ಯಕ್ಷ ಪ್ರಶ್ನೆ


ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ. ಸ್ಥಳೀಯ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿತ್ತು. ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ ನಡೆಯುತ್ತಿತ್ತು. ಅಲ್ಲಿನ ಸ್ಥಳೀಯ ಕಲಾವಂತಿಕೆಯ ನಡುವೆ ಈ ತಂತ್ರಜ್ಞಾನ ಎಲ್ಲಿಂದಲೋ ಟಪಕಾಯಿಸಿದಂತಿತ್ತು. ಬಟ್ಟೆಗಳ ಮೇಲಿನ ಕಸೂತಿ, ಅಜ್ರಕ್ ಪ್ರಿಂಟ್ಸ್, ರೋಗನ್ ಕಲೆ, ಬಾಂದಣಿಯ ತವರೂರಾದ ಕಛ್ ನಲ್ಲಿ ಈ ರೀತಿಯ ತಂತ್ರಗಾರಿಕೆಗೆ ತಾವೆಲ್ಲಿ ಅನ್ನಿಸುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ – ಮುಖ್ಯವಾಗಿ ಭೂಕಂಪದ ನಂತರ ಕಛ್ ಮೂಲಭೂತವಾಗಿ ಬದಲಾಗಿಬಿಟ್ಟಿದೆ. ಅದರಲ್ಲಿ ಮೋದಿಯ ವಿಕಾಸದ ಬೀಜಮಂತ್ರವೂ ಸೇರಿದೆ ಅನ್ನಿಸುತ್ತದೆ. ಆಪ್ತವಾಗಿ ತೋರುತ್ತಿದ್ದ ಇಲಾರ್ಕ್ ಹೋಟೇಲಿನಲ್ಲಿ ಮೊದಲೆರಡು ದಿನಗಳ ಕಾಲ ಮಾತ್ರ ರೂಮು ಲಭ್ಯ, ನಂತರ ಹೋಟೇಲಿನಲ್ಲಿ ಒಂದೂ ಕೋಣೆ ಖಾಲಿಯಿಲ್ಲ ಎನ್ನುವ ಕಥೆಯನ್ನು ನಾನು ಕಛ್ಛಿನಲ್ಲಿ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೆ ರಣ್ ಉತ್ಸವ, ಇತ್ಯಾದಿ ಟೂರಿಸಂ ಪ್ಯಾಕೇಜುಗಳನ್ನು ಮಾರಾಟ ಮಾಡುವುದರಿಂದ ಸ್ಥಳೀಯ ಆರ್ಥಿಕತೆ ಉದ್ಧಾರವಾಗುತ್ತಿದೆಯಂತೆ. ಇರಲಿ.

ನಾಲ್ಕು ದಿನಗಳ ಭುಜ್ ಯಾತ್ರೆ ನಡೆಸಿ ನಾನು ಚತುರ್ ಭುಚ್ ಆದೆ! ಮೊದಲ ದಿನ ಸಂಜೆ ನಗರದಲ್ಲಿಯೇ ಅಡ್ಡಾಡಿ, ಹಳೆಯ ಶಿವಾಲಯದ ದರ್ಶನ ಮಾಡಿಕೊಂಡದ್ದಾಯಿತು. ನನ್ನ ಅತಿಥೇಯಳಾಗಿದ್ದ ಮೀರಾಳಿಗೆ ನನ್ನನ್ನು ಬೋರಾಗದಂತೆ ನೋಡಿಕೊಳ್ಳುವ ತುರ್ತು ಇತ್ತೆಂದು ಕಾಣಿಸುತ್ತದೆ. ಹೀಗಾಗಿಯೇ ಶಿವಾಲಯವನ್ನು ಆಯ್ದಳು. ದೇವರಲ್ಲಿ ನಂಬುಗೆಯಿಲ್ಲದ ನನಗೆ ಹೀಗೆ ಆಗಾಗ ದೇವರ ದರ್ಶನವಾಗುವ ಸಂದರ್ಭಗಳು ಒದುಗುವುದರ ಹಿಂದಿರುವ ಹುನ್ನಾರ ಏನೋ ತಿಳಿಯದು! ಹಳೆಯ ಶಿವಾಲಯದ ಪಕ್ಕವೇ ಒಂದು ಭವ್ಯ ಸ್ವಾಮಿನಾರಾಯಣ ಮಂದಿರ. ಭಕ್ತಿಗೂ ದೇವರುಗಳಿಗೂ ತಮ್ಮದೇ ನಸೀಬುಗಳಿರುತ್ತವೆ. ಈಗ ಸ್ವಾಮಿನಾರಾಯಣನ ಭವ್ಯತೆಯ ಕಾಲ. ಶಿವದರ್ಶನದ ನಂತರ ಊಟಕ್ಕೆ ಗುಜರಾತೀ ಥಾಲಿ. ಇನ್ನೂರು ರೂಪಾಯಿ ಸಂದಾಯ ಮಾಡಿದರೆ ತಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಕಟೋರಿಗಳು.. ಲೆಕ್ಕತಪ್ಪುವಷ್ಟು ಪದಾರ್ಥಗಳು.

ಮಾರನೆಯ ದಿನದ ವಾಕಿಂಗಿಗೆ ಊರಿನ ಹೊರವಲಯಕ್ಕೆ ಹೋದದ್ದಾಯಿತು. ಪ್ರತೀಹಬಾರಿ ವಾಕ್ ಹೋದಾಗಲೂ ನಗರದ ಒಂದು ಹೊಸ ಪ್ರಾಂತವನ್ನು ತೋರಿಸುವ ಆಕೆಯ ಉತ್ಸಾಹವನ್ನು ನಾನು ಮೆಚ್ಚಿದೆ. ಈ ದಿನ ನಿನಗೆ ಸೌಥ್ ಇಂಡಿಯನ್ ಡೋಸಾ ತಿನ್ನಿಸುತ್ತೇನೆ ಎಂದು ಮೀರಾ ಹೆದರಿಸಿದ್ದಳು. ಅಲ್ಲಿನ ಸಂಕಲ್ಪ್ ಎನ್ನುವ ಖಾನಾವಳಿಯಲ್ಲಿ ಸುಮಾರು ಉತ್ತಮವೆನ್ನಿಸಬಹುದಾದ ದಕ್ಷಿಣ ಭಾರತೀಯ ತಿಂಡಿಗಳು ದೊರೆಯುತ್ತವೆ. ಆದರೆ ಬೆಂಗಳೂರಿನಿಂದ ಭುಜ್ ಗೆ ಹೋಗಿ ದಕ್ಷಿಣ ಭಾರತೀಯ ಊಟ ಮಾಡಿ ಬರುವುದಕ್ಕಿಂತ ಇನ್ನೇನಾದರೂ ತಿನ್ನಬಹುದೇನೋ ಎಂದು ನನಗನ್ನಿಸಿತ್ತು. ಅವಳಿಗೆ ನನ್ನ ವಿಚಾರದ ಲಹರಿಗಳು ಹೇಗೆ ತಟ್ಟಿದವೋ ತಿಳಿಯದು. ಆದರೆ ಇದ್ದಕ್ಕಿದ್ದ ಹಾಗೆ "ಈ ದಿನ ಜಖ್ ಮಂದಿರದಲ್ಲಿ ಊಟ ಹಾಕಿಸುತ್ತೇನೆ" ಅಂದಳು.

ನ್ಯಾಷನಲ್ ಕಾಲೇಜಿನ ಎದುರು ಭಾಗದಲ್ಲಿ ಇದ್ದಿ ಶ್ರೀವೇಣುಗೋಪಾಲಕೃಷ್ಣ ಆನಂದ ಭವನ ಇದ್ದಹಾಗೆಯೇ ಈ ಜಖ್ ಮಂದಿರ ಎಂದಕೊಂಡು ಸಂತೋಷದಿಂದ ಒಪ್ಪಿದೆ. ವಾಕಿಂಗಿಗೆಂದು ಸ್ನೀಕರ್ ಷೂ ಹಾಕಿ ನಡೆಯುತ್ತಿದ್ದ ನನಗೆ ಆ ಷೂಸನ್ನು ಬಿಚ್ಚಬೇಕಾಗಬಹುದು ಎನ್ನುವ ಗುಮಾನಿಯಿದ್ದಿದ್ದರೆ ಬೇಡವೆನ್ನುತ್ತಿದ್ದೆನೇನೋ. ಊಟಕ್ಕೆ ಮುನ್ನ ಷೂ ಬಿಚ್ಚುವುದು ಸಾಕ್ಸನ್ನು ಬಿಚ್ಚಬೇಕೋ ಬೇಡವೋ ಅನ್ನುವ ದ್ವಂದ್ವಕ್ಕೊಳಗಾಗುವುದು ನನಗೆ ಪ್ರಿಯವಾದ ಕೆಲಸವೇನೂ ಅಲ್ಲ. ಆದರೆ ನನ್ನ ಒಪ್ಪಿಗೆ ಈಗಾಗಲೇ ನೀಡಿದ್ದರಿಂದ ಎರಡನ್ನು ಕಳಚಿದ್ದಾಯಿತು.

ಜಖ್ ಮಂದಿರ ಹೋಟೇಲಿನಂತಿರಲಿಲ್ಲ. ಬದಲಿಗೆ ಒಂದು ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಊಟ ಮಾಡುತ್ತಿರುವಂತೆ ಅನ್ನಿಸಿತು. ಸಾತ್ವಿಕವಾದ ರುಚಿಕರ ಊಟ. ಎರಡೇ ಕಟೋರಿಗಳು. ಥಾಲಿಗೆ ಕೊಟ್ಟ ಇನ್ನೂರು ರೂಪಾಯಿಯ ಮೊಬಲಗಿಗೆ ಇಲ್ಲಿ ನಾಲ್ಕು ಜನ ಉಣ್ಣಬಹುದಿತ್ತು. ತಲಾ ಐವತ್ತು ರೂಪಾಯಿ ನೀಡಿ ನಾವು ತೃಪ್ತಿಯಿಂದ ಹೊರಬಂದೆವು. ನಾನು ಮತ್ತೆ ಸಾಕ್ಸನ್ನೂ ಷೂವನ್ನೂ ಧರಿಸಿದೆ. ಧರಿಸುತ್ತಾ ಇರುವಾಗ ಈ ಜಾಗದ ಕಥೆಯೇನೆಂದು ಮೀರಾಳನ್ನು ಕೇಳಿದೆ.

ಅದು ಮೂಲತಃ ಒಂದು ಮಂದಿರ. ಊಟದ ವ್ಯವಸ್ಥೆ ಮಂದಿರಕ್ಕೆ ಸಂಬಂಧಿಸಿದ್ದು. ಷೂ ಧರಿಸಿದಾಕ್ಷಣ "ಬಾ ಮಂದಿರವನ್ನೂ ನೋಡುವಿಯಂತೆ" ಎಂದು ಮೀರಾ ನನ್ನ ದೇವದರ್ಶನದ ಕೆಲಸವನ್ನು ಮುಂದುವರೆಸಿದಳು. ಮತ್ತೆ ಷೂಸು, ಸಾಕ್ಸು ಬಿಚ್ಚಿದೆ...
ಮಂದಿರದಲ್ಲಿ ನನಗೆ ಕಂಡದ್ದೇನು? ಒಂದಲ್ಲ, ಎರಡಲ್ಲ.. ಒಟ್ಟು 72 ಅಶ್ವಾರೂಢ ದೇವತೆಗಳು. ಅವರಲ್ಲಿ 71 ಪುರುಷ ದೇವತೆಗಳು ಅನೇಕರು ಮೀಸೆ ಹೊತ್ತಿದ್ದರು.ಏಕೈಕ ಮಹಿಳಾ ದೇವತೆ, ಮತ್ತೂ ಆಕೆಯೂ ಕುದುರೆಯನ್ನೇರಿ ಕುಳಿತಿದ್ದಳು. ಒಂದು ಮಂದಿರದಲ್ಲಿ ಸಾಲಾಗಿ ಆರಾಧಿಸುವ 72 ಪ್ರತಿಮೆಗಳನ್ನು ನಾನು ನೋಡಿದ್ದು ಇದೇ ಮೊದಲ ಬಾರಿ. ಭುಜ್ ನ ಈ ಮಂದಿರವಲ್ಲದೇ ನಖತಾಣಾದಲ್ಲಿ ಮತ್ತು ಜಖಾವು ಗ್ರಾಮದ ಕಕ್ಕಡಬಿಟ್ ಬೆಟ್ಟದ ಮೇಲೆಯೂ ಇಂಥದೊಂದು ಮಂದಿರವಿದೆಯಂತೆ. ಸದ್ಯಕ್ಕೆ ಕಕ್ಕಡಬಿಟ್ ಬೆಟ್ಟದ ಮೇಲಿನ ಮಂದಿರದ ಮರಮ್ಮತ್ತು ನಡೆಯುತ್ತಿದೆ. ಅದಕ್ಕೆ ಚಂದಾ ಕೂಡಾ ಇಲ್ಲಿಯೇ ನೀಡಬಹುದು ಎಂದು ಪೂಜಾರಪ್ಪ ಹೇಳಿದರು.

ಒಂದೇ ಜಾಗದಲ್ಲಿ ಎಪ್ಪತ್ತೆರಡು ಅಶ್ವಾರೂಢ ದೇವತೆಗಳ ಕಥೆಯೇನು? ಅಲ್ಲಿನ ಪೂಜಾರಪ್ಪನನ್ನು ಕೇಳಿದಾಗ ಆತ ಹೇಳಿದ ಕಥೆ ಹೀಗಿತ್ತು "ಅನಾದಿ ಕಾಲದಲ್ಲಿ ಇಲ್ಲಿನ ಜನರಿಗೆ ಸಿಂಧಿನ ಮುಸಲ್ಮಾನ ಆಕ್ರಮಣಕಾರರು ತಡೆಯಲಾಗದ ಹಿಂಸೆ ಕೊಡುತ್ತಿದ್ದರು. ಆಗಿನ ಕಾಲಕ್ಕೆ ಶಿವನ ಜಟೆಯಿಂದ ಹರಿದ ನೀರನ ಜೊತೆ ಬಂದ 72 ಯಕ್ಷಿಗಳು ಜನತೆಯನ್ನು ಆ ಆಕ್ರಮಣಕಾರರಿಂದ ರಕ್ಷಿಸಿದರು. ಹೀಗಾಗಿ ಆ ಯಕ್ಷಿಗಳ ಗೌರವಾರ್ಥ ಈ ಮಂದಿರವನ್ನು ನಿರ್ಮಿಸಲಾಗಿದೆ. ಯಕ್ಷಮಂದಿರ ಅಪಭ್ರಂಶಗೊಂಡು ಜಖ್ ಮಂದಿರ್ ಆಗಿದೆ".

ಹೊರಬಂದುತ್ತಿದ್ದಂತೆ ಮೀರಾ ಹೇಳಿದಳು - "ಇದು ಈಚೆಗೆ ಹುಟ್ಟಿಕೊಂಡಿರುವ ಕಥೆ. ಚರಿತ್ರೆಯ ಪುಸ್ತಕಗಳನ್ನ ಸಿಗುವ ಕಥೆಯೇ ಬೇರೆ." ಸರಿ, ಕುತೂಹಲದಿಂದ ನಾನು ಮೊದಲಿಗೆ ಕಂಪ್ಯೂಟರಿನಲ್ಲಿ ಗೂಗಲ್ ದೇವರಿಗೆ ಆದಿಪೂಜೆ ಸಲ್ಲಿಸಿದೆ. ವಿಕಿಪೀಡಿಯಾರಾಧನೆ ಮಾಡಿದೆ. ನಂತರ ಎರಡು ಪುಸ್ತಕಗಳಲ್ಲಿ ಇದ್ದ ಈ ಕಥೆಯ ಉಲ್ಲೇಖವನ್ನೂ ನೋಡಿದೆ. ಒಟ್ಟಾರೆ ಕಥೆ ಇಂತಿದೆ – ಪುನ್ ವ್ರೋ ಎನ್ನುವ ರಾಕ್ಷಸೀ ಪ್ರವೃತ್ತಿಯ ರಾಜನ ಕಾಲದಲ್ಲಿ ಈ ಜನ ಜಖಾವು ಗ್ರಾಮದ ದಂಡೆಗೆ ಬಂದಿಳಿದರಂತೆ. ಅವರ ಹಡಗು ಮುಳುಗಿತ್ತು ಎನ್ನುವ ಪ್ರತೀತಿಯಿದೆ. ಜಖಾವಿಗೆ ಬಂದದ್ದರಿಂದ ಇವರು ಜಖ್ಖರಾದರು. ಹಲವು ಮೂಲದ ಕಥೆಯ ಪ್ರಕಾರ ಅವರಿಗೆ ತುಸು ವೈದ್ಯ ಗೊತ್ತಿದ್ದು ಜನರನ್ನು ಗುಣ ಮಾಡುತ್ತಿದ್ದರಂತೆ. ಹೀಗಾಗಿ ಅವರುಗಳ ಜನಪ್ರಿಯತೆ ಹೆಚ್ಚಿತು. ಮಕ್ಕಳಾಗದ ದಂಪತಿಗಳಿಗೆ ಮಕ್ಕಳನ್ನು ದಯಪಾಲಿಸುವ ಜಾದೂ ಅವರಲ್ಲಿತ್ತು ಅನ್ನುವ ಕಥೆಯೂ ಇದೆ. ಹೀಗಾಗಿ ಈಗಲೂ ಮಕ್ಕಳಿಗೆಂದು ಜಖ್ ಮಂದಿರದಲ್ಲಿ ಹರಕೆ ಹೊತ್ತು ಪೂಜಿಸುವವರು ಕಾಣಸಿಗುತ್ತಾರೆ. ಈ ಜಖ್ಖರು ಪುನ್ ವ್ರೋನನ್ನು ತೋಪಿನಿಂದ ಉಡಾಯಿಸಿ ಸ್ಥಳೀಯರನ್ನು ರಕ್ಷಿಸಿದರು ಅನ್ನುವ ಕಥೆಯೂ ಇದೆ. ಹೀಗಾಗಿ ಅವರುಗಳು ಸ್ಥಳೀಯರ ದೃಷ್ಟಿಯಲ್ಲಿ ದೈವಸಮಾನರಾಗುವ ಅರ್ಹತೆಯನ್ನು ಪಡೆದಿದ್ದರು.

ಒಂದು ಉಪಕತೆಯ ಪ್ರಕಾರ ಪುನ್ ವ್ರೋನ ರಾಣಿ ಇವರುಗಳ ಮೇಲೆ ಸೇಡುತೀರಿಸಿಕೊಳ್ಳಲೆಂದೇ ಎಲ್ಲರನ್ನೂ ಉಡಾಯಿಸಿದಳು. ಹೀಗಾಗಿಯೇ ಅವರಿಗೆ ಹುತಾತ್ಮರ ಪಟ್ಟಿಯೂ ಬಂದು ಆ ನೆನಪಿನಲ್ಲಿ ಮಂದಿರವನ್ನು ಕಟ್ಟಲಾಯಿತು ಎನ್ನುವ ಪ್ರತೀತಿಯೂ ಇದೆ.

ಯಕ್ಷಿಗಳು ಜಖ್ಖರಾಗಿ ಅಪಭ್ರಂಶಗೊಳ್ಳಲು ಕಾರಣವಿದೆಯೇ? ಈ ಜಾಗದಲ್ಲಿ ಯ ಕಾರವನ್ನು ಜ ಕಾರವಾಗಿ ಪರಿವರ್ತಿಸುವ ಪರಿಪಾಠ ಕಂಡಿಲ್ಲ. ಅದು ಇದ್ದಿದ್ದರೆ ಜಖ್ಖರನ್ನು ಜಕ್ಷಿಗಳನ್ನಾಗಿ ಅಪಭ್ರಂಶಗೊಳಿಸಬೇಕಿತ್ತೇ ವಿನಃ ಯಕ್ಷಿಗಳಾಗುವ ಸಾಧ್ಯತೆಯಿರಲಿಲ್ಲ. ಹೌದು, ಕೆಲವಾರು ಹೆಸರುಗಳನ್ನು ಜ ಕಾರದಿಂದ ಉಚ್ಚರಿಸುವುದುಂಟು. ಜಶೋಧಾ, ಜಸವಂತ, ಇಂಥ ಹೆಸರುಗಳನ್ನು ನಾವು ಕಾಣಬಹುದು. ಆದರೆ ಅದೇಕಾಲಕ್ಕೆ ಯಕಾರದ ಯಶ್, ಯತೀಶ್ ಎನ್ನುವಂಥಹ ಹೆಸರುಗಳೂ ಈ ಪ್ರಾಂತದಲ್ಲಿವೆ.

ಇಲ್ಲಿ ಮತ್ತೊಂದು ಕುತೂಹಲದ ವಿಷಯ ಆ ಮಹಿಳೆಯ ಬಗೆಗಿನದು. ಇಷ್ಟೊಂದು ಗಂಡಸರ ನಡುವೆ ಈ ಏಕೈಕ ಮಹಿಳೆ ಹೇಗೆ, ಯಾಕೆ, ಎಲ್ಲಿಂದ ಬಂದಳು ಎನ್ನವುದು. ಆಕೆ ಜಖ್ಖರ ಸಹೋದರಿ ಅನ್ನುವ ಪ್ರತೀತಿಯಿದೆ. ಆದರೆ ಅದಕ್ಕಿಂತ ಹೆಚ್ಚಿನ ವಿವರ ನಮಗೆ ಸಿಗುವುದಿಲ್ಲ. ಆಕೆಗೂ ಒಂದು ಕುದುರೆಯಿದೆ. ಎಲ್ಲ ಜಖ್ಖರಿಗೂ ಮೀಸೆ ಇದೆಯೆಂದೇನೂ ಅಲ್ಲ. ಎಲ್ಲರ ಹಣೆಗೂ ತಿಲಕ ತಿದ್ದಿರುವುದರಿಂದ ಆಕೆಯನ್ನು ಆ ಎಪ್ಪತ್ತೆರಡರ ಗುಂಪಿನಲ್ಲಿ ಕಂಡುಹಿಡಿಯುವುದು ಕಷ್ಟವೇ ಆಯಿತು. ಹಿಂದಿನ ಸಾಲಿನಲ್ಲಿ ಎಡಬದಿಯಿಂದ ನಾಲ್ಕನೇ ಸ್ಥಾನದಲ್ಲಿ ಆಕೆಯ ಪ್ರತಿಮೆಯಿದೆ ಎಂದು ಮಾದಾಪುರದ ಪೂಜಾರಪ್ಪ ಹೇಳಿದ.
ತುರ್ಕಿ, ಇರಾನ್, ಗ್ರೀಸ್ ಮತ್ತು ಡಚ್ಚರ ಕಡೆಯಿಂದ ಬಂದಿರಬಹುದಾದ ಈ ಜಖ್ಖರು ಈಗ ಕುದುರೆಯೇರಿ ಖಡ್ಗ ಹಿಡಿದ ರಾಜಪೂತರಂತೆ ಕಾಣಿಸುತ್ತಾರೆ. ಮುಳುಗಿದ ಹಡಗಿನಿಂದ ಬಚಾವಾಗಿ ಜಖಾವು ಕಡಲಿಗೆ ಬಂದರೆನ್ನಲಾದ ಈ ಕಥನ ಈಗಿನ ತೋಂಡಿಯಲ್ಲಿ ತಲೆಕೆಳಗಾಗುತ್ತಿರುವುದನ್ನು ವೆಂಡಿ ಡೋನಿಗರ್ ಎಂಬ ಪಂಡಿತೆ ಚರ್ಚಿಸುತ್ತಾಳೆ. ಜಖ್ಖರು ಮೊದಲಿಗೆ ವಿದೇಶೀಯರು. ಜೊತೆಗೆ ಅವರುಗಳು - ಫಾರ್ಸಿಗಳು, ಗ್ರೀಕರು, ಮುಸಲ್ಮಾನರು, ಕ್ರೈಸ್ತರಾಗಿರಬಹುದಾದರೂ ಅವರು ಹಿಂದೂಗಳಾಗುವುದಕ್ಕೇ ಸಾಧ್ಯವೇ ಇಲ್ಲವಾಗಿದೆ. ಅವರನ್ನು ಶಿವನ ಜಟೆಯಿಂದ ಇಳಿಸಿ ದುಷ್ಟ ಇಸ್ಲಾಮೀ ಆಕ್ರಮಣಕಾರರ ವಿರುದ್ಧ ಕುದುರೆಯೇರಿ ತಿಲಕ ಧರಿಸಿ ರಾಜಪೂತರಂತೆ ಯುದ್ಧ ಮಾಡಿದರೆನ್ನಲಾದ ಕಥೆಯ ಹೊಸ ತಿರುವು, ಮತ್ತು ಅದರ ಪುಸರಾವೃತ್ತಿಯಿಂದ ಕಟ್ಟುತ್ತಿರುವ ಹೊಸ ಚರಿತ್ರೆ ಮಾತ್ರ ಕುತೂಹಲಪೂರ್ಣವಾಗಿದೆ.


ಯಾವುದೇನೇ ಇರಲಿ, ಕಾಲಾಂತರದಿಂದ ಜಖ್ಖರಿಗೆ ಹಿಂದೂ ಪದ್ಧತಿಯಲ್ಲಿ ಪೂಜೆ, ಪುನಸ್ಕಾರ, ಮಂದಿರ ನಿರ್ಮಾಣ, ಅನ್ನ ಸಂತರ್ಪಣೆಗಳು ನಡೆಯುತ್ತಲೇ ಇವೆ. ಅತಿಥಿಗಳನ್ನ ನಮ್ಮವರನ್ನಾಗಿಸಿಕೊಳ್ಳುವ ಆತ್ಮೀಯ ಪರಿ ಒಂದೆಡೆ ಕಂಡು ನಮ್ಮ ಸಂಸ್ಕೃತಿಯ ಬಗ್ಗೆ ಹಮ್ಮೆ ಪಟ್ಟುಕೊಳ್ಳುತ್ತಲೇ, ಚರಿತ್ರೆಯನ್ನು ತಲೆಕೆಳಗಾಗಿಸುವ ಪ್ರವೃತ್ತಿಯ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಜಖ್ಖರ ನೆನಪಿನಲ್ಲಿ ಶುದ್ಧ ಸಸ್ಯಾಹಾರಿ ಭೋಜನವಂತೂ 50 ರೂಪಾಯಿಗಳಿಗೋ ನನಗೆ ಭುಜ್ ನಲ್ಲಿ ಸಿಕ್ಕಿತು.
ಕಾಬೂಲಿವಾಲಾನ ಕಥಾನಕ

ಕಾಬೂಲಿಗೆ ಕೆಲಸದ ಮೇಲೆ ಹೋಗಬೇಕು ಅನ್ನುವ ಮಾತು ಬಂದ ಕೂಡಲೇ ನನಗೆ ಎಲ್ಲೆಡೆಯಿಂದಲೂ ಎಲ್ಲ ರೀತಿಯ ಉಪದೇಶಗಳು ಬರತೊಡಗಿದುವು. ಮೂಲಭೂತವಾಗಿ ಎಲ್ಲರೂ ಹೇಳಿದ್ದು ಇಷ್ಟೇ - ಅಲ್ಲಿಗೆ ಹೋಗುವುದು ತುಂಬಾ ಅಪಾಯದಿಂದ ಕೂಡಿದ್ದು, ಯಾವಾಗ ಏನುಬೇಕಾದರೂ ಆಗಬಹುದು. ಹೀಗಿದ್ದರೂ ಕಳೆದ ನಾಲ್ಕುತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿಬಂದಿರುವೆ. ಮೊದಲ ಯಾತ್ರೆ ನಡೆದಾಗ ಅಲ್ಲಿನ ಚುನಾವಣೆಯ ತಯಾರಿ ನಡೆದಿತ್ತು. ಎರಡನೆಯ ಯಾತ್ರೆಯ ಸಮಯಕ್ಕೆ ಆ ಚುನಾವಣೆಯ ಫಲಿತಾಂಶ ಬರಬಹುದೆನ್ನುವ ಸುದ್ದಿಯಿತ್ತಾದರೂ, ಚುನಾವಣೆಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕಾರಣವಾಗಿ ತನಿಖೆ ಇನ್ನೂ ನಡೆಯುತ್ತಿದೆ.

ಸ್ವಾಗತ

ಮೊದಲ ಬಾರಿ ಹೋಗುವುದಕ್ಕೆ ಕೆಲ ದಿನ ಮೊದಲು ಕಾಬೂಲ್ ವಿಮಾನಾಶ್ರಯದ ಮೇಲೆ ರಾಕೆಟ್ ದಾಳಿಯ ಪ್ರಯತ್ನ ನಡೆದು ಗುರಿತಪ್ಪಿತ್ತು ಎಂದು ಸುದ್ದಿ ಬಂತು. ಆ ದಾಳಿಯ ನಂತರ ಅಲ್ಲಿಗೆ ನನ್ನನ್ನು ಸ್ವಾಗತಿಸುತ್ತ ಗೆಳೆಯನೊಬ್ಬ ತನಗೆ ತಮ್ಮ ಸಂಸ್ಥೆಯ ಸುರಕ್ಷಾ ವಿಭಾಗದವರು ಕಳಿಸಿದ್ದ ಒಂದು ಈ-ಮೆಯಿಲನ್ನು ಕಳಿಸಿಕೊಟ್ಟ. ಅವನು ಕಳಿಸಿದ್ದ ಪತ್ರದಲ್ಲಿ ಇದ್ದ ಮಾತುಗಳು ಹೀಗಿದ್ದುವು:

"ಮಹಿಳೆಯರೆ ಮತ್ತು ಮಹನೀಯರೆ

ದೇಶದ ರಾಜಧಾನಿಯ ಸುರಕ್ಷಾಪರಿಸ್ಥಿತಿಯ ಬಗ್ಗೆ ಈ ಸಂದೇಶ ಕಳಿಸುತ್ತಿದ್ದೇನೆ.

ನಿನ್ನೆಯ ದಿನ ಕಾಬೂಲಿನಲ್ಲಿ ನಡೆದ [ಈಚೆಗೆ ಸಾಮಾನ್ಯವಾಗುತ್ತಿರುವ] ರಾಕೆಟ್ ಧಾಳಿಯ ನಂತರ, ಜೀವನ ಗಂಭೀರ ಮೌನದ "ಸಾಮಾನ್ಯ ಸ್ಥಿತಿ"ಗೆ ಮರಳಿದೆ. ನಾನು ಹೇಳಿದಂತೆ ರಾಜಧಾನಿಯ ಮೇಲೆ ರಾಕೆಟ್ ಧಾಳಿ ಅಸಾಮಾನ್ಯವೇನೂ ಅಲ್ಲ. ಇದು ಆಗಾಗ ನಡೆಯುತ್ತಿರುವ ಘಟನೆಯೇ ಆಗಿದೆಯಾದರೂ, ಈ ಬಾರಿ ಒಂದೇ ಸಮಯಕ್ಕೆ ಅನೇಕ ರಾಕೆಟ್‌ಗಳ ಧಾಳಿ ನಡೆದು ಅದು ನಗರಪ್ರದೇಶದ ಒಳಭಾಗವನ್ನೂ ಪ್ರವೇಶಿಸಿತು. ಆತಂಕವಾದಿಗಳ ಈ ಧಾಳಿ ಸಾಮಾನ್ಯತಃ ತಮ್ಮ ಗುರಿಯನ್ನು ತಪ್ಪುವುದನ್ನೂ ನಾವು ಕಂಡಿದ್ದೇವೆ. ಇದಲ್ಲದೇ ಅವರ ಈಚಿನ ಧಾಳಿಗಳು ಯಾವುದೇ ನಷ್ಟವನ್ನು ಮಾಡಲಲ್ಲದೇ, ಬರೇ ಭೀತಿಯನ್ನು ಹಬ್ಬಿಸಲಷ್ಟೇ ಕೈಗೊಳ್ಳುತ್ತಿರುವಂತೆ ಅನ್ನಿಸುತ್ತದೆ.

ಈ ಬಾರಿ ಸಾಮಾನ್ಯವಾಗಿ ಉಪಯೋಗಿಸುವ ಒಂದೋ ಎರಡೋ ರಾಕೆಟ್ಟುಗಳಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್ಟುಗಳ ಧಾಳಿಯನ್ನು ಮಾಡಿ ತಮ್ಮ ಬಳಿ ಈ ಆಯುಧಗಳ ದಾಸ್ತಾನು ಇದೆಯೆನ್ನುವುದನ್ನು ಆತಂಕವಾದಿಗಳು ಸಾಬೀತು ಪಡಿಸಿ ನಮ್ಮ ಮನಸ್ಸಿನಲ್ಲಿ ಭಯವನ್ನೂ ಶಂಕೆಯನ್ನೂ ಉಂಟುಮಾಡುವ ಉದ್ದೇಶದಲ್ಲಿ ತುಸುಮಟ್ಟಿಗೆ ಸಫಲರಾಗುತ್ತಿದ್ದಾರೆ.
ನಮಗೆ ಬರುತ್ತಿರುವ ಅಪಾಯದ ಸೂಚನೆಗಳ ಸಂಖ್ಯೆಯನ್ನು ಪರಿಗಣಿಸಿದಾಗ ಹಾಗೂ ಆತ್ಮಘಾತಕ ಆತಂಕವಾದಿಗಳು ನಗರಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವೇಶಿಸಿದ್ದಾರೆನ್ನುವ ಸುದ್ದಿಯನ್ನು ಪರಿಗಣಿಸಿದಾಗ, ಈಗ ನಗರದಲ್ಲಿರುವ ಸುರಕ್ಷಾವ್ಯವಸ್ಥೆ ದೊಡ್ಡ ಮಟ್ಟದ ಜಟಿಲ ಆತ್ಮಘಾತಕ ದಾಳಿಗಳನ್ನು ತಡೆಯುವುದರಲ್ಲಿ ಸಫಲವಾಗಿದೆ ಅನ್ನಿಸುತ್ತದೆ. ಆದರೂ ನಗರಕ್ಕೆ ಆಗಲೇ ಪ್ರವೇಶಿಸಿರುವ ಆತಂಕವಾದಿಗಳು ಸದ್ಯಕ್ಕೆ ಗುಪ್ತವಾಗಿಯೇ ಇದ್ದು ಚುನಾವಣೆಯ ಸಮಯದಲ್ಲಿ ತಮ್ಮ ಧಾಳಿಯನ್ನು ಕೈಗೊಂಡು ಆ ಪ್ರಕ್ರಿಯೆಗೆ ಧಕ್ಕೆಯುಂಟುಮಾಡುವುದರಲ್ಲಿ ಹೆಚ್ಚಿನ ಅರ್ಥವಿರಬಹುದು ಅನ್ನುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಈ ಥರದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಾ ತಯಾರಿಗಳನ್ನು ಮಾಡುತ್ತಿದ್ದೇವೆ. ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾದರೆ ಹಾಗೂ ಧಾಳಿಯ ಸೂಚನೆ ನಮಗೆ ದೊರೆತ ಕೂಡಲೇ ನಿಮ್ಮ ಸಂಸ್ಥೆಗೆ, ಕಾಬೂಲಿಗೆ ಬರುವ ಯಾತ್ರಿಗಳಿಗೆ, ಮಹಾಜನತೆಗೆ ನಾವು ಸುದ್ದಿ ನೀಡುತ್ತೇವೆ.

ಸುರಕ್ಷಾ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾದರೂ ಕೂಡಲೇ ತಿಳಿಸುತ್ತೇವೆ. ಆದರೆ ಈಗ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೇನೆಂದರೆ ರಾಜಧಾನಿಯ ಪರಿಸ್ಥಿತಿ ಶಾಂತವಾಗಿ ಕಂಡರೂ ನಾವು ಜಾಗರೂಕರಾಗಿರುವುದನ್ನು ಮರೆಯಬಾರದು.

ವಿಶ್ವಾಸದೊಂದಿಗೆ....

ಏನೂ ಸಂದೇಶವನ್ನು ಸ್ಪಷ್ಟವಾಗಿ ನೀಡದ ಈ ಸಂದೇಶ ನನ್ನನ್ನು ಕಾಬೂಲಿಗೆ ಸ್ವಾಗತಿಸಿತ್ತು. ಏರ್ ಇಂಡಿಯಾದ ವಿಮಾನ ಕಾಬೂಲನ್ನು ತಲುಪುವಾಗ ಸ್ವಲ್ಪ ಆತಂಕವೂ ಆಗುತ್ತಿತ್ತು. ಕಾಬೂಲಿನ ವಿಮಾನಾಶ್ರಯ ಇರುವುದು ಒಂದು ಕಣಿವೆಯಲ್ಲಿ. ಸುತ್ತಲೂ ಕಡಿದಾದ ಬೆಟ್ಟಪ್ರದೇಶ. ಆ ಬೆಟ್ಟಗಳ ಮೇಲೆ ಯಾವ ಹಸಿರಿನ ಹೊದ್ದಿಕೆಯೂ ಕಾಣುವುದಿಲ್ಲ. ಒಂದೊಂದೂ ಶಿಖರ ಪ್ರಾಂತ ಭಿನ್ನ ಗುಂಪುಗಳ ಸುಪರ್ದಿನಲ್ಲಿದೆಯೆಂದು ಅಲ್ಲಿ ತಲುಪಿದ ನಂತರ ಯಾರೋ ಹೇಳಿದರು. ಆದರೆ ಆ ಕಡಿದಾದ ಪ್ರದೇಶದಲ್ಲಿ ಯಾರಾದರೂ ಇರಬಹುದೇ ಅನ್ನುವ ಅನುಮಾನವಂತೂ ಬರುತ್ತದೆ. ಈ ಸುತ್ತಲ ಎತ್ತರದ ಪ್ರದೇಶದಿಂದ ವಿಮಾನಾಶ್ರಯದ ಮೇಲೆ ರಾಕೆಟ್ ಧಾಳಿ ಮಾಡುವುದು ಸಾಧ್ಯ ಎಂದು ಆ ಪ್ರದೇಶವನ್ನು ಕಂಡಾಗ ಅನ್ನಿಸಿತ್ತು.

ಎಂಟ್ರಿ

ಕಬೂಲ್ ವಿಮಾನಾಶ್ರಯದಲ್ಲಿ ವಿಮಾನವನ್ನು ಇಳಿದಾಗ ಕಂಡದ್ದು ನಮ್ಮನ್ನೆಲ್ಲ ಸ್ವಾಗತಿಸುತ್ತಿದ್ದ ಅಧ್ಯಕ್ಷ ಹಮೀದ್ ಕರ್ಜಾಯಿಯ ಒಂದು ದೊಡ್ಡಚಿತ್ರ. ಸುತ್ತ ನೋಡಿದರೆ ಎಲ್ಲೆಲ್ಲೂ ಯೂ.ಎನ್ ಮತ್ತು ನ್ಯಾಟೋ ಪಡೆಗಳ ಪುಟ್ಟ ಹೆಲಿಕಾಪ್ಟರುಗಳು, ಪುಟ್ಟ ವಿಮಾನಗಳು. ಅವುಗಳನ್ನು ಬಿಟ್ಟರೆ ಆರಿಯಾನ ಏರ್‌ಲೈನ್, ಸಾಫಿ ಏರ್‌ಲೈನ್, ಕ್ಯಾಮ್‍ ಏರ್‌ನ ಒಂದೆರಡು ವಿಮಾನಗಳು ಮಾತ್ರ ಕಾಣುತ್ತವೆ. ಏರ್ ಇಂಡಿಯಾ ಬಿಟ್ಟರೆ ಮಿಕ್ಕ ಎಲ್ಲ ವಿಮಾನದ ಕಂಪನಿಗಳೂ ಅಫಘಾನಿಸ್ಥಾನಕ್ಕೇ ಸೇರಿದವು. ಬಹುಶಃ ಭಾರತ ಬಿಟ್ಟರೆ ಪಾಕಿಸ್ತಾನ, ಇರಾನ್ ದೇಶಗಳ ವಿಮಾನಗಳು ಮಾತ್ರ ಈ ದೇಶಕ್ಕೆ ಯಾನಮಾಡುತ್ತವೇನೋ! ಮಿಕ್ಕಂತೆ ಎಲ್ಲ ದೊಡ್ಡ ವಿಮಾನ ಕಂಪನಿಗಳೂ ಅಫಘಾನಿಸ್ಥಾನಕ್ಕೆ ಹಾರುವುದಿಲ್ಲ. ಎರಡನೆಯ ಬಾರಿ ನಾನು ಅಲ್ಲಿಗೆ ಹೋಗಬೇಕಾಗಿ ಬಂದಾಗ ಏರ್ ಇಂಡಿಯಾದ ಪೈಲೆಟ್‌ಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಘೋಷಿಸಿ ನನ್ನ ಪ್ರಯಾಣದ ಮೇಲೆ ಪ್ರಶ್ನಾರ್ಥಕ ಚಿನ್ಹೆಗಳು ಉದ್ಭವವಾಗಿದ್ದುವು. ಆಗ ನಾನು ಕಾಬೂಲಿಗೆ ಹೋಗುವ ಭಿನ್ನ ಮಾರ್ಗವನ್ನು ಹುಡುಕಿ ಹೊರಟೆ. ಆದರೆ ನನಗೆ ತಿಳಿದದ್ದು: ಅಲ್ಲಿಗೆ ಹೋಗಲು ನಾನು ಮೊದಲು ದುಬಾಯಿಗೆ ಹೋಗಿ ಅಲ್ಲಿಂದ ಸಾಫಿ ಏರ್ಲೈನಿನ ಮೂಲಕ ಕಾಬೂಲ್ ತಲುಪ ಬೇಕು ಅನ್ನುವುದು. ಆದರೆ ಕ್ಯಾಮ್, ಆರಿಯಾನಾ ಮತ್ತು ಸಾಫಿ ಏರ್ಲೈನುಗಳು ಐಎಟಿಎ ಸದಸ್ಯತ್ವವನ್ನು ಇನ್ನೂ ಪಡೆದಿಲ್ಲವಾದ್ದರಿಂದ ಏಜೆಂಟರ ಮೂಲಕ ಟಿಕೆಟ್ ಕಾಯ್ದಿರಿಸುವುದು ಸಾಧ್ಯವಿಲ್ಲವೆಂದೂ ತಿಳಿಯಿತು. ಅರ್ಥಾತ್, ನಮ್ಮ ಏರ್ ಇಂಡಿಯಾ ಇಲ್ಲದಿದ್ದರೆ ಅಲ್ಲಿಗೆ ಹೋಗುವುದು ಕಷ್ಟದ ಮಾತೇ!

ಇಳಿದು ಇಮ್ಮಿಗರೇಷನ್ ಮುಗಿಸಿ ಹೊರಬರುವುದಕ್ಕೆ ಮೊದಲು ವಿದೇಶೀ ಪ್ರಯಾಣಿಕರ ನೋಂದಣಿ ಮಾಡಿಸಬೇಕೆಂದು ನನ್ನನ್ನು ಸ್ವಾಗತಿಸಿದ್ದ ಸಂಸ್ಥೆಯ ಹಿಜ್ರತ್ ರಹೀಮಿ ಹೇಳಿದ್ದ. ಎರಡು ಫೋಟೋಗಳನ್ನು ತಯಾರಾಗಿಟ್ಟುಕೊಂಡಿರಬೇಕೆಂದೂ, ನಾನು ದೇಶದಿಂದ ಆಚೆ ಹೋಗುವಾಗ ಈ ನೋಂದಣಿ ಕಾರ್ಡನ್ನು ಕೇಳಬಹುದೆಂದೂ ಹೇಳಿದ್ದರಿಂದ ನಾನು ತಯಾರಾಗಿ ಹೋಗಿದ್ದೆ. ನೋಂದಣಿ ಮಾಡಿಸಿ ನನ್ನ ಗುರುತಿನ ಕಾರ್ಡನ್ನು ಪಡೆದು ನಾನು ಹೊರಬಿದ್ದೆ. ಪಾರ್ಕಿಂಗ್ ’ಸಿ’ ವಿಭಾಗದಲ್ಲಿ ನನಗಾಗಿ ಒಂದು ಕಾರು ಕಾಯುತ್ತಿರುವುದಾಗಿ ಹಿಜ್ರತ್ ಹೇಳಿದ್ದ. ಒಳಗೆ ಟ್ರಾಲಿಗಳಿಲ್ಲ. ಆದರೆ ಸೂಟ್‍ಕೇಸನ್ನು ಹೊತ್ತು ಹೊರಬಂದರೆ ಟ್ರಾಲಿಯನ್ನು ನಿಮಗಾಗಿ ತಳ್ಳಲು ತಯಾರಿರುವ ಯುವಕರು ಕಾಣಸಿಗುತ್ತಾರೆ. ಡಾಲರುಗಳಲ್ಲಿ ಅವರಿಗೆ ಬಕ್ಷೀಸು ಕೊಡಬೇಕು ಅಷ್ಟೇ!!

ನಾವು ಇಳಿದದ್ದು ಕಾಬೂಲ್ ವಿಮಾನಾಶ್ರಯದ ಹೊಸ ವಿಭಾಗದಲ್ಲಿ. ಪಕ್ಕದಲ್ಲೇ ಹಳೆಯ ವಿಭಾಗವೂ ಇದೆ. ಹೊಸ ವಿಭಾಗದಿಂದ ಹೊರಬಿದ್ದರೆ ಎಡಬದಿಯಲ್ಲಿ ಮೊದಲ ಪಾರ್ಕಿಂಗ್ - ಅಲ್ಲಿ ಯೂಎನ್, ನ್ಯಾಟೋ, ಹಾಗೂ ವಿವಿಐಪಿಗಳಿಗಾಗಿ ಬಂದಿರುವ ಗಾಡಿಗಳು ಇರುತ್ತವೆ. ಆ ಪ್ರದೇಶವನ್ನು ದಾಟಿ ಮುಂದಕ್ಕೆ ನಡೆದರೆ ಮತ್ತೊಂದು ಗೇಟು, ಆ ಗೇಟಿನಿಂದಾಚೆಗೆ ಒಂದು ಪುಟ್ಟ ಇರಾಣಿ ಹೋಟೇಲಿನಂಥಹ ಜಾಗ. ಒಂದು ಪುಟ್ಟ ಊರಿನ ಬಸ್‍ಸ್ಟಾಂಡಿನಲ್ಲಿರಬಹುದಾದ ಖಾನಾವಳಿಯ ರೀತಿಯ ಜಾಗವನ್ನು ದಾಟಿ ಹೊರಕ್ಕೆ ಬಂದರೆ ಪಾರ್ಕಿಂಗ್ ಸಿ ಸಿಗುತ್ತದೆ.

ದಾರಿಯುದ್ದಕ್ಕೂ ಕೈಯಲ್ಲಿ ನೋಟಿನ ಕಂತೆಯನ್ನು ಹೊತ್ತು ನಿಂತ ಜನ - ಯಾವ ಕರೆಂಸಿ ಬೇಕೋ ಆ ಕರೆಂಸಿಯನ್ನು ದಾರಿಯಲ್ಲೇ ಕೊಳ್ಳಬಹುದು.. ಜೊತೆಗೆ ಟೆಲಿಫೋನ್ ಕಾರ್ಡುಗಳನ್ನೂ ಅವರುಗಳು ಮಾರಾಟ ಮಾಡುತ್ತಾರೆ. ವಿದೇಶೀ ಕರೆಂಸಿಯನ್ನೂ ಚೌಕಾಶಿಮಾಡಿ ಕೊಳ್ಳಬಹುದೆನ್ನುವುದನ್ನು ನಾನು ಮೊದಲ ಬಾರಿಗೆ ಕಂಡುಕೊಂಡೆ. ಅಫಘಾನಿಸ್ಥಾನದಲ್ಲಿ ಹವಾಲಾ ಕಾನೂನು ಬಾಹಿರವಲ್ಲವಂತೆ, ಹೀಗಾಗಿ ಯಾರು ಬೇಕಾದರೂ ವಿದೇಶೀ ಕರೆಂಸಿಯನ್ನು ಮಾರಾಟ ಮಾಡಬಹುದು. ಗಮ್ಮತ್ತಿನ ವಿಚಾರವೆಂದರೆ ಸ್ಥಳೀಯ ಹಣವಾದ ’ಅಫಘನಿ [ಆಫ್ಸ್]’ ಇಲ್ಲದೆಯೇ ಡಾಲರುಗಳಲ್ಲಿಯೇ ಅಲ್ಲಿನ ಎಲ್ಲ ವ್ಯವಹಾರಗಳನ್ನೂ ನಾವು ಮಾಡಬಹುದು. ನಂತರ ನಾನು ಕೊಂಡ ಒಂದು ಅಫಘನಿ ಟೋಪಿಗೆ ಭಾರತೀಯ ರೂಪಾಯಿಗಳಲ್ಲಿಯೇ ದುಡ್ಡು ಕಟ್ಟಬೇಕೆಂದು ಅಂಗಡಿಯ ಮುದುಕಪ್ಪ ಸಾಧಿಸಿದ್ದ. ಜಲಾಲಾಬಾದ್ ನಲ್ಲಿ ಪಾಕಿಸ್ತಾನೀ ರೂಪಾಯಿಗೆಳೇ ಹೆಚ್ಚು ಚಾಲ್ತಿಯಲ್ಲಿದೆಯಂತೆ. ಅಲ್ಲಿನ ಟೆಲಿಕಾಂ ಕಂಪನಿ ರೋಶನ್ ಮೊಬಲೈನ ಮೂಲಕ ಹಣಪಾವತಿ ಮಾಡಬಹುದಾದ ಒಂದು ಯೋಜನೆ ರೂಪಿಸಿದ್ದಾರೆ - ಅದರ ಹೆಸರು ಈ-ಹವಾಲಾ! ಒಂದು ದೇಶ ಹಲವು ಕರಂಸಿ ಅಂದರೆ ಈ ದೇಶವೇ ಇರಬಹುದು!

ಪಾರ್ಕಿಂಗ್ ಸಿ ಗೆ ಬಂದಾಗ ಒಂದಿಷ್ಟು ಕ್ಷಣಗಳವರೆಗೆ ನನ್ನ ಹೃದಯ ಜೋರಾಗಿಯೇ ಬಡಿಯುತ್ತಿತ್ತು. ನನ್ನನ್ನು ಒಯ್ಯಲು ಬರಬೇಕಿದ್ದ ಕಾರು ಕಾಣಿಸಲಿಲ್ಲ. ಜೊತೆಗೆ ಎಲ್ಲ ದಿಕ್ಕಿನಿಂದಲೂ ಟ್ಯಾಕ್ಸಿ ಬೇಕೇ ಎಂದು ಕೇಳುವ ಜನ. ಅದೂ ಸಾಲದೆಂಬಂತೆ ಅಲ್ಲಲ್ಲಿ ಸ್ಟೆನ್ ಗನ್ ಹಿಡಿದು ಓಡಾಡುವ ಜನರೂ ಕಾಣಿಸುತ್ತಿದ್ದರು. ನಮ್ಮ ದೇಶದಲ್ಲಿ ಪ್ರತಿ ನೂರು ಜನರಿಗೆ ಎಷ್ಟು ಮೊಬೈಲುಗಳಿವೆ ಅನ್ನುವುದನ್ನು ಟೆಲೆ ಡೆಂಸಿಟಿ ಅನ್ನುವ ಸಂಖ್ಯೆಯ ಮೂಲಕ ಅಳೆಯುವಹಾಗೆ ಅಲ್ಲಿ ಗನ್ ದೆನ್ಸಿಟಿಯನ್ನು ಅಳೆಯಬೇಕು ಎಂದ ನನಗೆ ನಂತರ ಅನ್ನಿಸಿತ್ತು. ನನ್ನ ಬಳಿ ಅಂತರರಾಷ್ಟ್ರೀಯ ರೋಮಿಂಗ್ ಇದ್ದ ಮೊಬೈಲಿತ್ತಾದರೂ, ನಾನು ಯಾರ ನಂಬರುಗಳನ್ನೂ ಬರೆದು ತಂದಿರಲಿಲ್ಲ. ನನ್ನ ಕಂಪ್ಯೂಟರಿನಲ್ಲಿ ಹಿಜ್ರತ್‍ನ ನಂಬರು ಸಿಗಬಹುದಿತ್ತು. ಆದರೂ ಲ್ಯಾಪ್‍ಟಾಪನ್ನು ಅಲ್ಲಿ ತೆಗೆಯುವುದು ಸಮಂಜಸವಲ್ಲ ಅಂದುಕೊಂಡೇ ಪಾರ್ಕಿಂಗಿನಲ್ಲಿ ಒಂದು ಸುತ್ತು ಹಾಕಿ ಬಂದೆ. ತುಸು ಸಮಯದ ನಂತರ ಒಬ್ಬ ಗಡ್ಡಧಾರಿ ಮನುಷ್ಯ ನನ್ನ ಹೆಸರಿನ ಫಲಕವನ್ನು ಹಿಡಿದು ಬಂದದ್ದು ಕಾಣಿಸಿತು. ನಿರಾಳ ಉಸಿರು ಬಿಟ್ಟು ನಾನು ಆತನನ್ನು ಹಿಂಬಾಲಿಸಿದೆ. ಹೊಚ್ಚ ಹೊಸಾ ಟೊಯೊಟಾ ಕಾರಿನ ಡಿಕ್ಕಿಯಲ್ಲಿ ನನ್ನ ಸೂಟ್‍ಕೇಸ್ ಇಟ್ಟು ಹಿಂದಿನ ಸೀಟಿನಲ್ಲಿ ಕುಳಿತುಕೊಂಡೆ. ಈತ ಸಂಸ್ಥೆಗೆ ಸೇರಿದವನೋ ಅಥವಾ ಖಾಸಗೀ ಟ್ಯಾಕ್ಸಿ ಕಂಪನಿಯವನೋ ತಿಳಿಯಲಿಲ್ಲ. ಅವನಿಗೆ ಯಾವ ಭಾಷೆ ಗೊತ್ತಿರಬಹುದು ಅನ್ನುವುದೂ ನನಗೆ ತಿಳಿದಿರಲಿಲ್ಲ. ಜೊತೆಗೆ ಇಲ್ಲಿನ ರಾಜಕೀಯ ಪರಿಸ್ಥಿತಿ - ಏನು ಮಾತನಾಡಿದರೆ ಏನು ಪ್ರತಿಕ್ರಿಯೆ ಬರುತ್ತದೋ ತಿಳಿಯದ್ದರಿಂದ ನಾನು ಮೌನವಾಗಿಯೇ ಹಿಂದೆ ಕುಳಿತಿದ್ದೆ.

ಮೊದಲ ಬಾರಿ ನಾನು ಯುದ್ಧ ಇನ್ನೂ ಮುಗಿಯದ, ಪರಿಸ್ಥಿತಿ ಶಂತವಾಗಿದೆ ಎಂದು ಹೇಳಲಾಗದ ಜಾಗಕ್ಕೆ ಹೋಗಿದ್ದೆ. ಸುತ್ತಲೂ ಶಿಥಿಲವಾದ ಕಟ್ಟಡಗಳು. ಎಲ್ಲಿ ನೋಡಿದರೂ ಸರ್ವನಾಶದ ಚಿನ್ಹೆಗಳು, ಆ ನಡುವೆಯೇ ಜನ ತಮ್ಮ ಜೀವನವನ್ನು ನಡೆಸಿದ್ದರು. ಮಧ್ಯೆ ಮಧ್ಯೆ ನ್ಯಾಟೋದ ದೊಡ್ಡ ದೊಡ್ಡ ಟ್ಯಾಂಕುಗಳು, ಪಿಳಿಪಿಳಿ ಕಣ್ಣು ಮಾತ್ರ ಕಾಣುವ, ದೇಹದ ಮಿಕ್ಕೆಲ್ಲ ಭಾಗವೂ ಬುಲೆಟ್ ಫ್ರೂಫ್ ಬಟ್ಟೆ, ಹೆಲ್ಮೆಟ್ಟು ಹೀಗೆ ಕವಚಾವೃತರಾಗಿದ್ದ ಬಿಳಿ ತೊಗಲಿನ ಸೈನಿಕರು. ಸುತ್ತಲಿನ ವಾತಾವರಣವೇ ವಿಚಿತ್ರವಾಗಿತ್ತು. ಎಡಬದಿಗೆ ಒಂದು ಗೇಟು - ಆ ಗೇಟಿನ ಕಾವಲು ಕಾಯುತ್ತಾ ಸ್ಟೆನ್ ಗನ್ ಹಿಡಿದ ನಖಶಿಖಾಂತ ಕವಚವನ್ನು ಧರಿಸಿದ ಸೈನಿಕ. ಪಕ್ಕದ ಗೇಟು ನೋಡಿದರೆ ಒಂದು ಪ್ರಾಥಮಿಕ ಶಾಲೆಯ ದ್ವಾರ. ಅಲ್ಲಿ ನೆಟ್ಟಗೆ ಬಟ್ಟೆಯೂ ಧರಿಸದ ಸ್ಥಳೀಯ ಮುದುಕ ಅವನ ಜೊತೆಯಲ್ಲಿ ಶಾಲೆಗೆ ಹೊರಟು ನಿಂತಿರುವ ಪುಟ್ಟ ಹುಡುಗಿ.... ಅಲ್ಲಿನ ವೈಚಿತ್ರವನ್ನು ಅರ್ಥಮಾಡಿಕೊಳ್ಳಲು ಈ ನೋಟ ನನಗೆ ಮೊದಲ ಸೂಚನೆಯನ್ನು ನೀಡಿತ್ತು. ಮೊದಲ ಬಾರಿ ನಾನು ನನ್ನ ಕ್ಯಾಮರಾ ಒಯ್ದಿರಲಿಲ್ಲವಾದ್ದರಿಂದ ಓಡುತ್ತಿದ್ದ ಕಾರಿನಿಂದಲೇ ಆದಷ್ಟೂ ಚಿತ್ರಗಳನ್ನು ಮೊಬೈಲಿನ ಮೂಲಕ ಗ್ರಹಿಸಲು ಪ್ರಯತ್ನಿಸಿದೆ.

ಕರ್ಜಾಯಿ, ರಫಿ, ದಿಲೀಪ್ ಕುಮಾರ್ ಮತ್ತು ಸಾಹಿರ್ ಲುಧಿಯಾನ್ವಿ

ಡ್ರೈವರ್ ಅದುವರೆವಿಗೂ ಸುಮ್ಮನಿದ್ದವನು ಇದ್ದಕ್ಕಿದ್ದ ಹಾಗೆ ಉರ್ದುವಿನಲ್ಲಿ "ಸಬ್ ಖೈರಿಯತ್?" ಎಂದು ಕೇಳಿದ. ಹೌದು ಎಲ್ಲವೂ ಕ್ಷೇಮವೆಂದು ನಾನು ಹೇಳಿದೆ. ಅಲ್ಲಿಂದ ಮುಂದಕ್ಕೆ ಅವನೇ ಮಾತು ಮಂದುವರೆಸಿದ. ಅಲ್ಲಿಂದ, ನಾನು ಹೋಗಬೇಕಿದ್ದ ಹೋಟೇಲಾದ ಇಂಟರ್‌ನ್ಯಾಷನಲ್ ಕ್ಲಬ್ ತಲುಪುವವರೆಗೂ ನಾವು ಅದೂ ಇದೂ ಚರ್ಚಿಸಿದೆವು. ಅವನ ಹೆಸರು ಅಬ್ದುಲ್ ಘನಿ, ನಾನು ಹೋಗುತ್ತಿರುವ ಸಂಸ್ಥೆಗೆ ಸೇರಿದವನು. ಅವನು ಕಾಬೂಲಿನವನಾದರೂ ತಾಲಿಬಾನ್ ಆ ದೇಶವನ್ನು ಆಳಿದ ಸಮಯದಲ್ಲಿ ಪಾಕಿಸ್ತಾನದ ಪೇಶಾವರ್‍‌ಗೆ ವಲಸೆ ಹೋಗಿ ಅಲ್ಲಿ ಆಶ್ರಯ ಪಡೆದವನು. ನಾನು ಮುಂದೆ ಭೇಟಿಯಾದ ಅನೇಕರು ಹೀಗೇ ಪೆಶಾವರ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿ ಸಮಯಕಳೆದವರಾಗಿದ್ದರು. ಉದಾಹರಣೆಗೆ ನನ್ನ ಆಗಮನಕ್ಕೆ ಎಲ್ಲ ಏರ್ಪಾಟುಗಳನ್ನೂ ಮಾಡಿದ್ದ ಹಿಜ್ರತ್ ಪೆಶಾವರಕ್ಕೆ ಹೋದಾಗ ಆರು ತಿಂಗಳ ಮಗುವಾಗಿದ್ದನಂತೆ! ಈಗ ತನ್ನ ತಾಯ್ನಾಡಿಗೆ ವಾಪಸ್ಸಾಗಿ ಇಲ್ಲಿ ವಸ್ತವ್ಯ ಹೂಡಿದ್ದಾನೆ. ಈ ಪೆಶಾವರದ ಕೊಂಡಿಯಿರುವುದರಿಂದಲೇ ಎಲ್ಲರೂ ತಮ್ಮ ಪಷ್ತು ಭಾಷೆಯಲ್ಲದೇ ಉರ್ದುವನ್ನೂ ಮಾತನಾಡಬಲ್ಲವರಾಗಿದ್ದರು.

ಘನಿ ಮಾತನಾಡುತ್ತಾ ತನ್ನ ಸರಕಾರವನ್ನೂ ಪಕ್ಕದ ಪಾಕಿಸ್ತಾನದ ಸರಕಾರವನ್ನೂ ಬೈಯ್ಯುತ್ತಲೇ ಗಾಡಿ ಓಡಿಸಿದ. ಅವನ ಪ್ರಕಾರ ಅಮೆರಿಕನ್ನರು ಬಂದಾಗಿನಿಂದ ಅಫಘಾನಿಸ್ಥಾನಕ್ಕೆ ಸಾಕಷ್ಟು ಧನಸಹಾಯ ದೊರೆತಿದೆ, ಆದರೆ ಆ ಹಣವನ್ನೆಲ್ಲಾ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಪೋಲು ಮಾಡುತ್ತಿದ್ದಾರೆ. ಇದರಲ್ಲಿ ಪಕ್ಕದ ಪಾಕಿಸ್ತಾನದ ಕೈಯೂ ಇದೆ. ಗಮ್ಮತ್ತಿನ ಮಾತೆಂದರೆ, ಅವನು ಅಫಘಾನಿಸ್ಥಾನದ ಸಕಲ ದುಃಖ ದುಮ್ಮಾನಕ್ಕೂ ಪಾಕಿಸ್ತಾನದ ಐಎಸ್‍ಐಯನ್ನು ಕಾರಣೀಭೂತವನ್ನಾಗಿ ಮಾಡಿದ. ಇದನ್ನು ಕೇಳಿದ ಯಾವುದೇ ಭಾರತೀಯ ಪ್ರಜೆಗೂ ಹೃದಯ ತುಂಬಿಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಹೀಗೆ ಹಮೀದ್ ಕರ್ಜಾಯಿಗೆ ಶಾಪ ಹಾಕುತ್ತಲೇ ಬಂದ ಘನಿಯನ್ನು ನಾನು ಮುಂದೆ ಆಗಲಿರುವ ಚುನಾವಣೆಯಲ್ಲಿ ಆತ ಗೆಲ್ಲಬಹುದೇ ಅನ್ನುವ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಘನಿ ಕುತೂಹಲಕಾರಿ ಉತ್ತರವನ್ನು ಕೊಟ್ಟ - ಆತ ಹೇಳಿದ್ದೇನೆಂದರೆ ಕರ್ಜಾಯಿಯನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಆತನ ಜನಪ್ರಿಯತೆ ತೀರಾ ಕಡಿಮೆಯಾಗಿದ್ದರೂ ಆತ ಗೆಲ್ಲುವುದರಲ್ಲಿ ಯಾರಿಗೂ ಅನುಮಾನವಿದ್ದಂತಿಲ್ಲ. ಆತನಿಗೆ ಅಮೆರಿಕದ ಬೆಂಬಲವಿರುವುದರಿಂದ ಆತ ಚುನಾವಣೆಯನ್ನು ಗೆಲ್ಲುವುದು ಖಂಡಿತ. ಈ ಭಾವನೆಯನ್ನು ನಾನು ಅಲ್ಲಿದ್ದಷ್ಟೂ ದಿನ ಭಿನ್ನ ಭಿನ್ನ ವ್ಯಕ್ತಿಗಳಿಂದ ಕೇಳಿದ್ದೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿ ನಲವತ್ತು ಜನ ನಿಂತಿದ್ದರೂ ಕರ್ಜಾಯಿ ಚುನಾಯಿತರಾಗುವುದರಲ್ಲಿ ಯಾರಿಗೂ ಅನುಮಾನವಿದ್ದಂತಿರಲಿಲ್ಲ. ಇದ್ದ ಅನುಮಾನವಿಷ್ಟೇ - ಅಲ್ಲಿನ ಪದ್ಧತಿಯ ಪ್ರಕಾರ ೫೦ ಪ್ರತಿಶತಕ್ಕಿಂತ ಕಡಿಮೆ ಓಟುಗಳು ಆತನಿಗೆ ಬಂದಲ್ಲಿ - ಆತನಿಗೂ, ಎರಡನೆಯ ಸ್ಥಾನದಲ್ಲಿರುವ ಅಭ್ಯರ್ಥಿಗೂ ನಡುವೆ ಮತ್ತೊಂದು ಸುತ್ತಿನ ಚುನಾವಣೆ ನಡೆಯಬೇಕು. ಹೀಗಾಗಿ ಕರ್ಜಾಯಿ ಮೊದಲ ಸುತ್ತಿನಲ್ಲಿಯೇ ೫೦ ಪ್ರತಿಶತ ಪಡೆಯುತ್ತಾರೋ ಅಥವಾ ಅವರ ಸಮೀಪದ ಪ್ರತ್ಯರ್ಥಿಯಾದ ಅಬ್ದುಲ್ಲಾ ಅಬ್ಧುಲ್ಲಾ ಜೊತೆಗೆ ಮತ್ತೊಂದು ಸುತ್ತಿನ ’ರನ್ ಆಫ್’ ನಂತರ ಗೆಲ್ಲುತ್ತಾರೋ ಅನ್ನುವುದು ಮಾತ್ರ ಚರ್ಚೆಯಾಗುತ್ತಿತ್ತು.

ನಾನು ಈ ಲೇಖನ ಬರೆಯುವ ವೇಳೆಗೆ ಚುನಾವಣೆ ಮುಗಿದಿತ್ತು. ಘನಿ ಮತ್ತಿತರರು ವ್ಯಕ್ತಪಡಿಸಿದ ಅನುಮಾನಗಳು ಈಗ ನಿಜವಾಗುತ್ತಿರುವಂತೆ ಕಾಣಿಸುತ್ತಿದೆ. ಚುನಾವಣೆಯಾಗಿ ಹಲುವು ತಿಂಗಳುಗಳು ಕಳೆದಿದ್ದರೂ ಫಲಿತಾಂಶವನ್ನು ಸ್ಪಷ್ಟವಾಗಿ ಘೋಷಿಸಿಲ್ಲ. ಆದರೆ ಇಲ್ಲಿಯವರೆಗೆ ಬಂದಿರುವ ಘೋಷಣೆಗಳನ್ನು ನೋಡಿದರೆ ಕರ್ಜಾಯಿ ಗೆದ್ದಿದ್ದಾರೆ ಅನ್ನುವ ಸೂಚನೆಯಿದೆ. ಆದರೂ, ಚುನಾವಣೆಯಲ್ಲಿ ಅನ್ಯಾಯ ನಡೆದಿರಬಹುದಾದ ಓಟಿಂಗಿನಲ್ಲಿ ದಗಾ/ಮೋಸ ಇರಬಹುದಾದ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಚುನಾವಣೆಯ ಮೇಲ್ವಿಚಾರಣೆ ನಡೆಸಿದ ವಿಶ್ವ ಸಂಸ್ಥೆಯ ಪ್ರತಿನಿಧಿ ಪೀಟರ್ ಗಾಲ್‍ಬ್ರೆತ್ ಕರ್ಜಾಯಿಗೆ ಬಂದಿರುವ ವೋಟುಗಳಲ್ಲಿ ೩೦ ಪ್ರತಿಶತ ಜಾಲೀ ಓಟುಗಳು ಅನ್ನುವುದು ತನಿಖೆಯಿಂದ ತಿಳಿದಿದೆ ಆದರೆ ವಿಶ್ವಸಂಸ್ಥೆ ಈ ಮಾಹಿತಿಯನ್ನು ತಡೆಹಿಡಿಯುತ್ತಿದೆ ಎನ್ನುವ ಸ್ಫೋಟಕ ಮಾತನ್ನು ಹೇಳಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅಕ್ಟೋಬರ್ ೪ರ ಭಾನುವಾರಕ್ಕೆ ಪರಿಣಾಮ ಘೋಷಿಸಬಹುದು ಅನ್ನುವ ಅನುಮಾನ ನಿಜವಾಗದೇ ಫಲಿತಾಂಶಗಳು ಯಾವಾಗ ಬರಬಹುದೆಂದು ತಿಳಿಯದ ಪರಿಸ್ಥಿತಿಯಲ್ಲಿ ಆ ದೇಶ ಸದ್ಯಕ್ಕೆ ಇದೆ. ಈ ಇಂಥ ವಾತಾವರಣದಲ್ಲಿ ಚುನಾವಣೆಯಲ್ಲಿ ಅನ್ಯಾಯ ನಡೆದಿಲ್ಲ ಎಂದು ವಿಶ್ವ ಸಂಸ್ಥೆ ಘೋಷಿಸಿದರೂ ಅದನ್ನು ನಂಬುವವರ ಸಂಖ್ಯೆ ಬಹಳವೇ ಕಡಿಮೆಯಿರಬಹುದು.

ಕರ್ಜಾಯಿ ಬಗೆಗಿನ ಸಿಟ್ಟು ಅಷ್ಟಕ್ಕೇ ಸೀಮಿತವಾಗಿಲ್ಲ. ಚುನಾವಣೆಯ ಪ್ರಚಾರಕಾಲದಲ್ಲಿ ಕರ್ಜಾಯಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರೊಂದಿಗೆ ಅಧಿಕಾರ ಹಂಚಿಕೊಳ್ಳುವ ಆಶ್ವಾಸನೆ ನೀಡಿದ್ದಾರೆನ್ನುವ ಮಾತೂ ಅಲ್ಲಿ ಕೇಳಿಬರುತ್ತದೆ. ಅದೂ ಅಲ್ಲದೇ ಕಂಡ ಕಂಡ ಎಲ್ಲ ಸಣ್ಣ ಪುಟ್ಟ ನಾಯಕರಿಗೂ ಮಂತ್ರಿಪದವಿ ನೀಡುವ ಆಶ್ವಾಸನೆ ಕೊಟ್ಟು ಈಗ ಸುಮಾರು ಇನ್ನೂರು ಜನ ಮಂತ್ರಿಗಳಾಗಲು ಕಾಯುತ್ತಿದ್ದಾರೆನ್ನುವ ಮಾತನ್ನೂ ಜನ ಆಡಿಕೊಳ್ಳುತ್ತಿದ್ದಾರೆ!! ಈ ಮಾತಿನಲ್ಲಿ ಅತಿರೇಕವಿರಬಹುದು. ಆದರೆ ಅದರ ಹಿಂದಿರುವ ಸಿಟ್ಟು ಚಡಪಡಿಕೆಯನ್ನು ನಾವು ಗಮನಿಸಬಹುದಾಗಿದೆ.

ಘನಿಗೆ ರಾಜಕೀಯದ ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯಿರುವಂತೆ ತೋರಲಿಲ್ಲ. ಬದಲಿಗೆ ಆತ ದಿಲೀಪ್ ಕುಮಾರ್, ದೇವ್ ಆನಂದ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ. ಆತ ಹಳೆಯ ಹಿಂದೀ ಸಿನೇಮಾಗಳನ್ನು ನೋಡಿಯೇ ಬೆಳೆದಿದ್ದನಂತೆ. ಮಹಮ್ಮದ್ ರಫಿಯ ಒಂದು ಹಾಡುನ್ನು ಗುನಗುನಾಯಿಸಿ ರಫಿಯ ಧ್ವನಿಯನ್ನೂ - ಹಾಡಿನಲ್ಲಿರುವ ಸಾಹಿತ್ಯವನ್ನೂ ಅವನು ಮೆಚ್ಚಿಕೊಂಡ. ಮಾತಿನ ವರಸೆಯಲ್ಲಿ ನಾನು ಹೇಳಿದೆ - ನನ್ನ ಮೊಬೈಲಿನಲ್ಲಿ ರಫಿಯ ಹಾಡುಗಳಿವೆ, ಬೇಕಿದ್ದರೆ ಅವನ್ನು ಹಚ್ಚುತ್ತೇನೆ, ಹೋಟೇಲು ತಲುಪುವವರೆಗೂ ಕೇಳಬಹುದು. ಆದರೆ ನಮಗೆ ಆ ಅದೃಷ್ಟವಿಲ್ಲ. ಕಾರಣ ಆ ಮಾತು ಮುಗಿಯುವ ವೇಳೆಗೆ ನಾವು ಹೊಟೇಲು ತಲುಪಿಬಿಟ್ಟಿದ್ದೆವು. ದೆಹಲಿಯಿಂದ ಕೇವಲ ಎರಡು ಘಂಟೆಕಾಲದ ವಿಮಾನಯಾನ ಮಾಡಿ ಕಾಬೂಲು ತಲುಪಿರುವುದರಿಂದ ನನಗೇನೂ ಸುಸ್ತಾಗಿರಲಿಲ್ಲ. ಒಂದೈದು ನಿಮಿಷ ತಡೆದರೆ ನಾನು ಹೋಟೇಲಿನಲ್ಲಿ ಸೂಟ್‍ಕೇಸ್ ಇಟ್ಟು, ಬಟ್ಟೆ ಬದಲಾಯಿಸಿ ಬರುತ್ತೇನೆ ಎಂದು ನಾನು ಹೇಳಿದೆ. ಘನಿ ಕಾಯಲು ಒಪ್ಪಿದ.

ಹೊಟೇಲಿನ ದ್ವಾರದ ಹೊರಗೆ ಒಂದು ಸೆಕ್ಯೂರಿಟಿ ಪೆಟ್ಟಿಗೆಯಲ್ಲಿ ಕವಚ ಧರಿಸಿ ಸ್ಟೆನ್ ಗನ್ ಹಿಡಿದು ಅತಿಥಿಗಳನ್ನು ದುರುಗುಟ್ಟಿ ನೋಡುವ ಒಬ್ಬ ವ್ಯಕ್ತಿಯಿದ್ದ. ಕಾರನ್ನು ಹೊರಗೇ ನಿಲ್ಲಿಸಬೇಕು. ದೊಡ್ಡ ಗೇಟನ್ನು ತಟ್ಟಿದರೆ ಅಲ್ಲಿನ ಪುಟ್ಟ ಕಿಂಡಿಯಿಂದ ಹಣಕಿ ಒಳಗಿನಾತ ಬಾಗಿಲು ತೆಗೆಯುತ್ತಾನೆ. ಒಳಹೊಕ್ಕರೆ ಮತ್ತೊಂದು ಮುಚ್ಚಿದ ದ್ವಾರ. ಹೊರಗಿನ ಬಾಗಿಲನ್ನು ಮುಚ್ಚಿ ಮತ್ತೆ ಒಳಗಿನ ಬಾಗಿಲನ್ನು ತೆಗೆದು ಹೋಟೇಲಿನ ಮಹಾದ್ವಾರಕ್ಕೆ ಹೋಗಲು ಅನುಮತಿ ನೀಡುತ್ತಾನೆ. ಹೀಗೆ ಒಮ್ಮೆಗೆ ಒಬ್ಬರೇ ಮಹಾದ್ವಾರದಿಂದ ಪ್ರವೇಶಿಸುವ, ಕಾರುಗಳ ಪ್ರವೇಶಕ್ಕೆ ನಿಷೇಧವಿರುವ ಕಾನೂನನ್ನು ನಾನು ಮೊದಲಬಾರಿಗೆ ನೋಡುತ್ತಿದ್ದೆ. ಬಾಗಿಲ ಬಳಿಯ ನೋಟಿಸ್ ಬೋರ್ಡಿನ ಮೇಲೆ ದೊಡ್ಡ ಫಲಕದಲ್ಲಿ "ವೆಪನ್ಸ್ ನೋ ಡಿಸ್ಪ್ಲೇ" - ಅಸ್ತ್ರಗಳನ್ನು ಪ್ರದರ್ಶಿಸಬಾರದೆಂಬ ಸೂಚನೆಯನ್ನು ನೀಡಲಾಗಿತ್ತು. ಹೋಟೇಲಿನಲ್ಲಿ ಎರಡು ಅಂಶಗಳು ಎದ್ದು ಕಂಡವು - ಎಲ್ಲ ಕಡೆಯೂ ಅಫಘನಿ ರತ್ನಗಂಬಳಿಗಳು - ವಿವಿಧ ಸೈಜಿನ, ಆಕಾರದ, ಕಲೆಗಾರಿಕೆಯ ರತ್ನಗಂಬಳಿಗಳು ಮತ್ತು ಗೋಡೆಯ ಮೇಲೆ ಅಲ್ಲಿಗೇ ಪ್ರತ್ಯೇಕವನ್ನಿಸುವಂತಹ ಪೈಂಟಿಂಗಿನ ಕಲಾಕೃತಿಗಳು. ಈ ಎರಡೂ ಅಂಶಗಳು ಈ ಜಾಗದಲ್ಲಿ ಮಾತ್ರವಲ್ಲ, ನಮಗೆ ಕಾಬೂಲಿನಲ್ಲಿ ಎಲ್ಲೆಲ್ಲೂ ಕಂಡುಬಂದುವು.

ಕೋಣೆಯಲ್ಲಿ ಸೂಟ್‍ಕೇಸ್ ಇಟ್ಟು ಬಟ್ಟೆ ಬದಲಾಯಿಸಿ ಹೊರಬಂದಾಗ ಘನಿ ನನ್ನನ್ನು ಕಾರಿನ ಮುಂದಿನ ಸೀಟಿನಲ್ಲಿ ಕೂರಲು ಹೇಳಿದ. ಯಾಕೆಂದು ಅರ್ಥವಾಗದಿದ್ದರೂ ಹೋಗಿ ಅವನ ಪಕ್ಕದಲ್ಲಿ ಕೂತೆ. ಗಾಡಿ ಪ್ರಾರಂಭಿಸಿದ ಕೂಡಲೇ ಕೇಳಿದ - ನಿಮ್ಮ ಮೊಬೈಲಿನಲ್ಲಿ ಬ್ಲೂಟೂಥ್ ಇರಬೇಕಲ್ಲವೇ - ಇದ್ದರೆ ರಫಿಯ ಎಲ್ಲ ಹಾಡುಗಳನ್ನೂ ನನಗೆ ವರ್ಗಾಯಿಸಿ ಎಂದ. ಹಿಂದಿ ಸಿನೇಮಾ ಜಗತ್ತಿನ ಯಾವುದೇ ಮೂಲೆಯಲ್ಲೂ ಬಾಗಿಲುಗಳನ್ನು ತೆಗೆಯಬಹುದು ಅನ್ನುವುದು ಮತ್ತೆ ನನ್ನ ಅನುಭವಕ್ಕೆ ಬಂದಿತ್ತು. ರಷ್ಯಾದಲ್ಲಿ ರಾಜ್ ಕಪೂರನ ಖ್ಯಾತಿಯ ಬಗ್ಗೆ ಕೇಳಿಯೇ ಬಾಲ್ಯಕಾಲವನ್ನು ಕಳೆದ ನನ್ನ ಜನಾಂಗದವರಿಗೆ ಮೊರೊಕ್ಕೋದಲ್ಲಿ ಷಾರುಖ್ ಖಾನನ ದೇಶದಿಂದ ಬಂದವನೆಂದು ಮರ್ಯಾದೆ ಸಂದದ್ದನ್ನೂ - ಪುಟ್ಟ ಮಕ್ಕಳು "ಹಂ ಲೋಗೋಂಕೊ ಸಮಝ್ ಸಕೇ ತೊ ಸಮಝೋ ದಿಲ್ಭರ್ ಜಾನಿ" ಎಂದು ಹಾಡಿದ್ದನ್ನೂ ಕಂಡಿದ್ದ ನನಗೆ ಇದ್ದಕ್ಕಿದ್ದ ಹಾಗೆ ದಿಲೀಪ್ ಕುಮಾರ್, ದೇವ್ ಆನಂದ್ ಮತ್ತು ರಫಿ, ಸಾಹಿರ್ ಲುಧಿಯಾನ್ವಿಗಳ ಮಾತು ಕೇಳಿ ಹೃದಯ ತುಂಬಿ ಬಂತು. ಹೀಗೆ ಅನುಮಾನದಿಂದಲೇ ಘನಿಯ ಗಾಡಿಯನ್ನು ಹತ್ತಿದ್ದ ನನಗೆ ಭಾಷೆ, ಸಂಸ್ಕೃತಿಯ ಭಿನ್ನತೆಗಳನ್ನು ಮೀರಿ ಅವನೊಡನೆ ಸಂವಹನ ಸಾಧ್ಯವಾದ ಜಾದೂ ಒಂದು ವಿಚಿತ್ರ ಹೆಮ್ಮೆಯನ್ನು ನೀಡಿತು. ಹಾಗೆ ನೋಡಿದರೆ ಹಿಂದಿ ನನ್ನ ಭಾಷೆಯೂ ಅಲ್ಲ, ಅವನದೂ ಅಲ್ಲ ಆದರೂ ರಫಿ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿಬಿಟ್ಟಿದ್ದ.. ರಫಿಯ ಆತ್ಮ ಶಾಂತಿಯಿಂದಿರಲಿ!!

ಹೋಟೇಲಿನಿಂದ ಆಫೀಸಿಗೆ ಬುಚ್ಚರ್ ಮಾರ್ಗವಾಗಿ ಹೋದೆವು. ಈ ದೇಶ ಮೂಲತಃ ಮಾಂಸಾಹಾರಿ ದೇಶ ಅನ್ನುವುದನ್ನು ನಿರೂಪಿಸಲೋ ಎಂಬಂತೆ ವಿವಿಧ ಪ್ರಾಣಿಗಳ ವಿವಿಧ ಭಾಗಗಳನ್ನು ಕತ್ತರಿಸಿ ತರಕಾರಿ ಅಂಗಡಿಯಲ್ಲಿ ಜೋಡಿಸಿಟ್ಟಂತೆ ಮಾಂಸವನ್ನು ಜೋಡಿಸಿಟ್ಟಿದ್ದರು. ಕೇವಲ ಮೂರು ಹಾಡುಗಳನ್ನು ಘನಿಗೆ ರವಾನೆ ಮಾಡುವಷ್ಟರಲ್ಲಿ ಆಫೀಸನ್ನು ತಲುಪಿದ್ದೆವು. "ಪರವಾಗಿಲ್ಲ ಹತ್ತಿರದಲ್ಲೇ ಇದೆ, ಸಂಜೆಗೆ ನಾನು ನಡೆದೇ ಹೋಟೇಲಿಗೆ ಹೋಗಬಹುದು" ಅಂದದ್ದಕ್ಕೆ ಘನಿಯ ತೀವ್ರ ವಿರೋಧ ಬಂತು. ಆ ನಂತರ ತಿಳಿದದ್ದು ಏನೆಂದರೆ ಅಲ್ಲಿನ ಸುರಕ್ಷಾ ನಡಾವಳಿಯ ಪ್ರಕಾರ ನಾವುಗಳು ನಡೆದು ಹೋಗುವುದು ನಿಷಿದ್ಧವಂತೆ. ಎಲ್ಲಾದರೂ ಗುಂಡಿಗೆ ಬಲಿಯಾಗಬಹುದಾದ ಭಯವೊಂದೆಡೆಯಾದರೆ, ಅಪಹರಣಕ್ಕೆ ಒಳಗಾಗುವ ಭೀತಿ ಇನ್ನೊಂದೆಡೆ.

ಜನಸಾಮಾನ್ಯರು, ಎಕ್ಸ್.ಪ್ಯಾಟ್‌ಗಳು, ವಿವಿಐಪಿಗಳು

ಇನ್ನೂ ಮುಂದೆ ನನಗೆ ತಿಳಿದದ್ದು ಈ ವಿಷಯ ಇಲ್ಲಿ ಮೂರು ವರ್ಗಗಳ ಜನರಿದ್ದಾರೆ. ಮೊದಲನೆಯವರು ಸ್ಥಳೀಯರು - ಸ್ಥಳೀಯ ಜನತೆ ಹಾಯಾಗಿ ರಸ್ತೆಯಲ್ಲಿ ತಮ್ಮ ಕಾಯಕ ನಡೆಸಿಕೊಳ್ಳುತ್ತಾ, ತಾಕತ್ತಿದ್ದವರು ತಮ್ಮ ಎ.ಕೆ.೪೭ ಗನ್ನುಗಳನ್ನು ಹೊತ್ತು ಓಡಾಡುತ್ತಾರೆ. ಈ ಜನ ಹೆಚ್ಚಾಗಿ ಬಡವರ್ಗಕ್ಕೆ ಸೇರಿರುತ್ತಾರೆ. ಅವರಿಗೆ ಯಾರಿಂದಲೂ ಯಾವುದರ ಬಗ್ಗೆಯೂ ರಕ್ಷಣೆಯ ಅವಶ್ಯಕತೆಯಿಲ್ಲ. ಆ ವರ್ಗವನ್ನು ಬಿಟ್ಟರೆ ಮಿಕ್ಕಂತೆ ಎರಡು ವರ್ಗಗಳ ಜನ ಆ ಊರಿನಲ್ಲಿ/ದೇಶದಲ್ಲಿ ಓಡಾಡುತ್ತಾರೆ.

ಎರಡನೆಯ ವರ್ಗದವರೆಂದರೆ ಅಷ್ಟೇನೂ ಮುಖ್ಯವಲ್ಲದ ’ಎಕ್ಸ್.ಪ್ಯಾಟ್’ ಜನ. ವಿದೇಶದಿಂದ ಅಲ್ಲಿಗೆ ಕೆಲಸಕ್ಕಾಗಿ ಬಂದಿರುವ ಈ ಜನ ಸುರಕ್ಷಿತವಾದ ಕಾಂಪೌಂಡುಗಳಲ್ಲಿರುವ ಗೆಸ್ಟ್ ಹೌಸ್‍ಗಳಲ್ಲಿ ವಾಸಿಸುತ್ತಾ, ಅಲ್ಲಿನ ಮೆಸ್ಸಿನಲ್ಲಿ ಊಟಮಾಡುತ್ತಾ, ಆಫೀಸಿಗೆ ಘನಿಯ ಕಾರಿನಂತಹ ಕಾರಿನಲ್ಲಿ ಹೋಗಿ ಕೆಲಸ ಮಾಡುವ ಅ-ಸಾಮಾನ್ಯರು. ಆದರೆ ಅಫಘಾನಿಸ್ಥಾನ ’ನಾನ್ ಫ್ಯಾಮಿಲಿ ಸ್ಟೇಷನ್’ ಎಂದು ಘೋಷಿಸಲ್ಪಟ್ಟಿರುವುದರಿಂದ ಒಬ್ಬೊಬ್ಬರೇ ಬಂದು ಇಲ್ಲಿರಬೇಕು ಹಾಗೂ ವರುಷಕ್ಕೆರಡುಬಾರಿ ರಜೆ ಪಡೆದು ಸಂಸಾರವನ್ನು ನೋಡಬೇಕು. ಹೀಗೆ ಕಾಂಪೌಂಡುಗಳಲ್ಲಿರುವವರು ತಮ್ಮದೇ ಜೀವನಶೈಲಿಯನ್ನು ಮೈಗೂಡಿಸಿಕೊಂಡು ಅಲ್ಲೇ ಟಿ.ಟಿ ಆಡುತ್ತಾ, ಟಿವಿ ನೋಡುತ್ತಾ, ಬಾಂಬುಗಳ ಬಗ್ಗೆ ಚಟಾಕಿಗಳನ್ನು ಹಾಕುತ್ತಾ ಜೀವಿಸುತ್ತಾರೆ. ನನಗೆ ತಿಳಿದ ಕೆಲವರಲ್ಲಿ ಒಬ್ಬ ಖಾಲಿ ಸಮಯ ಕಳೆಯಲು ಫ್ರೆಂಚ್ ಭಾಷೆ ಕಲಿಯುತ್ತಿದ್ದ. ಮತ್ತೊಬ್ಬ ಚೆನ್ನೈ ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಗೆ ಕಟ್ಟಿ ಓದುತ್ತಿದ್ದ. ಇದೇ ವರ್ಗಕ್ಕೆ ಹಿಜ್ರತ್‍ನಂತಹ ಅಫಘನಿಗಳೂ ಸೇರುತ್ತಾರೆ. ಅವರುಗಳು ಮೂಲತಃ ಇದೇ ದೇಶದವರಾದರೂ ತುಸು ಶ್ರೀಮಂತವರ್ಗಕ್ಕೆ ಸೇರಿ ಪಾಕಿಸ್ತಾನ, ಇಂಗ್ಲೆಂಡ್, ಭಾರತ, ಅಮೆರಿಕದಲ್ಲಿ ವಿದ್ಯೆ ಪಡೆದು ಈಗ ತಮ್ಮ ತಯ್ನಾಡಿಗೆ ಹಿಂದಿರುಗಿ ಬಂದಿರುವವರು. ಇವರುಗಳು ಇನ್ನೂ ಸ್ಥಳೀಯ ಸಂಸ್ಕೃತಿಯಲ್ಲಿ ಪೂರ್ಣವಾಗಿ ಬೆರೆತಿಲ್ಲ. ಹಾಗೂ ಅನೇಕರು ತಮ್ಮ ಅಮೆರಿಕದ ಪಾಸ್‍ಪೋರ್ಟನ್ನೇ ಇನ್ನೂ ಇಟ್ಟುಕೊಂಡಿದ್ದಾರೆ. ಇವರಿಗೂ ’ಎಕ್ಸ್.ಪ್ಯಾಟ್ಸ್’ಗಿರುವ ಕಾಯಿದೆಯೇ ವರ್ತಿಸುತ್ತದೆ.

ಮೂರನೆಯ ವರ್ಗದವರು ’ಮುಖ್ಯರಾದವರು’ ಇವರುಗಳು ವಿಶ್ವಬ್ಯಾಂಕು, ವಿಶ್ವ ಸಂಸ್ಥೆಯಂತಹ ಜಾಗಗಳಲ್ಲಿ ಉನ್ನತ ಸ್ಥಾನದಲ್ಲಿರುವವರು. ಅಥವಾ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರು. ಇವರುಗಳು ವಜೀರ್-ಅಕ್ಟರ್-ಖಾನ್ ಅನ್ನುವಂತಹ ಶ್ರೀಮಂತರು ಜೀವಿಸುವ ಪ್ರದೇಶದಲ್ಲಿ ಸಾಮಾನ್ಯತಃ ಮನೆ ಮಾಡಿರುತ್ತಾರೆ. ಅವರುಗಳ ಮನೆಗಳು ಕೋಟೆಗಳ ರೀತಿಯಲ್ಲಿರುತ್ತವೆ. ಈ ಜನರು ನಿಜಕ್ಕೂ ಜೈಲಿನಲ್ಲಿದ್ದಂತೆ ಇರುತ್ತಾರೆ. ಅವರುಗಳ ಸಂಸ್ಥೆಯ ನಿಯಮಾನುಸಾರ ಅವರುಗಳು ಸಾಮಾನ್ಯ ಕಾರುಗಳಲ್ಲಿ ಓಡಾಡಬಾರದಂತೆ. ಬದಲಿಗೆ ಅವರಿಗಾಗಿಯೇ ಆರ್ಮರ್ಡ್ ಬುಲೆಟ್ ಫ್ರೂಫ್ ಕಾರುಗಳಿರುತ್ತವೆ. ಅವರುಗಳು ನಡೆದಾಡುವುದಕ್ಕೂ ಸ್ವಾತಂತ್ರವಿಲ್ಲ. ಹಾಗೂ ಹೊರಗೆ ಊಟ ಮಾಡಬೇಕೆಂದು ಅನ್ನಿಸಿದರೆ ಅವರುಗಳು ಹೋಗಬೇಹುದಾದ ’ಎಂ.ಓ.ಎಸ್. ಅಪ್ರೂವ್ಡ್’ [ಸುರಕ್ಷಾ ಮಂತ್ರಾಲಯದ ಅನುಮತಿ ಪಡೆದಿರುವ] ರೆಸ್ಟಾರೆಂಟುಗಳಿಗೆ ಮಾತ್ರ ಹೋಗಬೇಕು. ಇದ್ದಕ್ಕಿದ್ದಂತೆ ವಿಐಪಿಗಳ ಜೀವನ ಇಷ್ಟು ದುಸ್ತರವಾಗಬಹುದು ಎಂದು ನನಗೆ ಗೊತ್ತಾದದ್ದು ಈ ಎಲ್ಲ ವಿವರಗಳನ್ನು ಕೇಳಿದಾಗಲೇ. ಇನ್ನೂ ಗಮ್ಮತ್ತಿನ ವಿಷಯವೆಂದರೆ ನಾವುಗಳು ಓಡಾಡುತ್ತಿದ್ದ ಸಾಮಾನ್ಯ ಕಾರುಗಳನ್ನು ವಿಶ್ವಬ್ಯಾಂಕಿನವರು "ಸಾಫ್ಟ್ ಸ್ಕಿನ್ದ್ [ಕೋಮಲ ತ್ವಚೆಯ] ಕಾರ್" ಎಂದು ಕರೆಯುತ್ತಾರಂತೆ.

ಹೀಗೂ ಒಬ್ಬರು ಗಾಂಧಿ!

ಅಲ್ಲಿದ್ದಾಗ ಇಂಥ ಎಂ.ಒ.ಎಸ್ ಅಪ್ರೂವ್ಡ್ ಹೋಟೇಲಿನಲ್ಲಿ ಒಂದು ಊಟವನ್ನೂ ಮಾಡಿದ್ದಾಯಿತು. ವಜೀರ್ ಅಕ್ಬರ್ ಖಾನ್ ಪ್ರಾಂತದಲ್ಲಿರುವ ಇಂಥದೊಂದು ಹೋಟೇಲಿಗೆ ಹೋಗುವ ಮಾರ್ಗದಲ್ಲಿ ನಾವು ಗಾಂಧಿ ಮಾರ್ಗವನ್ನು ಹಾಯ್ದು ಹೋಗಬೇಕಾಯಿತು. ಗಾಂಧಿಯ ಹೆಸರು ನೋಡಿ ನಾನು ಸಹಜವಾಗಿಯೇ ಪುಳಕಿತಗೊಂಡೆ. ಆದರೆ ನಂತರ ತಿಳಿದದ್ದೇನೆಂದರೆ ಅದು ಮಹಾತ್ಮನ ಹೆಸರಿನ ರಸ್ತೆಯಲ್ಲ - ಬದಲಿಗೆ ಇಂದಿರಾಗಾಂಧಿ ರಸ್ತೆ. ಆ ರಸ್ತೆಯಂಚಿನಲ್ಲಿ ಆಕೆಯ ಹೆಸರಿನ ಒಂದು ಮಕ್ಕಳಾಸ್ಪತ್ರೆ ಭಾರತ ಸರಕಾರದ ಸಹಕಾರದೊಂದಿಗೆ ನಡೆಯುತ್ತಿದೆಯಂತೆ. ಭಾರತೀಯರನ್ನು ಕಂಡರೆ ಅಲ್ಲಿನ ಜನತೆಗೆ ಇರುವ ಅತ್ಯಂತ ಪ್ರೀತಿಗೆ ನಮ್ಮ ಸರಕಾರ ಮಾಡಿರುವ ಇಂಥ ಅನೇಕ ಕೆಲಸಗಳೂ ಕಾರಣ ಎಂದು ನನಗೆ ಕೆಲವರು ಹೇಳಿದರು.

ಈ ವಿಷಯವನ್ನು ಚರ್ಚಿಸುತ್ತಾ ಹಿಜ್ರತ್ ತಮಾಷೆ ಮಾಡಿದ. "ಇಲ್ಲಿ, ಯಾರೂ ಗುಂಡು ಹಾರಿಸಿ ಜನರನ್ನು ಸಾಯಿಸುವುದಿಲ್ಲ. ಹೀಗಾಗಿ ಬುಲೆಟ್ ಫ್ರೂಫ್ ಕಾರಿನಲ್ಲಿ ಹೋಗುವುದರಲ್ಲಿ ಅರ್ಥವಿಲ್ಲ. ಸಾಯಿಸಬೇಕಾದರೆ ಆತ್ಮಘಾತಕ ಬಾಂಬಿನ ದಾಳಿಯಾಗುತ್ತದೆ. ಆ ದಾಳಿಗೆ ಈ ದಪ್ಪತೊಗಲಿನ ವಾಹನಗಳೂ ತತ್ತರಿಸುತ್ತವೆ!" ಹೀಗೆ ಅರ್ಥಹೀನ ಸುರಕ್ಷೆಯ ನಡುವಿನಲ್ಲಿ ಅನೇಕ ಸ್ಥರದ ಜನರು ಆ ದೇಶದ ಪುನರ್ನಿರ್ಮಾಣ ಮಾಡುತ್ತಿರುವ ಭ್ರಮೆಯಲ್ಲಿ ಮುಂದುವರೆಯುತ್ತಿದ್ದಾರೆ.

ಚಿಕನ್ ಬೀದಿಯಲ್ಲಿ ರತ್ನಗಂಬಳಿಗಳು

ಮೊದಲ ಬಾರಿಗೆ ಹೋದಾಗ ಕಾಬೂಲು ನಗರವನ್ನು ನೋಡಬೇಕೆಂದು ನಾನು ಬಯಸಿದೆ. ಆದರೆ ನನಗೆ ಅನುಮತಿಯಿರಲಿಲ್ಲ. ಚುನಾವಣೆಯ ತಯಾರಿಯಲ್ಲಿ ಅಲ್ಲಲ್ಲಿ ರಾಕೆಟ್ ಧಾಳಿಗಳಾಗುತ್ತಿದ್ದುವು. ಹೀಗಾಗಿ ಎರಡನೆಯ ಬಾರಿಗೆ ನನ್ನ ಪ್ರವಾಸೋದ್ಯಮವನ್ನು ಕಾಯ್ದಿರಿಸುತ್ತೇವೆ ಎಂದು ಹೇಳಿದರು. ಮೊದಲ ಬಾರಿಗೆ ಚಿಕನ್ ಸ್ಟ್ರೀಟ್ ಅನ್ನುವ ರಸ್ತೆಯಲ್ಲಿ ಎರಡು ಸುತ್ತು ಹಾಕಲು ನನಗೆ ಪರವಾನಗಿ ಸಿಕ್ಕಿತ್ತು. ಅಲ್ಲಿನ ಅಂಗಡಿಗಳಲ್ಲಿ ಕಾಲೀನ್ [ರತ್ನಗಂಬಳಿಗಳು] ಉತ್ತಮವಾಗಿರುತ್ತವೆ, ಆದರೆ ಚೌಕಾಸಿ ಮಾಡಬೇಕು ಎಂದು ನನ್ನನ್ನು ತಾಕೀತು ಮಾಡಿ ಕಳಿಸಿದರು. ಅಲ್ಲಿನ ರತ್ನಗಂಬಳಿಗಳ ಕಲೆ ಅದ್ಭುತ. ನಾನು ಈ ರತ್ನಗಂಬಳಿಗಳನ್ನು ನೋಡುವ ಕುತೂಹಲವನ್ನು ಹೊಂದಿದ್ದರೂ ಕೊಳ್ಳುವ ಮೂಡಿನಲ್ಲಿರಲಿಲ್ಲ. ಕಾರಣ ನನ್ನ ಪುಟ್ಟ ಸೂಟ್‌ಕೇಸಿನಲ್ಲಿ ಆ ರತ್ನಗಂಬಳಿಯನ್ನು ಸೇರಿಸಲು ಸಾಧ್ಯವೂ ಇರಲಿಲ್ಲ, ಹಾಗೂ ನನ್ನ ಬಳಿ ಸಾಕಷ್ಟು ಹಣವೂ ಇರಲಿಲ್ಲ.

ಆದರೆ ಒಬೈದುಲ್ಲಾನ ಅಂಗಡಿಗೆ ಹೋದಾಗ ಆತ ನನ್ನ ಎರಡೂ ತೊಂದರೆಗಳನ್ನು ಕೂಡಲೇ ಪರಿಹರಿಸುವುದಾಗಿ ಹೇಳಿದ. ಹೇರಾತ್ ಪ್ರಾಂತದಲ್ಲಿ ಮಾಡುವ ರತ್ನಗಂಬಳಿಗಳು ತೆಳ್ಳಗಿದ್ದು ಅವನ್ನು ಪುಟ್ಟದಾಗಿ ಮಡಚಿಕೊಡುವುದಾಗಿಯೂ, ಕ್ರೆಡಿಟ್ ಕಾರ್ಡಿದ್ದರೆ ಅದರಲ್ಲಿ ಹಣ ಕಟ್ಟಬಹುದೆಂದೂ ಆತ ಹೇಳಿದ. ಆದರೆ ಬಹುಶಃ ನಾನೇ ಕೊಳ್ಳಲು ತಯಾರಿರಲಿಲ್ಲವೇನೋ. ಆದರೂ ಅನುಭವ ಪಡೆಯಲೆಂಬಂತೆ ಚೌಕಾಸಿಯನ್ನಂತೂ ಮಾಡಿದೆ. ಆತ ವ್ಯಾಪಾರದ ಎಲ್ಲ ಸಿಹಿ ಮಾತುಗಳನ್ನೂ ಹೇಳಿದ.. ನೀನು ಭಾರತದಿಂದ ಬಂದಿದ್ದೀಯ, ಹೀಗಾಗಿ ನೀನು ನಮ್ಮದೇಶದವರಿಗೆ ಸಮಾನ. ಅಮೆರಿಕದವರಾಗಿದ್ದರೆ ನಾನು ಬೆಲೆ ಏರಿಸಿ ಹೇಳುತ್ತಿದ್ದೆ. ಆದರೆ ನಿನಗೆ ನಾನು ಒಳ್ಳೆಯ ಬೆಲೆಯನ್ನೇ ಕೊಡುತ್ತೇನೆ.. ಎಂದೆಲ್ಲಾ ಸಿಹಿಮಾತುಗಳನ್ನಾಡಿದ್ದಲ್ಲದೇ ತುಸು ದುಃಖದ ಮಾತನ್ನೂ ಹೇಳಿದ - "ನೋಡು, ನಾನು ಹೇರಾತ್‌ಗೆ ಸೇರಿದವನು. ರತ್ನಗಂಬಳಿಗಳನ್ನು ನೇಯುವ ಮನೆತನಕ್ಕೆ ಸೇರಿದವನು. ಅಲ್ಲಿಂದ ಒಂದು ಪ್ಯಾಕೇಜನ್ನು ಕಳಿಸಿದರೆ ಇಲ್ಲಿಗೆ ಸುರಕ್ಷಿತವಾಗಿ ಬರುತ್ತದೆನ್ನುವ ನಂಬಿಕೆಯೂ ಇಲ್ಲ. ಅಂಥ ಪರಿಸ್ಥಿತಿಯಲ್ಲಿ ಸುರಕ್ಷಾ ಏರ್ಪಾಟಿಲ್ಲದೇ ನಾವು ವ್ಯಾಪಾರ ಮಾಡುತ್ತಿದ್ದೇವೆ. ನಿನ್ನಂಥಹವರು ನಮ್ಮನ್ನು ಪ್ರೋತ್ಸಾಹಿಸಬೇಕು" ಎಂದೆನ್ನುವ ಮಾತುಗಳನ್ನು ಹೇಳಿದರೂ ಡಾಲರುಗಳಿಲ್ಲದ ನಾನು ಖಾಲಿ ಕೈಯಲ್ಲೇ ವಾಪಸ್ಸಾದೆ.

ನ್ಯಾಟೋ ಪಡೆಗಳ ’ಇಂಟಲಿಜೆನ್ಸ್’

ನಾನು ಎರಡನೆಯ ಬಾರಿ ಕಾಬೂಲಿಗೆ ಹೋಗುವಷ್ಟರ ವೇಳೆಗೆ ಪರಿಸ್ಥಿತಿ ತುಸುವೇ ಬದಲಾಗಿತ್ತು. ಚುನಾವಣೆ ಮುಗಿದಿತ್ತು. ಚುನಾವಣೆಯ ಸಮಯದಲ್ಲಿ ಅಲ್ಲಿನ ಎಲ್ಲ ಸಂಸ್ಥೆಗಳೂ ಬಾಗಿಲು ಜಡಿದು ’ಎಕ್ಸ್.ಪ್ಯಾಟ್ಸ್’ ಎಲ್ಲರೂ ತಮ್ಮ ತಮ್ಮ ದೇಶಕ್ಕೆ ಹೋಗಿ ರಜೆಯ ಆನಂದವನ್ನು ಮುಗಿಸಿ ವಾಪಸ್ಸಾಗಿದ್ದರು. ಈಗ ಚುನಾವಣೆಯ ಫಲಿತಾಂಶ ಯಾವಾಗ ಬರುವುದೋ ಅನ್ನುವ ಕುತೂಹಲ ಮಾತ್ರವಿತ್ತು. ಈ ಬಾರಿ ನಗರ ಪ್ರವೇಶ ಮಾಡುತ್ತಿದ್ದಂತೆಯೇ ನನಗೆ ಕಾಣಿಸಿದ್ದು ಗಾಳಿಯಲ್ಲಿ ತೇಲಾಡುತ್ತಿದ್ದ ಒಂದು ಪುಟ್ಟವಿಮಾನಾಕಾರದ ಬಿಳಿಯ ಬಲೂನು. ರಾಷ್ಟ್ರಾಧ್ಯಕ್ಷರ ನಿವಾಸದ ಮೇಲು ರಾಕೆಟ್ ಧಾಳಿಯ ಪ್ರಯತ್ನವಾದಾಗಿನಿಂದಲೂ ಇದು ಆಕಾಶದಲ್ಲಿ ತೇಲುತ್ತಿದೆಯಂತೆ. ಈ ಬಲೂನನ್ನು ನ್ಯಾಟೋ ಪಡೆಗಳು ತೇಲಿಬಿಟ್ಟಿವೆಯಂತೆ - ಅದರೊಳಗಿರುವ ಕ್ಯಾಮರಾಗಳು ನಗರದಲ್ಲಿ ನಡೆವ ಅನುಮಾನಾಸ್ಪದ ಚಟುವಟಿಕೆಗಳನ್ನು ಸೆರೆ ಹಿಡಿಯಲು ಸಕ್ಷಮವಾಗಿವೆಯಂತೆ. ಈ ತಂತ್ರಜ್ಞಾನವೂ ಅದ್ಭುತವಾದದ್ದು ಅಂತ ನಾನು ಮೆಚ್ಚಿಕೊಳ್ಳುವಷ್ಟರಲ್ಲಿಯೇ ನನ್ನ ಜೊತೆಗಿದ್ದ ಸುಲ್ತಾನ್ ಹೇಳಿದ - "ಇದೇ ಥರದ ಬಲೂನನ್ನು ಹೆಲ್ಮತ್ ಹಾಗೂ ಗಜನಿಯಲ್ಲಿ ಕಟ್ಟಿದ್ದಾರೆ, ಗಜನಿಯ ಬಲೂನನ್ನು ತಾಲಿಬಾನಿಗೆ ಸೇರಿದವರು ಷೂಟ್ ಮಾಡಿ ಕೆಳಕ್ಕೆ ತಂದದ್ದೂ ಆಗಿದೆ"... ಹೀಗೆ ಯಾವುದೇ ಉತ್ಕೃಷ್ಟ ತಂತ್ರಜ್ಞಾನವೂ ಅಲ್ಲಿನ ಜನರ ನಗೆಯ ಪಾಟಲಾಗುವುದು ಸಹಜವೇ ಇತ್ತೇನೋ.

ಮತ್ತು ಇನ್ನಷ್ಟು ಟೂರಿಸಂ....

ಎರಡನೆಯ ಬಾರಿಗೆ ನಾನು ಅಲ್ಲಿಗೆ ಹೋಗುವ ವೇಳೆಗೆ ನನಗೂ ಆ ದೇಶದ ರೀತಿನೀತಿ ಸ್ವಲ್ಪ ಅರ್ಥವಾಗಿತ್ತು. ಅಲ್ಲಿಗೆ ಹೋಗಲು ವೀಸಾ ಪಡೆಯುವುದೂ ಒಂದು ಪ್ರಯಾಸವೇ. ದೆಹಲಿಯ ಕಾನ್ಸುಲೇಟಿನಲ್ಲಿ ಸಾಲಿನಲ್ಲಿ ನಿಂತು ಎಲ್ಲ ಪ್ರಶ್ನೆಗಳಿಗೂ ಸಂಯಮದಿಂದ ಉತ್ತರ ನೀಡಿ ವೀಸಾ ಪಡೆಯಬೇಕು. ಮೊದಲಬಾರಿ ನನಗೆ ’ಎಂಟ್ರಿ’ವೀಸಾ ಕೊಟ್ಟರಾದರೂ, ಎರಡನೆಯ ಬಾರಿ ಜಬರ್ದಸ್ತಿಯಿಂದ ’ಟೂರಿಸ್ಟ್’ ವೀಸಾ ಕೊಟ್ಟರು. ಯುದ್ಧನಡೆಯುತ್ತಿರುವ - ದಿನವೂ ಆತ್ಮಘಾತಕ ಧಾಳಿಯಲ್ಲಿ ಹಲವಾರು ಜನರನ್ನು ಕಳೆದುಕೊಳ್ಳುತ್ತಿರುವ ಈ ದೇಶಕ್ಕೆ ಟೂರಿಸ್ಟ್ ವೀಸಾ ಪಡೆದು ಹೋಗಬೇಕಾದ ವಿರೊಧಾಭಾಸವನ್ನು ನೋಡಿ ನನಗೆ ಒಳಗೇ ನಗೆಯೂ ಬಂತು.

ನನ್ನ ಮೀಟಿಂಗುಗಳಾದ ನಂತರ ನಾನು ಹಿಜ್ರತ್‍ಗೆ ಹೇಳಿದೆ. ಈ ಬಾರಿ ಟೂರಿಸ್ಟ್ ವೀಸಾ ಪಡೆದು ಬಂದಿರುವುದರಿಂದ ಕಾಬೂಲು ನಗರವನ್ನು ತೋರಿಸಲೇ ಬೇಕು. ಕಡೆಗೂ ನಾನು ವಾಪಸ್ಸಾಗುವ ಹಿಂದಿನ ದಿನ ಹಿಜ್ರತ್ ನನ್ನನ್ನು ಬಾಗ್-ಎ-ಬಾಬರ್‍‍ಗೆ ಕರೆದೊಯ್ದ. ಬಾಬರನ ಸಮಾಧಿಯ ದರ್ಶನವನ್ನು ಪಡೆದದ್ದಲ್ಲದೇ ಅದರ ಸುತ್ತಮುತ್ತಲಿನ ಪ್ರಾಂಗಣವನ್ನು ಎಷ್ಟು ಶುದ್ಧವಾಗಿ ಇಟ್ಟಿದ್ದರೆಂದರೆ ನಾವು ಕಾಬೂಲಿನಲ್ಲಿಯೇ ಇದ್ದೇವೆಯೇ ಅನ್ನುವ ಅನುಮಾನ ಬರುವಷ್ಟು ಪರಿಸ್ಥಿತಿ ’ಸಾಮಾನ್ಯ’ದ್ದಾಗಿತ್ತು. ಆದರೆ ಆ ಪ್ರಂಗಣವನ್ನು ನಾವು ಪ್ರವೇಶಿಸಲು ವಿದೇಶೀಯರಾದ್ದರಿಂದ ಐದು ಡಾಲರ್ ತೆತ್ತಬೇಕಾಯಿತು. ಚಾಮರಾಜಪೇಟೆಯಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯನ್ನು ನೋಡಹೊರಟ ವಿದೇಶೀಯರಿಂದ ನಾವೂ ಇದೇ ರೀತಿಯ ಮೊಬಲಗನ್ನು ಕೀಳುವುದರಿಂದ ಇಲ್ಲಿ ಈ ಡಾಲರುಗಳನ್ನು ಕಟ್ಟುವುದರಲ್ಲಿ ಕಾವ್ಯನ್ಯಾಯವಿದೆ ಅನ್ನಿಸದಿರಲಿಲ್ಲ.

ಬಾಗ್-ಎ-ಬಾಬರಿನಿಂದ ಹಿಜ್ರತ್ ನಮ್ಮನ್ನು ಹಳೆಯ ನಗರದ ಮೂಲಕ ವಾಪಸ್ಸು ಕರೆತಂದ. ಅಲ್ಲಿನ ಪ್ರವಾಸೋದ್ಯಮವೂ ವಿಡಂಬನಾತ್ಮಕವಾಗಿಯೇ ಇದೆ. ಯಾಕೆಂದರೆ ರಸ್ತೆಯಲ್ಲಿ ಹೋಗುತ್ತಿದ್ದಂತೆ ನಾವುಗಳು ’ಅಲ್ಲಿನೋಡು ಆ ಕಟ್ಟಡ ವಿಧಾನ್ ಸೌಧ, ಇದು ಉಚ್ಚ ನ್ಯಾಯಾಲಯ’ ಎಂದು ತೋರಿಸುವ ಹಾಗೆಯೇ ’ಅಲ್ಲಿ ನೋಡು ಅದು ಸೆರೀನಾ ಹೋಟೇಲು, ಅಲ್ಲಿ ಆತಂಕವಾದಿಗಳು ದಾಳಿ ಮಾಡಿ ಅನೇಕ ಜನರನ್ನು ಕೊಂದರು. ಇದು ಭಾರತದಲ್ಲಿ ೨೬/೧೧ರ ಕಾಂಡಕ್ಕಿಂತ ಮುಂಚೆಯೇ ಆಗಿತ್ತು. ಇಲ್ಲಿನೋಡು, ಈ ಕಂದರ, ಮೊನ್ನೆ ಇಟಲಿ ದೇಶದ ಒಂದು ಕಾನ್ವಾಯ್ ಬರುತ್ತಿದ್ದಾಗ ಆದ ಆತ್ಮಘಾತಕ ಹಲ್ಲೆ ನಡೆದದ್ದು ಇಲ್ಲೇ’ ಅನ್ನುವಂತಹ ಮಾತುಗಳನ್ನು ಕೇಳಬೇಕು. ಅದೂ ಒಂದು ಅನುಭವವೇ.

೪೭ರ ಸ್ವಾತಂತ್ರ!

ಎಲ್ಲೆಲ್ಲೂ ಎಕೆ೪೭ ಸ್ಟೆನ್ ಗನ್ನುಗಳನ್ನು ಹೊತ್ತು ನಡೆವ ಜನ, ಸಾವಿರ ಡಾಲರುಗಳಿಗೆ ಬೇಕಿದ್ದರೆ ನಿನಗೂ ಒಂದು ಗನ್ ಕೊಡಿಸಿಕೊಡುತ್ತೇನೆಂದು ಚಟಾಕಿ ಹಾರಿಸುವ ಸ್ಥಳೀಯರ ನಡುವೆ ನಮ್ಮ ದಲಿತ ಕವಿ ಸಿದ್ಧಲಿಂಗಯ್ಯನವರು ವಿಚಿತ್ರವಾಗಿ ನೆನಪಾದರು. ಎಲ್ಲೆಲ್ಲೂ ಎಕೆ೪೭ ಗನ್ನು ಗಳನ್ನು ಕಂಡು ಯಾರಿಗೆ ಬಂತು ಯಾತಕೆ ಬಂತು ೪೭ರ ಸ್ವಾತಂತ್ರ? ಎಂದು ಕೇಳುವ ಹಾಗಾಯಿತು!!

ಗ್ರಾಂಡ್ ಎಕ್ಸಿಟ್

ಕಡೆಗೆ ಸಂಜೆಗೆ ಎಂ.ಒ.ಎಸ್.ನ ಅನುಮತಿಯಿಲ್ಲದ ಭಾರತೀಯ ದಿಲ್ಲಿ ದರ್ಬಾರ್ ಅನ್ನುವ ರೆಸ್ಟಾರೆಂಟಿನಲ್ಲಿ ಮನಮೋಹನ್ ಸಿಂಗ್ ಮತ್ತು ಕರ್ಜಾಯಿಯ ಚಿತ್ರದ ಆಶೀರ್ವಾದದಡಿಯಲ್ಲಿ, ಲಾಂಗ್ ಲಿವ್ ಇಂಡೋ ಆಫ್ಘನ್ ಫ್ರಂಡ್‌ಶಿಪ್ ಅನ್ನುವ ಅಕ್ಷರಗಳಡಿಯಲ್ಲಿ ಊಟ ಮಾಡಿದೆವು. ಬರುತ್ತಾ ದಾರಿಯಲ್ಲಿ ಕಂಡ ಸೆಂಟ್ರಲ್ ಪಾರ್ಕ್ ಸಿನೇಮಾ ಹಾಲಿನಲ್ಲಿ ಅಜಯ್ ದೇವಗನ್‍ನ ದಿಲ್ ಜಲೆ ಚಿತ್ರ ಆಡುತ್ತಿತ್ತು. ಹಿಂದಿನ ಬಾರಿ ಬಂದಾಗ ಬಾಬಿ ದೇವಲ್‍ನ ಬಾದಲ್ ಸಿನೇಮಾ ಆಡುತ್ತಿತ್ತು. ಜನ ಈಗಲೂ ಅಫಘಾನಿಸ್ಥಾನದ ಹಿನ್ನೆಲೆಯಲ್ಲಿ ಅಮಿತಾಭ್ ನಟಿಸಿದ್ದ ಖುದಾ ಗವಾ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ. ನನಗೆ ಆ ಜನರ ನಡುವೆ ಕೂತು ನಮ್ಮ ಸಿನೇಮಾ ನೋಡುವ ಆಸೆಯಿತ್ತಾದರೂ ಅದಕ್ಕೆ ಅನುಮತಿ ದೊರೆಯುವುದಿಲ್ಲ ಎಂದು ತಿಳಿದಿದ್ದರಿಂದ ಸುಮ್ಮನಿದ್ದೆ.

ಬೆಳಿಗ್ಗೆ ಎದ್ದು ಪ್ರಯಾಣ ಬೆಳೆಸಬೇಕಿತ್ತು. ಏರ್‌ಪೋರ್ಟಿನಲ್ಲಿ ನನ್ನ ಸೂಟ್‍ಕೇಸ್ ತೆಗೆದು ಎಲ್ಲವನ್ನೊ ಹಣಕಿ ನೋಡಿದ ಪೋಲೀಸಿನವ ’ಹಿಂದೂಸ್ತಾನ್?’ ಅಂದ. ಹೌದೆಂದು ಗೋಣುಹಾಕಿದೆ. ನನ್ನಬಳಿ ಯಾವುದಾದರೂ ವಿಸಿಡಿ ಇದೇಯೇ ಎಂದು ಕೇಳಿದ. ಇಲ್ಲವೆಂದಾಗ ಅವನ ನಿರಾಶೆ ಕಾಣುತ್ತಿತ್ತು. ಮತ್ತೊಮ್ಮೆ ಹೋದರೆ ಘನಿಗೆ ರಫಿಯ ಸಿಡಿಗಳನ್ನೂ ಒಂದಿಷ್ಟು ಹಳೆಯ ಹಿಂದಿ ಸಿನೆಮಾಗಳನ್ನೂ ಒಯ್ಯಬೇಕೆಂದು ನಿರ್ಧಾರ ಮಾಡಿದೆ. ಆದರೆ ಇಲ್ಲಿಗೆ ಬಂದಕೂಡಲೇ ಭಾರತೀಯ ದೂತಾವಾಸದ ಮೇಲೆ ದಾಳಿಯ ಪ್ರಯತ್ನ ನಡೆಯಿತು. ಭಾರತದಲ್ಲಿದ್ದ ಗೆಳೆಯರು ನಾವು ಸುರಕ್ಷಿತವಾಗಿ ವಾಪಸ್ಸಾದೆನೇ ಎಂದು ಕೇಳಿ ಸಂದೇಶ ಕಳಿಸಿದರೆ, ಅಲ್ಲಿ ಮಾತ್ರ ಗೆಳೆಯ ಮಾಧವನ್ ’ನೀನು ಮುಂದಿನ ಬಾರಿ ಬಂದಾಗ ಈ ಸ್ಫೋಟದ ಸ್ಪಾಟನ್ನು ತೋರಿಸುತ್ತೇನೆ’ ಎಂದು ಕಾಬೂಲಿನಿಂದ ಮೆಸೇಜ್ ಕಳಿಸಿದ. ಪ್ರವೇಶದ ಸಮಯದಲ್ಲಿ ನೀಡಿದ ನನ್ನ ರಿಜಿಸ್ಟ್ರೇಷನ್ ಕಾರ್ಡನ್ನು ಯಾರು ಹಿಂದಕ್ಕೆ ಪಡೆಯಲಿಲ್ಲ. ಇದೇ ಜನ, ಒಂದೆಡೆ ರಫಿ, ಅಮಿತಾಭ್ ಹೆಸರಿನಲ್ಲಿ ಭರಪೂರ ಪ್ರೀತಿ. ಅದೇ ದೇಶದ ಇತರ ಜನ: ಅವರಿಗೆ ತಡೆಯಲಾಗದ ಆತ್ಮಘಾತುಕ ದ್ವೇಷ. ವಿಪರ್ಯಾಸಗಳ ಬೀಡು ಈ ದೇಶ.

ಅಕ್ಟೋಬರ್ ೨೦೦೯ವೈಟ್ ಹೊಟೇಲ್: ಕೋಣೆಗೊಬ್ಬ ಕಲಾವಿದ - ಕಲಾವಿದನಿಗೊಂದು ಕೋಣೆ

ಛಳಿಗಾಲದಲ್ಲಿ ನಡುಗಾಡುತ್ತಾ ಇಲ್ಲಿಗೆ ಬಂದು ಪಾಠಮಾಡುವುದು ಗಮ್ಮತ್ತಿನ ವಿಷಯವೇನೂ ಅಲ್ಲ. ಭಾಷೆ ಬಾರದ, ಊಟ ಒಗ್ಗದ, ಈ ಜಾಗದಲ್ಲಿ ನಾನು ಅನಕ್ಷರಸ್ಥ - ಬರೇ ಫ್ರೆಂಚ್ ಮತ್ತು ಫ್ಲೆಮಿಷ್ ಮಾತನಾಡುವ ಈ ಬಹುಭಾಷಾ ನಗರದಲ್ಲಿ ನಾನು ಇಳಿದಾಗಲೆಲ್ಲಾ ಒಂದೊಂದು ಹೆಜ್ಜೆಗೂ ಜನರನ್ನು ಮುಂದಿನ ಅಡಿ ಎಲ್ಲಿಡಬೇಕೆಂದು ಕೇಳಿಕೊಳ್ಳುತ್ತಾ ನಡೆಯಬೇಕು. ನಕ್ಷೆಗಳನ್ನು ನೋಡಿ ಓಡಾಡುವ ಜನರ ಮಧ್ಯೆ ಮತ್ತೆ ಮತ್ತೆ ದಾರಿ ಕೇಳುವ ವಿಚಿತ್ರಕ್ಕಿಳಿಯಬೇಕು. ಹಲವು ಬಾರಿ ನಕ್ಷೆಗಳೂ ಅವರ ಭಾಷೆಯಲ್ಲೇ ಇರುತ್ತವೆ. ಹೋಗಲಿ ಕಂಪ್ಯೂಟರನ್ನು ತಗೆದು ಗೂಗಲ್ ಭಗವಾನನ ಮೊರೆ ಹೋಗಬೇಕೆಂದರೆ ಆತನೂ ಸ್ಥಳೀಯ ಭಾಷೆಯನ್ನು ಬಿಟ್ಟು ಆಂಗ್ಲಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಾನೆ. ಹೀಗೆ ೨೪ ರಾಷ್ಟ್ರಗಳ ಪ್ರತಿನಿಧಿಸುವ ವಿದ್ಯಾರ್ಥಿವೃಂದಕ್ಕೆ ಭಾರತೀಯ ಮೈಕ್ರೊಫೈನಾನ್ಸ್ ಬಗ್ಗೆ ಲೆಕ್ಚರುಗಳನ್ನು ಕುಟ್ಟುವುದು ಸುಲಭವಲ್ಲ. ಮೊದಲ ದಿನದಂದೇ ನಾನು ಕ್ಲಾಸಿಗೆ ಹೇಳಿಬಿಟ್ಟೆ. ನನ್ನ ಉಚ್ಚಾರದಿಂದಾಗಿ ಯಾರಿಗಾದರೂ ತೊಂದರೆಯಿದ್ದರೆ ಅದನ್ನು ಭರಿಸಬೇಕು. ನಾವು ಭಾಷೆಯನ್ನು ಆಡುವುದೇ ಹೀಗೆ. ಹೇಗೆ ಹೊರಗಿನವರು ನಮ್ಮಲ್ಲಿಗೆ ಪಾಠಮಾಡಲು ಬಂದಾಗ ತಮ್ಮ ಉಚ್ಚಾರವನ್ನು ಬದಲಾಯಿಸುವುದಿಲ್ಲವೋ ಹಾಗೆಯೇ ನಾನೂ ಬದಲಾಯಿಸಲಾರೆ. ಆದರೆ ಶರವೇಗದಲ್ಲಿ ಮಾತನಾಡುವುದಕ್ಕೆ ಬದಲಾಗಿ ನಿಧಾನವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ. ಹಾಗೂ ಹೀಗೂ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಹೋದಬಾರಿ ಇದೇ ಯೂನಿವರ್ಸಿಟಿಯಲ್ಲಿ ಸೆಮಿನಾರು ಕುಟ್ಟಿದ್ದಾಗ ಇದ್ದದ್ದು ಮೂರೂ ಮತ್ತೊಂದು ಮಂದಿ. ಈ ಬಾರಿ ನಲವತ್ತು ವಿದ್ಯಾರ್ಥಿಗಳಿದ್ದಾರೆ. ಪರವಾಗಿಲ್ಲ. ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಿದ್ದೇನೆ!!

ಈಬಾರಿ ಬ್ರಸಲ್ಸ್ ಬಿಟ್ಟು ಬೇರೆಲ್ಲೂ ಹೋಗಬೇಕಾಗಿಲ್ಲ. ಛಳಿಯಂದರೆ ಎಷ್ಟು ಹಿಂಸೆ ಅನ್ನುವುದು ಇಲ್ಲಿಗೆ ಬಂದಾಗಲೆಲ್ಲಾ ತಿಳಿಯುತ್ತದೆ. ನೆತ್ತಿಯಿಂದ ಕಾಲಿನವರೆಗೂ ಬ್ಯಾಂಡೇಜ್ ಸುತ್ತಿದಂತೆ ಉಣ್ಣೆ ಧರಿಸಬೇಕು. ಕಟ್ಟಡದ ಒಳಹೊಕ್ಕಕೂಡಲೇ ಎಲ್ಲವನ್ನೂ ಬಿಚ್ಚಿಡಬೇಕು. ಈ ಭಾರವನ್ನು ಹೊತ್ತು ನಡೆವ ಹಿಂಸೆಯ ಜೊತೆಗೇ ದಿನವೂ ಬ್ರೆಡ್ಡು ತಿನ್ನುತ್ತಾ ಮೀನು ಸಸ್ಯಾಹಾರವಲ್ಲ ಎನ್ನುವ ಪಾಠವನ್ನು ಎಲ್ಲರಿಗೂ ಹೇಳುತ್ತಾ ಜೀವಸಬೇಕಿದೆ. 

ಭಾರತದಿಂದ ಪ್ಯಾರಿಸ್ ಮಾರ್ಗವಾಗಿ ಬ್ರಸಲ್ಸಿಗೆ ಬಂದೆ. ಯೂನಿವರ್ಸಿಟಿಯವರು ಕೊಟ್ಟ ಟಿಕೇಟು ವಿಮಾನದ್ದಾಗಿದ್ದರೂ, ಪ್ಯಾರಿಸ್ಸಿಗೆ ಬಂದಾಗ ತಿಳಿದದ್ದೇನೆಂದರೆ ಆ ಟಿಕೆಟ್ಟು ಪ್ಯಾರಿಸ್ಸಿನವರೆಗೂ ವಿಮಾನದ್ದು, ಅಲ್ಲಿಂದ ಬ್ರಸಲ್ಸಿಗೆ ಇದ್ದ ಟಿಕೇಟು ವಿಮಾನದ ಟಿಕೇಟಿನಂತೆ ಕಾಣುವ ರೈಲು ಟಿಕೇಟು. ಹೀಗಾಗಿ ಪ್ಯಾರಿಸ್ಸಿನಿಂದ ಸೂಪರ್‌ಫಾಸ್ಟಾಗಿ ಬರುವು ಟಿಜಿವಿಯಲ್ಲಿ ಒಂದು ಬೋಗಿ ಏರ್ ಫ್ರಾಂಸಿನ ಯಾತ್ರಿಕರಿಗೆ ಮೀಸಲು. ಒಂದು ಥರದಲ್ಲಿ ಇದೂ ಒಳ್ಳೆಯದೇ ಆಯಿತು. ಸೂಪರ್ ಸ್ಪೀಡಿನ ರೈಲಿನಲ್ಲಿ ಕೂತು, ಇಲ್ಲಿನ ಪಕೃತಿಯನ್ನ ಆನಂದಿಸುತ್ತಾ ಬಂದದ್ದಾಯಿತು. ಬ್ರಸಲ್ಸಿಗೆ ಬಂದ ಕೂಡಲೇ ವೈಟ್ ಹೋಟೇಲಿಗೆ ಟ್ಯಾಕ್ಸಿ ತೆಗೆದುಕೊಂಡೆ. ಇದ್ದ ಹತ್ತು ನಿಮಿಷದಲ್ಲಿ ಟ್ಯಾಕ್ಸಿಯ ಚಾಲಕ ನಾನು ಭಾರತೀಯನೆಂದು ಅರಿತ ಕೂಡಲೇ ಆತಂಕವಾದದ ಮಾತನ್ನು ಆಡಿದ. ಮುಂಬೈ ಕಾಂಡದ ಬಗ್ಗೆ ಚರ್ಚಿಸಿದ. ಅವನ ಜ್ಞಾನವಿಸ್ತಾರ ಕಂಡು ನಾನು ಅವಾಕ್ಕಾದೆನೆಂದೇ ಹೇಳಬೇಕು. ಸಾಮಾನ್ಯವಾಗಿ ಇಲ್ಲಿ ಎಲ್ಲಿ ಹೋದರೂ ಏನು ಮಾಡಿದರೂ ಪಡೆದ ಸೇವೆಗೆ ಕೃತಜ್ಞತೆಯಾಗಿ ಟಿಪ್ ಕೊಡುವುದು ವಾಡಿಕೆ. ಟಿಪ್ ಕೊಡದಿದ್ದಲ್ಲಿ ಯಾರೂ ಏನೂ ಅನ್ನುವುದಿಲ್ಲವಾದರೂ ಅವರ ನೋಟದಲ್ಲೇ ಅಸಮಾಧಾನವನ್ನು ಸ್ಪಷ್ಟವಾಗಿ ಕಾಣಬಹುದು. ಹೀಗಾಗಿಯೇ ಸ್ಟೇಷನ್ನಿನಿಂದ ಹೊಟೇಲಿಗೆ ೯.೮೦ ಯೂರೋಗಳಾದಾಗ, ಹನ್ನೊಂದು ಯೂರೋ ತೆಗೆದುಕೊಂಡು ಅಷ್ಟಕ್ಕೆ ರಸೀದಿ ಕೊಡು ಎಂದು ನಾನು ಚಾಲಕನಿಗೆ ಹೇಳಿದೆ. ಅವನು ಹನ್ನೊಂದು ಯೂರೋಗಳಿಗೆ ರಸೀದಿಯನ್ನೇನೋ ಕೊಟ್ಟ. ನನ್ನ ಬಳಿ ಚಿಲ್ಲರೆ ಇರಲಿಲ್ಲವಾದ್ದರಿಂದ ಇಪ್ಪತ್ತು ಯೂರೋಗಳ ನೋಟನ್ನು ಕೊಟ್ಟೆ. ಅವನು ತನ್ನ ಪರ್ಸನ್ನು ತಡಕಿ ಹತ್ತು ಯೂರೋ ಚಿಲ್ಲರೆ ಕೊಟ್ಟ! "ನೀನು ಒಳ್ಳೆಯ ಮನುಷ್ಯ, ಒಳ್ಳೆಯ ದೇಶದಿಂದ ಬಂದಿದ್ದೀಯ, ಪರವಾಗಿಲ್ಲ ನಿನ್ನಟಿಪ್ ಬೇಡ" ಅಂದ! ಹೀಗೆ ನಾನು ಹನ್ನೊಂದು ಯೂರೋಗಳ ರಸೀತಿ ಹಿಡಿದು, ಹತ್ತೇ ಯೂರೋಗಳನ್ನು ಅವನಿಗೆ ಕೊಟ್ಟು, ಟಿಪ್ಪನ್ನು ನಾನೇ ಪಡೆದಿದ್ದೆ! ಹೊಚ್ಚ ಹೊಸ ಮರ್ಸಿಡಿಸ್‍ನಲ್ಲಿ ಕೂತು, ವಿಶ್ವದ ರಾಜಕೀಯ ಮಾತನಾಡುವ, ಮೊರೊಕ್ಕೋ ದೇಶಕ್ಕೆ ಸೇರಿದ, ಟೈ ಧರಿಸಿದ ಟ್ಯಾಕ್ಸಿ ಚಾಲಕನ ಕೈಯಿಂದ ಒಂದು ಯೂರೋ ಟಿಪ್ ಪಡೆಯುವುದಕ್ಕಿಂದ ದೊಡ್ಡ ಐಷಾರಾಮ ಏನಿರಬಹುದೆಂದು ಯೋಚಿಸಿದೆ!

ಆದರೆ ಈ ಎಲ್ಲದರ ನಡುವೆ ಒಂದು ಆಶ್ಚರ್ಯ ನನಗೆ ಕಾದಿತ್ತು. ಅದೆಂದರೆ ಯೂನಿವರ್ಸಿಟಿಯವರು ನನಗಾಗಿ ಬುಕಿಂಗ್ ಮಾಡಿದ್ದ ವೈಟ್ ಹೊಟೇಲು. ಐಷಾರಾಮದ ಚರ್ಚೆಯ ನಡುವೆ ಇದನ್ನು ಐಷಾರಾಮದ ಪ್ರತೀಕ ಎಂದು ಯಾರಾದರೂ ಕರೆವ ಮೊದಲೇ ಒಂದೆರಡು ಮಾತು ಹೇಳಿಬಿಡುತ್ತೇನೆ.. ವೈಟ್ ಹೋಟೇಲು ನನಗೆ ಕೊಟ್ಟ ರೂಮಿನಲ್ಲಿ ಕುಡಿಯುವ ನೀರು ಸಹ ಲಭ್ಯವಿಲ್ಲ. ಕಡೆಗೆ ಒಂದು ಗ್ಲಾಸಾಗಲೀ, ತಟ್ಟೆಯಾಗಲೀ, ಚಮಚ ಕೂಡಾ ಇಲ್ಲ. ಹೀಗಾಗಿ ಖಾರದ ಊಟಕ್ಕೆಂದೇ ತಂದ ಎಂ.ಟಿ.ಆರ್ ಪೊಟ್ಟಣಗಳಿಂದ ನೇರವಾಗಿಯೇ ತಣ್ಣಗಿನ ಬಿಸಿಬ್ಯಾಳೆಭಾತ್ ತಿನ್ನುವ ಪರಿಸ್ಥಿತಿಯಲ್ಲಿ ಇದ್ದೇನೆ. ಆದರೂ ವೈಟ್ ಹೋಟೇಲು ಆಸಕ್ತಿ ಉಂಟುಮಾಡುವ ಹೊಟೇಲು. ಅದಕ್ಕೆ ಕಾರಣವೇ ಬೇರೆ.


೧೨.೦೦ಕ್ಕೆ ಹೋಟೇಲು ತಲುಪಿದಾಗ ಅಲ್ಲಿದ್ದ ಹೆಂಗಸು ಗಡುಸಾಗಿ "ನಿನ್ನ ಬುಕಿಂಗ್ ಇರುವುದು ಮೂರರ ನಂತರ, ಬೇಕಿದ್ದರೆ ಲಗೇಜನ್ನು ಒಂದು ಮೂಲೆಯಲ್ಲಿಟ್ಟು ಆಚೆ ತಿರುಗಾಡಿ ಬಾ" ಎಂದಳು. ಇದೂ ನನಗೆ ವಿಚಿತ್ರ ಅನುಭವ! ಹನ್ನೆರಡು ಗಂಟೆಕಾಲ ಪ್ರಾಯಾಣ ಮಾಡಿ ದೇಶಾಂತರ, ಸಮಯಾಂತರ, ತಾಪಮಾನಾಂತರವನ್ನು ಕಾಣುತ್ತಿರುವ ನನಗೆ ಶೂನ್ಯ ಡಿಗ್ರಿಯ ವಾತಾವರಣದಲ್ಲಿ ಹೊರಗೆ ಸುತ್ತಾಡಿ ಬಾರೆನ್ನುವ ಈ ಚಿತ್ರಹಿಂಸೆ ಸಾಮಾನ್ಯದ್ದಲ್ಲ. ಹತ್ತು ವರುಷಗಳ ಕೆಳಗಾಗಿದ್ದರೆ ಇದನ್ನು ಒಂದು ಭೇದಭಾವದ ವಿಷಯವನ್ನಾಗಿಮಾಡಿ ಸಿಟ್ಟಾಗಿ ಕೂಗಾಡುತ್ತಿದ್ದೆ. ಹಣ ಕೊಟ್ಟು ನನಗಾಗಿ ಕಾಯ್ದಿರಿಸಿದ ಕೋಣೆ ತಕ್ಷಣಕ್ಕೆ ಯಾಕೆ ಕೊಡುತ್ತಿಲ್ಲವೆಂದು ಹಾರಾಡುತ್ತಿದ್ದೆ. ಆದರೆ ಈ ಮಧ್ಯೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುವ ಯತ್ನ ಮಾಡುತ್ತಿರುವುದರಿಂದ "ಪರವಾಗಿಲ್ಲ, ಕಾಯುತ್ತೇನೆ" ಎಂದು ಅಲ್ಲಿಯೇ ಕೂತೆ. "ಕಾಯುತ್ತೀರಾ? ಮೂರು ಘಂಟೆಗಳ ಕಾಲ?" ಎಂದಳು ಆ ಹೆಂಗಸು. "ಹೌದು, ಏನು ಮಾಡುವುದು? ನಿಮ್ಮ ಕಷ್ಟವೂ ನಾನು ಅರ್ಥಮಾಡಿಕೊಳ್ಳಬಲ್ಲೆ, ಕೋಣೆಯೇ ಇಲ್ಲವೆಂದರೆ ನೀವು ತಾನೇ ಏನು ಮಾಡಬಲ್ಲಿರಿ?" ಎಂದು ಕೇಳಿದೆ. ಆಕೆಯೇ "ಬೇರೆ ದಾರಿ?" ಎಂದು ಕೇಳಿದಳು. "ನನಗೆ ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು ಅವಕಾಶವಾದರೆ, ನೀವು ಹೇಳಿದಂತೆ ಎರಡು ಘಂಟೆಕಾಲ ಹೊರಗೆ ಸುತ್ತಲು ಅಭ್ಯಂತರವಿಲ್ಲ" ಅಂದೆ. ಕಡೆಗೂ ಆಕೆ ಒಳಹೋಗಿ, ಬೇರೆ ಯಾರೋ ಇದ್ದ ರೂಮಿನ ಬೀಗದ ಕೈ ಕೊಟ್ಟು "ಆತನ ಪರವಾನಗಿ ಪಡೆದಿದ್ದೇನೆ. ಅಲ್ಲಿ ನೀವು ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ಮತ್ತೆ ಸೂಟ್‍ಕೇಸನ್ನು ತನ್ನಿ, ಮೂರು ಘಂಟೆಗೆ ಖಂಡಿತವಾಗಿಯೂ ನಿಮ್ಮ ರೂಮು ತಯಾರಿರುತ್ತದೆ" ಅಂದಳು.

ಈ ಅವಕಾಶ ನನಗೆ ಪ್ರಾಪ್ತವಾದದ್ದು ಒಂದು ರೀತಿಯಿಂದ ಒಳ್ಳೆಯದೇ ಆಯಿತು. ಇಲ್ಲಿ ಪ್ರತಿ ಕೋಣೆಯೂ ತನ್ನದೇ ಪ್ರತ್ಯೇಕತೆಯಿಂದ ಕೂಡಿದೆ. ಒಂದೊಂದು ಕೋಣೆಯನ್ನೂ ಒಬ್ಬೊಬ್ಬ ಕಲಾವಿದನು ಸುಪರ್ದಿಗೆ ಕೊಟ್ಟು ಆತನಿಗಿಷ್ಟ ಬಂದಂತೆ ಡಿಸೈನ್ ಮಾಡಲು ಆ ಹೊಟೇಲು ಅವಕಾಶ ಕೊಟ್ಟಿದೆ. ಹೀಗಾಗಿ ಹೋಟೇಲು ಒಂದು ವಿಚಿತ್ರ ರೀತಿಯಲ್ಲಿ ಸುಂದರವಾಗಿಯೂ ಭಿನ್ನವಾಗಿಯೂ ಇರುವುದಲ್ಲದೇ ಇಲ್ಲಿನ ಜನರ ಕಲೆಗಾರಿಕೆಯ ಪ್ರದರ್ಶನಾಲಯವೂ ಆಗಿದೆ. ಎಲ್ಲರೂ ಬೆಲ್ಜಿಯಂನ ಕಲಾವಿದರಾದ್ದರಿಂದ ಅದು ಅವರಿಗೆ 
ಹೆಮ್ಮೆಯ ವಿಷಯವೂ ಹೌದು. ಹೀಗೆ ನಾನು ಹೋದ ಮೊದಲ ಕೋಣೆಯನ್ನು ರೂಪಿಸಿದವನು ನಿಕೊಲಾಸ್ ಡೆಸ್ಟಿನೋ. ಏಣಿಯಾಕಾರದ ದೀಪವನ್ನು ಅವನು ರೂಪಿಸಿದ್ದ. ಈ ಏಣಿಯನ್ನು ಬೇಕಾದ ಕಡೆಗೆ ತೆಗೆದೊಯ್ದು ಆ ಜಾಗಕ್ಕೆ ಬೆಳಕನ್ನು ನೀಡಬಹುದು. ಅವನ ಚಿತ್ರ, ಅವನ ಕಲೆಯ ವೈಷಿಷ್ಯತೆಗಳನ್ನು ವಿವರಿಸುವ ಒಂದು ಪುಟ್ಟ ಫಲಕವೂ ಆ ಕೋಣೆಯಲ್ಲಿತ್ತು. ನಾನು ಸ್ನಾನ ಮಾಡಲು ಬಳಸಿದ ಬಾತ್‍ರೂಮಿನಲ್ಲಿ ಒಂದು ಚೌಕಾಕಾರದ ಪುಟ್ಟ ಕಟ್ಟೆ, ಮತ್ತು ಅದರ ಸುತ್ತಲೂ ಕರ್ಟನ್, ಅಲ್ಲಿ ಷವರಿನ ಕೆಳಗೆ ನಿಂತು ಚೆನ್ನಾಗಿ ಸ್ನಾನ ಮಾಡಿಕೊಂಡೆ. ಕೆಳಕ್ಕೆ ಬಂದು ಸೂಟ್‌ಕೇಸನ್ನು ಬಿಟ್ಟು ಹೊರಕ್ಕೆ ಹೆಜ್ಜೆ ಹಾಕಿದೆ. ಹೊಟ್ಟೆಯೂ ಹಸಿಯುತ್ತಿತ್ತು....

ನನ್ನ ಕೈಗೆ ಆಕೆ ಅಲ್ಲಿನ ನಕ್ಷೆಯನ್ನು ತುರುಕಿದಳು. ನಕ್ಷೆ ಬಿಡಿಸಿ ನೋಡಿದೆ. ಊಟ ಹುಡುಕುತ್ತಲೇ ಮಾರನೆಯ ದಿನ ಲೆಕ್ಚರ್ ಗುದ್ದಲು ಹೋಗಬೇಕಿದ್ದ ಯೂನಿವರ್ಸಿಟಿಯ ದಿಕ್ಕಿನಲ್ಲಿ ನಡೆದರೆ ಹೇಗೆ? ಎಂದು ಯೋಚಿಸಿದೆ. ಹೀಗೆ ಹಾಕಿಕೊಂಡ ಟೂ ಇನ್ ವನ್ ಉದ್ದೇಶದ ಜೊತೆಗೆ ಅಂಗಡಿ ತೆರೆದಿದ್ದರೆ ಫೋನಿಗೆ ಒಂದು ಸಿಮ್ ಕಾರ್ಡನ್ನೂ ಕೊಂಡುಕೊಳ್ಳಬಹುದಿತ್ತು. ಹೀಗೆ ರಸ್ತೆಯಗುಂಟ ನಡೆಯುತ್ತಲೇ ಇದ್ದೆ. ಯೂನಿವರ್ಸಿಟಿ ಇಲ್ಲಿಂದ ಎರಡು ಕಿಲೋಮೀಟರ್ ಇತ್ತು. ನಡೆದೆ, ನಡೆದೆ, ನಡೆದೇ ನಡೆದೆ. ಅಂದು ಭಾನುವಾರ. ಯಾವ ಅಂಗಡಿಯೂ ತೆರೆದಿರಲಿಲ್ಲ. ಊಟದ ಜಾಗಗಳೂ ಸಂಜೆ ಐದರ ನಂತರ ತೆರೆಯುವ ಸೂಚನೆಗಳನ್ನು ಹೊತ್ತು ನಿಂತಿದ್ದುವು. ಕಡೆಗೂ ಯೂನಿವರ್ಸಿಟಿ ಬಂತಾದರೂ, ಸಿಮ್ಮೂ ಇಲ್ಲ; ಊಟವೂ ಇಲ್ಲ. ಸರಿ ಮತ್ತೆ ವೈಟ್ ಹೋಟೇಲಿಗೇ ಬಂದು ಎಂ.ಟಿ.ಆರ್ ಪೊಟ್ಟಣವನ್ನು ಬಿಡಿಸುವುದೇ ಒಳಿತು ಅಂದುಕೊಳ್ಳುತ್ತಿದ್ದಾಗಲೇ ಒಂದು ಪುಟ್ಟ ಊಟದ ಜಾಗ, ವೈಟ್ ಹೋಟೇಲಿನ ಎದುರಿನಲ್ಲೇ ಕಾಣಿಸಿತು! ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೆಂದರೆ ಇದೇಯೇ.

ಬೆಲ್ಜಿಯಂ ಎರಡು ವಿಷಯಗಳಿಗೆ ಪ್ರಸಿದ್ಧಿ. ಇದು ನ್ಯಾಟೊದ ರಾಜಧಾನಿ; ಯುರೋಪಿಯನ್ ಯೂನಿಯನ್ನಿನ ರಾಜಧಾನಿ. ಇನ್ನೂ ಎರಡು ವಿಷಯಗಳಿಗೆ ಪ್ರಸಿದ್ಧಿ. ಇಲ್ಲಿನ ಚಾಕೋಲೇಟುಗಳು ವಿಶ್ವ ವಿಖ್ಯಾತ - ಎಲ್ಲಿ ಕಂಡರಲ್ಲಿ, ಕಾಫಿ ಕುಡಿದರೆ ಬಿಲ್ಲಿನ ಜೊತೆಗೂ ಚಾಕೋಲೇಟುಗಳನ್ನು ಕೊಡುವ ದೇಶ ಇದು; ಮತ್ತು ಬೆಲ್ಜಿಯಂನ ಬಿಯರುಗಳ ಭಿನ್ನತೆಯೂ ಜಗದ್ವಿಖ್ಯಾತಿ ಪಡೆದಿದೆ. ಬಿಯರು ಒಗರು ಎನ್ನುವವರಿಗೆ ಇಲ್ಲಿ ಸಿಹಿ, ನಿಂಬೆ ರುಚಿಯ, ಬಿಯರುಗಳೂ ದೊರೆಯುತ್ತವೆ. ಪ್ರತಿ ಬಿಯರಿಗೂ ಅದರದೇ ಗ್ಲಾಸಿದೆ. ಹಾಗೂ ಆ ಗ್ಲಾಸಿನಲ್ಲೇ ಕುಡಿಯಬೇಕಂತೆ. ಬಿಯರು ಕುಡಿಯುವ ಪ್ರಕ್ರಿಯೆಯೂ ಒಂದು ಸಂಪೂರ್ಣ ಅನುಭವ ಎಂದು ಇಲ್ಲಿಯವರು ಹೇಳುತ್ತಾರೆ. ಗ್ಲಾಸು, ಅದನ್ನು ಹಿಡಿಯುವರೀತಿ, ಹಾಗೂ ಗ್ಲಾಸಿನ ಬಾಯಿಯ ವಿಸ್ತಾರ ಎಲ್ಲವೂ ಬಿಯರು ಕುಡಿಯುವಾಗಿನ ಒಂದು ಅನುಭವದ ಅಂಗ - ಪಂಚೇಂದ್ರಿಯಗಳೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಂತೆ! ಇದ್ಯಾವುದೂ ಅರ್ಥಮಾಡಿಕೊಳ್ಳಲು ಈ ಭಿನ್ನತೆಯನ್ನು ಆಸ್ವಾದಿಸುವ ಸಮಯವಾಗಲೀ, ಪರಿಕರಗಳಾಗಲೀ ನನ್ನಲ್ಲಿರಲಿಲ್ಲ. ಮೊದಲಿಗೆ ಜ್ಯೂಲಿಪರ್ ಡ್ರಾಫ್ಟ್ ಕುಡಿದೆ. ಸುಮಾರಾಗಿತ್ತು. ನಂತ್ರ ಲೆಫ್ ೯ ಹೇಳಿದೆ. ಅತೀ ಕಂದು ಬಣ್ಣದ ಈ ಬಿಯರು ಚೆನ್ನಾಗಿತ್ತು. ಎರಡು ಗ್ಲಾಸ್ ಕುಡಿಯುವ ವೇಳೆಗೆ ಮೂರಾಗಿತ್ತು. ವೈಟ್ ಹೋಟೀಲಿಗೆ ಮರಳಿದೆ.

ಈ ಬಾರಿ ನನಗೆ ಕೊಟ್ಟ ಕೋಣೆ ೯ನೆಯ ಮಹಡಿಯಲ್ಲಿತ್ತು. ಹೊಟೇಲಿನ ಲಿಫ್ಟಿನಲ್ಲಿಯೂ ಚಿತ್ತಾರಗಳನ್ನು ಬಿಡಿಸಿದ್ದರು. ಲಿಫ್ಟಿನ ಬಾಗಿಲುಗಳು ಮುಚ್ಚುವಾಗ ಎರಡೂ ದಿಕ್ಕಿನಿಂದ ಇದ್ದ ಮಾನವರ ಚಿತ್ರಗಳು ಬಂದು ಡಿಕ್ಕಿ ಹೊಡೆವಂತೆ ಚಿತ್ರಿಸಲಾಗಿತ್ತು. ನನ್ನ ಕೋಣೆಯ ಡಿಸೈನರ್ - ಲುಕ್ ಲೆಮಾಯೂನ ಪ್ರತ್ಯೇಕತೆ ಹೆಚ್ಚು ಖರ್ಚಿಲ್ಲದ, ಉತ್ತಮ ಬೆಳಕಿನ ಪರಿಕರಗಳನ್ನು ತಯಾರಿಸುವುದು. ಹೀಗಾಗಿ ಈ ಕೋಣೆಯಲ್ಲಿ ದೀಪಗಳು ಭಿನ್ನ ರೀತಿಯದ್ದಾಗಿದ್ದುವು. ಒಂದು ಉದ್ದನೆಯ ಫ್ರೆಂಚ್ ಕಿಟಕಿ, ಮತ್ತು ನಗರದ ವಿಹಂಗಮ ನೋಟ. ಬಾಗಿಲು ತೆರೆದರೆ ಹೊಡೆಯುವ ಕೊರೆಯುವ ಗಾಳಿ.
 
ಮುಂಜಾನೆ ಎದ್ದು ನಾಷ್ಟಾಕ್ಕೆ ಹೋದಾಗ ವೈಟ್ ಹೋಟೇಲಿನ ಮತ್ತೊಂದು ದೃಶ್ಯ. ಲೌಂಜಿನಲ್ಲಿ, ಹೋಟೇಲನ್ನೂ ರೂಪಿಸಿದ ಎಲ್ಲ ಡಿಸೈನರ್‌ಗಳ ಫೋಟೊ, ಅವರ ಪ್ರತ್ಯೇಕತೆ, ಅವರ ವಿಳಾಸ ಎಲ್ಲ ವಿವರಗಳಿದ್ದ ಒಂದು ವಿಹಂಗಮ ಫಲಕ. ಜೊತೆಗೆ ಇನ್ನಷ್ಟು ಆಸಕ್ತಿಕರ ವಿಷಯಗಳು. ಕಾರ್ಡ್‍ಬೋರ್ಡಿನಲ್ಲಿ ಮಾಡಿದ ರೈನ್‍ಡೀರಿನ ಪುತ್ಥಳಿ, ದೊಡ್ಡ ಗಾಜಿನ ಗೋಲಿಗಳಲ್ಲಿ ಅಡಕವಾಗಿಟ್ಟ ವಸ್ತುಗಳನ್ನು ಸೂರಿನಿಂದ ನೇತುಬಿಟ್ಟ ಪರಿ, ಮತ್ತು ಹಸಿರು ಸೇಬುಗಳಿಗೆಂದೇ ಮಾಡಿಟ್ಟ ಗೋಡೆಯಮೇಲಿನ ವಿನೂತನ ಸ್ಟಾಂಡ್.

ತಮ್ಮ ಕಲಾವಿದರನ್ನು ಒಂದೆಡೆ ಕಲೆಹಾಕಲು, ಗೌರವಿಸಲು ಒಂದು ನೂತನ ಮಾರ್ಗವನ್ನು ವೈಟ್ ಹೋಟೇಲ್ ಕಂಡುಕೊಂಡಿತ್ತು. ಹೀಗಾಗಿ, ಮಧ್ಯಾಹ್ನ ಹನ್ನೆರಡರಿಂದ ಮೂರರವರೆಗೆ ವಿನಾಕಾರಣ ಕಾಯಿಸಿ ನನ್ನನ್ನು ಸೇರಿಸಿಕೊಂಡಾಗ್ಯೂ ನನಗೆ ಈ ಅನುಭವದ ವೈಶಿಷ್ಟ್ಯತೆ ಮುಖ್ಯವೆನ್ನಿಸಿತ್ತು. ಗಮ್ಮತ್ತಿನ ವಿಷಯವೆಂದರೆ ನಾಷ್ಟಾದ ಬಫೆಯಲ್ಲಿ, ಬ್ರೆಡ್ಡು, ಮಫಿನ್ಸ್, ಹಾಲು, ಮೊಸರು, ಜಾಮ್, ಬೆಣ್ಣೆ, ಹಣ್ಣಿನ ರಸ, ಕಾಫಿ, ಟೀ, ಎಲ್ಲವೂ ಇದ್ದರೂ ನೀರು ಮಾತ್ರ ಇಲ್ಲ! ಅದೊಂದನ್ನು ಮಾತ್ರ ದುಡ್ಡು ಕೊಟ್ಟು ಹೋಟೇಲಿನಾಚೆಯ ಸೂಪರ್ ಬಜಾರಿನಲ್ಲಿ ಕೊಂಡುಕೊಳ್ಳಬೇಕು!

ಅಹಮದಾಬಾದಿನಲ್ಲಿ ನಡೆ-ನುಡಿ

ಈಗೀಗ ಎಲ್ಲ ನಗರಗಳಲ್ಲೂ ’ಹೆರಿಟೇಜ್ ವಾಕ್’ ಆಯೋಜನೆ ಪ್ರಾರಂಭವಾಗಿದೆ. ನಗರದ ಹಿನ್ನೆಲೆ ಚರಿತ್ರೆ ತಿಳಿಯಲು ಇದೊಂದು ಒಳ್ಳೆಯ ಮಾರ್ಗ. ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಹೆರಿಟೇಜ್ ವಾಕ್ ಪ್ರಸಿದ್ಧವಾಗಿದೆ. ಮುಂಜಾನೆ ಏಳೂವರೆಗೆ ಪ್ರಾರಂಭವಾಗುವ ಈ ನಡಿಗೆ ಸುಮಾರು ಎರಡು ಘಂಟೆಕಾಲ, ನಿಧಾನಗತಿಯಲ್ಲಿ ಹಳೆಯ ಕಟ್ಟಡಗಳು, ಮನೆ ಮತ್ತು ಮಂದಿರಗಳನ್ನು ತೋರಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರು ತೋರಿದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಅರಿಯಲು ಇದು ಒಂದು ಉತ್ತಮ ವಿಧಾನ.

ಕಾಲೂಪುರ್ ಸ್ವಾಮಿನಾರಾಯಣ ಮಂದಿರದಲ್ಲಿ ಪ್ರಾರಂಭವಾಗಿ ಜುಮ್ಮಾ ಮಸೀದಿಯಲ್ಲಿ ಪೂರ್ಣಗೊಳ್ಳುವ ಈ ನಡಿಗೆ ಅಹಮದಾಬಾದಿನ ಹಳೆಯ ನಗರದಲ್ಲಿರಬಹುದಾದ ಕೋಮುಗಳ ನಡುವಿನ ಆತಂಕಕ್ಕೆ ಉತ್ತರವೆಂಬಂತೆ ಕಂಡರೂ, ನಿಜಕ್ಕೂ ನಮಗೆ ಕಾಣುವುದು ಒಂದು ಇನ್ಸುಲರ್ ಜೀವನ ವ್ಯವಸ್ಥೆ ಅನ್ನಿಸುತ್ತದೆ. ಅಹಮದಾಬಾದಿನ ಹಳೆಯ ನಗರದಲ್ಲಿ ಇರುವ ಕಾಲೊನಿಗಳಿಗೆ ಪೋಲ್ ಅನ್ನುತ್ತಾರೆ. ಬಜಾರು ಪ್ರಾಂತವನ್ನು ಓಲ್ ಎಂದು ಕರೆಯುತ್ತಾರೆ. ಪ್ರತಿ ಪೋಲಿಗೂ ಒಂದು ದ್ವಾರ, ದ್ವಾರದ ಮೇಲ್ಭಾಗದಲ್ಲಿ ಕಾವಲು ಕಾಯುವ ಸೆಕ್ಯೂರಿಟಿಗಾಗಿ ಒಂದು ಕೋಣೆ, ಕಿಂಡಿ. ಹೊರಗಿನವರು ಬಂದು ತಮ್ಮ ವಸ್ತುಗಳನ್ನು ಮಾರಟಮಾಡಲು ಒಂದು ಕೇಂದ್ರ ಜಾಗ, ಹಾಗೂ ಪಕ್ಷಿಗಳಿಗೆ ಕಾಳು ಹಾಕಲು ಒಂದು ಚಬೂತರಾ. ಕೆಲ ಪೋಲ್‍ಗಳಲ್ಲಿ ಹೊರಗಿನಿಂದ ಧಾಳಿಯಾದಾಗ ತಪ್ಪಿಸಿಕೊಂಡು ಹೋಗಲು ಒಂದು ಗುಪ್ತ ಮಾರ್ಗ, ಹೀಗೆ ಪರಸ್ಪರ ಅನುಮಾನದ, ಭಯದ ಛಾಯೆಯಲ್ಲಿ ಈ ಕಾಲೋನಿಗಳು ನಿರ್ಮಿತವಾಗಿವೆ.  ಹೆರಿಟೇಜ್ ವಾಕ್ ಆಯೋಜಿಸಿದ್ದ ಪ್ರಾಂತದಲ್ಲಿ ಯಾವುದೇ ಪೋಲ್‍ನಲ್ಲಿ ನಮಗೆ ವಿವಿಧ ಜಾತಿಗಳಿಗೆ ಸಂದ ಜನ ಕಂಡರೇ ಹೊರತು, ವಿವಿಧ ಕೋಮಿಗೆ ಸಂದ ಜನ ಕಾಣಲಿಲ್ಲ. ಹೀಗಾಗಿಯೇ ಅಹಮದಾಬಾದು ನಗರ ಕೋಮು ಕ್ಷೋಭೆಯ ಟೈಂಬಾಂಬಿನ ಮೇಲೆ ಕುಳಿತಿದೆ ಎಂದು ಗೋಧ್ರಾ ಕಾಂಡ ನಡೆಯುವುದಕ್ಕೆ ಮೊದಲೇ ಅಶುತೋಶ ವಾರ್ಷ್ನೇಯ ಬರೆದಿದ್ದರಲ್ಲಿ ಆಶ್ಚರ್ಯವಾಗಬಾರದು.
 

ಆದರೆ ಕೋಮನ್ನು ಬಿಟ್ಟು ಮುಂದಕ್ಕೆ ಹೋದರೆ ಈ ಪೋಲ್‍ಗಳಲ್ಲಿನ ವೈವಿಧ್ಯತೆಯನ್ನು ನಾವು ಮೆಚ್ಚದಿರಲು ಸಾಧ್ಯವಿಲ್ಲ - ಮರಾಠ, ಗುಜರಾತಿ, ಮತ್ತು ರಾಜಾಸ್ಥಾನದ ಜೈನ ಸಮುದಾಯದ ಜನ ಒಂದೇ ಪೋಲ್‍ನಲ್ಲಿ ಸಹಬಾಳ್ವೆ ನಡೆಸುವುದು ನಮಗೆ ಕಾಣಿಸುತ್ತದೆ. ಓರೆಕೋರೆಯ ಸಣ್ಣಪುಟ್ಟ ಓಣಿಗಳ ನಡುವೆ ಇರುವ ಮನೆಗಳು ಸಹಬಾಳ್ವೆಗೆ ಪೂರಕವಾಗಿವೆ. ಮರಾಠ ಜನರ ಮನೆ ಅನ್ನುವುದಕ್ಕೆ ದ್ಯೋತಕವಾಗಿ ಮನೆ ಮಾಲೀಕನ ಶಿರವನ್ನು ಮಹಾದ್ವಾರದೆದುರಿಗೆ ಕೆತ್ತಿ ಇಟ್ಟಿದ್ದಾರೆ. ಮಾಲೀಕನಿಗೆ ಬಂದಿರುವ ಗತಿ ಕಂಡಾಗ ಈ ರೀತಿಯ ಮನೆಮಾಲೀಕನಾಗುವುದು ಬೇಡ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. ಯಾರಿಗೆ ತಾನೇ ಹಿಂದಿನ ಕಾಲದಲ್ಲಿ ಸಂಹಾರ ಮಾಡಿದ ಜಿಂಕೆ, ಹುಲಿ, ಕಾಡೆಮ್ಮೆಗಳ ರುಂಡವನ್ನು ಮನೆಯ ಗೋಡೆಗೆ ನೇತು ಹಾಕುತ್ತಿದ್ದ ರೀತಿಯಲ್ಲಿ ಮನೆ ಮಾಲೀಕನ ರುಂಡವನ್ನು ದ್ವಾರದ ಮೇಲೆ ಪ್ರದರ್ಶಿಸಬೇಕು ಅನ್ನಿಸುತ್ತದೆ?

ಅಲ್ಲಿ ಆಯೋಜಿಸಿರುವ ಮಳೆನೀರನ್ನು ಸಂರಕ್ಷಿಸುವ, ಒಳಚರಂಡಿಗಳ ಆಯೋಜನೆಗಳೆಲ್ಲಾ ಹಿಂದಿನ ನಗರಗಳಲ್ಲಿ ಆಗಿನ ಅವಶ್ಯಕತೆಗೆ ತಕ್ಕಂತೆ ಹೇಗೆ ಯೋಜಿತಗೊಂಡಿದ್ದವು ಅನ್ನುವುದರ ದ್ಯೋತಕವಾಗಿ ಕಾಣುತ್ತದೆ. ಕಡೆಗೆ ಹಳೆಯ ಅಹಮದಾಬಾದು ನಗರ ಆಯೋಜಿತವಾಗಿದ್ದೇ ಎಲ್ಲವೂ ಸಾಬರಮತಿ ನದಿಯತ್ತ ಮುಖಮಾಡುವಂತೆ. ನದಿ ದಂಡೆಯ ನಗರಗಳ ಆಯೋಜನೆಯೇ ಅಂತಹುದೇನೋ.

ಚರಿತ್ರೆಯಲ್ಲಿ ನಡೆಯುತ್ತಾ ಹೆಜ್ಜೆಹಾಕುತ್ತಾ ಹೋದಂತೆ ವರ್ತಮಾನವೂ ನಮ್ಮನ್ನು ಜೋರಾಗಿ ತಟ್ಟುತ್ತದೆ. ಚರಿತ್ರೆ ಎಂದಾಕ್ಷಣಕ್ಕೆ ನಾವುಗಳು ಹಲವು ನೂರು ವರ್ಷಗಳ ಹಿಂದಿನಕಾಲಕ್ಕೆ ಹೋಗುತ್ತೇವೆ. ಆದರೆ ಆಧುನಿಕ ಚರಿತ್ರೆ ವರ್ತಮಾನದ ಜೊತೆಗೆ ಕೂಡಿಬಿಡುವುದರಿಂದ ಅದರಬಗ್ಗೆ ನಾವು ಹೆಚ್ಚಿನ ಗಮನ ಕೊಡುವುದಿಲ್ಲ. ಅಹಮದಾಬಾದು ತನ್ನ ಬಟ್ಟೆ ಗಿರಣಿಗಳಿಗೆ ಹೆಸರುವಾಸಿಯಾಗಿತ್ತು. ಅಹಮದಾಬಾದನ್ನು ಮ್ಯಾಂಚೆಸ್ಟರ್ ಆಫ ದ ಈಸ್ಟ್ ಎಂದು ಕರೆಯುತ್ತಿದ್ದರು. ಈ ಎಲ್ಲ ಗಿರಣಿಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದದ್ದು 

ಸಾರಾಭಾಯಿ ಸಂಸಾರ ನಡೆಸುತ್ತಿದ್ದ ಕ್ಯಾಲಿಕೋ ಮಿಲ್. ಒಂದು ಕಾಲದಲ್ಲಿ ಕ್ಯಾಲಿಕೋ ಸೀರೆ ಅನ್ನುವುದೇ ಒಂದು ಪ್ರತ್ಯೇಕ ಬ್ರ್ಯಾಂಡ್ ಆಗಿತ್ತು. ಕ್ಯಾಲಿಕೋ ಬಟ್ಟೆಗಳನ್ನು ಮಾರುವ ಕ್ಯಾಲಿ ಷಾಪ್‍ಗಳು ಎಲ್ಲೆಡೆಯಲ್ಲೂ ಇದ್ದುವು. ಆದರೆ ಇಂದು ನಮ್ಮ ತಲೆಮಾರು ಮತ್ತು ನಮ್ಮ ತಂದೆ ತಾಯಿಯರ ತಲೆಮಾರು ಕಂಡಿದ್ದ ಭವ್ಯ ಗಿರಣಿಗಳ ಅವಶೇಷಗಳು ಯಾವ ಪರಿಸ್ಥಿತಿಗೆ ಇಳಿದಿವೆ ಎನ್ನುವುದಕ್ಕೆ ಅಹಮದಾಬಾದಿನಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಕ್ಯಾಲಿಕೋ ಡೋಮ್ ಮತ್ತು ಕ್ಯಾಲಿ ಷಾಪ್‍ಗೆ ಆಗಿರುವ ಗತಿಯನ್ನು ನಾವು ಈ ನಡಿಗೆಯಲ್ಲಿ ಕಂಡೆವು. ಸಮಕಾಲೀನ ಸ್ಥಾವರಗಳು ಹೆರಿಟೇಜ್ ಆಗುವ ಶೀಘ್ರ ಪ್ರಕ್ರಿಯನನ್ನು ನಾವು ಈ ಕ್ಯಾಲಿ ಷಾಪಿನ ಅವಶೇಷದಲ್ಲಿ ಕಾಣಬಹುದಾಗಿದೆ.


ಈ ಎಲ್ಲದರ ನಡುವೆ ನನ್ನ ಗಮನವನ್ನು ಸೆಳೆದದ್ದು ಒಂದು ಅದ್ಭುತ ಪುತ್ಥಳಿ. ಅದು ಕವಿ ದಲಪತ್‍ರಾಮ್‍ನ ಪುತ್ಥಳಿ. ಎಲ್ಲಡೆಯೂ ಪುತ್ಥಳಿಗಳೆಂದರೆ ಒಂದು ದೊಡ್ಡ ಕಟ್ಟೆಯ ಮೇಲೆ ಜನರನ್ನು ಅವಲೋಕನ ಮಾಡುತ್ತಿರುವಂತೆ ಯಾವುದೋ ಸಿಂಹಾಸನದ ಮೇಲೆಯೋ ಅಥವಾ ಕುದುರೆಯ ಮೇಲೆಯೋ ಕುಳಿತು ಜನಸಾಮಾನ್ಯರಿಗೆ ದೂರವಾಗಿ ಪಕ್ಷಿಗಳಿಗೆ ಹತ್ತಿರವಾಗಿ ಪ್ರತಿಷ್ಠಾಪಿಸಲ್ಪಟ್ಟಿರುತ್ತವೆ. ಹೀಗಾಗಿ ಅಂಥ ಪುತ್ಥಳಿಗಳಿಗೆ ಹಾರ ಹಾಕಬೇಕಾದರೂ ಏಣಿ ಹತ್ತಬೇಕು, ಅವುಗಳನ್ನು ಶುಭ್ರಗೊಳಿಸಬೇಕಾದರೂ ಅದಕ್ಕೆ ವಿಶೇಷ ಪ್ರಯತ್ನವನ್ನು ಮಾಡಬೇಕು. ಆದರೆ ದಳಪತ್‍ರಾಮ್‍ನ ಪುತ್ಥಳಿಗೆ ಇಂಥದ್ದೇನೂ ತೊಂದರೆಯಿಲ್ಲ.

ದಳಪತ್‍ರಾಮ್‍ನನ್ನು ಅವನ ಮನೆಯಿದ್ದ ಜಾಗದಲ್ಲಿ ಹಾಯಾಗಿ ಜಗಲಿಯ ಮೇಲೆ ಕೂಡಿಸಿದ್ದಾರೆ. ಹಿಂದೆ ಅವನ ಇಡೀ ಮನೆಯಾದಿದ್ದ ಜಾಗವನ್ನು ನೆಲಸಮ ಮಾಡಿ, ಮನೆ ಹೇಗೆ ಕಾಣುತ್ತಿತ್ತೋ ಆರೀತಿಯ ಒಂದು ಭ್ರಮಾ ಗೋಡೆಯನ್ನು ನಿರ್ಮಾಣ ಮಾಡಿ, ಇಡೀ ಜಾಗವನ್ನು ಒಂದು ಕಟ್ಟೆಯನ್ನಾಗಿ ಪರಿವರ್ತಿಸಿದ್ದಾರೆ. ಕಟ್ಟೆಯ ಅಂಚಿನಲ್ಲಿ ದಳಪತ್‍ರಾಮ್ ಒಂದು ಪುಟ್ಟ ದಿಂಬಿನ ಆಸನದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಬಿಟ್ಟಿದ್ದಾನೆ. ಹೀಗಾಗಿ ದಳಪತ್‍ರಾಮ್ ಎಲ್ಲರಿಗೂ ಎಟುಕುವ ಕವಿಯಾಗಿಬಿಟ್ಟಿದ್ದಾನೆ. ಮಕ್ಕಳು ಹೋಗಿ ಅವನ ತೊಡೆಯ ಮೇಲೆ ಕೂತುಕೊಳ್ಳಬಹುದು. ಹಿರಿಯರು ಸಖನಂತೆ ಪಕ್ಕದಲ್ಲಿ ಕೂತು ಅವನ ಕೈಯಲ್ಲಿರುವ ಪುಸ್ತಕವನ್ನು ಕಸಿಯಲು ಪ್ರಯತ್ನಮಾಡಬಹುದು. ಅನೇಕ ಚಬೂತರಾಗಳನ್ನು ಮಾಡಿಕೊಟ್ಟಿರುವುದರಿಂದ ಪಕ್ಷಿಗಳೂ ತಮ್ಮ ಪಾದವನ್ನು ಅವನ ತಲೆಯ ಮೇಲಲ್ಲದೇ ಮಿಕ್ಕೆಲ್ಲಾದರೂ ಊರಬಹುದು. ಗೆಳೆಯ ದಳಪತ್‍ರಾಮ್‍ನ ಪುತ್ಥಳಿ ತುಸು ದೊಡ್ಡದಾಯಿತು. ಇಲ್ಲವಾದರೆ ಅವನ ಬೆನ್ನಮೇಲೆ ಕೈ ಹಾಕಿ ಮಾತನಾಡಿಸಬಹುದಿತ್ತು. ನಗರದ ಆತ್ಮವನ್ನು ಕಾಪಾಡುವ ರೀತಿಯಾದಂತಹ ಈ ಪುತ್ಥಳಿ ಅಹಮದಾಬಾದಿನ ವಿಶೇಷವೆಂದರೆ ತಪ್ಪಾಗಲಾರದು.

ಕಡೆಗೆ ಜುಮ್ಮಾ ಮಸೀದಿ. ಈ ಮಸೀದಿಯ ಪ್ರತ್ಯೇಕತೆ ಎಂದರೆ ಮಹಿಳೆಯರು ಪ್ರಾರ್ಥಿಸಲು ಇರುವ ಪ್ರತ್ಯೇಕ ಜಾಗ. ಇದು ಬೇರಾವ ಮಸೀದಿಯಲ್ಲೂ ಇಲ್ಲವಂತೆ. ಮಸೀದಿಯ ಒಳಗಣ ಕೆತ್ತನೆ, ಕುಸುರಿ ಕೆಲಸ ನೋಡಿದಾಗ ಮಂದಿರಗಳಲ್ಲಿನ ಕೆತ್ತನೆ ನೆನಪಾಗುತ್ತದೆ. ದೇವರು ಹಲವರು ಆದರೆ ಆಲಯಗಳನ್ನು ಕಟ್ಟಿದ ಮಾನವನೊಬ್ಬನೇ ಅನ್ನಿಸಿದರೆ ಆಶ್ಚರ್ಯವಿಲ್ಲ. ಹೀಗೆ ಜುಮ್ಮಾ ಮಸೀದಿಯಲ್ಲಿ ನಮ್ಮ ನಡಿಗೆಯನ್ನು ಮುಗಿಸಿ ನದಿ ದಾಟಿ ಹೊಸನಗರಕ್ಕೆ ಬಂದದ್ದಾಯಿತು.


ಟಂಕಸಾಲೆಯ ಬಿಂಕ

ಮುಂಬಯಿಯಲ್ಲಿ ನೋಡಲು ಅನೇಕ ಜಾಗಗಳಿವೆ. ನಾನು ಈ ಸರಣಿಯಲ್ಲಿ ನನ್ನ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಜಯಂತ ಕಾಯ್ಕಿಣಿ ಕಾಣಿಸಿದ ಮತ್ತೊಂದು ಮುಂಬಯಿಯ ಬಗ್ಗೆ. ಆದರೆ ಕೆಲವು ವಿಶಿಷ್ಟ ಸಂಸ್ಥೆಗಳೂ ಮುಂಬಿಯಿಯಲ್ಲಿವೆ. ರಿಜರ್ವ್ ಬ್ಯಾಂಕು ನಡೆಸುವ ಮಾನೆಟರಿ ಮ್ಯೂಸಿಯಂ ಅಂಥ ಒಂದು ಆಸಕ್ತಿಕರ ಸಂಸ್ಥೆಗಳಲ್ಲಿ ಒಂದು. ಬಹುಮಹಡಿಯ ರಿಜರ್ವ್ ಬ್ಯಾಂಕಿನ ಕಟ್ಟಡದ ಎದುರಿನ ಗಲ್ಲಿಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ, ಫಿರೋಜ್ ಷಾ ಮೆಹತಾ ಮಾರ್ಗದಲ್ಲಿ ಅಮರ್ ಬಿಲ್ಡಿಂಗ್ ಎನ್ನುವ ಪುಟ್ಟ ಜಾಗದಲ್ಲಿ ದುಡ್ಡಿನ ಚರಿತ್ರೆಯನ್ನು ಕಾಣಿಸುವ ಮಾನಿಟರಿ ಮ್ಯೂಸಿಯಂ ಇದೆ. ಪುಟ್ಟಜಾಗವಾದರೂ ಇದು ತುಂಬಾ ಆಸಕ್ತಿಕರವಾದ ಜಾಗ. ಅಲ್ಲಿ ತಿಳಿದ ಕೆಲವು ಆಸಕ್ತಿಯ ವಿಷಯಗಳು

ಭಾರತೀಯ ನೋಟುಗಳನ್ನು ನಾಲ್ಕು ಜಾಗಗಳಲ್ಲಿ ಮುದ್ರಿಸಲಾಗುತ್ತದೆ. ನಾಶಿಕ ಮತ್ತು ದೇವಾಸ್‍ನಲ್ಲಿರುವ ಮುದ್ರಣಾಲಯಗಳು ಭಾರತ ಸರಕಾರಕ್ಕೆ ಸೇರಿದವು. ಮೈಸೂರು ಮತ್ತು ಸಲ್ಬೋನಿಯಲ್ಲಿರುವ ಮುದ್ರಣಾಲಯಗಳನ್ನು ನಡೆಸುವುದು ಭಾರತೀಯ ನೋಟ್ ಮುದ್ರಣ್ ಇಂಡಿಯಾ ಪ್ರಾಯಿವೇಟ್ ಲಿಮಿಟೆಡ್ ಎನ್ನುವ ಕಂಪನಿ. ಇದರ ಮಾಲೀಕತ್ವ ರಿಜರ್ವ್ ಬ್ಯಾಂಕಿನದ್ದು

ನಾಣ್ಯಗಳನ್ನು ಅಚ್ಚುಹಾಕುವುದು ಸರಕಾರೀ ಟಂಕಸಾಲೆಯಲ್ಲಿ. ಭಾರತದಲ್ಲಿ ಇಂಥ ನಾಲ್ಕು ಟಂಕಸಾಲೆಗಳಿವೆ. ಪ್ರತಿನಾಣ್ಯದ ಮೇಲೂ ಇಸವಿಯ ಕೆಳಗೆ ಇರುವ ಪುಟ್ಟ ಗುರುತಿನಿಂದ ನಾಣ್ಯ ಯಾವ ಟಂಕಸಾಲೆಯಲ್ಲಿ ಅಚ್ಚಾಗಿದೆ ಅನ್ನುವುದನ್ನು ಕಂಡುಕೊಳ್ಳಬಹುದು. ಹೈದರಾಬಾದಿನ ಟಂಕಸಾಲೆಯಲ್ಲಿ ಅಚ್ಚಾದವು ಒಂದು ನಕ್ಷತ್ರವನ್ನು ಹೊಂದಿರುತ್ತವೆ; ಮುಂಬಯಿಗೆ ಡೈಮಂಡ್ ಆಕಾರ; ಕೋಲ್ಕತಾಗೆ ಚುಕ್ಕೆ; ಮಿಕ್ಕವು ನೋಯಿಡಾದಲ್ಲಿ ಅಚ್ಚಾದವು.

ಯಾವುದೇ ಹೊಸ ರೀತಿಯಲ್ಲಿ ಹಣವನ್ನು ಚಲಾವಣೆ ಮಾಡಬೇಕಾದರೆ - ಜನರಿಗೆ ಅಭ್ಯಾಸವಾಗುವವರೆಗೂ ಹಳೆಯದರ ನಂಟನ್ನು ಮುಂದುವರೆಸಬೇಕು. ಹೀಗಾಗಿ ಹೈದರಾಲಿ ಟಂಕಿಸಿದ ನಾಣ್ಯಗಳಲ್ಲಿ ವಿಜಯನಗರ, ಮೈಸೂರು ಸಂಸ್ಥಾನದವರು ಉಪಯೋಗಿಸುತ್ತಿದ್ದ ಶಿವ-ಪಾರ್ವತಿಯರ ಚಿತ್ರ ಒಂದು ಬದಿಗೆ, ತನ್ನ ಹೆಸರು ಇನ್ನೂಂದು ಬದಿಗೆ ಬರುವಂತೆ ಟಂಕಿಸಿದ್ದ. ಟಿಪ್ಪುವಿನ ನಾಣ್ಯಗಳಲ್ಲಿ ಕನ್ನಡವಿರಲಿಲ್ಲ! 

ನಾಣ್ಯಗಳಲ್ಲಿ ಆಕಾರಕ್ಕಿಂತ ತೂಕ ಮುಖ್ಯವಾಗಿತ್ತಂತೆ. ಹೀಗಾಗಿ ಹಳೆಯ ನಾಣ್ಯಗಳಲ್ಲಿ ತೂಕ ಸರಿಯಾಗಿರಲೆಂದು ತುಸು ವಕ್ರವಾಗಿ ನಾಣ್ಯಗಳನ್ನು ತುಂಡರಿಸುತ್ತಿದ್ದುದುಂಟು. ಆದರೆ ಈಗ ತೂಕವೂ ಆಕಾರವೂ ಎಲ್ಲನಾಣ್ಯಗಳ ನಡುವೆ ಸಮಾನವಾಗಿರುವಂತೆ ಅಚ್ಚು ಹಾಕುವ ಯಂತ್ರಗಳಿವೆ!

ಮುಹಮ್ಮದ್ ಬಿನ್ ತುಘಲಕ್ ಚರ್ಮದ ಹಣವನ್ನು ಜಾರಿಮಾಡಿದ್ದನೆಂಬ ಕಥೆಯನ್ನು ನಾನು ಕೇಳಿದ್ದೆ. ಆದರೆ ಆ ಬಗ್ಗೆ ಯಾವುದೂ ಪುರಾವೆಯಿಲ್ಲವಂತೆ. ಅಕಸ್ಮಾತ್ ಜಾರಿ ಮಾಡಿದ್ದರೂ ಅದು ಈ ದಿನದವರೆಗೆ ಕಾಯ್ದಿಟ್ಟಿರಬಹುದಾದ ಸಾಧ್ಯತೆ ಇಲ್ಲ ಎಂದು ಅಲ್ಲಿನ ಕ್ಯುರೇಟರ್ ಹೇಳಿದರು. ಆದರೆ ಆತ ಬೆಳ್ಳಿಗೆ ಬದಲು ತಾಮ್ರದ ನಾಣ್ಯಗಳನ್ನು ಜಾರಿ ಮಾಡಿ ಇದನ್ನು ಬೆಳ್ಳಿಗೆ ಸಮಾನ ಎಂದು ಪರಿಗಣಿಸಬೇಕೆಂದು ಫರ್ಮಾನು ನೀಡಿದ್ದು ನಿಜವಂತೆ. ಹೀಗಾಗಿ ಜನ ತಮ್ಮದೇ ತಾಮ್ರದ ನಾಣ್ಯಗಳನ್ನು ಟಂಕಿಸಿ ವಿಪರೀತ ಜಾಲಿ ನಾಣ್ಯಗಳುಂಟಾಗಿದ್ದರಿಂದ ಈ ನಾಣ್ಯಗಳನ್ನು ಹಿಂದೆಗೆದುಕೊಳ್ಳಬೇಕಾಯಿತು ಅನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆಯಂತೆ. 

ಬ್ರಿಟಿಷರು ಬಂದ ನಂತರ, ಲೋಕಲ್ ರಾಜರು ತಮ್ಮ ನಾಣ್ಯಗಳನ್ನು ತಾವೇ ಟಂಕಿಸಿದರೂ ಬ್ರಿಟನ್ನಿನ ರಾಣಿಯ  ಚಿತ್ರಗಳನ್ನು ಅಚ್ಚುಹಾಕುವುದು ಪರಿಪಾಠವಾಗಿತ್ತು. ಕೆಲ ಬುದ್ಧಿವಂತರು ಕೇವಲ ಲಂಡನ್ನಿನ ದೋಸ್ತರೆಂದು ಹೇಳಿಕೊಂಡು ಚಿತ್ರ ಹಾಕುವುದನ್ನು ತಪ್ಪಿಸಿದರು.

ಮೊದಲಿಗೆ ಬ್ರಿಟಿಷ್ ರಾಜನ ಚಿತ್ರದ ಜಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹಾಕಬೇಕೆಂದು ಯೋಜನೆ ತಯಾರಿಸಿದರೂ ಹಾಕಿದ್ದು ಅಶೋಕನ ಸಿಂಹಗಳನ್ನು! ಆ ನಂತರ ತಂಜಾವೂರಿನ ದೇವಸ್ಥಾನದ ಚಿತ್ರದ ಸಾವಿರ ರೂಪಾಯಿನ ನೋಟು, ಗೇಟ್‍ವೇ ಚಿತ್ರವಿದ್ದ ಐದು ಸಾವಿರ ರೂಪಾಯಿನ ನೋಟನ್ನು ಛಾಪಿಸಲಾಯಿತು. ಮಹಾತ್ಮಾ ಗಾಂಧಿಯ ಚಿತ್ರ ಹಾಕಿ ನೋಟುಗಳನ್ನು ಮೊದಲ ಬಾರಿಗೆ ಛಾಪಿಸಿದಾಗ ಅನೇಕರು ಅದನ್ನು ನಿಜವಾದ ರೂಪಾಯಿಗಳೆಂದು ಒಪಲಿಲ್ಲವಂತೆ! ಅದು ನಿಜಕ್ಕೂ ಜಾಲಿ ನೋಟಲ್ಲ ಎನ್ನುವ ಪ್ರಚಾರವನ್ನು ಸರಕಾರ ಕೈಗೊಳ್ಳಬೇಕಾಯಿತು.

ಈಗ ಪ್ರತೀ ನೋಟಿನ ಮೇಲೂ ಭಾರತ ಸಂವಿಧಾನ ಗುರುತಿಸುವ ಅಷ್ಟೂ ಭಾಷೆಗಳಲ್ಲಿ ಅದರ ಮೊಬಲಗನ್ನು ಹಿಂಬದಿಯಲ್ಲಿ ಬರೆಯಲಾಗಿರುತ್ತೆ. ೧೯೧೭ರ ಕಾಲದಲ್ಲಿ ಬ್ರಿಟಿಷರು ಛಾಪಿಸಿದ ನೋಟುಗಳಲ್ಲಿ ಹಿಂಬದಿಯಲ್ಲಿದ್ದದ್ದು ಎಂಟು ಭಾಷೆಗಳು ಮಾತ್ರ. ಅದರಲ್ಲಿ ಕನ್ನಡವೂ ಇತ್ತು! ಆದರೆ ಮಲೆಯಾಳ ಇರಲಿಲ್ಲ!

ಬ್ರಿಟಿಷರ ಕಾಲದಲ್ಲಿ ಬಂದಿದ್ದ ಅನೇಕ ನಾಣ್ಯಗಳಲ್ಲಿ ಒಂದು ಹದಿನೈದು ರೂಪಾಯಿಯ ನಾಣ್ಯವೂ ಉಂಟು. ಇಲ್ಲ ಇದನ್ನು ಕುಂಬಕೋಣದಲ್ಲಾಗಲೀ, ಕೊಯಂಬತ್ತೂರಿನಲ್ಲಾಗಲೀ ಟಂಕಿಸಲಿಲ್ಲ!

ಮೊದಲಿಗೆ ಎಲ್ಲಕ್ಕಿಂತ ಹೆಚ್ಚಿನ ಮೊಬಲಗಿನ ನೋಟೆಂದರೆ ಹತ್ತುಸಾವಿರ ರೂಪಾಯಿಗಳದ್ದು. ೧೯೭೮ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದಾಗ ಹತ್ತು, ಐದು, ಮತ್ತು ಒಂದು ಸಾವಿರ ರೂಪಾಯಿನ ನೋಟುಗಳನ್ನು ಹಿಂದೆಗೆದುಕೊಳ್ಳಲಾಯಿತು. ಕಪ್ಪು ಹಣವನ್ನು ಈ ರೀತಿಯಿಂದ ಚಲಾವಣೆಮುಕ್ತ ಮಾಡಬಹುದೆಂದು ಆಗಿನ ಯೋಚನೆಯಾಗಿತ್ತಂತೆ. ಆ ಕಾಲದಲ್ಲಿ ತಿರುಪತಿ ಹುಂಡಿಯಲ್ಲಿ ಈ ನೋಟುಗಳು ಅನೇಕ ಬಿದ್ದುವೆಂದು ಪ್ರತೀತಿ. ಕಪ್ಪು ಹಣವನ್ನು ಆ ತಿಮ್ಮಪ್ಪನ ಮಾಯದಿಂದ ಬಿಳಿಯಾಗಿಸಿ ಪಾಪವನ್ನೂ ತೊಳೆದುಕೊಂಡವರು ಅನೇಕರಿರಬಹುದು. ಇತ್ತೀಚಿನವರೆಗೂ ನೂರು ರೂಪಾಯಿನ ನೋಟೇ ಅತ್ಯಧಿಕ ಮೌಲ್ಯದ್ದಾಗಿತ್ತು. ೧೯೮೭ರಲ್ಲಿ ಐನೂರು ರೂಪಾಯಿಯ ನೋಟಿನ ಮುದ್ರಣ ಪ್ರಾರಂಭವಾಯಿತು. ಈಗ ಸಾವಿರ ರೂಪಾಯಿನ ನೋಟುಗಳೂ ಚಲಾವಣೆಯಲ್ಲಿವೆ - ಇದೇ ಅತ್ಯಧಿಕ ಮೌಲ್ಯದ ನೋಟು.

ಈಗಿನ ರಿಜರ್ವ್ ಬ್ಯಾಂಕಿನ ಚಿನ್ಹೆ ಈಸ್ಟ್ ಇಂಡಿಯಾ ಕಂಪನಿಯ ಚಿನ್ಹೆಯ ಬೇರೊಂದು ರೂಪ. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಇದ್ದ ಸಿಂಹದ ಜಾಗದಲ್ಲಿ ರಿಜರ್ವ್ ಬ್ಯಾಂಕು ಹುಲಿಯನ್ನು ಭರ್ತಿ ಮಾಡಿದೆ ಅಷ್ಟೇ..

ಮುಂಬಯಿಗೆ ಹೋದವರು ಈ ಮ್ಯೂಜಿಯಂ ನೋಡಬಹುದು. ಹೋಗಲಾಗದವರು ವೆಬ್‍ನಲ್ಲಿರುವ ಈ ತಾಣಕ್ಕೆ ಹೋಗಬಹುದು. ಆದರೆ ಈ ತಾಣದಲ್ಲಿ ಓಡಾಡುವುದು ತುಸು ಕಿರಿಕಿರಿಯ ಮಾತು!ನನಗೂ ಕೇಸ್ಲಾಗೂ ಅಂಟಿದ ನಂಟು

ಪಾಠ-ಪ್ರವಚನ ಮಾಡುವ ನನ್ನಂತಹವರಿಗೆ ಎಲ್ಲೆಲ್ಲಿ ಪಾಠ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಪ್ರವಚನಕಾರರಂತೆಯೇ ಪಾಠಮಾಡುವವರೂ ಸಹ ಒಂದು ಗುಂಪಿನ ಕೇಳುಗರು ಸಿಕ್ಕಿದರೆ ಸಾಕು ತಮ್ಮ ಪುಂಗಿಯೂದುವುದಕ್ಕೆ ಪ್ರಾರಂಭಿಸುತ್ತಾರೇನೋ! ಆದರೆ ಸಾಮಾನ್ಯವಾಗಿ ಕ್ಯಾಂಪಸ್ ಬಿಟ್ಟು ಹೊರಗೆ ಹೋಗಿ ಪಾಠ ಮಾಡುವಾಗ ಒಂದು ಟೀಂ ಅಂತ ಇರುತ್ತದೆ. ಇಬ್ಬರಾದರೂ ಇರುವುದರಿಂದ ನಮಗೆ ಒಂದು ಥರದ ಕಂಪನಿ ಇರುತ್ತದೆ. ಆದರೆ ಒಮ್ಮೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ಸ್ವಯಂ ಸೇವಾ ಸಂಸ್ಥೆಗಳವರು ಯಾರಾದರೂ ಹೀಗೆ ತರಬೇತಿ ಕಾರ್ಯಕ್ರಮನನ್ನು ಮಾಡಿ ಎಂದು ಕೇಳಿದಾಗಲೇ ಹೆಚ್ಚಿನ ಪೀಕಲಾಟಕ್ಕೆ ಬರುವುದು. ಯಾಕೆಂದರೆ ಅಂಥ ಸಂಸ್ಥೆಗಳಿಗೆ ಹೋಗುವಾಗ ಈ ಟೀಂ ಕೈಕೊಡುತ್ತದೆ. ಅವರು ಕೊಡುವ ಹಣ ಹೆಚ್ಚಲ್ಲವಾದ್ದರಿಂದ ನನ್ನ ಸಹಚರರಿಗೆ ಆಸಕ್ತಿ ಕಡಿಮೆಯೂ ಆಗಬಹುದು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳವರ ಟ್ರೈನಿಂಗ್ ವಿಭಾಗಗಳು ದೂರದ ಜಾಗಗಳಲ್ಲಿರುತ್ತವೆ. ಅಥವಾ ನಗರದಲ್ಲಿದ್ದರೂ ಅಲ್ಲಿ ನಮಗೆ ಬೇಕಾದ ಪರಿಕರಗಳೆಲ್ಲವೂ ಸುಲಭವಾಗಿ ಸಿಗುವುದಿಲ್ಲ. ಒಂದು ಥರದಲ್ಲಿ ಈಡನ್ ಗಾರ್ಡನ್, ಚಿನ್ನಸ್ವಾಮಿ ಸ್ಟೇಡಿಯಂನಂತಹ ಜಾಗದಲ್ಲಿ ಅಂತರರಾಷ್ಟ್ರೀಯ ಮ್ಯಾಚುಗಳನ್ನು ಆಡಿದವರನ್ನು ಕಾಲೇಜಿನ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಕೇಳಿದಂತೆ. ಒಂದೆರಡು ಬಾರಿ ತಮಾಷೆಗೆಂದು ಆ ಆಟ ಚೆನ್ನಾಗಿರುತ್ತದಾದರೂ ಇದನ್ನು ಇಡೀ ಟೀಮು ಆಡುವುದನ್ನು ಊಹಿಸುವುದು ಕಷ್ಟ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಈ ರೀತಿಯ ತರಬೇತಿಯ ಕೋರಿಕೆಯನ್ನು ನಮ್ಮ ಮುಂದಿಟ್ಟಾಗ ಮಾಡಬೇಕೆನ್ನಿಸಿದರೂ, ಅದನ್ನು ಕಾರ್ಯರೂಪಗೊಳಿಸುವುದು ಸ್ವಲ್ಪ ಕಷ್ಟವೇ.

ಹೀಗಿರುವಾಗ ನನ್ನನ್ನು ಪ್ರದಾನ್ ಅನ್ನುವ ಸಂಸ್ಥೆಯವರು ತಮ್ಮ ಟೀಂ ಲೀಡರುಗಳಿಗೆ ಲೆಕ್ಕಪತ್ರ ಇಡುವಬಗ್ಗೆ ಆರ್ಥಿಕ ನಿಯೋಜನೆಯ ಬಗ್ಗೆ ತರಬೇತಿ ನೀಡಬೇಕೆಂದು ಕೇಳಿದರು. ೧೯೮೬ರಲ್ಲಿ ಪ್ರಾದನ್ ಸಂಸ್ಥೆಯಲ್ಲಿ ನಾನು ಎರಡು ತಿಂಗಳು ಕೆಲಸ ಮಾಡಿದ್ದೆ. ನಾನಾಗಿಯೇ ಒಂದು ಗ್ರಾಮೀಣ ವಿಕಾಸದ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕಿತ್ತು. ಅವರೂ ನನ್ನ ಮೇಲೆ ಬಹುಶಃ ಸಾಕಷ್ಟು ನಂಬಿಕೆಯನ್ನಿಟ್ಟುಕೊಂಡಿದ್ದರು. ಆದರೆ ಅದೇ ಸಮಯಕ್ಕೆ ಐಐಎಂನಲ್ಲಿ ನನಗೆ ಫೆಲೋಷಿಪ್ ಸಿಕ್ಕಿದ್ದರಿಂದ, ನಾನು ಕೆಲಸ ಪ್ರಾರಂಭವಾಗುವಮೊದಲೇ ಅದನ್ನು ಬಿಟ್ಟಿದ್ದೆ. ಈ ಪಾಪಪ್ರಜ್ಞೆ ನನ್ನನ್ನು ಕುಟುಕುತ್ತಲೇ ಇತ್ತು. ಹೀಗಾಗಿ ಅವರು ಈ ಕೋರಿಕೆಯನ್ನು ನನ್ನ ಮುಂದಿಟ್ಟಾಗ ನನ್ನ ಹಳೆಯ ಪಾಪವನ್ನು ಸ್ವಲ್ಪಮಟ್ಟಿಗಾದರೂ ತೊಳೆದುಕೊಳ್ಳುವ ಅವಕಾಶ ಸಿಕ್ಕಿತೆಂದು ಕೂಡಲೇ ಒಪ್ಪಿಕೊಂಡೆ. ತರಬೇತಿಯನ್ನು ಆರು ದಿನಗಳ ಕಾಲ, ಕೇಸ್ಲಾದಲ್ಲಿ ಮಾಡಬೇಕೆಂದು ಅವರು ಕೇಳಿದರು. ಇದೂ ನನಗೆ ಹೊಸ ಅನುಭವ. ದಿನಕ್ಕೆ ಎರಡು ಆಗಾಗ ಮೂರು ಕ್ಲಾಸುಗಳನ್ನು ತೆಗೆದುಕೊಂಡಿದ್ದೆನಾದರೂ, ಇಡೀ ಕಾರ್ಯಕ್ರಮವನ್ನು ಒಂಟಿಯಾಗಿ, ಸತತವಾಗಿ ನಾನು ಎಂದೂ ತೆಗೆದುಕೊಂಡಿರಲಿಲ್ಲ. ಜೊತೆಗೆ ನಾವು ಪಾಠಮಾಡುವ "ಕೇಸ್" ವಿಧಾನದಲ್ಲಿ ತರಗತಿ ಮುಂಚಿನ ತಯಾರಿ ಮುಖ್ಯವಾಗುತ್ತದೆ. ಇದಲ್ಲದೇ ಎರಡನೆಯ ಕ್ಲಾಸಿನಲ್ಲಿ ಮಾಡುವ ಪಾಠ ಮೊದಲನೆಯದರ ಕಲಿಕೆಯ ಮೇಲೆ ಆಧಾರಿತವಾಗಿರುತ್ತದಾದ್ದರಿಂದ, ಅದಕ್ಕೆ ಓದು ಮೊದಲನೆಯ ಕ್ಲಾಸಿನ ನಂತರ ಮಾಡಬೇಕಾಗುತ್ತದೆ... ಈ ಎಲ್ಲ ತೊಂದರೆಗಳಿದ್ದರೂ ನಾನು ಈ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿದೆ.

ಹಳೆಯ ಪಾಪ ತೊಳೆಯುವುದು ಒಂದು ಕಾರಣ. ಕೇಸ್ಲಾಕ್ಕೆ ಹೋಗಬೇಕೆಂದು ಬಯಸಿ ಹೋಗುವುದು ಮತ್ತೊಂದು ಕಾರಣ. ಕೇಸ್ಲಾಕ್ಕೆ ಹೋಗಬಯಸುವುದು ಯಾಕೆಂದರೆ, ಅಲ್ಲಿ ಸಿಗುವ ಏಕಾಂತ, ಮನಶ್ಶಾಂತಿ ಮತ್ತು ಬಹುಶಃ ಕಥೆ ಬರೆಯಲು ತಕ್ಕ ವಾತಾವರಣ. ಕೇಸ್ಲಾದ ಕ್ಯಾಂಪಸ್ಸನ್ನು ಚೆನ್ನಾಗಿ ರೂಪಿಸಿದ್ದಾರೆ. ಬಹುಶಃ ಮೇಷ್ಟರ ಪಾತ್ರದಲ್ಲಿ ನಾನು ಹೋಗುತ್ತಿರುವುದರಿಂದ ಇದು ಚೆನ್ನಾಗಿದೆ ಅನ್ನುತ್ತಿದ್ದೇನೇನೋ. ಆದರೆ ವಿದ್ಯಾರ್ಥಿಗಳಾಗಿ ಹೋದಾಗ ನಮಗಿರುವ ಕಾಟೇಜುಗಳಲ್ಲದೇ ಅವರಿಗೆ ಎಲ್ಲರೂ ಒಂದೇ ಕೋಣೆಯಲ್ಲಿ ಮಲಗುವ ಡಾರ್ಮಿಟರಿಗಳ ಏರ್ಪಾಟು ಇದೆ. ಅದು ಎಷ್ಟರ ಮಟ್ಟಿಗೆ ಅನುಕೂಲಕರವಾದದ್ದು ಅನ್ನುವುದನ್ನು ಅವರೇ ಹೇಳಬೇಕು. ಕೇಸ್ಲಾದ ಕ್ಯಾಂಪಸ್ಸು ಲಾರೀ ಬೇಕರ್ ಶೈಲಿಯಲ್ಲಿ ಸ್ಥಳೀಯವಾಗಿ ದೊರೆತ ವಸ್ತುಗಳಿಂದ, ಆದರೆ ಚೆನ್ನಾಗಿ ರೂಪಿಸಿರುವ ಜಾಗ.

ನನಗೆ ಮೊದಲ ಬಾರಿಗೆ ಪ್ರದಾನ್ ನಿಂದ ಆಹ್ವಾನ ಬಂದದ್ದು ೨೦೦೨ರಲ್ಲಿ, ಮತ್ತು ನಾನು ಕೇಸ್ಲಾಕ್ಕೆ ಹೋದದ್ದೂ ಆ ವರುಷವೇ. ಅಹಮದಾಬಾದಿನಿಂದ ಇಟಾರ್ಸಿಗೆ ರೈಲಿನಲ್ಲಿ ಹೋದರೆ, ಇಟಾರ್ಸಿಯಿಂದ ನಾಗಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಖತವಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕೇಸ್ಲಾ ಬರುತ್ತದೆ. ಬಳಿಯಲ್ಲೇ ತವಾ ಅಣೆಕಟ್ಟೂ ಹಾಗು ಸರಕಾರಿ ಆರ್‍ಡಿನೆಸ್ನ್ ಫ್ಯಾಕ್ಟರಿಯೂ ಇದೆ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾದರೂ ಎಲ್ಲಿದೆ ಅನ್ನುವುದನ್ನು ಹುಡುಕಬೇಕಿತ್ತು. ನೆನಪಿಡಿ ಬಿಜಲಿ ಸಡಕ್ ಪಾನಿ [ವಿದ್ಯುತ್ತು, ರಸ್ತೆ ಮತ್ತು ನೀರು] ಕೊಡುತ್ತೇನೆಂದು ಹೇಳಿದ ಉಮಾ ಭಾರತಿ ಅಲ್ಲಿ ಚುನಾಯಿತರಾಗುವುದಕ್ಕೆ ಮುಂಚಿನ ಮಾತು ಇದು. ಹೀಗಾಗಿ ಸಡಕ್ ಎಷ್ಟು ಖಡಕ್ ಆಗಿತ್ತೆನ್ನುವುದನ್ನು ನೀವೇ ಊಹಿಸಿಕೊಳ್ಳಿ.

ಮಧ್ಯಾಹ್ನ ಎರಡು ಘಂಟೆಗೆ ನನ್ನ ಕಾರ್ಯಕ್ರಮ ಪ್ರಾರಂಭವಾಗುವುದಿತ್ತು. ರಾತ್ರೆಯೆಲ್ಲಾ ಪ್ರಯಾಣಮಾಡಿ ಕೇಸ್ಲಾ ತಲುಪುವ ವೇಳೆಗೆ ಹನ್ನೊಂದು ಗಂಟೆ. ಕಾಟೇಜಿಗೆ ನನ್ನನ್ನು ಒಯ್ದು ಬಿಟ್ಟರು. ಒಟ್ಟಾರೆ ನಾಲ್ಕು ಕಾಟೇಜುಗಳು. ಒಂದೊಂದೂ ಮತ್ತೊಂದಕ್ಕಿಂತ ಭಿನ್ನವಾಗಿತ್ತು. ಅದೇ ಒಂದು ಆಶ್ಚರ್ಯ. ಸಾಮಾನ್ಯವಾಗಿ ಕ್ಯಾಂಪಸ್ಸುಗಳಲ್ಲಿ ಎಲ್ಲವನ್ನೂ ಒಂದೇ ರೀತಿಯಿಂದ ಕಟ್ಟುವುದು ಸಹಜ. ಆದರೆ ಇಲ್ಲಿ ಪ್ರತೀ ಕಟ್ಟಡಕ್ಕೂ ತನ್ನದೇ ವ್ಯಕ್ತಿತ್ವವಿತ್ತು. ಸಡಕ್ ವಿಷಯ ಹೇಳಿದ್ದೆ. ಬಿಜಲಿಯ ಕಥೆಯೂ ನನಗೆ ತಕ್ಷಣಕ್ಕೆ ಗೊತ್ತಾಯಿತು. ಕೋಣೆಯಲ್ಲಿ ಇದ್ದ ಮೇಜಿನ ಮೇಲೆ ತುವಾಲು, ಸಾಬೂನು ಈ ಎಲ್ಲವುದರ ಜೊತೆಗೆ ಎರಡು ಮೊಂಬತ್ತಿ ಮತ್ತು ಬೆಂಕಿಪೊಟ್ಟಣ ಕಂಡಿತು. ರೂಮಿನಲ್ಲಿ ಗೀಜರ್ ಇಲ್ಲ. ಆದರೆ ಬೆಳಿಗ್ಗೆ ನಾಲ್ಕೂ ಕಾಟೇಜುಗಳ ನಡುವಿನ ಗೋಲಾಕಾರದ ಪುಟ್ಟ ಕಟ್ಟೆಯ ನಡುವೆ ಒಂದು ಸ್ಟಾಂಡಿನ ಮೇಲೆ ದೊಡ್ಡ ಪಾತ್ರೆಯಿಟ್ಟು, ಸುತ್ತಮುತ್ತ ಸಿಕ್ಕ ಕಟ್ಟಿಗೆಸೇರಿಸಿ ನೀರು ಬೆಚ್ಚಗೆ ಮಾಡಿ ಕೊಡುತ್ತಾನೆ ಅಲ್ಲಿನ ಮೆಸ್ ನಡೆಸುವ ವ್ಯಕ್ತಿ. ಆತನೇ ಚಹಾವನ್ನೂ ಒದಗಿಸಿತ್ತಾನೆ. ಸಂಜೆಯ ವೇಳೆಗೆ ಆ ಪಾತ್ರೆಯನ್ನು ತೆಗೆದುಬಿಟ್ಟರೆ ಮಧ್ಯದಲ್ಲಿ ಬೆಂಕಿ ಹಾಕಿಕೊಂಡು ಕೈಉಜ್ಜುತ್ತಾ ಗುಂಡೂ ಹಾಗಬಹುದು! ಸಂಜೆಯ ವೇಳೆಯಲ್ಲಿ ಆ ವಾತಾವರಣದಲ್ಲಿ ಕೂತು ಹೆಚ್ಚಿನಂಶ ಉತ್ತರ ಭಾರತದಿಂದ ಬಂದಿದ್ದ ಟ್ರೈನಿಗಳ ಹಾಡುಗಳನ್ನು ಕೇಳುತ್ತಾ ಓಲ್ಡ್ ಮಾಂಕ್ ಹೀರಿದ್ದು ಅವರೊಂದಿಗಿನ ಗೆಳೆತನ ಬೆಳೆಸಲು, ಹಾಗೂ ಕಾರ್ಯಕ್ರಮವನ್ನು ಅವರ ಆಸಕ್ತಿಗನುಸಾರವಾಗಿ ನಡೆಸಲು ಅನುಕೂಲವಾಗುವಂತಿತ್ತು.

ಎಕೌಂಟಿಂಗ್ ನಂತಹ ಒಣ ವಿಷಯವನ್ನು ರೂಪಾಯಿ ಪೈಗಳನ್ನು ಲೆಕ್ಕಹಾಕಿಡುವ ಕಾರಕೂನಿಕೆಯನ್ನು ಆಸಕ್ತಿಮೂಡುವಂತೆ ಪಾಠ ಮಾಡುವುದು ಸುಲಭವಾದ ವಿಷಯವೇನೂ ಅಲ್ಲ! ಆದರೆ ಈ ಸಂಜೆಯ ಸಮ್ಮಿಲನದಿಂದ ಬಂದವರ ಪರಿಚಯ ಬೆಳೆಸಿಕೊಳ್ಳಲೂ ಸ್ನೇಹ ಬೆಳೆಸಿಕೊಳ್ಳಲೂ ಸಾಧ್ಯವಾಯಿತು. ಆರು ದಿನಗಳ ಕಾರ್ಯಕ್ರಮದ ನಡುವೆ ಫೆಬ್ರವರಿ ೨೮ರ ಬಜೆಟ್ಟು ಬರಲಿತ್ತು. ಹೀಗಾಗಿ ಬಜೆಟ್ಟು ಮಂಡನೆಯನ್ನು ನಾನು ನೋಡಲೇ ಬೇಕೆಂದೂ ಅದಕ್ಕೆ ಯಾರದಾದರೂ ಮನೆಯಲ್ಲಿ ಟಿ,ವಿ.ಯ ಏರ್ಪಾಟು ಮಾಡಬೇಕೆಂದು ನಾನು ಕೇಳಿಕೊಂಡಿದ್ದೆ. ಜೆನ್‍ಸೆಟ್ ಸಮೇತ ಬಿಜಲಿಯ ಯಾವ ಯೋಚನೆಯೂ ಇಲ್ಲದೇ ಅಲ್ಲಿದ್ದ ಕ್ಷೇತ್ರ ಕಾರ್ಯಾಲದಲ್ಲಿ ಕೆಲಸ ಮಾಡುತ್ತಿದ್ದ ಮಧೂ ಮತ್ತು ಅನೀಸರ ಮನೆಯಲ್ಲಿ ಚಹಾ, ಬಿಸ್ಕತ್ತು ಬಜೆಟ್ಟಿನ ಕಾರ್ಯಕ್ರಮವೂ ಬಂದ ಕೂಡಲೇ ಏರ್ಪಾಟಾಗಿತ್ತು.

ಇನ್ನು ನನಗಿದ್ದದ್ದು ನನ್ನ ಪ್ರವಚನವನ್ನು ಕುಕ್ಕುವುದು. ಬ್ರೇಕ್ ಸಿಕ್ಕಾಗ ಓದುವುದು. ಮನಸ್ಸಾದರೆ ಬರೆಯುವುದು. ಬೇಸರವಾದಾಗ ಲ್ಯಾಪ್‍ಟಾಪಿನ ಮೇಲೆ ನಾನು ತಂದುಕೊಂಡಿದ್ದ ಡಿ.ವಿ.ಡಿಗಳನ್ನು ನೋಡುವುದು.. ಹಾಗೂ ಕ್ಯಾಂಪಸ್ಸಿನಲ್ಲಿ ಓಡಾಡಿಕೊಂಡಿರುವುದು. ಈ ಜೀವನ ಶೈಲಿಯೇ ಬೇರೆ. ನ್ಯೂಸ್ ಪೇಪರ್ ಇಲ್ಲ, ಟಿವಿ ಇಲ್ಲ. ಫೋನ್ ಇಲ್ಲ, ಎಚ್ಚರವಾಗುವುದು ತಡವಾದರೆ ಸ್ನಾನಕ್ಕೆ ನೀರೂ ಇಲ್ಲ. ಹೀಗೆ ನಾನು ಖುಷಿಯಿಂದಲೇ ಇದ್ದೆ. ಹೊರಲೋಕದ ಯಾವ ಸೋಂಕೂ ಇಲ್ಲದೇ, ಇರುವುದೆಲ್ಲವ ಬಿಟ್ಟು.. ಸುಖವಾಗಿ....

ಆದರೆ ಹೊರಪ್ರಪಂಚದಲ್ಲಿ ಏನಾಗಿತ್ತು ಎಂದು ನನಗೆ ತಿಳಿದೇ ಇರಲಿಲ್ಲ. ಅಹಮದಾಬಾದಿನಿಂದ ಇಟಾರ್ಸಿಗೆ ಹೋಗುವ ರೈಲು ಅನೇಕ ಸ್ಟೇಷನ್ನುಗಳನ್ನು ಹಾಯ್ದು ಹೋಗುತ್ತದೆ. ಆದರೆ ಆ ಬಾರಿ ಒಂದು ಸ್ಟೇಷನ್ ಸಹಜಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಬಿಟ್ಟಿತು. ರಾತ್ರೆ ಹನ್ನೊಂದಕ್ಕೆ ರೈಲು ಗೋಧ್ರಾ ಸೇಷನ್ನಿನಲ್ಲಿ ಎರಡು ನಿಮಿಷ ನಿಂತು ಮುಂದಕ್ಕೆ ಬಂದಿತ್ತು. ರೂಟು ನನಗೆ ಗೊತ್ತಿದ್ದರೂ ಗೋಧ್ರಾದಲ್ಲಿ ಅಂದು ಮಹತ್ವದ್ದೇನೂ ನಡೆದಿರಲಿಲ್ಲ. ಹೀಗಾಗಿ ನಿದ್ದೆ ಮಾಡಿಬಿಟ್ಟಿದ್ದೆ. ಆದರೆ ನಾನು ಗೋಧ್ರಾವನ್ನು ಹಾದು ಹೋದದ್ದು ೨೬ರಂದು. ೨೭ ಫೆಬ್ರವರಿ ಮುಂಜಾನೆ ಸುಮಾರು ೮ ಗಂಟೆಗೆ ಸಾಬರ್‍‌ಮತಿ ಎಕ್ಸ್ ಪ್ರೆಸ್ ಕಾಂಡ ನಡೆದಿತ್ತು. ನಾನು ಕೇಸಲಾಗೆ ಬರುವವೇಳೆಗೆ ಈ ಕಾಂಡ ನಡೆದಿತ್ತಾದರೂ ನನಗೆ ಬಂದಾಗ ಮನಕ್ಕೆ ತಟ್ಟಿದ್ದು ಸ್ನಾನ ಮಾಡಲು ಬಿಸಿನೀರಿಲ್ಲ ಎಂಬ ಮಾತು ಮಾತ್ರ!! ಎಲ್ಲದರಿಂದಲೂ ದೂರವೆಂದರೆ ದೂರ. ದೂರದರ್ಶನವನ್ನು ನೋಡುವವರು ಅಪರೂಪ, ನೋಡಬೇಕೆಂದರೂ ಬಿಜಲಿ ಬೇಕು. ಕೇಸಲಾಕ್ಕೆ ಬರುವ ಪತ್ರಿಕೆಗಳು ಭೋಪಾಲದಿಂದ ಬರುವ "ಹಿತವಾದಾ" ಪತ್ರಿಕೆಯ ಡಾಕ್ ಆವೃತ್ತಿ. ಡಾಕ್ ಆವೃತ್ತಿಯೆಂದರೆ ಹಿಂದಿನದಿನದ ಪತ್ರಿಕೆಗೆ ಇಂದಿನ ತಾರೀಖನ್ನು ಲಗತ್ತಿಸಿ ರೈಲು ಬಸ್ಸುಗಳ ಮೂಲಕ ಕಳಿಸುವ ತುಸು ಹಳಸಲು ಪತ್ರಿಕೆಗಳು. ಹೀಗಾಗಿ ಯಾವುದೂ ನನಗೆ, ನಮಗೆ ಯಾರಿಗೂ, ವಿವರವಾಗಿ ಗೊತ್ತಿಲ್ಲ. 
ಗೋಧ್ರಾದಲ್ಲಿ ರೈಲಿಗೆ ಬೆಂಕಿ ಬಿತ್ತಂತೆ, ಒಂದು ಬೋಗಿ ಸುಟ್ಟು ಹೋಯಿತಂತೆ - ಏನೋ ಗಲಾಟೆಯಂತೆ ಅಂತ ಸುದ್ದಿ ಬಂತಾಗಲೀ ಅದರ ಮಹತ್ವ ನನಗೆ ತಿಳಿಯಲೇ ಇಲ್ಲ. ನಮ್ಮ ಪಾಡಿಗೆ ನಾವು ಪಾಠ ಮಾಡಿಕೊಂದು ಜೋಕು ಕತ್ತರಿಸುತ್ತಾ ಇದ್ದೆವು. ಆದ ಘಟನೆಯಾಗಲೀ ಅದರ ಮಹತ್ವವಾಗಲೀ ನಮಗೆ ಯಾರಿಗೂ ತಿಳಿದಿರಲಿಲ್ಲ. ೨೮ಕ್ಕೆ ನಮ್ಮ ಕಾರ್ಯಕ್ರಮದ ಪ್ರಕಾರ ಬಜೆಟ್ಟು ನೋಡಿದ್ದಾಯಿತು. ಆದರೆ ಅದೇ ದಿನ ಅಹಮದಾಬಾದು ನಗರವೇ ಹೊತ್ತಿ ಉರಿಯುತ್ತಿತ್ತು. ಇದು ಯಾವುದೂ ಶಾಂಗ್ರಿಲಾ ಆದ ಕೇಸಲಾಕ್ಕೆ ಮುಟ್ಟಿಯೇ ಇರಲಿಲ್ಲ. ಹಾಗೆ ನೋಡಿದರೆ ಅಹಮದಾಬಾದಿನಲ್ಲಿದ್ದ ನನ್ನ ಹೆಂಡತಿ, ಮತ್ತು ಇನ್ನೂ ಪುಟ್ಟವನಾಗಿದ್ದ ನನ್ನ ಮಗನ ಕುಶಲದ ಬಗ್ಗೆ ನನಗೆ ಯೋಚನೆಯಿರಬೇಕಿತ್ತು. ಆದರೆ ಇಲ್ಲ.. ಯಾವುದೂ ನನಗೆ ಮುಟ್ಟಿಯೇ ಇರಲಿಲ್ಲ. ಆ ಕಡೆ ನನ್ನ ಹೆಂಡತಿಗೆ ನನ್ನನ್ನು ಸಂಪರ್ಕಿಸುವುದು ಹೇಗೆಂದು ತಿಳಿಯದೇ ಅವಳೂ ಒದ್ದಾಡುತ್ತಿದ್ದಳಂತೆ. ಮೊಬೈಲು ಇರಲಿಲ್ಲ. ಕೇಸಲಾದ ಕಾರ್ಯಾಲಯದಲ್ಲಿ ಎಸ್.ಟಿ.ಡಿ ಕನೆಕ್ಷನ್ ಇಲ್ಲದ ಒಂದು ಫೋನಿತ್ತು. ಅದು ಆಫೀಸಿದ್ದ ಸಮಯದಲ್ಲಿ ಕೆಲಸ ಮಾಡುತ್ತಿತ್ತು. ಅಲ್ಲಿಗೆ ಫೋನ್ ಬಂದರೆ ನಾನು ನನ್ನ ಕೋಣೆಯಿಂದ ತಲುಪಲು ಹಿಡಿಯುತ್ತಿದ್ದದ್ದು ಹತ್ತು ನಿಮಿಷ. ಆ ನಂಬರೂ ಅವಳ ಬಳಿಯಿರಲಿಲ್ಲ. ಹೀಗಾಗಿ ದೆಹಲಿಗೆ ಪ್ರದನ್ ಪ್ರಧಾನ ಕಾರ್ಯಾಲಯಕ್ಕೆ ಫೋನ್ ಮಾಡಿ ಅಲ್ಲಿಂದ ನನ್ನನ್ನು ಸಂಪರ್ಕ ಮಾಡುವ ಪ್ರಯತ್ನ ನಡೆದಿತ್ತು. 

ಮುಖ್ಯತಃ ನಾನು ತಲುಪಿದ್ದೇನೆ ಅನ್ನುವ ಸುದ್ದಿಯಂತೂ ಅವಳಿಗೆ ಮುಟ್ಟಿತ್ತು. ಆದರೆ ಅಹಮದಾಬಾದಿಗೆ ವಾಪಸ್ಸು ಹೋಗುವ ವಿಧಾನ ಹೇಗೆ? ಜೋರಾಗಿ ಗಲಾಟೆ, ಜಾತಿಹಿಂಸೆ ನಡೆಯುತ್ತಿದೆ, ಗೋಧ್ರಾ ಸ್ಟೇಷನ್ ದಾಟಿ ಇತ್ತ ಬಂದರೆ, ವಾಪಸ್ಸು ಹೋಗಲೂ ಗೋಧ್ರಾ ದಾಟಿಯೇ ಹೋಗಬೇಕಲ್ಲವೇ? ಊರೆಲ್ಲಾ ಕರ್ಫ್ಯೂ ಆಗಿರುವುದರಿಂದ, ನನಗೆ ಬಂದ ಆದೇಶವೆಂದರೆ ಅಲ್ಲಿಯೇ ಕೇಸಲಾದಲ್ಲಿ ಶಾಂತಿಯುತವಾಗಿ ಪಾಠಮಾಡಿ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ಮಾರ್ಗವನ್ನು ಕಂಡುಕೊಳ್ಳಬೇಕು ಅನ್ನುವುದು. ನಾನಾಗಿಯೇ ಎಲ್ಲಿಗೂ ಕರೆ ಮಾಡಲು ಸಾಧ್ಯವಿದ್ದಿಲ್ಲ... ಕಾರ್ಯಾಲಯದ ಫೋನಿನಲ್ಲಿ ಎಸ್.ಟಿ.ಡಿ ಇಲ್ಲ. ಹಾಗೂ ಇಟಾರ್ಸಿಯಲ್ಲಿರುವ ಎಸ್.ಟಿ.ಡಿ ಬೂತಿನಿಂದ ಕಾನ್ಫರೆನ್ಸ್ ಕಾಲ್ ಮಾಡುವ ಏರ್ಪಾಟು ಇತ್ತಾದರೂ, ವಿಎಚ್‍ಪಿಯವರು ಕರೆದಿದ್ದ ಬಂದಿನಿಂದಾಗಿ ಲೋಕಸಂಪರ್ಕವೇ ಇಲ್ಲದೇ ಆಗಿತ್ತು.

ಮೂರು ದಿನಗಳು ಯಾವ ಸುದ್ದಿಯೂ ಇಲ್ಲದೇ ಜೋರಾಗಿ ನಡೆದ ಕಾರ್ಯಕ್ರಮ, ಈಗ ಯಾವ ಸುದ್ದಿಯೂ ತಲುಪದೇ ಇರುವ ಆತಂಕದಿಂದ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಈ ಅದ್ಭುತ ಜಾಗದ ಪರಿಸರದ ಸುಖವನ್ನು ಆಸ್ವಾದಿಸಲು ಸಾಧ್ಯವಾಗದೆಯೇ ದುಃಖದ ವಾತಾವರಣದಲ್ಲಿ ನಾವು ಕಾರ್ಯಕ್ರಮವನ್ನು ಮುಗಿಸಿದೆವು. ವಾಪಸ್ಸಾಗುವಾಗ ನನಗೆ ನಮ್ಮ ಸಂಸ್ಥೆಯಿಂದ ಬಂದ ಆದೇಶವೆಂದರೆ - ನಾನು ರೈಲಿನಲ್ಲಿ ಬರಕೂಡದು. ಯಾಕೆಂದರೆ ಸ್ಟೇಷನ್ ಸುತ್ತಮುತ್ತ ಕರ್ಫ್ಯೂ ಇದೆ. ಹಾಗೂ ಅದು ಅಪಾಯದಿಂದ ಕೂಡಿದ್ದು. ಪ್ಲೇನಿನಲ್ಲಿ ಬಂದರೂ, ಮುಂಜಾನೆ ಅಹಮದಾಬಾದಿನಲ್ಲಿ ಇಳಿಯುವ ಪ್ಲೇನಾದರೆ ಏರ್ಪೋರ್ಟಿಗೆ ಗಾಡಿ ಕಳಿಸುವುದಾಗಿ ಹೇಳಿದರು. ಸಂಜೆಯ ಸಮಯಕ್ಕೆ ಕಾರನ್ನು ಕಳಿಸುವ ಭರವಸೆ ಇರಲಿಲ್ಲ. [ಕೋಮುಗಲಭೆಯಲ್ಲಿ ನಿರತವಾಗಿರುವವರು ಮುಂಜಾನೆ ತಡವಾಗಿ ಎದ್ದು ಹಲ್ಲು ತಿಕ್ಕಿ, ಭಜಿಯಾ ತಿಂದು, ಹಿಂಸಾಚಾರಕ್ಕೆ ತೊಡಗುತ್ತಾರಾದ್ದರಿಂದ, ಅವರು ಕಣ್ಣಿನ ಗೀಜು ತೆಗೆಯುವುದರೊಳಗಾಗಿ ನಾನು ಊರು-ಮನೆ ಸೇರಬೇಕಿತ್ತು!!] ಹೀಗಾಗಿ ಭೋಪಾಲದಿಂದ ಮುಂಬಯಿಗೆ ಹೋಗಿ, ಅಲ್ಲಿಂದ ಮತ್ತೊಂದು ಫ್ಲೈಟನ್ನು ತೆಗೆಕೊಳ್ಳುವುದಕ್ಕಿಂತ, ದೆಹಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಪ್ಲೇನಿನಲ್ಲಿ ಬರುವುದು ಅಂತಾಯಿತು. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೆಂದರೆ ಇದೇ!

ಹಾಗೂ ಹೀಗೂ ಅಹಮದಾಬಾದಿಗೆ ಬಂದಿಳಿದೆ. ಬರುವ ದಾರಿಯಲ್ಲಿ ರಸ್ತೆಯ ಮಧ್ಯದಲ್ಲೇ ಇದ್ದ ಸೂಫಿ ಕವಿ ಷಾ ವಾಲಿಯ ದರ್ಗಾ ನೆಲಸಮವಾಗಿದ್ದು ಅಲ್ಲಿ ನೀಟಾದ ಹೊಸ ತಾರು ರೋಡಿತ್ತು! ಬೇರೆ ಜಾಗಗಳಲ್ಲೂ ಇಮಾರತುಗಳು ನೆಲಸಮವಾಗಿತ್ತಂತೆ. ನಾವು ನಿಯಮಿತವಾಗಿ ಹೋಗುತ್ತಿದ್ದ ಅಭಿಲಾಷಾ ಹೊಟೇಲೂ ಚೂರುಚೂರಾಗಿತ್ತು. ಅದನ್ನು ನಡೆಸುತ್ತಿದ್ದವರು ಚೇಲಿಯಾ ಮುಸಲ್ಮಾನರೆಂದು ನನಗೆ ಬಳಿಕ ತಿಳಿಯಿತು.

ಮನೆಯಲ್ಲಿ ಮತ್ತೊಂದು ಸಂಸಾರ ನನಗಾಗಿ ಕಾದಿತ್ತು. ನನ್ನ ಹಳೆಯ ವಿದ್ಯಾರ್ಥಿ ಮಹಮ್ಮದ್ ರಫಿ, ತನ್ನ ಹೆಂಡತಿ ಸುಷ್ಮಾ ಜೊತೆ ನಮ್ಮ ಮನೆಯಲ್ಲಿದ್ದ. ಗಲಾಟೆಯ ದಿನ ಫೋನ್ ಮಾಡಿ ಮನೆಗೆ ಬಂದವನು ಮನೆಯ ಬಾಗಿಲಿನಾಚೆ ಕಾಲಿಟ್ಟಿರಲಿಲ್ಲವಂತೆ. ಅವನು ಹಿಂದೂ ಹುಡುಗಿಯನ್ನು ಮದುವೆಯಾಗಿದ್ದನಾದ್ದರಿಂದ ಅವನಿಗೆ ತನ್ನ ಕಾಲೊನಿಯಲ್ಲಿರುವುದು ಭಯದ ವಿಷಯವಾಗಿತ್ತು. ಅವನು ಯಾರು ಎನ್ನುವ ಕುತೂಹಲ ನಮ್ಮ ಮನೆಯ ಕೆಲಸದವಳಿಗೆ. ಅವನನ್ನು ನಾವು ರಫಿ ಎಂದು ಕರೆಯುತ್ತಿದ್ದದ್ದು ಅವಳಿಗೆ ರವಿ ಎಂದು ಕೇಳಿಸಿದ್ದರಿಂದ ಅವರು ನಮ್ಮ ಮನೆಯಲ್ಲಿ ತಳವೂರಿದ್ದರ ಒಳ ಅರ್ಥ ಅವಳಿಗೆ ಆಗಿರಲಿಲ್ಲ. ಜೊತೆಗೆ ನಾವೂ ಈ ಸುದ್ದಿಯನ್ನು ಹೊರಗೆ ಹಬ್ಬಿಸಿ ಎಡವಟ್ಟು ಮಾಡುವ ಮೂಡಿನಲ್ಲಿರಲಿಲ್ಲ. ರಫಿ ಎರಡು ದಿನಗಳ ನಂತರ ದೆಹಲಿಗೆ ಫ್ಲೈಟಿನಲ್ಲಿ ಹೋದ. ಆನಂತರ ಅವನ ಗೆಳೆಯ ಅವನ ಸಾಮಾನನ್ನು ಕಟ್ಟಿ ದೆಹಲಿಗೆ ರವಾನೆ ಮಾಡಿದ. ಅಲ್ಲಿಯೇ ಅವನಿಗೆ ಹೊಸ ಕೆಲಸ ಸಿಕ್ಕಿತು. ೨೦೦೨ರಿಂದ ಇಂದಿನವರೆಗೂ ರಫಿ ಅಹಮದಾಬಾದಿಗೆ ಕಾಲಿಟ್ಟಿಲ್ಲ!!

ಇರಲಿ. ಈ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಹೀಗೆ ದೂರದ ಜಾಗಗಳಿಗೆ ಓಡಾಡುತ್ತೀಯ, ನಮಗೆ ಆತಂಕವಾಗುತ್ತೇಂತ ಹೇಳಿ ಗೌರಿ ಬಲವಂತದಿಂದ ಆಗ ದುಬಾರಿಯಾಗಿದ್ದ ಮೊಬೈಲನ್ನು ಕೊಳ್ಳಲು ಒತ್ತಾಯಿಸಿದಳು. ಹೀಗಾಗಿ ಮೊಬೈಲು ಕೊಂಡದ್ದಾಯಿತು. ಇಂಥದೇ ಮತ್ತೊಂದು ಕಾರ್ಯಕ್ರಮಕ್ಕಾಗಿ ನಾನು ಮತ್ತೆ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಕೇಸ್ಲಾಗೆ ಹೋಗುವುದಿತ್ತು. ಸಂಜೆ ರೈಲು ಹತ್ತುವುದಕ್ಕೆ ಮುನ್ನ ಮೊಬೈಲನ್ನು ಚಾರ್ಜ್ ಮಾಡಿ ಜೇಬಿಗಿರಿಸಿ ಸೂಟ್‍ಕೇಸ್ ಕಟ್ಟಿ ಇನ್ನೇನು ಹೊರಡಬೇಕೆನ್ನುವಾಗ ಟಿವಿಯಲ್ಲಿ ಬಂದ ವಾರ್ತೆಗಳು ಇಂತಿದ್ದುವು - ಗಾಂಧಿನಗರದ ಅಕ್ಷರಧಾಮ್ ದೇವಾಲಯವನ್ನು ಆತಂಕವಾದಿಗಳು ಮುತ್ತಿಗೆ ಹಾಕಿದ್ದಾರೆ. ಅವರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ... ನಾನು ರೈಲ್ವೇ ಸ್ಟೇಷನ್ನಿಗೆ ಹೋಗುವ ಪ್ರಮೇಯವೇ ಇಲ್ಲ ಎಂದು ಗೌರಿ ಪಟ್ಟು ಹಿಡಿದಳು. ಈಗ ಕಾರ್ಯಕ್ರಮ ಕ್ಯಾನ್ಸಲ್ ಮಾಡುವುದಕ್ಕೂ ಆಗುವುದಿಲ್ಲ. ದೇಶದ ವಿವಿಧ ಭಾಗಗಳಿಂದ ಪ್ರದಾನ್ ಕಾರ್ಯಕರ್ತರು ಕೇಸ್ಲಾಗೆ ಬಂದಿಳಿದಿರುತ್ತಾರೆ.. ಹೋಗಲೇ ಬೇಕು ಎಂದೆಲ್ಲಾ ಗಲಾಟೆ ಮಾಡಿದೆ. ಕಡೆಗೆ ದೆಹಲಿಗೆ ಫೋನ್ ಮಾಡಿ ರೈಲು ಬಿಟ್ಟು ಪ್ಲೇನಿನಲ್ಲಿ ಭೋಪಾಲಕ್ಕೆ ಮುಂಬಯಿನ ಮೂಲಕ ಹೋಗುವ ಏರ್ಪಾಡು ಮಾಡಿದ್ದಾಯಿತು.

"ಏನೂ ಯೋಚನೆ ಮಾಡಬೇಡ. ನಾನು ಕೇಸಲಾದಿಂದ ದಿನವೂ ಫೋನ್ ಮಾಡುತ್ತೇನೆ. ಹೇಗಿದ್ದರೂ ಮೊಬೈಲ್ ಇದೆಯಲ್ಲಾ" ಎಂದು ಗೌರಿಗೆ ಹೇಳಿ ಹೊರಟವನು ಊರೆಲ್ಲಾ ಸುತ್ತಿ ಕೇಸ್ಲಾ ಸೇರಿದೆ. ಈ ಬಾರಿ ಬಜೆಟ್ಟಿಲ್ಲ, ಆದರೆ ಛಾಂಪಿಯನ್ಸ್ ಟ್ರೋಫಿ ಮ್ಯಾಚು ನಡೆಯುವುದಿತ್ತು. ಅದನ್ನು ನೋಡುವ ಏರ್ಪಾಟು ಮಾಡಿಕೊಳ್ಳಬೇಕು ಅಂದುಕೊಂಡೆ. ಕೇಸ್ಲಾ ತಲುಪಿದ ತಕ್ಷಣ ಮನೆಗೆ ಫೋನ್ ಮಾಡೋಣವೆಂದು ನೋಡಿದರೆ ಮೊಬೈಲಿಗೆ ಸಿಗ್ನಲ್ಲೇ ಇಲ್ಲ!
ಯಾವ ಸುದ್ದಿಯೂ ಇಲ್ಲದೇ ಒಬ್ಬನೇ ಕುಳಿತು, ಪಾಠ, ಚಾಂಪಿಯನ್ಸ್ ಟ್ರೋಫಿಯ ಮ್ಯಾಚು, ಎಲ್ಲದರ ನಡುವೆ ಒಂದು ಕಥೆ ಬರೆದೆ. ಕೇಸ್ಲಾಗೂ ನನ್ನಯಾತ್ರೆಗೂ ಯಾಕೋ ಹಿಂಸಾಚಾರದ ಒಂದು ಭಯಾನಕ ಕೊಂಡಿ ಇದೆ ಅನ್ನಿಸಿತು. ಮೂರನೆಯ ಕಾರ್ಯಕ್ರಮ ಕೇಸ್ಲಾದಲ್ಲಿ ಬೇಡ ಎಂದು ಪ್ರದಾನ್ ಅವರನ್ನು ಕೇಳಿಕೊಂಡೆ. ಇದಾಗಿ ಅನೇಕ ದಿನಗಳಾದುವು. 

ನಾಲ್ಕು ತಿಂಗಳ ಹಿಂದೆ ಮತ್ತೆ ಕೇಸ್ಲಾದಲ್ಲಿ ಇಂಥದೇ ಕಾರ್ಯಕ್ರಮ. ಆದರೆ ಈ ಬಾರಿ ಹಳೆಯ ಕಾಂಡಗಲು ನಡೆವುದಿಲ್ಲ ಅನ್ನಿಸಿ ಅಲ್ಲಿಗೇ ಹೋಗಲು ಒಪ್ಪಿದೆ. ಈ ಬಾರಿ ಎಲ್ಲವೂ ಸುಗಮವಾಗಿ ನಡೆಯಿತು. ದೂರದೂರದ ಹಳ್ಳಿಗಳಿಗೆ ಹೋಗುವಂತಹ ನನಗೆ ಬಿ.ಎಸ್.ಎನ್.ಎಲ್ ಮೊಬೈಲೇ ಒಳ್ಳೆಯದೆಂದು, ಇದ್ದ ಏರ್ಟೆಲ್ ತೆಗೆದು ಸರಕಾರಿ ಫೋನ್ ಕೊಂಡಿದ್ದೆ. ಆದರೆ ಈ ಬಾರಿ ಕೇಸ್ಲಾದಲ್ಲಿ ಐಡಿಯಾ, ರಿಲಯನ್ಸ್, ಏರ್ಟೆಲ್, ವೊಡಾಫೋನುಗಳ ಸಿಗ್ನಲ್ ಬರುತ್ತಿತ್ತು. ಬಿಎಸ್.ಎನ್.ಎಲ್ ಮಾತ್ರ ಇಲ್ಲ..!! ಯಾಕೋ ನನಗೂ ಕೇಸ್ಲಾಗೂ ಕಷ್ಟದ ನಂಟು ಹೀಗೇ ಮುಂದುವರೆಯುತ್ತದೇನೋ.....