸಿದ್ದು ಗಾಳಿಯಲ್ಲಿ ತೇಲಾಡುತ್ತಿದ್ದ ಒಂದು ಪುಟ್ಟವಿಮಾನಾಕಾರದ ಬಿಳಿಯ ಬಲೂನು. ರಾಷ್ಟ್ರಾಧ್ಯಕ್ಷರ ನಿವಾಸದ ಮೇಲು ರಾಕೆಟ್ ಧಾಳಿಯ ಪ್ರಯತ್ನವಾದಾಗಿನಿಂದಲೂ ಇದು ಆಕಾಶದಲ್ಲಿ ತೇಲುತ್ತಿದೆಯಂತೆ. ಈ ಬಲೂನನ್ನು ನ್ಯಾಟೋ ಪಡೆಗಳು ತೇಲಿಬಿಟ್ಟಿವೆಯಂತೆ - ಅದರೊಳಗಿರುವ ಕ್ಯಾಮರಾಗಳು ನಗರದಲ್ಲಿ ನಡೆವ ಅನುಮಾನಾಸ್ಪದ ಚಟುವಟಿಕೆಗಳನ್ನು ಸೆರೆ ಹಿಡಿಯಲು ಸಕ್ಷಮವಾಗಿವೆಯಂತೆ. ಈ ತಂತ್ರಜ್ಞಾನವೂ ಅದ್ಭುತವಾದದ್ದು ಅಂತ ನಾನು ಮೆಚ್ಚಿಕೊಳ್ಳುವಷ್ಟರಲ್ಲಿಯೇ ನನ್ನ ಜೊತೆಗಿದ್ದ ಸುಲ್ತಾನ್ ಹೇಳಿದ - "ಇದೇ ಥರದ ಬಲೂನನ್ನು ಹೆಲ್ಮತ್ ಹಾಗೂ ಗಜನಿಯಲ್ಲಿ ಕಟ್ಟಿದ್ದಾರೆ, ಗಜನಿಯ ಬಲೂನನ್ನು ತಾಲಿಬಾನಿಗೆ ಸೇರಿದವರು ಷೂಟ್ ಮಾಡಿ ಕೆಳಕ್ಕೆ ತಂದದ್ದೂ ಆಗಿದೆ"... ಹೀಗೆ ಯಾವುದೇ ಉತ್ಕೃಷ್ಟ ತಂತ್ರಜ್ಞಾನವೂ ಅಲ್ಲಿನ ಜನರ ನಗೆಯ ಪಾಟಲಾಗುವುದು ಸಹಜವೇ ಇತ್ತೇನೋ.
ಮತ್ತು ಇನ್ನಷ್ಟು ಟೂರಿಸಂ....
ಎರಡನೆಯ ಬಾರಿಗೆ ನಾನು ಅಲ್ಲಿಗೆ ಹೋಗುವ ವೇಳೆಗೆ ನನಗೂ ಆ ದೇಶದ ರೀತಿನೀತಿ ಸ್ವಲ್ಪ ಅರ್ಥವಾಗಿತ್ತು. ಅಲ್ಲಿಗೆ ಹೋಗಲು ವೀಸಾ ಪಡೆಯುವುದೂ ಒಂದು ಪ್ರಯಾಸವೇ. ದೆಹಲಿಯ ಕಾನ್ಸುಲೇಟಿನಲ್ಲಿ ಸಾಲಿನಲ್ಲಿ ನಿಂತು ಎಲ್ಲ ಪ್ರಶ್ನೆಗಳಿಗೂ ಸಂಯಮದಿಂದ ಉತ್ತರ ನೀಡಿ ವೀಸಾ ಪಡೆಯಬೇಕು. ಮೊದಲಬಾರಿ ನನಗೆ ’ಎಂಟ್ರಿ’ವೀಸಾ ಕೊಟ್ಟರಾದರೂ, ಎರಡನೆಯ ಬಾರಿ ಜಬರ್ದಸ್ತಿಯಿಂದ ’ಟೂರಿಸ್ಟ್’ ವೀಸಾ ಕೊಟ್ಟರು. ಯುದ್ಧನಡೆಯುತ್ತಿರುವ - ದಿನವೂ ಆತ್ಮಘಾತಕ ಧಾಳಿಯಲ್ಲಿ ಹಲವಾರು ಜನರನ್ನು ಕಳೆದುಕೊಳ್ಳುತ್ತಿರುವ ಈ ದೇಶಕ್ಕೆ ಟೂರಿಸ್ಟ್ ವೀಸಾ ಪಡೆದು ಹೋಗಬೇಕಾದ ವಿರೊಧಾಭಾಸವನ್ನು ನೋಡಿ ನನಗೆ ಒಳಗೇ ನಗೆಯೂ ಬಂತು.
ನನ್ನ ಮೀಟಿಂಗುಗಳಾದ ನಂತರ ನಾನು ಹಿಜ್ರತ್‍ಗೆ ಹೇಳಿದೆ. ಈ ಬಾರಿ ಟೂರಿಸ್ಟ್ ವೀಸಾ ಪಡೆದು ಬಂದಿರುವುದರಿಂದ ಕಾಬೂಲು ನಗರವನ್ನು ತೋರಿಸಲೇ ಬೇಕು. ಕಡೆಗೂ ನಾನು ವಾಪಸ್ಸಾಗುವ ಹಿಂದಿನ ದಿನ ಹಿಜ್ರತ್ ನನ್ನನ್ನು ಬಾಗ್-ಎ-ಬಾಬರ್‍ಗೆ ಕರೆದೊಯ್ದ. ಬಾಬರನ ಸಮಾಧಿಯ ದರ್ಶನವನ್ನು ಪಡೆದದ್ದಲ್ಲದೇ ಅದರ ಸುತ್ತಮುತ್ತಲಿನ ಪ್ರಾಂಗಣವನ್ನು ಎಷ್ಟು ಶುದ್ಧವಾಗಿ ಇಟ್ಟಿದ್ದರೆಂದರೆ ನಾವು ಕಾಬೂಲಿನಲ್ಲಿಯೇ ಇದ್ದೇವೆಯೇ ಅನ್ನುವ ಅನುಮಾನ ಬರುವಷ್ಟು ಪರಿಸ್ಥಿತಿ ’ಸಾಮಾನ್ಯ’ದ್ದಾಗಿತ್ತು. ಆದರೆ ಆ ಪ್ರಂಗಣವನ್ನು ನಾವು ಪ್ರವೇಶಿಸಲು ವಿದೇಶೀಯರಾದ್ದರಿಂದ ಐದು ಡಾಲರ್ ತೆತ್ತಬೇಕಾಯಿತು. ಚಾಮರಾಜಪೇಟೆಯಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯನ್ನು ನೋಡಹೊರಟ ವಿದೇಶೀಯರಿಂದ ನಾವೂ ಇದೇ ರೀತಿಯ ಮೊಬಲಗನ್ನು ಕೀಳುವುದರಿಂದ ಇಲ್ಲಿ ಈ ಡಾಲರುಗಳನ್ನು ಕಟ್ಟುವುದರಲ್ಲಿ ಕಾವ್ಯನ್ಯಾಯವಿದೆ ಅನ್ನಿಸದಿರಲಿಲ್ಲ.
ಬಾಗ್-ಎ-ಬಾಬರಿನಿಂದ ಹಿಜ್ರತ್ ನಮ್ಮನ್ನು ಹಳೆಯ ನಗರದ ಮೂಲಕ ವಾಪಸ್ಸು ಕರೆತಂದ. ಅಲ್ಲಿನ ಪ್ರವಾಸೋದ್ಯಮವೂ ವಿಡಂಬನಾತ್ಮಕವಾಗಿಯೇ ಇದೆ. ಯಾಕೆಂದರೆ ರಸ್ತೆಯಲ್ಲಿ ಹೋಗುತ್ತಿದ್ದಂತೆ ನಾವುಗಳು ’ಅಲ್ಲಿನೋಡು ಆ ಕಟ್ಟಡ ವಿಧಾನ್ ಸೌಧ, ಇದು ಉಚ್ಚ ನ್ಯಾಯಾಲಯ’ ಎಂದು ತೋರಿಸುವ ಹಾಗೆಯೇ ’ಅಲ್ಲಿ ನೋಡು ಅದು ಸೆರೀನಾ ಹೋಟೇಲು, ಅಲ್ಲಿ ಆತಂಕವಾದಿಗಳು ದಾಳಿ ಮಾಡಿ ಅನೇಕ ಜನರನ್ನು ಕೊಂದರು. ಇದು ಭಾರತದಲ್ಲಿ ೨೬/೧೧ರ ಕಾಂಡಕ್ಕಿಂತ ಮುಂಚೆಯೇ ಆಗಿತ್ತು. ಇಲ್ಲಿನೋಡು, ಈ ಕಂದರ, ಮೊನ್ನೆ ಇಟಲಿ ದೇಶದ ಒಂದು ಕಾನ್ವಾಯ್ ಬರುತ್ತಿದ್ದಾಗ ಆದ ಆತ್ಮಘಾತಕ ಹಲ್ಲೆ ನಡೆದದ್ದು ಇಲ್ಲೇ’ ಅನ್ನುವಂತಹ ಮಾತುಗಳನ್ನು ಕೇಳಬೇಕು. ಅದೂ ಒಂದು ಅನುಭವವೇ.
೪೭ರ ಸ್ವಾತಂತ್ರ!
ಎಲ್ಲೆಲ್ಲೂ ಎಕೆ೪೭ ಸ್ಟೆನ್ ಗನ್ನುಗಳನ್ನು ಹೊತ್ತು ನಡೆವ ಜನ, ಸಾವಿರ ಡಾಲರುಗಳಿಗೆ ಬೇಕಿದ್ದರೆ ನಿನಗೂ ಒಂದು ಗನ್ ಕೊಡಿಸಿಕೊಡುತ್ತೇನೆಂದು ಚಟಾಕಿ ಹಾರಿಸುವ ಸ್ಥಳೀಯರ ನಡುವೆ ನಮ್ಮ ದಲಿತ ಕವಿ ಸಿದ್ಧಲಿಂಗಯ್ಯನವರು ವಿಚಿತ್ರವಾಗಿ ನೆನಪಾದರು. ಎಲ್ಲೆಲ್ಲೂ ಎಕೆ೪೭ ಗನ್ನು ಗಳನ್ನು ಕಂಡು ಯಾರಿಗೆ ಬಂತು ಯಾತಕೆ ಬಂತು ೪೭ರ ಸ್ವಾತಂತ್ರ? ಎಂದು ಕೇಳುವ ಹಾಗಾಯಿತು!!
ಗ್ರಾಂಡ್ ಎಕ್ಸಿಟ್
ಕಡೆಗೆ ಸಂಜೆಗೆ ಎಂ.ಒ.ಎಸ್.ನ ಅನುಮತಿಯಿಲ್ಲದ ಭಾರತೀಯ ದಿಲ್ಲಿ ದರ್ಬಾರ್ ಅನ್ನುವ ರೆಸ್ಟಾರೆಂಟಿನಲ್ಲಿ ಮನಮೋಹನ್ ಸಿಂಗ್ ಮತ್ತು ಕರ್ಜಾಯಿಯ ಚಿತ್ರದ ಆಶೀರ್ವಾದದಡಿಯಲ್ಲಿ, ಲಾಂಗ್ ಲಿವ್ ಇಂಡೋ ಆಫ್ಘನ್ ಫ್ರಂಡ್‌ಶಿಪ್ ಅನ್ನುವ ಅಕ್ಷರಗಳಡಿಯಲ್ಲಿ ಊಟ ಮಾಡಿದೆವು. ಬರುತ್ತಾ ದಾರಿಯಲ್ಲಿ ಕಂಡ ಸೆಂಟ್ರಲ್ ಪಾರ್ಕ್ ಸಿನೇಮಾ ಹಾಲಿನಲ್ಲಿ ಅಜಯ್ ದೇವಗನ್‍ನ ದಿಲ್ ಜಲೆ ಚಿತ್ರ ಆಡುತ್ತಿತ್ತು. ಹಿಂದಿನ ಬಾರಿ ಬಂದಾಗ ಬಾಬಿ ದೇವಲ್‍ನ ಬಾದಲ್ ಸಿನೇಮಾ ಆಡುತ್ತಿತ್ತು. ಜನ ಈಗಲೂ ಅಫಘಾನಿಸ್ಥಾನದ ಹಿನ್ನೆಲೆಯಲ್ಲಿ ಅಮಿತಾಭ್ ನಟಿಸಿದ್ದ ಖುದಾ ಗವಾ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ. ನನಗೆ ಆ ಜನರ ನಡುವೆ ಕೂತು ನಮ್ಮ ಸಿನೇಮಾ ನೋಡುವ ಆಸೆಯಿತ್ತಾದರೂ ಅದಕ್ಕೆ ಅನುಮತಿ ದೊರೆಯುವುದಿಲ್ಲ ಎಂದು ತಿಳಿದಿದ್ದರಿಂದ ಸುಮ್ಮನಿದ್ದೆ.
ಬೆಳಿಗ್ಗೆ ಎದ್ದು ಪ್ರಯಾಣ ಬೆಳೆಸಬೇಕಿತ್ತು. ಏರ್‌ಪೋರ್ಟಿನಲ್ಲಿ ನನ್ನ ಸೂಟ್‍ಕೇಸ್ ತೆಗೆದು ಎಲ್ಲವನ್ನೊ ಹಣಕಿ ನೋಡಿದ ಪೋಲೀಸಿನವ ’ಹಿಂದೂಸ್ತಾನ್?’ ಅಂದ. ಹೌದೆಂದು ಗೋಣುಹಾಕಿದೆ. ನನ್ನಬಳಿ ಯಾವುದಾದರೂ ವಿಸಿಡಿ ಇದೇಯೇ ಎಂದು ಕೇಳಿದ. ಇಲ್ಲವೆಂದಾಗ ಅವನ ನಿರಾಶೆ ಕಾಣುತ್ತಿತ್ತು. ಮತ್ತೊಮ್ಮೆ ಹೋದರೆ ಘನಿಗೆ ರಫಿಯ ಸಿಡಿಗಳನ್ನೂ ಒಂದಿಷ್ಟು ಹಳೆಯ ಹಿಂದಿ ಸಿನೆಮಾಗಳನ್ನೂ ಒಯ್ಯಬೇಕೆಂದು ನಿರ್ಧಾರ ಮಾಡಿದೆ. ಆದರೆ ಇಲ್ಲಿಗೆ ಬಂದಕೂಡಲೇ ಭಾರತೀಯ ದೂತಾವಾಸದ ಮೇಲೆ ದಾಳಿಯ ಪ್ರಯತ್ನ ನಡೆಯಿತು. ಭಾರತದಲ್ಲಿದ್ದ ಗೆಳೆಯರು ನಾವು ಸುರಕ್ಷಿತವಾಗಿ ವಾಪಸ್ಸಾದೆನೇ ಎಂದು ಕೇಳಿ ಸಂದೇಶ ಕಳಿಸಿದರೆ, ಅಲ್ಲಿ ಮಾತ್ರ ಗೆಳೆಯ ಮಾಧವನ್ ’ನೀನು ಮುಂದಿನ ಬಾರಿ ಬಂದಾಗ ಈ ಸ್ಫೋಟದ ಸ್ಪಾಟನ್ನು ತೋರಿಸುತ್ತೇನೆ’ ಎಂದು ಕಾಬೂಲಿನಿಂದ ಮೆಸೇಜ್ ಕಳಿಸಿದ. ಪ್ರವೇಶದ ಸಮಯದಲ್ಲಿ ನೀಡಿದ ನನ್ನ ರಿಜಿಸ್ಟ್ರೇಷನ್ ಕಾರ್ಡನ್ನು ಯಾರು ಹಿಂದಕ್ಕೆ ಪಡೆಯಲಿಲ್ಲ. ಇದೇ ಜನ, ಒಂದೆಡೆ ರಫಿ, ಅಮಿತಾಭ್ ಹೆಸರಿನಲ್ಲಿ ಭರಪೂರ ಪ್ರೀತಿ. ಅದೇ ದೇಶದ ಇತರ ಜನ: ಅವರಿಗೆ ತಡೆಯಲಾಗದ ಆತ್ಮಘಾತುಕ ದ್ವೇಷ. ವಿಪರ್ಯಾಸಗಳ ಬೀಡು ಈ ದೇಶ.
ಅಕ್ಟೋಬರ್ ೨೦೦೯