ಬ್ರಸಲ್ಸ್ ನಲ್ಲಿ ಭಾರತ!

ಲಕ್ಸಂಬರ್ಗ್‌ನಿಂದ ಬ್ರಸಲ್ಸ್ ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿ‌ಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್‌ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್ ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!

ದಾರಿಯಲ್ಲಿ ನನ್ನ ಲೆಕ್ಕಾಚಾರವೆಲ್ಲಾ ಏರುಪೇರಾಗುವಂತೆ ಕಂಡಿತು. ಸ್ವಲ್ಪ ದೂರ ಹೈವೇದಲ್ಲಿ ಹೋದ ಕೂಡಲೇ ರಾಯ್ ಕಾರಿನಲ್ಲಿ ಇದ್ದ ಇಂಧನ ಕೇವಲ ಹತ್ತು ಕಿಲೋಮೀಟರ್ ದೂರಕ್ಕೆ ಸಾಕಾಗುವಷ್ಟಿದೆ ಅನ್ನುವ ಕೆಂಪು ನಿಶಾನೆ ತೋರಿಸಿತು. ಕಿಟಕಿಯಲ್ಲಿ ಹಣಕಿದರೆ ಮುಂದಿನ ಇಂಧನ ಕೇಂದ್ರ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದ್ದ ನಿಶಾನೆ ಕಾಣಿಸಿತು. ಅಕಸ್ಮಾತ್ ಇಂಧನ ಆಗಿಹೋದರೆ ಈ ದೇಶದಲ್ಲಿ ಏನು ಮಾಡುತ್ತಾರೆ ಅನ್ನುವ ಪರಿಜ್ಞಾನ ನನಗಿರಲಿಲ್ಲ. ಅನೇಕ ಹಿಂದಿ ಚಿತ್ರಗಳ ವಿಚಿತ್ರ ಅನುಭವಗಳು ನನ್ನ ಮನಸ್ಸಿನಲ್ಲಿ ಹಾದು ಹೋಯಿತು, ಇಂಧನ ಮುಗಿಯುವುದು, ರೇಡಿಯೇಟರ್ ಬಿಸಿ‌ಏರುವುದು ಎಲ್ಲವೂ ಹಳೇ ಸಿನೇಮಾದ ಮಮೂಲಿ ಸನ್ನಿವೇಶವೇ ಅಲ್ಲವೇ? ಬೀಸ್ ಸಾಲ್ ಬಾದ್‌ನಲ್ಲಿ ಕಾರಿನ ರೇಡಿಯೇಟರ್‌ಗೆ ನೀರು ಹುಡುಕಿ ಹೊರಟ ನಾಯಕನಿಗೆ ಬಿಳಿ ಸೀರೆಯುಟ್ಟ ಮೋಹಿನಿ ಕಾಣಿಸುವ ದೃಶ್ಯ, ಅದರ ಕನ್ನಡ ಅವತರಣಿಕೆಯ "ರಾಜನರ್ತಕಿಯ ರಹಸ್ಯ"ದಲ್ಲಿ ಬಿಳಿಯ ಸೀರೆಯಲ್ಲ್ಲಿ ಕಲ್ಪನಾ, ಎಲ್ಲವೂ ನನ್ನ ಮನದ ಮುಂದೆ ಸಾಗಿ ಹೋಯಿತು. ಆದರೆ ಅದೃಷ್ಟವಶಾತ್ತು, ಇದು ಸಂಜೆಯ/ರಾತ್ರೆಯ ಸಮಯವಾಗಿರಲಿಲ್ಲ...

ನನ್ನ ಎದೆ ಡವಗುಟ್ಟುತ್ತಿದ್ದರೂ, ರಾಯ್ ಗೆ ಏನೂ ಆದಂತೆ ಕಾಣಲಿಲ್ಲ. ಹಿಂದೆ ಹೀಗೇ ಒಮ್ಮೆ ಸಿಕ್ಕಿಹಾಬಿದ್ದದ್ದಾಗಿಯೂ ಆಗ ಯಾವುದೋ ಸಂಸ್ಥೆಗೆ ಫೋನ್ ಮಾಡಿ ಅಲ್ಲಿಂದ ಮತ್ತೊಂದು ಕಾರು ತರಿಸಿಕೊಂಡದ್ದಾಗಿಯೂ ರಾಯ್ ಹೇಳಿದ. ನೆದರ್‌ಲ್ಯಾಂಡಿನಲ್ಲಿ ಹೇಗೆ ಹೆಚ್ಚು ಸಂಖ್ಯೆಯಲ್ಲಿ ಇಂಧನ ಕೇಂದ್ರಗಳಿವೆ, ಬೆಲ್ಜಿಯಂನಲ್ಲಿ ಏನೂ ಇಲ್ಲ ಅಂತ ಶಾಪ ಹಾಕುತ್ತಾ ಒಂದೇ ವೇಗದಲ್ಲಿ ಕ್ರೂಸ್ ಮಾಡಿದರೆ ಇಂಧನ ಕೇಂದ್ರಕ್ಕೆ ತಲುಪುವ ಸಾಧ್ಯತೆ ಇದೆಯೆಂದ. ಅವನ ಪಾಡಿಗೆ ಅವನು ದಿಲ್‌ವಾಲೇ ದುಲ್ಹನಿಯಾದ ಹಾಡು ಕೇಳುತ್ತಾ ಕಾರನ್ನು ಓಡಿಸುತ್ತಿದ್ದ. ದಿಲ್‍ವಾಲೆಯಲ್ಲಿ ಷಾರೂಕ್ ಮತ್ತು ಕಾಜೋಲ್ ರೈಲು ತಪ್ಪಿಸಿ ಇಂಥದೇ ಒಂದು ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನೆನಪಾಯಿತು. ಆದರೆ ಇಲ್ಲಿ ಅಂಥ ರೊಮ್ಯಾಂಟಿಕ್ ಸಾಧ್ಯತೆಗಳೂ ಇರಲಿಲ್ಲ!! ಕಡೆಗೂ ಕಾರು ತಳ್ಳದೇ, ಕ್ಯಾನನ್ನು ಹಿಡಿದು ದೂರ ನಡೆವ ಪ್ರಮೇಯವಿಲ್ಲದೇ ಇಂಧನ ಕೇಂದ್ರಕ್ಕೆ ತಲುಪಿದ್ದಾಯಿತು.

ನನಗೆ ಕೋಣೆ ಕಾಯ್ದಿರಿಸಿದ್ದ ಕ್ಯಾಪಿಟಲ್ ಹೋಟೇಲಿನ ವಿಳಾಸವನ್ನು ಆತ ತನ್ನ ಜಿಪಿ‌ಎಸ್ ಯಂತ್ರದಲ್ಲಿ ತುಂಬಿಸಿದ್ದ. ಹೀಗಾಗಿ ನಾವು ಹೋಗಬೇಕಾದ ರಸ್ತೆಯನ್ನು ಆ ಯಂತ್ರ ಸೂಚಿಸುತ್ತಿತ್ತು. ಪಾಪ! ಎರಡು ತಲೆಮಾರಿನ ಕೆಳಗೆ ಭಾರತದೊಂದಿಗೆ ಸಂಬಂಧ ಇರಿಸಿಕೊಂಡದ್ದರಿಂದಾಗಿ, ಬೈ ಪಾಸಿನಲ್ಲಿ ಆಮ್ಸ್ಟರ್ಡ್ಯಾಂಗೆ ಹೋಗಬೇಕಿದ್ದ ಬಡಪಾಯಿ ಬ್ರಸಲ್ಸ್ ನಗರವನ್ನು ಹೊಕ್ಕು ನನ್ನನ್ನು ಬಿಡಬೇಕಿತ್ತು. ನನಗೆ ನಾಚಿಗೆಯಾಗಿ, ಇಲ್ಲೇ ಎಲ್ಲಾದರೂ ಇಳಿಸಿ, ನಾನು ಟ್ಯಾಕ್ಸಿ ಹಿಡಿದು ಹೋಗುತ್ತೇನೆ ಎಂದೆನಾದರೂ ಅದು ಬರೇ ಮಾತಿಗಾಗಿ ಆಗಿತ್ತು ಎನ್ನುವುದು ಅವನಿಗೂ ತಿಳಿದಿತ್ತು. ಕಾರಣ: ಹೊರಗೆ ಧೋ ಎಂದು ಮಳೆ ಬರುತ್ತಿತ್ತು. ಸುತ್ತಲೂ ಟ್ರಾಫಿಕ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾರನ್ನು ಜಿಪಿ‌ಎಸ್ ಸೂಚಿಸಿದ ದಿಕ್ಕಲ್ಲದೇ ವಿರುದ್ಧದಿಕ್ಕಿನಲ್ಲಿ ಅವನು ತಿರುಗಿಸಿದ. ಜಿಪಿ‌ಎಸ್ ಹೊಸದಾರಿಯನ್ನು ಅಲ್ಲಿಂದ ಮುಂದಕ್ಕೆ ತೋರಿಸತೊಡಗಿತು "ಜಿಪಿ‌ಎಸ್‍ ಎಲ್ಲರೀತಿಯಿಂದಲೂ ಅನುಕೂಲಕರ. ಆದರೆ ಅದಕ್ಕೆ ತಿಳಿಯದ ವಿಷಯವೆಂದರೆ ಯಾವರಸ್ತೆಯಲ್ಲಿ ಎಷ್ಟು ಟ್ರಾಫಿಕ್ ಇದೆ ಅನ್ನುವ ಗಹನವಾದ ಮಾತು, ಹೀಗಾಗಿ ನಮಗೂ ಜಾಗದ ಅರಿವಿದ್ದರೆ ಅನುಕೂಲ" ಅಂದು ನಕ್ಕ. ಎರಡೇ ಕ್ಷಣಗಳಲ್ಲಿ ದಟ್ಟ ಟ್ರಾಫಿಕ್ ರಸ್ತೆಯಿಂದ ಖಾಲಿರಸ್ತೆಗೆ ಅವನು ರವಾನೆಯಾಗಿ ಮತ್ತೆ ಹೊಟೇಲಿನ ದಿಕ್ಕಿನಲ್ಲಿ ಕಾರನ್ನು ಚಲಾಯಿಸಿದ.

ಈಗೀಗ ಭಾರತದ ಕೆಲ ಜಾಗಗಳಲ್ಲೂ ಜಿಪಿ‌ಎಸ್ ಉಪಯೋಗಿಸುವ ಸಾಧ್ಯತೆ ಇದೆಯಂತೆ. ಆದರೆ ಅದಕ್ಕೆ ನಗರದ ವಿವರವಾದ ನಕ್ಷೆ ಬೇಕು. ಮುಂಬಯಿಯಲ್ಲಿ ಈಚೆಗೆ ಒಂದು ಪ್ರಯೋಗ ನಡೆಸಿದರಂತೆ. ಮುಂಬಯಿ ತಿಳಿಯದ ಮೂರು ಜನರನ್ನು ಮೂರು ಭಿನ್ನ ಕಾರುಗಳಲ್ಲಿ ಕೂಡಿಸಿ ಒಂದು ಕಾರಲ್ಲಿ ಜಿಪಿ‌ಎಸ್ ಅಳವಡಿಸಿ, ಮತ್ತೊಂದರ ಚಾಲಕನಿಗೆ ಮುಂಬಯಿಯ ನಕ್ಷೆ ಕೊಟ್ಟು ಮೂರನೆಯವನಿಗೆ ಕೇವಲ ತಲುಪಬೇಕಿದ್ದ ವಿಳಾಸ ನೀಡಿ ಕಳಿಸಿದರಂತೆ. ಎಲ್ಲಕ್ಕಿಂತ ಮೊದಲು ಗಮ್ಯ ತಲುಪಿದವನು ಬರೇ ವಿಳಾಸ ಹೊತ್ತು ಹೊರಟವನು... ಅವನು ದಾರಿಯುದ್ದಕ್ಕೂ ಟ್ಯಾಕ್ಸಿ ಆಟೋ ಚಾಲಕರನ್ನು "ಭಾಯಿ ಸಾಬ್ ದಾರಿ..." ಅಂತ ದಾರಿಕೇಳುತ್ತಾ ಸುಲಭವಾಗಿ ಗಮ್ಯ ತಲುಪಿದನಂತೆ. ಜಿಪಿ‌ಎಸ್ ಗಿರಾಕಿಗೆ ಬಂದದ್ದು ಎರಡನೆಯ ಸ್ಥಾನ.. ಕಾರಣ ಅದು ಸೂಚಿಸಿದ ಮಾರ್ಗದಲ್ಲಿ ಅನೇಕ ನೋ ಎಂಟ್ರಿಗಳೂ, ರಸ್ತೆಯಿರಬೇಕಿದ್ದ ಕಡೆ ಹೊಸ ಫ್ಲೈ‌ಓವರುಗಳೂ ಇದ್ದು ಅನೇಕ ಅನಿರೀಕ್ಷಿತ ಅನಿರ್ದೇಶಿತ ತಿರುವುಗಳನ್ನು ತೆಗೆದು ಹೋಗಬೇಕಾಯಿತಂತೆ! ಬರೇ ನಗರ ನಕ್ಷೆ ಹಿಡಿದವನು ಕಡೆಗೂ ಸೋಲೊಪ್ಪಿ ಯಾರನ್ನೋ ದಿಕ್ಕು ಕೇಳಿ ಬಂದನಂತೆ.... ಮೂಲಭೂತ ಮಾಹಿತಿಯಿಲ್ಲದಿದ್ದಲ್ಲಿ ತಂತ್ರಜ್ಞಾನ ಅಜ್ಞಾನಕ್ಕೆ ಸಮಾನವೇ ಅಲ್ಲವೇ?

ಹಾಗೂ ಹೀಗೂ ಕ್ಯಾಪಿಟಲ್ ಹೊಟೇಲಿನ ಮುಂದೆ ಕಾರು ನಿಲ್ಲಿಸಿದಾಗ ಅವನಿಗೂ ನನಗೂ ನಿರಾಳವೆನ್ನಿಸಿತು. ಮೂಲತಃ ದಾಕ್ಷಿಣ್ಯದ ಸ್ವಭಾವದ ನಾನು ಹೀಗೆ ಯಾಕೆ ಅವನ ಮೇಲೆ ಹೇರಿಕೊಂಡೆ ಎಂದು ಯೋಚಿಸಿದೆ. ಅವನು ನನ್ನ ಸೂಟ್‌ಕೇಸುಗಳನ್ನು ಡಿಕ್ಕಿಯಿಂದ ಹೊರತೆಗೆದು ಕೈಕುಲುಕಿದ. "ಒಬ್ಬನೇ ಪ್ರಯಾಣ ಮಾಡುವುದು ಬೇಸರವಾಗುತ್ತಿತ್ತು. ನಿನ್ನ ಕಂಪನಿ ಸಿಕ್ಕಿದ್ದರಿಂದ ಖುಷಿಯಾಯಿತು ಅಂದ." ನಾನೂ ನನ್ನ ಚೀಲದಿಂದ ಬೆಂಗಳೂರಿನ ಏರ್ಪೋರ್ಟಿನ ಕಾವೇರಿ ಎಂಪೋರಿಯಂನಿಂದ ತಂದಿದ್ದ ಒಂದು ನೆಕ್‌ಟೈಯನ್ನು ಕೃತಜ್ಞತೆಯಿಂದ ಅವನ ಕೈಗೆ ತುರುಕಿದೆ. ಮತ್ತೆ ಸಿಗೋಣ ಎಂದ. ಅಷ್ಟೇ... ಅಂದು ಸಂಜೆ ಯಾವುದೋ ಪತ್ರಿಕೆ ಓದುತ್ತಿದ್ದಾಗ ತಿಳಿದುಬಂದ ವಿಷಯ: ಜಗತ್ತಿನಲ್ಲಿ ಅತ್ಯಂತ ಸಾಮಾನ್ಯ ಉಡುಗೋರೆಗಳೆಂದರೆ ಕೈಗಡಿಯಾರ, ಮತ್ತು ನೆಕ್‌ಟೈ!!

ಕ್ಯಾಪಿಟಲ್ ಹೊಟೇಲಿನ ಕೋಣೆಗೆ ಹೋದರೆ ಅಲ್ಲಿ ಕರೆಂಟಿರಲಿಲ್ಲ! ಬ್ರಸಲ್ಸ್ ನಲ್ಲೂ ಹೀಗಾಗಬಹುದೇ? ಕೆಳಗೆ ಬಂದು ಕಂಪ್ಲೇಂಟು ಕೊಟ್ಟರೆ ಎದುರಿಗೆ ಬಂದದ್ದು ಹೊಟೇಲಿನ ಮಾಲೀಕ. ತಾನೇ ಒಂದು ಟಾರ್ಚ್ ಹಿಡಿದು ಮೇಲಕ್ಕೆ ಬಂದ. ಫ್ಯೂಸ್ ಹೋಗಿತ್ತು, ರಿಪೇರಿಮಾಡಿ ಕೈಕುಲುಕಿ ಹೋದ.. ಅವನ ಹೆಸರು ಸಂಧು. ಪಂಜಾಬಿನವನು! ಎಲ್ಲಿ ಹೋದರೂ ಭಾರತ ನಮ್ಮನ್ನು ಬಿಡುವುದಿಲ್ಲ. ಮತ್ತು ಭಾರತದೊಂದಿಗೇ ಕರೆಂಟಿಲ್ಲದ ಭಾರತೀಯ ಸಮಸ್ಯೆ!! ಮೊಬೈಲಿಗೆ ಇಪ್ಪತ್ತು ಯೂರೋಗಳ ಸಿಮ್ ಕಾರ್ಡ್ ಕೊಂಡುಕೊಳ್ಳೋಣವೆಂದು ನಾನು ಹೋಟೇಲಿನಿಂದ ಹೊರಬಿದ್ದೆ. ದಾರಿಯಲ್ಲಿ ಕಂಡದ್ದು ಭಾರತದ ಬಾವುಟ! ಕಾನ್ಸುಲೇಟೂ ಸಂಧುವಿನ ಹೋಟೇಲಿನ ಬಳಿಯಿತ್ತು! ನಮ್ಮ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳು ಬ್ರಸಲ್ಸ್ ವಿಶ್ವವಿದ್ಯಾನಿಲಯದಲ್ಲಿ ಎಕ್ಸ್ ಚೇಂಜ್ ಕಾರ್ಯಕ್ರಮದಡಿ ಮೂರು ತಿಂಗಳಿಗಾಗಿ ಬಂದಿದ್ದರು. ಅವರುಗಳಿಗೆ ಫೋನ್ ಮಾಡಿ ಅವರನ್ನು ಊಟಕ್ಕೆ ಎಲ್ಲಿಗಾದರೂ ಒಯ್ಯುವ ಇರಾದೆ ನನಗಿತ್ತು. ಯಾವ ಪಾಸ್‍ಪೋರ್ಟೂ, ನನ್ನ ಐಡೆಂಟಿಟಿಯ ಅವಶ್ಯಕತೆಯಿಲ್ಲದೇ ಒಂದು ಮೊಬಿಸ್ಟಾರ್ ಸಿಮ್ ಸುಲಭವಾಗಿ ಸಿಕ್ಕಿತು. ಯಾವುದೇ ಪ್ರವಾಸಿ ಭಾರತಕ್ಕೆ ಬಂದಿದ್ದರೆ ಈ ಕೆಲಸಕ್ಕಾಗಿ ಎಷ್ಟು ಒದ್ದಡಬೇಕಿದ್ದಿರಬಹುದು ಎಂದು ಊಹಿಸಿದಾಗ ಇದು ಎಷ್ಟು ಸರಳ ಅನ್ನುವ ಮಾತು ನನಗೆ ತಟ್ಟಿತು. 

ಬ್ರಸಲ್ಸ್ ನಲ್ಲಿ ನನಗೆ ಒಂದು ದಿನದ ಅವಕಾಶವಿತ್ತು. ಮಾರನೆಯ ದಿನ ಯೂನಿವರ್ಸಿಟಿಯಲ್ಲಿ ಒಂದು ಲೆಕ್ಚರ್ ಕೊಟ್ಟರೆ ನನ್ನ ಪ್ರವಾಸದ ಮುಖ್ಯ ಕೆಲಸ ಮುಗಿಯುವುದಿತ್ತು. ಬ್ರಸಲ್ಸ್ ನಲ್ಲಿ ಮಳೆ, ಚಳಿ. ಯೂನಿವರ್ಸಿಟಿಗೆ ಟ್ರಾಮ್‍ನಲ್ಲಿ ಹೋಗಬಹುದು ಅಂತ ಹೇಳಿದ್ದರು. ಆದರೆ ಸಂಧುವಿನ ಬಳಿ ಊರಿನ ನಕ್ಷೆ ಪಡೆದು ನಾನು ನಡೆದೇ ಹೋದೆ. ಹೀಗೆ ನಗರವನ್ನು ಇನ್ನೂ ಚೆನ್ನಾಗಿ ನೋಡುವ ಅವಕಾಶ ನನಗೆ ಸಿಗುವುದಿತ್ತು. ಕ್ರಿಸ್‍ಮಸ್‍ಗೂ ಮುಂಚೆ ಹೋಗಿದ್ದರಿಂದ ಎಲ್ಲೆಡೆಯೂ ಅಲಂಕಾರ. ಹಬ್ಬದ ವಾತಾವರಣ. ಎಲ್ಲೆಲ್ಲೂ ಸೇಲ್ ವಿವರಗಳು. ಊರೆಲ್ಲಾ ಓಡಾಡುವ ಟ್ರಾಮ್ ಮತ್ತು ಬಸ್ಸುಗಳು. ಅಲ್ಲಿ ಹೆಚ್ಚಾಗಿ ಯಾರೂ ತಮ್ಮ ಖಾಸಗೀ ವಾಹನಗಳನ್ನು ಉಪಯೋಗಿಸುವುದಿಲ್ಲ. ಟ್ರಾಮ್‍ಗೆ ಕೊಂಡ ಟಿಕೆಟ್ಟೇ ಬಸ್ಸಿನಲ್ಲೂ ಉಪಯೋಗಿಸಬಹುದು. ಒಂದೇ ಟಿಕೆಟ್ಟನ್ನು ಎರಡು ಬಾರಿ ಮಷೀನಿನಲ್ಲಿ ಗುದ್ದಿ, ಇಬ್ಬರು ಪ್ರಯಾಣಿಸಬಹುದು. ಪಾರ್ಕಿಂಗಿಗೆ, ಟ್ಯಾಕ್ಸಿಗೆ ಹಣ ಎಷ್ಟು ದುಬಾರಿಯೆಂದರೆ, ಇಡೀ ನಗರವೇ ಸಾರ್ವಜನಿಕ ವಾಹನಗಳನ್ನು ಉಪಯೋಗಿಸುತ್ತದಂತೆ. ನನ್ನ ವಿದ್ಯಾರ್ಥಿಯೂ ಇದನ್ನೇ ಹೇಳಿದ್ದ. ಈ ಅವಕಾಶ ನಮ್ಮ ದೇಶದಲ್ಲೂ ಇದ್ದರೆ ಎಷ್ಟು ಚೆನ್ನ ಅನ್ನಿಸಿತ್ತು. ಚೆನ್ನೈನಲ್ಲಿ, ಮುಂಬಯಿಯಲ್ಲಿ ಸಾರ್ವಜನಿಕ ಪರಿವಹನ ಚೆನ್ನಾಗಿದೆ. ದೆಹಲಿಯ ಮೆಟ್ರೋಕೂಡಾ ಅಡ್ಡಿಯಿಲ್ಲವಂತೆ. ನಮ್ಮ ಮೆಟ್ರೋ ಬರುವುದು ಯಾವಾಗ?

ಮುಂಜಾನೆ ಎದ್ದು ಯೂನಿವರ್ಸಿಟಿಯ ದಾರಿ ಹುಡುಕಿ ಹೊರಟೆ. ಯೂನಿವರ್ಸಿಟಿಯೆಂದರೆ ಒಂದು ದೊಡ್ಡ ಕ್ಯಾಂಪಸ್ಸಿರಬಹುದು ಎಂದು ಎಣಿಸಿದ್ದ ನನಗೆ ಸ್ವಲ್ಪ ನಿರಾಸೆ ಕಾದಿತ್ತು. ಯೂನಿವರ್ಸಿಟಿ ನಮ್ಮೂರಿನ ಒಂದು ಕಾಲೇಜಿನಷ್ಟೇ ದೊಡ್ಡದಿತ್ತು ಅಷ್ಟೇ. ನಮ್ಮ ನೂರು ಎಕರೆಯ ಐ‌ಐ‌ಎಂಗಿಂತಲೂ ಪುಟ್ಟದು. ಅವರು ಮ್ಯಾನೇಜ್‍ಮೆಂಟ್ ವಿಭಾಗ ಮೂರಂತಸ್ತಿನ ಒಂದು ಪುಟ್ಟ ಕಟ್ಟಡದಲ್ಲಿ. ಅಲ್ಲಿ ಹತ್ತು ಜನರಿಗೆ ಲೆಕ್ಚರ್ ಕೊಟ್ಟು ಬಂದೆ. ಈಗ ನನ್ನ ಬಯೋಡೇಟಾದಲ್ಲಿ "ಬ್ರಸಲ್ಸ್ ನಲ್ಲಿ ಲೆಕ್ಚರ್ ಕೊಟ್ಟಿದ್ದೇನೆ" ಅಂತ ಬರೆದುಕೊಳ್ಳಬಹುದು! ಹೋದ ಕೂಡಲೇ ಕಾಫಿ ಕೊಟ್ಟರು. ಕಾಫಿಯ ಜೊತೆಗೆ ಒಂದು ಚಾಕೊಲೇಟು! ಎಲ್ಲಿ ಹೋದರೂ ಇದೊಂದು ರಿವಾಜಂತೆ. ಬೆಲ್ಜಿಯಂ ದೇಶದಲ್ಲಿ ಸಕ್ಕರೆ ಪದಾರ್ಥಗಳೇ ಮೂಲ ಖಾದ್ಯವೇನೋ!! ಲೆಕ್ಚರ್ ಕೊಟ್ಟ ನಂತರ ಸಂಧುವಿನ ಹೊಟೇಲಿಗೆ ವಾಪಸ್ಸಾದೆ. ಹ್ಯಾನ್ಸ್ ನನಗಾಗಿ ಕಾಯುತ್ತಿದ್ದ. ರೂಮನ್ನು ಖಾಲಿಮಾಡಿ ಎರಡೂ ಸೂಟ್‌ಕೇಸುಗಳನ್ನು ಹೊತ್ತು ಬಸ್ ಹತ್ತಿದೆವು. ಬ್ರಸಲ್ಸ್ ನ ಮುಖ್ಯ ಸ್ಟೇಷನ್‌ನಲ್ಲಿ ಗಂಟೆಗಿಷ್ಟು ಎಂದು ರೊಕ್ಕ ನೀಡಿದರೆ ಸೂಟ್‍ಕೇಸುಗಳನ್ನು ಇಡುವ ಲಾಕರುಗಳಿವೆ. ಎಲ್ಲವೂ ಯಂತ್ರ ಚಾಲಿತ. ಮೊದಲಿಗೆ ಹಣ ಹಾಕಿ, ಯಾವ ಕಿಂಡಿ ಬೇಕೋ ಆಯ್ದುಕೊಂಡರೆ ಅದರ ಬಾಗಿಲು ತೆರೆದುಕೊಳ್ಳುತ್ತದೆ. ಸೂಟ್‌ಕೇಸನ್ನು ಒಳಕ್ಕೆ ತೂರಿಸಿ ಬಾಗಿಲು ಮುಚ್ಚಬೇಕು. ಅದು ಕೊಟ್ಟ ಮ್ಯಾಗ್ನೆಟಿಕ್ ಸ್ಟ್ರಿಪ್ ಇರುವ ಒಂದು ಕಾರ್ಡನ್ನು ವಾಪಸ್ಸು ತೂರಿಸಿದಾಗ ಮತ್ತೆ ಕಿಂಡಿಯ ಬಾಗಿಲು ತೆರೆಯುತ್ತದೆ. ಇದು ಬಹಳ ಗಮ್ಮತ್ತಿನ ವಿಷಯ ಅನ್ನಿಸಿತು. ಆದರೆ ವಿಚಿತ್ರ ಆಕಾರದ ಸೂಟ್‌ಕೇಸು/ಕಿಟ್ಟುಗಳನ್ನು ಹೊತ್ತು ನಡೆಯುವ ನಮ್ಮಂಥವರಿಗೆ ಭಾರತೀಯ ಕ್ಲೋಕ್ ರೂಮುಗಳೇ ಸಮರ್ಪಕವಾದವು.

ಛಳಿಗಾಲವಾದದ್ದರಿಂದ ಸಂಜೆ ನಾಲ್ಕಕ್ಕೇ ಕತ್ತಲಾಗಿಬಿಟ್ಟಿತ್ತು. ಹ್ಯಾನ್ಸ್ ಜೊತೆಯಲ್ಲಿ ಬ್ರಸಲ್ಸ್ ನ ಮುಖ್ಯ ಜಾಗಗಳಲ್ಲಿ ಸುತ್ತಾಡಿದೆ. ಗ್ರಾಂಡ್ ಪ್ಯಾಲೆಸ್ಸನ್ನು ಹೊರಗಿನಿಂದ ನೋಡಿದ್ದಾಯಿತು. ಮತ್ತು ಬ್ರಸಲ್ಸ್ ನ ಅತ್ಯಂತ ಮುಖ್ಯ ನೋಟವೆಂದರೆ ಒಬ್ಬ ಹುಡುಗ ಉಚ್ಚೆ ಹೊಯ್ಯುತ್ತಿರುವಂತಿರುವ ಫೌಂಟನ್. ಅದನ್ನು ನೋಡಿ ಸ್ವಲ್ಪ ನಿರಾಸೆಯೇ ಆಯಿತು. ಗೇಣುದ್ದ ಗಾತ್ರದ ಈ ಪ್ರತಿಮೆ ಜಗತ್ತಿನಾದ್ಯಂತ ಖ್ಯಾತಿಗಳಿಸಿ ಬಿಟ್ಟಿದೆ. ಆದರೆ ಅದನ್ನು ನೋಡಿದಾಗ "ಅಯ್ಯೋ ಇಷ್ಟೇನೇ?" ಅನ್ನಿಸುವುದರಲ್ಲಿ ಅನುಮಾನವಿಲ್ಲ.

ಅಲ್ಲಿಂದ ಗೆಂಟ್‍ಗೆ ರೈಲು ಹಿಡಿದು ಸವಾರಿ ಬೆಳೆಸಿದ್ದಾಯಿತು. ಗೆಂಟ್‌ನಲ್ಲಿ ಜಗತ್ತಿನ ಅತ್ಯದ್ಭುತವಾದ ಫ್ರೈ ಅಂಗಡಿಗೆ ಕರೆದೊಯ್ಯುತ್ತೇನೆ ಅಂದ. ಅಲ್ಲಿಗೆ ಕರೆದೊಯ್ದ ಸಹ. ನಮ್ಮ ಎಂಟಿ‌ಆರ್ ಇದ್ದಂತೆ ಅಲ್ಲೂ ಜನ ಫ್ರೈ ಮತ್ತು ಅದರ ಜೊತೆಗೆ ಕೊಡುವ ನನಾ ರೀತಿಯ ಚಟ್ನಿಗಳಿಗಾಗಿ ಕಾದು ನಿಂತಿದ್ದರು. ಫ್ರೈ ತಿಂದು, ಒಂದಿಷ್ಟು ಬಿಯರು ಕುಡಿದು ಇಬ್ಬರೂ ಮನೆ ಸೇರಿದೆವು.

೨೫ ಮಾರ್ಚ್ ೨೦೦೮

Labels: 

No comments: