ಲಕ್ಸಂಬರ್ಗ್‌ನಲ್ಲಿ ಸಸ್ಯಾಹಾರಿ

ಸಾಮಾನ್ಯವಾಗಿ ಸೆಮಿನಾರುಗಳಿಗೆಂದು ವಿದೇಶಕ್ಕೆ ಹೋದಾಗ ಭಾರತೀಯರ ಒಂದು ತಂಡ ಯಾವಾಗಲೂ ಕಾಣಿಸುತ್ತದೆ. ಎಲ್ಲರೂ ಒಂದು ಗುಂಪಾಗಿ, ಅಲ್ಲಿ ಇಲ್ಲಿ ಓಡಾಡುವುದು, ಸ್ಥಳೀಯ ಪ್ರಾವಾಸೀ ತಾಣಗಳಿಗೆ ಭೇಟಿ ನೀಡುವುದು, ಹಾಗೂ ಬಂದ ಮುಖ್ಯಕೆಲಸವಾದ ಪೇಪರ್ ಓದುವುದು ಎಲ್ಲವೂ ನಡೆಯುತ್ತದೆ. ಸಾಮಾನ್ಯವಾಗಿ ದೇಸಿಗಳಲ್ಲಿ ಎರಡು ಭಾಗಗಳು ಸಹಜವಾಗಿಯೇ ಆಗುತ್ತವೆ. ಒಂದು ಭಾಗ ಸಾಹಸಿಗಳದ್ದು. ಅವರು ಯಾವುದೇ ರೀತಿಯ ಊಟವನ್ನಾದರೂ ತಿನ್ನಬಲ್ಲವರು, ಆಯಾ ಜಾಗದ ನೈಟ್ ಕ್ಲಬ್ಬುಗಳನ್ನು ಶೋಧಿಸಿ ನೋಡುವವರು ಮತ್ತು ಅಲ್ಲಿರಬಹುದಾದ ಯಾವುದೇ ಮನರಂಜನೆಯನ್ನಾಗಲೀ ಲಗಾಮಿಲ್ಲದೇ ಅಸ್ವಾದಿಸಲು ತಯಾರಾಗಿರುವವರು. ಎರಡನೇ ಭಾಗ ಛಳಿಯನ್ನು ತಡೆಯಲಾರದೇ ಒದ್ದಾಡುವ, ಮನೆಯಿಂದ ಎಂಟಿ‌ಆರ್ ಪ್ಯಾಕೆಟ್ಟುಗಳನ್ನು ಕಟ್ಟಿ ತಂದಿರುವ, ಯಾವ ರಿಸ್ಕನ್ನೂ ತೆಗೆದುಕೊಳ್ಳದೇ ಆಯೋಜಕರು ತೋರಿಸಿದ ನೋಟಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಬರುವ ಭಯಭೀತರು. ಅವರು ಯಾವಾಗಲೂ ತಮ್ಮ ಜೇಬನ್ನು ತಡಕಿ ನೋಡುತ್ತಾ, ಹಣವನ್ನು ಎಣಿಸುತ್ತಾ, ಪಾಸ್‍ಪೋರ್ಟ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಭಯಭೀತಿಯಿಂದ ಕಳೆಯುವವರು. ಅವರುಗಳಲ್ಲಿ ಕೆಲ ಧುರೀಣರು ಹಣ ಉಳಿತಾಯ ಮಾಡುವ ನಾನಾ ವಿಧಾನಗಳನ್ನು ಕಂಡು ಹಿಡಿದವರಾಗಿರುತ್ತಾರೆ. [ಉದಾಹರಣೆಗೆ, ಸೆಮಿನಾರಿನಲ್ಲಿ ಕೊಟ್ಟ ಅಲ್ಪಾಹಾರವನ್ನು ಹೆಚ್ಚಾಗಿ ತಿಂದರೆ ರಾತ್ರೆಯ ಊಟದ ಖರ್ಚು ತಪುತ್ತದೆ ಅನ್ನುವವರು, ಹಣ್ಣ್ದು ಹಂಪಲನ್ನು ಕೊಂಡು ರೂಮಿನಲ್ಲಿ ತಿನ್ನುವವರು, ಮತ್ತು ಸೂಪು ಕುಡಿದರೆ ಜೊತೆಗೆ ಕೊಡುವ ಬ್ರೆಡ್ಡಿನಲ್ಲೇ ಊಟಮುಗಿಸಬಹುದೆಂದು ಲೆಕ್ಕ ಹಾಕುವವರು].

ವಿದೇಶಕ್ಕೆ ಹೋದಾಗ ನಮ್ಮ ಗಣಿತವೂ ಅದ್ಭುತವಾಗಿ ಚುರುಕಾಗುತ್ತದೆ. ಏನನ್ನು ಕಂಡರೂ ಅದಕ್ಕೆ ರೂಪಾಯಿಯ ಬೆಲೆ ಕಟ್ಟಿ ನೋಡುವ ಪರಿಪಾಠವನ್ನು ಬಿಟ್ಟುಕೊಡುವುದು ಯಾರಿಗಾದರೂ ಕಷ್ಟದ ಮಾತೇ ಇರಬಹುದು. ನಾನು ಮೊದಲ ಬಾರಿ ವಿದೇಶಕ್ಕೆ - ಅದೂ ರೋಮ್‌ಗೆ ಹೋದಾಗ, ಮೊದಲ ದಿನ ಮಹಾರಾಜನಂತೆ ಜೀವಿಸಿದ್ದೆ. ಅರೇ ಯೂರೋಪು ಮತ್ತು ಇಟಲಿ ನಮ್ಮ ಲೆಕ್ಕಾನುಸಾರ ತುಟ್ಟಿ ಎಂದು ಜನರು ಹೇಳುತ್ತಿದ್ದರೂ ಇಷ್ಟು ಅಗ್ಗವಾಗಿದೆಯಲ್ಲಾ ಅಂತೆಲ್ಲಾ ಖುಶಿ ಪಟ್ಟಿದ್ದೆ. ಆದರೆ ಸಂಜೆಗೆ ನನ್ನ ಹೋಟೇಲು ರೂಮಿಗೆ ಬಂದು ಲೆಕ್ಕ ಹಾಕಿದಾಗ ನನಗೆ ಆಘಾತವೇ ಕಾದಿತ್ತು. ಕಾರಣ: ನಾನು ಖರ್ಚು ಮಾಡಿದ್ದೇನೆಂದುಕೊಂಡಿದ್ದರ ಹತ್ತರಷ್ಟು ನಾನು ದುಂದು ಮಾಡಿಬಿಟ್ಟಿದ್ದೆ! ರೂಪಾಯಿಯಿಂದ ಡಾಲರ್, ಡಾಲರ್‌ನಿಂದ ಲೀರಾಕ್ಕೆ ಲೆಕ್ಕ ಕಟ್ಟುವುದರಲ್ಲಿ ಒಂದು ಶೂನ್ಯದಷ್ಟೇ ತಪ್ಪು ಮಾಡಿದ್ದು ನನಗೆ ತುಟ್ಟಿಯಾಗಿಬಿಟ್ಟಿತ್ತು! ಈಗೀಗ ಈ ವಿಷಯದಲ್ಲಿ ಅಷ್ಟು ಕಷ್ಟವಾಗುವುದಿಲ್ಲ. ಮಿಲಿಯಾಂತರ ಲೀರಾಗಳ ಜಾಗಕ್ಕೆ ಕೆಲವೇ ಯೂರೋಗಳು ಬಂದಿರುವುದರಿಂದ ಲೆಕ್ಕ ಸ್ವಲ್ಪಮಟ್ಟಿಗೆ ಸುಲಭವಾಗಿದೆ.

ಈಬಾರಿ ನಾನು ವಿದೇಶಕ್ಕೆ ಹೋದಾಗ ನನಗೆ ಒಂದು ವಿಚಿತ್ರ ಅನುಭವ ಕಾದಿತ್ತು. ಲಕ್ಸಂಬರ್ಗ್‌ನಲ್ಲಿ ನಡೆಯುತ್ತಿದ್ದ ಒಂದು "ಚಿಕ್ಕಸಾಲಿಗ"ರ ಕಾನ್ಫರೆನ್ಸ್ ಗೆ ನಾನು ಹೋದಾಗ ಆ ಇಡೀ ಗುಂಪಿನಲ್ಲಿ ನಾನು ಒಬ್ಬನೇ ಭಾರತೀಯ ಅನ್ನುವ ನಿಜ ನನಗೆ ತಟ್ಟಿತು. ಒಬ್ಬನೇ ಭಾರತೀಯ ಅನ್ನುವ ಒಂಟಿತನದ ಅರ್ಥ ವಿವಿಧ ಮಜಲುಗಳಲ್ಲಿ ನನ್ನ ಅನುಭವಕ್ಕೆ ಬರತೊಡಗಿತು. ಲಕ್ಸಂಬರ್ಗಿನಲ್ಲಿ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲಿ ವಿಸ್ತಾರವಾಗಿ ಕಾಣುವ ಎರಡು ಭಾಷೆಗಳೆಂದರೆ - ಡಚ್ ಮತ್ತು ಫ್ರೆಂಚ್. ಹೀಗಾಗಿ ಮೊದಲಿಗೆ ನಾನು ಭಾಷೆಯ ಏಟನ್ನು ತಿಂದೆ. ಎರಡನೆಯದು ಸಸ್ಯಾಹಾರಕ್ಕೆ ಸಂಬಂಧಿಸಿದ್ದು. ಸಸ್ಯಾಹಾರಿ ಎಂದರೆ ಏನೆಂದು ವಿವರಿಸುವುದು, ಮುಂಚಿಗಿಂತ ಸುಲಭವಾಗಿದೆಯಾದರೂ ಸಸ್ಯಾಹಾರಿಯಾಗಿ ಕಾಲ ಕಳೆಯುವುದು ಸುಲಭವಲ್ಲ. ಅದರಲ್ಲೂ ಸಸ್ಯಾಹಾರಿಗಳ ಒಂದು ತಂಡವಿಲ್ಲದಾಗ ಆಹಾರವನ್ನು ಹುಡುಕಿ ನಡೆಯುವುದೂ ಹಿಂಸೆಯ ಮಾತೇ. ಹೀಗಾಗಿ ಉಪವಾಸ ಮಾಡಲೆಂದೇ ವಿದೇಶಯಾತ್ರೆ ಮಾಡುತ್ತೇವೆಯೋ ಹೇಗೆ ಅನ್ನುವ ಪ್ರಶ್ನೆಯೂ ಆಗಾಗ ನನಗೆ ಉದ್ಭವವಾಗುತ್ತಿತ್ತು. ಬ್ರೆಡ್ಡು ಮತ್ತು ಸಿಹಿ ಎರಡನ್ನೂ ಹೆಚ್ಚಾಗಿ ಸವಿಯದ ನನಗೆ ಅದು ಇನ್ನೂ ಹೆಚ್ಚಿನ ಪೇಚನ್ನು ಉಂಟುಮಾಡಿತ್ತು. ಬ್ರೆಡ್ಡು [ಮತ್ತು ಅದರ ವಿವಿಧ ಪ್ರಕಾರಗಳು], ಚೀಸು, ಬೆಣ್ಣೆ, ಜಾಮ್ ತಿನ್ನುವ ಜನರಿಗೆ ಸ್ವಲ್ಪ ಮಟ್ಟಿಗೆ ಆಹಾರದ ಕೊರತೆ ಇರುವುದಿಲ್ಲ. ಮುಂಜಾನೆ ಹೋಟೇಲಿನಲ್ಲಿ ಹಣ್ಣು ಹಂಪಲು, ಕಾಫಿ ಮತ್ತು ಚಹಾ ಸಿಗುತ್ತಿತ್ತಾದರೂ ಆ ನಂತರದ ಹೊಟ್ಟೆಪಾಡಿಗೆ ಸ್ವಲ್ಪ ಕಷ್ಟವೇ ಆಗುತ್ತಿತ್ತು. ಚಹಾ ಅಂದರೆ ನೆನಪಾಗುತ್ತದೆ. ಅಲ್ಲಿನ ನೊವೋಟೆಲ್ ಹೋಟೇಲಿನಲ್ಲಿ ಇದ್ದ ಅನೇಕ ಚಹಾ ಪ್ರಕಾರಗಳಲ್ಲಿ ನನ್ನ ಎದೆಯುಬ್ಬುವಂತೆ ಮಾಡಿದ್ದು ಅಸ್ಸಾಂ ಮತ್ತು ಡಾರ್ಜಿಲಿಂಗ್ ಎಂದು ಪ್ರತ್ಯೇಕವಾಗಿ ಇಡಲಾಗಿದ್ದ "ಸ್ಪೆಷಲ್" ಚಹಾದ ಪೊಟ್ಟಣಗಳು. ಆದರೆ ನಾನು ನಿಜಕ್ಕೂ ಅವಾಕ್ಕದದ್ದು "ಶ್ರೀಲಂಕನ್ ಡಾರ್ಜಿಲಿಂಗ್ ಟೀ" ನೋಡಿದಾಗ. ನೆನಪಿಗೆಂದು ಎಲ್ಲ ಚಹಾಗಳ ಒಂದೊಂದು ಬ್ಯಾಗನ್ನು ಕಳ್ಳನಂತೆ ಕೋಟಿನ ಜೇಬಿಗೆ ಸೇರಿಸಿ, ಭಾರತಕ್ಕೆ ಮರು ಆಮದು ಮಾಡಿದೆ!

ಕಾನ್ಫರೆನ್ಸಿಗೆ ಬಂದಿದ್ದವರಲ್ಲಾ ಅಕ್ಕ ಪಕ್ಕದ ಜಾಗಗಳಿಂದ ಬಂದಿದ್ದರಿಂದ ಈ ಸಭೆಗೆ "ಪ್ರವಾಸೀ" ಕಳೆ ಇರಲಿಲ್ಲ. ಜೊತೆಗೆ ಇದು ಪ್ರವಾಸದ ಸೀಜನ್ನೂ ಅಲ್ಲ. ವಿಪರೀತ ಛಳಿಯ ಮಧ್ಯೆ, ಸಂಜೆ ನಾಲ್ಕಕ್ಕೇ ಸೂರ್ಯಾಸ್ತ ಕಾಣುವ ಜಾಗದಲ್ಲಿ ಜಿಗಿಜಿಗಿ ಇದ್ದದ್ದು ಅಂಗಡಿಗಳು ಮಾತ್ರ. ಚಳಿಗಾಲದಲ್ಲಿ ಯೂರೋಪ್‍ ಪ್ರವಾಸ ಕೈಗೊಂಡ ಅನುಭವ ನನಗೆ ಇದೇ ಮೊದಲು. ಕ್ರಿಸ್‍ಮಸ್‍ಗೆ ಮುಂಚೆ ಅಲ್ಲಿಗೆ ಹೋಗಿದ್ದರಿಂದ ಆ ಒಂದು ಹಬ್ಬದ ಸಂಭ್ರಮ ಮಾತ್ರ ಕಾಣುತ್ತಿತ್ತು. ಎಲ್ಲೆಲ್ಲೂ ಸ್ಯಾಂಟಾ, ಎಲ್ಲೆಲ್ಲೂ ಚಾಕೊಲೇಟುಗಳು. ಅಲ್ಲಿಗೆ ಹೋಗುವ ಮುನ್ನ ಗೆಳೆಯರೊಬ್ಬರಿಂದ ಲೋನ್ಲೀ ಪ್ಲಾನೆಟ್ ಗೈಡಿನ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗಿದ್ದೆ. ಅಲ್ಲಿಗೆ ಸೇರಿದ್ದೇ ಕಾನ್ಫರೆನ್ಸ್ ಪ್ರಾರಂಭವಾಗುವುದಕ್ಕೆ ಮುನ್ನವೇ, ಒಂಟಿಯಾಗಿ ಲಕ್ಸಂಬರ್ಗ್ ನೋಡುವ ಪ್ರಯಾಸ ಮಾಡಿದೆ. ಕೇಸ್‌ಮೇಟ್ಸ್ ಅನ್ನುವ ಜಾಗ ನೋಡಲೇಬೇಕಾದ್ದು ಎಂದು ಲೋನ್ಲಿಯಲ್ಲಿ ಬರೆದಿತ್ತಾದ್ದರಿಂದ, ಛಳಿಯಲ್ಲಿ ಪದರಪದರ ಬಟ್ಟೆಹಾಕಿ ಕಾಲೆಳೆಯುತ್ತಾ ಒಂದು ನಕ್ಷೆ ಹಿಡಿದು ಹೋದೆ. ಭಾರತದಲ್ಲಿ ಯಾವುದೇ ನಕ್ಷೆಯಿಲ್ಲದೇ ಎಲ್ಲಿಗಾದರೂ ಹೋಗಬಲ್ಲ ಶಕ್ತಿ ನಮಗಿದೆ-- ಅಲ್ಲಿ ಇಲ್ಲಿ ನಿಂತು "ಭಾಯಿಸಾಬ್" ಅನ್ನುತ್ತಾ ಯಾವುದೇ ಜಾಗಕ್ಕೆ ದಾರಿಕೇಳಿಬಿಡಬಹುದು. ಆದರೆ ಭಾಷೆಯೇ ಬರದ ಅಲ್ಲಿನ ಹೆಸರುಗಳ ಉಚ್ಚಾರ ತಿಳಿಯದ ನನ್ನಂತಹ ವಿದ್ಯಾವಂತ ಅನಕ್ಷರಸ್ತರು ಇಂಥ ಜಾಗದಲ್ಲಿ ಹೇಗೆ ಮುಂದುವರೆಯುವುದು? ಲಕ್ಸಂಬರ್ಗ್ ದೂಡ್ಡ ದೊಡ್ಡ ಕಣಿವೆ ಸೇತುವೆಗಳಿರುವ ಜಾಗ. ನಾನು ಇದ್ದ ನೊವೊಟೆಲ್ ಹೊಟೇಲಿನಿಂದ ಕಾನ್ಫರೆನ್ಸ್ ನಡೆಯುತ್ತಿದ್ದ ಅಬೇ ದ ನ್ಯೂಮನ್ಸ್ಟರ್ ಅನ್ನುವ ಜಾಗಕ್ಕೆ ನಡೆದು ಹೋಗಲು ಕೇವಲ ಕಾಲು ಗಂಟೆ ಹಿಡಿಯುತ್ತಿತ್ತು. ಅದೇ ಬಸ್ಸಿನಲ್ಲಿ ಹೋಗಲು ಸುತ್ತಿಬಳಸಿ ಇಪ್ಪತ್ತು ನಿಮಿಷಕಾಲ ಹಿಡಿಯುತ್ತಿತ್ತು. ನೋಡಲು ವಿಹಂಗಮವಾಗಿದ್ದ ಈ ಅದ್ಭುತ ದೃಶ್ಯವನ್ನು ನಡೆದಾಡುತ್ತಾ ಆಸ್ವಾದಿಸುವುದೇ ಒಳ್ಳೆಯದೆಂದು ಕೇಸ್‍ಮೇಟ್ಸ್ ಕಡೆಗೆ ನಡೆದೆ.


ಆದರೆ ಅಲ್ಲಿಗೆ ಹೋದಾಗ ನನಗೆ ತಿಳಿದದ್ದೆಂದರೆ ಆ ಜಾಗವನ್ನು ಛಳಿಗಾಲದಲ್ಲಿ ಮುಚ್ಚಿಹಾಕಿಬಿಟ್ಟಿರುತ್ತಾರೆ ಅನ್ನುವ ವಿಷಯ. ಆ ಕಾಲಕ್ಕೆ ಪ್ರವಾಸಿಗಳು ಬರುವುದು ಅಸಾಮಾನ್ಯ ಹೀಗಾಗಿ ನಾನು ಕೇಸ್‍ಮೇಟ್ಸ್ ಸುತ್ತಮುತ್ತ ಹೆಜ್ಜೆ ಹಾಗಿ ಅನೇಕ ಚಿತ್ರಗಳನ್ನು ತೆಗೆದು ವಾಪಸ್ಸಾಗಬೇಕೆಂದು ನಿರ್ಧರಿಸಿದೆ. ನಾನು ಬಂದ ದಾರಿ ಸುತ್ತಿ ಬಳಸಿ ಅನೇಕ ತಿರುವುಗಳಿಂದ ಕೂಡಿದ್ದರಿಂದ ನನಗೆ ಯಾವದಿಕ್ಕಿನಲ್ಲಿದ್ದೇನೆ ಅನ್ನುವುದು ತಿಳಿಯದಾಗಿತ್ತು. ಆದರೆ ಹೀಗೆ ನಡೆದಾಡುತ್ತಾ, ಅಲೆದಾಡುತ್ತಾ ಇದ್ದರೆ, ನನ್ನ ಹೋಟೇಲಿನ ಕಡೆಗೆ ಹೋಗವ ಮುಖ್ಯ ರಸ್ತೆಯ ಕಡಗೆ ಹೋಗಬಹುದೆನ್ನುವ ನಂಬಿಕೆ ನನಗಿತ್ತು. ಹೀಗಾಗಿ ಛಳಿಯಲ್ಲಿ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ತಿರುಗಾಡಿದೆ. ನೋಟ ಅದ್ಭುತವಾಗಿತ್ತು. ಆದರೆ ನಾನು ಎಲ್ಲೋ ದಾರಿತಪ್ಪಿದ್ದೇನೆ ಅನ್ನಿಸಿತು. ಕಾಲು ಕೈಕೊಡತೊಡಗಿತ್ತು. ಏರು ತಗ್ಗುಗಳನ್ನು ಕ್ರಮಿಸಿ ಸುಸ್ತಾಗಿತ್ತು. ಇನ್ನು ಬಂದದಾರಿಗೆ ಸುಂಕವಿಲ್ಲ ಅಂದುಕೊಳ್ಳುತ್ತಲೇ ನಾನು ಕ್ರಮಿಸಿದ ದಾರಿಯಲ್ಲೇ ವಾಪಸ್ಸಾಗ ತೊಡಗಿದೆ. ಕಡೆಗೂ ಹೋಟೇಲಿಗೆ ಹೋಗುವ ಮುಖ್ಯ ರಸ್ತೆ ತಲುಪಿ ಅದರಲ್ಲಿ ಮುಂದಕ್ಕೆ ಹೋದಾಗ ಒಂದು ಆಡ್ಡರಸ್ತೆ ಕಾಣಿಸಿತು. ಆಗ ತಿಳಿದದ್ದೆಂದರೆ -- ನಾನು ಇನ್ನೆರಡು ಹೆಜ್ಜೆ ಆ ಅಡ್ಡರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹಾಕಿದ್ದರೆ, ಇಲ್ಲಿಗೇ ಸಹಜವಾಗಿ ಬಂದುಬಿಡುತ್ತಿದ್ದೆ. ಗೋಲ್ ಗೋಲ್ ಸುತ್ತುವುದು ಅಂದರೆ ಇದೇ ಏನೋ!

ಲಕ್ಸಂಬರ್ಗ್ ಬಿಳಿಯ ವೈನ್ ಗೆ ಪ್ರಖ್ಯಾತ. ಎರಡು ಪುಟ್ಟ ಬಾಟಲಿ ಬಿಳಿಯ ವೈನ್ ಕೊಂಡುಕೊಂಡೆ. ಸಮಯ ಮತ್ತು ಸಮ್ಮರ್ ಇದ್ದಿದ್ದರೆ ವೈನ್ ಮಾಡುವ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದಿತ್ತೇನೋ!! ಕಾನ್ಫರೆನ್ಸ್ ನಲ್ಲಿ ಹಾಗೂ ಹೀಗೂ ಬಿಟ್ಟಿ ಊಟ ಸಿಕ್ಕಿತು.
ಸಸ್ಯಾಹಾರಿಗೆ ಇದ್ದದ್ದು ಬರೀ ಸಲಾದು ಮತ್ತು ಮೊರೊಕ್ಕೋ ದೇಶದ ಉಪ್ಪಿಟ್ಟಿನಹಾಗೆ ಕಾಣುವ ಖಾದ್ಯವಾದ ಖುಸ್‌ಖುಸ್. ಕಾನ್ಪರೆನ್ಸಿನ ಮೂರುದಿನ ಕಾಲ ಖುಸ್‍ಖುಸ್ ತಿಂದು ಜೀವನ ಮಾಡಿದೆ. ಒಟ್ಟಾರೆ ಎಲ್ಲವೂ ಸಿಹಿಸಿಹಿ, ಸಪ್ಪೆಸಪ್ಪೆ. ಇದ್ದೂ ಬಡತನವೆಂದರೆ ಇದೇ ಏನೋ.. ಊಟಕ್ಕೆ ಕುತ್ತು, ಭಾಷೆ ಬರದು, ಹೆಚ್ಚೂ ಕಮ್ಮಿ ಅನಕ್ಷರಸ್ಥ, ಮತ್ತು ಬಡವರಿಗಿರುವ ಸಾರಾಯಿ ಪ್ಯಾಕೆಟ್ಟಿನಂತೆ ಒಂದು ಪೈಂಟ್ ವೈನ್ ಬಾಟಲಿ.. ಮನಸ್ಸು ಆಗಲೇ ಉಪ್ಪಿನಕಾಯನ್ನು ಬಯಸತೊಡಗಿತ್ತು. ಎಂಟಿ‌ಆರ್ ರೆಡೀ ಖಾದ್ಯ ಸೂಟ್‌ಕೇಸಿನಲ್ಲಿ ತುಂಬದೇ ಬಂದ್ದದ್ದಕ್ಕೆ ನನಗೆ ನಾನೇ ಶಾಪ ಹಾಕಿಕೊಂಡೆ.

ಕಾನ್ಪರೆನ್ಸ್ ನ ಒಂದು ಸಂಜೆ ಅಮೆರಿಕದಿಂದ ಬಂದಿದ್ದ ಎನೆಟ್ಟ್ ಲೊವೋಯ್ ಎಂಬ ಹಿರಿಯೆ‌ಒಬ್ಬಾಕೆಯ ಭೇಟಿಯಾಯಿತು. ಕಾನ್ಪರೆನ್ಸ್ ನಿಂದ ಹೋಟೇಲಿಗೆ ಬಸ್ಸಿನಲ್ಲಿ ಹೋಗುವ ಬದಲು ನಡೆದು ಹೋಗಬಹುದೇ ಎಂದು ಆಕೆ ಕೇಳಿದರು. ಒಪ್ಪಿದೆ. ಒಂದು ಥರದಲ್ಲಿ ನಾನು ಇಡೀ ನಗರವನ್ನು ಪಾದಚಾರಿಯಾಗಿ ಸುತ್ತಿದ್ದರಿಂದ ಈಗ ದಾರಿಗಳು ತಿಳಿದಿದ್ದವು. ಆದರೆ ಆಕೆಯೊಂದಿಗೆ ಹೋದಾಗ ನಾನು ಈವರೆಗೂ ಏನು ಕಂಡಿರಲಿಲ್ಲ ಎನ್ನುವುದು ಮನದಟ್ಟಾಯಿತು. ಕತ್ತಲು ಮತ್ತು ಕ್ರಿಸ್‍ಮಸ್ ಬೆಳಕಿನಲ್ಲಿ ಲಕ್ಸಂಬರ್ಗ್‌ನ ನೋಟ ನಿಜಕ್ಕೂ ಅದ್ಭುತವಾಗಿತ್ತು.

ಮಾರನೆಯ ದಿನ ಅಲ್ಲಿಂದ ಬ್ರಸಲ್ಸ್ ಗೆ ಹೋಗುವುದಿತ್ತು. ಕಾನ್ಫರೆನ್ಸ್ ನಲ್ಲಿ ನನಗೆ ರಾಯ್ ಬುಧ್‌ಜವಾಂ ಎನ್ನುವ ವ್ಯಕ್ತಿಯ ಭೇಟಿಯಾಗಿತ್ತು. ಆತನ ತಂದೆ ಬಿಹಾರದವರು. ಅಲ್ಲಿಂದ ಹೋಗಿ ಸೂರಿನಂ ದೇಶದಲ್ಲಿ ನೆಲೆಸಿದವರು. ರಾಯ್ ಸೂರಿನಂನಿಂದ ವಲಸೆ ಹೋಗಿ ನೆದರ್ಲ್ಯಾಂಡ್ಸ್ ನಲ್ಲಿ ನೆಲೆಸಿ ಅಲ್ಲಿಯ ಹೆಣ್ಣನ್ನೇ ಮದುವೆಯಾಗಿದ್ದ. ಅವನು ಭಾರತವನ್ನು ಮೊದಲಬಾರಿಗೆ ನೋಡಿದ್ದು ಕೆಲ ತಿಂಗಳುಗಳ ಹಿಂದಷ್ಟೇ. ಆತ ಆಮ್‍ಸ್ಟರ್‌ಡ್ಯಾಮಿಗೆ ಹೋಗುವ ದಾರಿಯಲ್ಲಿ ಬೇಕಿದ್ದರೆ ನನ್ನನ್ನು ಬ್ರಸಲ್ಸ್ ನಲ್ಲಿ ತನ್ನ ಕಾರಿನಲ್ಲಿ ಬಿಡುವುದಾಗಿ ಹೇಳಿದ. ಬಾರರಾಯಣ ಭಾರತೀಯ ಸಂಬಂಧ ಹೊತ್ತು, ಬೇಶರಮ್ ಆಗಿ ಅವನ ಕಾರಲ್ಲಿ ಕೂತೆ. ದಾರಿಯುದ್ದಕ್ಕೂ ಹಿಂದಿ ಹಾಡನ್ನು ಕೇಳಿಸಿದ. ಭಾರತದ ನೆಲವನ್ನೇ ಈಚಿನವರೆಗೂ ನೋಡಿರದ ರಾಯ್‌ನ ಮೊಬೈಲಿನ ತುಂಬಾ ಅರವತ್ತರ ದಶಕದಾದಿ ತೊಂಬತ್ತರ ದಶಕದ ವರೆಗೂ ಹಿಂದಿ ಹಾಡುಗಳು. ಆತ ಶಾಹ್‍ರೂಖ್‍ನ ಅಭಿಮಾನಿ. ಆದರೆ ಹಿಂದಿ ಮಾತಾಡಲು ತಿಳಿಯದು. ಓದು ಬರಹವೆಲ್ಲಾ ಡಚ್ ಭಾಷೆಯಲ್ಲಿ. ಲಕ್ಸಂಬರ್ಗ್ ನ ಪ್ರವಾಸದಲ್ಲಿ ನನಗಾದ ಮೊದಲ ಮತ್ತು ಕಡೆಯ ಭಾರತೀಯ ಅನುಭವ ಈ ಹಿಂದಿ ಹಾಡುಗಳ ಮೂಲಕವಷ್ಟೇ. ಇಂಥ ಮಾಂಸಾಹಾರಿ, ಸಕ್ಕರೆಪ್ರಿಯಪ್ರದೇಶದಿಂದ ಹೆಚ್ಚೇನೂ ದೂರವಿಲ್ಲದ, ಭಾಷೆ ಬಿಟ್ಟರೆ ಹೆಚ್ಚು ಭಿನ್ನವಲ್ಲದ ನಾರ್ವೆ ದೇಶದ ಒಂದು ಕಂಪನಿ ನಮ್ಮ ರುಚಿಗೆ ತಕ್ಕ ಶಾಖಾಹಾರಿ ಖಾದ್ಯವನ್ನು ತಯಾರಿಸುವ ಎಂಟಿ‌ಆರ್ ಕಂಪನಿಯನ್ನು ಕೊಂಡಿದೆ ಅನ್ನುವ ವಿರೊಧಾಭಾಸ ನನ್ನನ್ನು ತಟ್ಟದಿರಲಿಲ್ಲ.

Labels: 

No comments: