ಅಹಮದಾಬಾದಿನಲ್ಲಿ ನಡೆ-ನುಡಿ

ಈಗೀಗ ಎಲ್ಲ ನಗರಗಳಲ್ಲೂ ’ಹೆರಿಟೇಜ್ ವಾಕ್’ ಆಯೋಜನೆ ಪ್ರಾರಂಭವಾಗಿದೆ. ನಗರದ ಹಿನ್ನೆಲೆ ಚರಿತ್ರೆ ತಿಳಿಯಲು ಇದೊಂದು ಒಳ್ಳೆಯ ಮಾರ್ಗ. ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಹೆರಿಟೇಜ್ ವಾಕ್ ಪ್ರಸಿದ್ಧವಾಗಿದೆ. ಮುಂಜಾನೆ ಏಳೂವರೆಗೆ ಪ್ರಾರಂಭವಾಗುವ ಈ ನಡಿಗೆ ಸುಮಾರು ಎರಡು ಘಂಟೆಕಾಲ, ನಿಧಾನಗತಿಯಲ್ಲಿ ಹಳೆಯ ಕಟ್ಟಡಗಳು, ಮನೆ ಮತ್ತು ಮಂದಿರಗಳನ್ನು ತೋರಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರು ತೋರಿದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಅರಿಯಲು ಇದು ಒಂದು ಉತ್ತಮ ವಿಧಾನ.

ಕಾಲೂಪುರ್ ಸ್ವಾಮಿನಾರಾಯಣ ಮಂದಿರದಲ್ಲಿ ಪ್ರಾರಂಭವಾಗಿ ಜುಮ್ಮಾ ಮಸೀದಿಯಲ್ಲಿ ಪೂರ್ಣಗೊಳ್ಳುವ ಈ ನಡಿಗೆ ಅಹಮದಾಬಾದಿನ ಹಳೆಯ ನಗರದಲ್ಲಿರಬಹುದಾದ ಕೋಮುಗಳ ನಡುವಿನ ಆತಂಕಕ್ಕೆ ಉತ್ತರವೆಂಬಂತೆ ಕಂಡರೂ, ನಿಜಕ್ಕೂ ನಮಗೆ ಕಾಣುವುದು ಒಂದು ಇನ್ಸುಲರ್ ಜೀವನ ವ್ಯವಸ್ಥೆ ಅನ್ನಿಸುತ್ತದೆ. ಅಹಮದಾಬಾದಿನ ಹಳೆಯ ನಗರದಲ್ಲಿ ಇರುವ ಕಾಲೊನಿಗಳಿಗೆ ಪೋಲ್ ಅನ್ನುತ್ತಾರೆ. ಬಜಾರು ಪ್ರಾಂತವನ್ನು ಓಲ್ ಎಂದು ಕರೆಯುತ್ತಾರೆ. ಪ್ರತಿ ಪೋಲಿಗೂ ಒಂದು ದ್ವಾರ, ದ್ವಾರದ ಮೇಲ್ಭಾಗದಲ್ಲಿ ಕಾವಲು ಕಾಯುವ ಸೆಕ್ಯೂರಿಟಿಗಾಗಿ ಒಂದು ಕೋಣೆ, ಕಿಂಡಿ. ಹೊರಗಿನವರು ಬಂದು ತಮ್ಮ ವಸ್ತುಗಳನ್ನು ಮಾರಟಮಾಡಲು ಒಂದು ಕೇಂದ್ರ ಜಾಗ, ಹಾಗೂ ಪಕ್ಷಿಗಳಿಗೆ ಕಾಳು ಹಾಕಲು ಒಂದು ಚಬೂತರಾ. ಕೆಲ ಪೋಲ್‍ಗಳಲ್ಲಿ ಹೊರಗಿನಿಂದ ಧಾಳಿಯಾದಾಗ ತಪ್ಪಿಸಿಕೊಂಡು ಹೋಗಲು ಒಂದು ಗುಪ್ತ ಮಾರ್ಗ, ಹೀಗೆ ಪರಸ್ಪರ ಅನುಮಾನದ, ಭಯದ ಛಾಯೆಯಲ್ಲಿ ಈ ಕಾಲೋನಿಗಳು ನಿರ್ಮಿತವಾಗಿವೆ.  ಹೆರಿಟೇಜ್ ವಾಕ್ ಆಯೋಜಿಸಿದ್ದ ಪ್ರಾಂತದಲ್ಲಿ ಯಾವುದೇ ಪೋಲ್‍ನಲ್ಲಿ ನಮಗೆ ವಿವಿಧ ಜಾತಿಗಳಿಗೆ ಸಂದ ಜನ ಕಂಡರೇ ಹೊರತು, ವಿವಿಧ ಕೋಮಿಗೆ ಸಂದ ಜನ ಕಾಣಲಿಲ್ಲ. ಹೀಗಾಗಿಯೇ ಅಹಮದಾಬಾದು ನಗರ ಕೋಮು ಕ್ಷೋಭೆಯ ಟೈಂಬಾಂಬಿನ ಮೇಲೆ ಕುಳಿತಿದೆ ಎಂದು ಗೋಧ್ರಾ ಕಾಂಡ ನಡೆಯುವುದಕ್ಕೆ ಮೊದಲೇ ಅಶುತೋಶ ವಾರ್ಷ್ನೇಯ ಬರೆದಿದ್ದರಲ್ಲಿ ಆಶ್ಚರ್ಯವಾಗಬಾರದು.
 

ಆದರೆ ಕೋಮನ್ನು ಬಿಟ್ಟು ಮುಂದಕ್ಕೆ ಹೋದರೆ ಈ ಪೋಲ್‍ಗಳಲ್ಲಿನ ವೈವಿಧ್ಯತೆಯನ್ನು ನಾವು ಮೆಚ್ಚದಿರಲು ಸಾಧ್ಯವಿಲ್ಲ - ಮರಾಠ, ಗುಜರಾತಿ, ಮತ್ತು ರಾಜಾಸ್ಥಾನದ ಜೈನ ಸಮುದಾಯದ ಜನ ಒಂದೇ ಪೋಲ್‍ನಲ್ಲಿ ಸಹಬಾಳ್ವೆ ನಡೆಸುವುದು ನಮಗೆ ಕಾಣಿಸುತ್ತದೆ. ಓರೆಕೋರೆಯ ಸಣ್ಣಪುಟ್ಟ ಓಣಿಗಳ ನಡುವೆ ಇರುವ ಮನೆಗಳು ಸಹಬಾಳ್ವೆಗೆ ಪೂರಕವಾಗಿವೆ. ಮರಾಠ ಜನರ ಮನೆ ಅನ್ನುವುದಕ್ಕೆ ದ್ಯೋತಕವಾಗಿ ಮನೆ ಮಾಲೀಕನ ಶಿರವನ್ನು ಮಹಾದ್ವಾರದೆದುರಿಗೆ ಕೆತ್ತಿ ಇಟ್ಟಿದ್ದಾರೆ. ಮಾಲೀಕನಿಗೆ ಬಂದಿರುವ ಗತಿ ಕಂಡಾಗ ಈ ರೀತಿಯ ಮನೆಮಾಲೀಕನಾಗುವುದು ಬೇಡ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. ಯಾರಿಗೆ ತಾನೇ ಹಿಂದಿನ ಕಾಲದಲ್ಲಿ ಸಂಹಾರ ಮಾಡಿದ ಜಿಂಕೆ, ಹುಲಿ, ಕಾಡೆಮ್ಮೆಗಳ ರುಂಡವನ್ನು ಮನೆಯ ಗೋಡೆಗೆ ನೇತು ಹಾಕುತ್ತಿದ್ದ ರೀತಿಯಲ್ಲಿ ಮನೆ ಮಾಲೀಕನ ರುಂಡವನ್ನು ದ್ವಾರದ ಮೇಲೆ ಪ್ರದರ್ಶಿಸಬೇಕು ಅನ್ನಿಸುತ್ತದೆ?

ಅಲ್ಲಿ ಆಯೋಜಿಸಿರುವ ಮಳೆನೀರನ್ನು ಸಂರಕ್ಷಿಸುವ, ಒಳಚರಂಡಿಗಳ ಆಯೋಜನೆಗಳೆಲ್ಲಾ ಹಿಂದಿನ ನಗರಗಳಲ್ಲಿ ಆಗಿನ ಅವಶ್ಯಕತೆಗೆ ತಕ್ಕಂತೆ ಹೇಗೆ ಯೋಜಿತಗೊಂಡಿದ್ದವು ಅನ್ನುವುದರ ದ್ಯೋತಕವಾಗಿ ಕಾಣುತ್ತದೆ. ಕಡೆಗೆ ಹಳೆಯ ಅಹಮದಾಬಾದು ನಗರ ಆಯೋಜಿತವಾಗಿದ್ದೇ ಎಲ್ಲವೂ ಸಾಬರಮತಿ ನದಿಯತ್ತ ಮುಖಮಾಡುವಂತೆ. ನದಿ ದಂಡೆಯ ನಗರಗಳ ಆಯೋಜನೆಯೇ ಅಂತಹುದೇನೋ.

ಚರಿತ್ರೆಯಲ್ಲಿ ನಡೆಯುತ್ತಾ ಹೆಜ್ಜೆಹಾಕುತ್ತಾ ಹೋದಂತೆ ವರ್ತಮಾನವೂ ನಮ್ಮನ್ನು ಜೋರಾಗಿ ತಟ್ಟುತ್ತದೆ. ಚರಿತ್ರೆ ಎಂದಾಕ್ಷಣಕ್ಕೆ ನಾವುಗಳು ಹಲವು ನೂರು ವರ್ಷಗಳ ಹಿಂದಿನಕಾಲಕ್ಕೆ ಹೋಗುತ್ತೇವೆ. ಆದರೆ ಆಧುನಿಕ ಚರಿತ್ರೆ ವರ್ತಮಾನದ ಜೊತೆಗೆ ಕೂಡಿಬಿಡುವುದರಿಂದ ಅದರಬಗ್ಗೆ ನಾವು ಹೆಚ್ಚಿನ ಗಮನ ಕೊಡುವುದಿಲ್ಲ. ಅಹಮದಾಬಾದು ತನ್ನ ಬಟ್ಟೆ ಗಿರಣಿಗಳಿಗೆ ಹೆಸರುವಾಸಿಯಾಗಿತ್ತು. ಅಹಮದಾಬಾದನ್ನು ಮ್ಯಾಂಚೆಸ್ಟರ್ ಆಫ ದ ಈಸ್ಟ್ ಎಂದು ಕರೆಯುತ್ತಿದ್ದರು. ಈ ಎಲ್ಲ ಗಿರಣಿಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದದ್ದು 

ಸಾರಾಭಾಯಿ ಸಂಸಾರ ನಡೆಸುತ್ತಿದ್ದ ಕ್ಯಾಲಿಕೋ ಮಿಲ್. ಒಂದು ಕಾಲದಲ್ಲಿ ಕ್ಯಾಲಿಕೋ ಸೀರೆ ಅನ್ನುವುದೇ ಒಂದು ಪ್ರತ್ಯೇಕ ಬ್ರ್ಯಾಂಡ್ ಆಗಿತ್ತು. ಕ್ಯಾಲಿಕೋ ಬಟ್ಟೆಗಳನ್ನು ಮಾರುವ ಕ್ಯಾಲಿ ಷಾಪ್‍ಗಳು ಎಲ್ಲೆಡೆಯಲ್ಲೂ ಇದ್ದುವು. ಆದರೆ ಇಂದು ನಮ್ಮ ತಲೆಮಾರು ಮತ್ತು ನಮ್ಮ ತಂದೆ ತಾಯಿಯರ ತಲೆಮಾರು ಕಂಡಿದ್ದ ಭವ್ಯ ಗಿರಣಿಗಳ ಅವಶೇಷಗಳು ಯಾವ ಪರಿಸ್ಥಿತಿಗೆ ಇಳಿದಿವೆ ಎನ್ನುವುದಕ್ಕೆ ಅಹಮದಾಬಾದಿನಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಕ್ಯಾಲಿಕೋ ಡೋಮ್ ಮತ್ತು ಕ್ಯಾಲಿ ಷಾಪ್‍ಗೆ ಆಗಿರುವ ಗತಿಯನ್ನು ನಾವು ಈ ನಡಿಗೆಯಲ್ಲಿ ಕಂಡೆವು. ಸಮಕಾಲೀನ ಸ್ಥಾವರಗಳು ಹೆರಿಟೇಜ್ ಆಗುವ ಶೀಘ್ರ ಪ್ರಕ್ರಿಯನನ್ನು ನಾವು ಈ ಕ್ಯಾಲಿ ಷಾಪಿನ ಅವಶೇಷದಲ್ಲಿ ಕಾಣಬಹುದಾಗಿದೆ.


ಈ ಎಲ್ಲದರ ನಡುವೆ ನನ್ನ ಗಮನವನ್ನು ಸೆಳೆದದ್ದು ಒಂದು ಅದ್ಭುತ ಪುತ್ಥಳಿ. ಅದು ಕವಿ ದಲಪತ್‍ರಾಮ್‍ನ ಪುತ್ಥಳಿ. ಎಲ್ಲಡೆಯೂ ಪುತ್ಥಳಿಗಳೆಂದರೆ ಒಂದು ದೊಡ್ಡ ಕಟ್ಟೆಯ ಮೇಲೆ ಜನರನ್ನು ಅವಲೋಕನ ಮಾಡುತ್ತಿರುವಂತೆ ಯಾವುದೋ ಸಿಂಹಾಸನದ ಮೇಲೆಯೋ ಅಥವಾ ಕುದುರೆಯ ಮೇಲೆಯೋ ಕುಳಿತು ಜನಸಾಮಾನ್ಯರಿಗೆ ದೂರವಾಗಿ ಪಕ್ಷಿಗಳಿಗೆ ಹತ್ತಿರವಾಗಿ ಪ್ರತಿಷ್ಠಾಪಿಸಲ್ಪಟ್ಟಿರುತ್ತವೆ. ಹೀಗಾಗಿ ಅಂಥ ಪುತ್ಥಳಿಗಳಿಗೆ ಹಾರ ಹಾಕಬೇಕಾದರೂ ಏಣಿ ಹತ್ತಬೇಕು, ಅವುಗಳನ್ನು ಶುಭ್ರಗೊಳಿಸಬೇಕಾದರೂ ಅದಕ್ಕೆ ವಿಶೇಷ ಪ್ರಯತ್ನವನ್ನು ಮಾಡಬೇಕು. ಆದರೆ ದಳಪತ್‍ರಾಮ್‍ನ ಪುತ್ಥಳಿಗೆ ಇಂಥದ್ದೇನೂ ತೊಂದರೆಯಿಲ್ಲ.

ದಳಪತ್‍ರಾಮ್‍ನನ್ನು ಅವನ ಮನೆಯಿದ್ದ ಜಾಗದಲ್ಲಿ ಹಾಯಾಗಿ ಜಗಲಿಯ ಮೇಲೆ ಕೂಡಿಸಿದ್ದಾರೆ. ಹಿಂದೆ ಅವನ ಇಡೀ ಮನೆಯಾದಿದ್ದ ಜಾಗವನ್ನು ನೆಲಸಮ ಮಾಡಿ, ಮನೆ ಹೇಗೆ ಕಾಣುತ್ತಿತ್ತೋ ಆರೀತಿಯ ಒಂದು ಭ್ರಮಾ ಗೋಡೆಯನ್ನು ನಿರ್ಮಾಣ ಮಾಡಿ, ಇಡೀ ಜಾಗವನ್ನು ಒಂದು ಕಟ್ಟೆಯನ್ನಾಗಿ ಪರಿವರ್ತಿಸಿದ್ದಾರೆ. ಕಟ್ಟೆಯ ಅಂಚಿನಲ್ಲಿ ದಳಪತ್‍ರಾಮ್ ಒಂದು ಪುಟ್ಟ ದಿಂಬಿನ ಆಸನದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಬಿಟ್ಟಿದ್ದಾನೆ. ಹೀಗಾಗಿ ದಳಪತ್‍ರಾಮ್ ಎಲ್ಲರಿಗೂ ಎಟುಕುವ ಕವಿಯಾಗಿಬಿಟ್ಟಿದ್ದಾನೆ. ಮಕ್ಕಳು ಹೋಗಿ ಅವನ ತೊಡೆಯ ಮೇಲೆ ಕೂತುಕೊಳ್ಳಬಹುದು. ಹಿರಿಯರು ಸಖನಂತೆ ಪಕ್ಕದಲ್ಲಿ ಕೂತು ಅವನ ಕೈಯಲ್ಲಿರುವ ಪುಸ್ತಕವನ್ನು ಕಸಿಯಲು ಪ್ರಯತ್ನಮಾಡಬಹುದು. ಅನೇಕ ಚಬೂತರಾಗಳನ್ನು ಮಾಡಿಕೊಟ್ಟಿರುವುದರಿಂದ ಪಕ್ಷಿಗಳೂ ತಮ್ಮ ಪಾದವನ್ನು ಅವನ ತಲೆಯ ಮೇಲಲ್ಲದೇ ಮಿಕ್ಕೆಲ್ಲಾದರೂ ಊರಬಹುದು. ಗೆಳೆಯ ದಳಪತ್‍ರಾಮ್‍ನ ಪುತ್ಥಳಿ ತುಸು ದೊಡ್ಡದಾಯಿತು. ಇಲ್ಲವಾದರೆ ಅವನ ಬೆನ್ನಮೇಲೆ ಕೈ ಹಾಕಿ ಮಾತನಾಡಿಸಬಹುದಿತ್ತು. ನಗರದ ಆತ್ಮವನ್ನು ಕಾಪಾಡುವ ರೀತಿಯಾದಂತಹ ಈ ಪುತ್ಥಳಿ ಅಹಮದಾಬಾದಿನ ವಿಶೇಷವೆಂದರೆ ತಪ್ಪಾಗಲಾರದು.

ಕಡೆಗೆ ಜುಮ್ಮಾ ಮಸೀದಿ. ಈ ಮಸೀದಿಯ ಪ್ರತ್ಯೇಕತೆ ಎಂದರೆ ಮಹಿಳೆಯರು ಪ್ರಾರ್ಥಿಸಲು ಇರುವ ಪ್ರತ್ಯೇಕ ಜಾಗ. ಇದು ಬೇರಾವ ಮಸೀದಿಯಲ್ಲೂ ಇಲ್ಲವಂತೆ. ಮಸೀದಿಯ ಒಳಗಣ ಕೆತ್ತನೆ, ಕುಸುರಿ ಕೆಲಸ ನೋಡಿದಾಗ ಮಂದಿರಗಳಲ್ಲಿನ ಕೆತ್ತನೆ ನೆನಪಾಗುತ್ತದೆ. ದೇವರು ಹಲವರು ಆದರೆ ಆಲಯಗಳನ್ನು ಕಟ್ಟಿದ ಮಾನವನೊಬ್ಬನೇ ಅನ್ನಿಸಿದರೆ ಆಶ್ಚರ್ಯವಿಲ್ಲ. ಹೀಗೆ ಜುಮ್ಮಾ ಮಸೀದಿಯಲ್ಲಿ ನಮ್ಮ ನಡಿಗೆಯನ್ನು ಮುಗಿಸಿ ನದಿ ದಾಟಿ ಹೊಸನಗರಕ್ಕೆ ಬಂದದ್ದಾಯಿತು.






1 comment:

Unknown said...

Dear Sriram ,

Can you share ur cell no or mail id , so i want to contact you.